ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ದೇವರು ಬೆಳಕಾಗಿದ್ದಾರೆ ಮತ್ತು ಪ್ರೀತಿಸ್ವರೂಪಿಯಾಗಿದ್ದಾರೆ (1 ಯೋಹಾ.1:5, 4:8). ಅವರು "ಅಗಮ್ಯವಾದ (ಪ್ರವೇಶಿಸಲಾರದ) ಬೆಳಕಿನಲ್ಲಿ ವಾಸಮಾಡುತ್ತಾರೆ" (1 ತಿಮೊ. 6:16). ಅವರು ಪರಿಶುದ್ಧರಾಗಿರುವುದರಿಂದ, ನಾವೂ ಪರಿಶುದ್ಧರಾಗಬೇಕೆಂದು ಅವರು ನಮಗೆ ಕರೆ ನೀಡುತ್ತಾರೆ.

ಆದರೆ ಮಾನವನು ಶೋಧನೆಯ ಮೂಲಕ ಮಾತ್ರ ಪರಿಶುದ್ಧನಾಗುತ್ತಾನೆ. ಆದಾಮನು ಸರಳ ಸ್ವಭಾವದ ಮುಗ್ಧನಾಗಿ ಸೃಷ್ಟಿಸಲ್ಪಟ್ಟನು, ಮತ್ತು ಅವನಿಗೆ ಒಳ್ಳೇದರ ಕೆಟ್ಟದ್ದರ ನಡುವಿನ ವ್ಯತ್ಯಾಸವೂ ಸಹ ತಿಳಿದಿರಲಿಲ್ಲ. ಅವನು ಪರಿಶುದ್ಧನಾಗಬೇಕೆಂದು ದೇವರು ಬಯಸಿದರು; ಮತ್ತು ಇದಕ್ಕಾಗಿ ಅವನು ಪರೀಕ್ಷೆಗೆ ಒಳಗಾಗುವುದನ್ನು ಅವರು ಅನುಮತಿಸಿದರು.

ಒಳ್ಳೇದರ ಕೆಟ್ಟದ್ದರ ಜ್ಞಾನವನ್ನು ಹುಟ್ಟಿಸುವ ಮರವು ಸ್ವತಃ ದೇವರಿಂದ ಸೃಷ್ಟಿಸಲ್ಪಟ್ಟಿತು ಮತ್ತು ಮೂಲತಃ ಅದರಲ್ಲಿ ಕೆಟ್ಟತನವಿರಲಿಲ್ಲ. ಅದು ದೇವರು "ಬಹು ಒಳ್ಳೆಯದು" ಎಂದು ಘೋಷಿಸಿದ ಸೃಷ್ಟಿಯ ಒಂದು ಅಂಶವಾಗಿತ್ತು (ಆದಿಕಾಂಡ 1:31). ಅದು ಬಹಳ ಒಳ್ಳೆಯದಾಗಿತ್ತು. ಏಕೆಂದರೆ ಅದರ ಆಕರ್ಷಕ ಸೆಳೆತವನ್ನು ವಿರೋಧಿಸುವುದರ ಮೂಲಕ ಆದಾಮನಿಗೆ ಪರಿಶುದ್ಧನಾಗುವ ಒಂದು ಅವಕಾಶ ದೊರಕಿತು.

ಸತ್ಯವೇದವು, "ನೀವು ನಾನಾ ವಿಧವಾದ ಶೋಧನೆಗಳನ್ನು ಎದುರಿಸುವಾಗ ಎಲ್ಲವನ್ನೂ ಆನಂದಕರವಾದದ್ದೆಂದು ಎಣಿಸಿರಿ" ಎಂದು ಹೇಳುತ್ತದೆ (ಯಾಕೋ.1:2-3), ಏಕೆಂದರೆ ಈ ಶೋಧನೆಗಳು ನಮಗೆ ದೇವರ ಪರಿಶುದ್ಧತೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಿ (ಇಬ್ರಿ. 12:10), ನಾವು ಸಕಲ ಗುಣವಂತರೂ ಹಾಗೂ ದೋಷಮುಕ್ತರೂ ಆಗುವಂತೆ ಮಾಡುತ್ತವೆ (ಯಾಕೋ.1:4).

ನಾವು ಯೇಸುವಿನ ಪರಿಶುದ್ಧತೆಯನ್ನು ದೃಷ್ಟಿಸುವಾಗ, ಆತನು ದೇವರಾಗಿದ್ದಾಗ ಮೂಲತಃ ಆತನಲ್ಲಿದ್ದ ಪರಿಶುದ್ಧತೆಯನ್ನು ನಾವು ನೋಡುವುದಿಲ್ಲ, ಏಕೆಂದರೆ ಅದು ನಮಗೆ ಉದಾಹರಣೆಯಾಗಿ ಇರುವುದಿಲ್ಲ. ನಾವು ಆತನನ್ನು ಹೀಗೆ ನೋಡುತ್ತೇವೆ: ಆತನು "ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸರಿಸಮಾನನಾಗಿ ಮಾಡಲ್ಪಟ್ಟವನು" ಮತ್ತು ಆತನು "ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪವನ್ನು ಮಾತ್ರ ಮಾಡಲಿಲ್ಲ" (ಇಬ್ರಿ. 2:17, 4:15).

