ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಕ್ರೈಸ್ತ ಧಾರ್ಮಿಕ ಪ್ರಪಂಚದ ದೊಡ್ಡ ದುರಂತವೆಂದರೆ, ಯೇಸುವಿನ ಶ್ರೇಷ್ಠ ಆಜ್ಞೆಯ ಮೊದಲನೆಯ ಅರ್ಧಭಾಗವನ್ನು ಪಾಲಿಸುವ ಅನೇಕ ಕ್ರೈಸ್ತರು ಅದರ ಎರಡನೆಯ ಭಾಗವನ್ನು ಪೂರೈಸುವುದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೂ ಹೆಚ್ಚಿನ ಶೋಚನೀಯ ಸಂಗತಿಯೆಂದರೆ, ಮೊದಲನೆಯ ಭಾಗವನ್ನು ಪೂರೈಸುವುದರಲ್ಲಿ ತೊಡಗಿರುವ ಅನೇಕ ಕಾರ್ಯಕರ್ತರು(ಸೇವಕರು) ಎರಡನೇ ಭಾಗವನ್ನು ಪೂರೈಸುವುದರಲ್ಲಿ ತೊಡಗಿರುವವರನ್ನು ಅಸಡ್ಡೆಭಾವದಿಂದ ನೋಡುತ್ತಾರೆ. ನಮ್ಮಲ್ಲಿ ದೀನತೆಯಿದ್ದರೆ, ನಾವೆಲ್ಲರೂ ಕ್ರಿಸ್ತನ ದೇಹದ ಕಾರ್ಯದಲ್ಲಿ ಸಹಭಾಗಿಗಳಾಗಿದ್ದೇವೆ, ಮತ್ತು ಒಂದು ಚಟುವಟಿಕೆಯು ಮತ್ತೊಂದು ಚಟುವಟಿಕೆಯಷ್ಟೇ ಪ್ರಮುಖವಾದದ್ದು ಎಂಬುದನ್ನು ಕಂಡುಕೊಳ್ಳುತ್ತೇವೆ. ಯಾವತ್ತೂ ಸುವಾರ್ತೆಯನ್ನು ಕೇಳದಿರುವ ವ್ಯಕ್ತಿಗಳನ್ನು ಸಂಧಿಸಿ, ಅವರ ಪಾಪಗಳಿಗಾಗಿ ಕ್ರಿಸ್ತನು ಸತ್ತಿದ್ದಾನೆಂಬ ಸಂದೇಶವನ್ನು ಅವರಿಗೆ ಕೊಡುವುದಕ್ಕಾಗಿ ಹೋಗುವಾತನು ಎಷ್ಟು ಅವಶ್ಯಕವಾಗಿದ್ದಾನೋ, ಆ ಹೊಸ ವ್ಯಕ್ತಿಯನ್ನು ಶಿಷ್ಯನಾಗಿ ಮಾಡುವ ಉದ್ದೇಶದಿಂದ ಆತನಿಗೆ ಯೇಸುವು ಆಜ್ಞಾಪಿಸಿದ್ದನ್ನೆಲ್ಲಾ ಕಲಿಸುವುದರ ಮೂಲಕ ಯೇಸುವಿನ ಶ್ರೇಷ