"ದೇವರ ನಿಯಮಗಳು ಭಾರವಾದವುಗಳು ಮತ್ತು ಅವುಗಳನ್ನು ಪಾಲಿಸುವುದು ಅಸಾಧ್ಯವೆಂದು ಸೈತಾನನು ಯಾವಾಗಲೂ ಮನುಷ್ಯನಿಗೆ ಹೇಳುತ್ತಾ ಬಂದಿದ್ದಾನೆ. ಯೇಸುವು ಮನುಷ್ಯನಾಗಿ ಲೋಕಕ್ಕೆ ಬಂದು, ತನ್ನ ಪರಿಪೂರ್ಣ ವಿಧೇಯತೆಯ ಜೀವನದ ಮೂಲಕ ಸೈತಾನನ ಆ ಸುಳ್ಳನ್ನು ಬಹಿರಂಗಪಡಿಸಿದನು."

ಯೇಸುವು ಓಟದಲ್ಲಿ ನಮಗೆ ಮುಂದಾಗಿ ಓಡಿರುವಾತನು (ಇಬ್ರಿ. 6:20), ಮತ್ತು ನಾವು ಓಡಬೇಕಾದ ಓಟವನ್ನು ತಾನೂ ಸಹ ಓಡಿ, ನಾವು ಹಿಂಬಾಲಿಸಬೇಕಾದ ಮಾರ್ಗವನ್ನು ಸಜ್ಜುಗೊಳಿಸಿದ್ದಾನೆ. ಆದುದರಿಂದ ಆತನು ನಮಗೆ, "ನನ್ನನ್ನು ಹಿಂಬಾಲಿಸಿರಿ" ಎಂದು ಹೇಳುತ್ತಾನೆ (ಯೋಹಾ. 12:26). ಹಾಗಾಗಿ ಪಂದ್ಯದಲ್ಲಿ ನಮ್ಮ ಮುಂದಾಗಿ ಹೋಗಿರುವ ಯೇಸುವನ್ನು ದೃಷ್ಟಿಸುತ್ತಾ, ನಾವು ಸಹ ಸ್ಥಿರಚಿತ್ತದಿಂದ, ಆಯಾಸಗೊಳ್ಳದೆ ಹಾಗೂ ಮನಗುಂದದೆ ಓಟವನ್ನು ಓಡಬಹುದು (ಇಬ್ರಿ. 12:1-4).

ಯೇಸುವು ಯಾವುದೇ ಮನುಷ್ಯನಿಗೆ ಬರಬಹುದಾದ ಪ್ರತಿಯೊಂದು ಶೋಧನೆಯನ್ನು ಸಹಿಸಿಕೊಂಡನು. ಆತನು "ಸರ್ವ ವಿಷಯಗಳಲ್ಲಿ ನಮ್ಮ ಹಾಗೆ" ಶೋಧನೆಗೆ ಗುರಿಯಾದನು. ಇದನ್ನು ಇಬ್ರಿ. 4:15ರಲ್ಲಿ ನಮಗೆ ಸ್ಪಷ್ಟವಾಗಿ ತೋರಿಸಲಾಗಿದೆ. ಇದು ನಮಗೆ ಉತ್ತೇಜನವಾಗಿದೆ. ಈ ದಿನಗಳಲ್ಲಿ ದೇವರು ನಮಗೆ ಅನುಗ್ರಹಿಸದೆ ಇರುವಂತ ಯಾವುದೇ ಶಕ್ತಿಯನ್ನು ಯೇಸುವು ಉಪಯೋಗಿಸಲಿಲ್ಲ. ಆತನು ಮನುಷ್ಯನಾಗಿ ತನ್ನ ತಂದೆಯು ಪವಿತ್ರಾತ್ಮನ ಮೂಲಕ ತನಗೆ ಕೊಟ್ಟಂತಹ ಶಕ್ತಿಯ ಮೂಲಕ ಪ್ರತಿಯೊಂದು ಶೋಧನೆಯನ್ನು ಎದುರಿಸಿದನು ಮತ್ತು ಜಯಗಳಿಸಿದನು.

ದೇವರ ನಿಯಮಗಳು ಭಾರವಾದವುಗಳು ಮತ್ತು ಅವುಗಳನ್ನು ಪಾಲಿಸುವುದು ಅಸಾಧ್ಯವೆಂದು ಸೈತಾನನು ಯಾವಾಗಲೂ ಮನುಷ್ಯನಿಗೆ ಹೇಳುತ್ತಾ ಬಂದಿದ್ದಾನೆ. ಯೇಸುವು ಮನುಷ್ಯನಾಗಿ ಲೋಕಕ್ಕೆ ಬಂದು, ತನ್ನ ಪರಿಪೂರ್ಣ ವಿಧೇಯತೆಯ ಜೀವನದ ಮೂಲಕ ಸೈತಾನನ ಆ ಸುಳ್ಳನ್ನು ಬಹಿರಂಗಪಡಿಸಿದನು. ನಾವು ಜಯಿಸಬೇಕಾದ ಯಾವುದೇ ಶೋಧನೆಯನ್ನು, ಅಥವಾ ನಾವು ಪಾಲಿಸಬೇಕಾದ ದೇವರ ಯಾವುದೇ ಆಜ್ಞೆಯನ್ನು ಯೇಸುವು ಎದುರಿಸದೇ ಇದ್ದಿದ್ದರೆ, ಆಗ ಪಾಪ ಮಾಡುವದಕ್ಕೆ ನಮಗೆ ಅದೊಂದು ಒಳ್ಳೆಯ ನೆಪ ಅಥವಾ ಸಮರ್ಥನೆಯಾಗುತ್ತಿತ್ತು. ಅದೇ ರೀತಿ ಯೇಸುವು ತನ್ನ ಪರಿಪೂರ್ಣ ಜೀವನವನ್ನು ನಮ್ಮ ಶರೀರಭಾವದ ದೌರ್ಬಲ್ಯವಿಲ್ಲದೆ ಅಥವಾ ನಮಗೆ ಸಿಗದಿರುವ ಶಕ್ತಿಯನ್ನು ಬಳಸಿಕೊಂಡು ಜೀವಿಸಿದ್ದರೆ, ಆಗ ಆತನ ಜೀವನವು ನಾವು ಅನುಸರಿಸಬಹುದಾದ ಉದಾಹರಣೆಯಾಗುವುದಿಲ್ಲ, ಅಥವಾ ನಾವು ಶೋಧನೆಗೆ ಒಳಗಾಗುವ ಕ್ಷಣಗಳಲ್ಲಿ ಆತನ ಜೀವನವು ನಮಗೆ ಪ್ರೋತ್ಸಾಹಕರವಾಗುವುದಿಲ್ಲ. ಆದರೆ ಯೇಸುವು ಭೂಮಿಯ ಮೇಲೆ ಒಬ್ಬ ಮನುಷ್ಯನಾಗಿ ಜೀವಿಸಿ, ದೇವರು ನಮಗೆ ಕೊಡುವಂತ ಶಕ್ತಿಯು ದೇವರ ವಾಕ್ಯದಲ್ಲಿ ನಾವು ನೋಡುವ ಅವರ ನಿಯಮಗಳ ಬೇಡಿಕೆಗಳನ್ನು ನೆರವೇರಿಸುವುದಕ್ಕೆ ಸಾಕಾಗುತ್ತದೆಂದು ತೋರಿಸಿಕೊಟ್ಟರು.

ನಾವು ಹೊಂದಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುಕಂಪವಿಲ್ಲದವನಲ್ಲ; ಆತನು ನಮ್ಮ ಹಾಗೆ ಎಲ್ಲಾ ವಿಷಯಗಳಲ್ಲಿ ಶೋಧನೆಗೆ ಒಳಗಾದವನು (ಇಬ್ರಿ. 4:15).

ದೇವರು ಯೇಸುವಿನ ಪಾಪವಿಲ್ಲದ ಜೀವಿತದ ಮೂಲಕ ಲೋಕಕ್ಕೆ ತೋರಿಸಿಕೊಡುವುದು ಏನೆಂದರೆ, ಪವಿತ್ರಾತ್ಮನ ಶಕ್ತಿಯ ಮೂಲಕ ಮನುಷ್ಯನು ಪಾಪದ ಮೇಲೆ ಸಂಪೂರ್ಣ ಜಯವನ್ನು ಹೊಂದಲು ಮತ್ತು ಸಂತೋಷದಿಂದ ದೇವರಿಗೆ ವಿಧೇಯನಾಗಲು ಸಾಧ್ಯವಿದೆ ಎಂಬುದನ್ನು. ನಾವು ಯೇಸುವಿನಲ್ಲಿ ನೆಲೆಗೊಂಡರೆ, ಆತನು ನಡೆದಂತೆಯೇ ನಾವೂ ಸಹ ನಡೆಯಲು ಸಾಧ್ಯವಿದೆ (1 ಯೋಹಾ. 2:6).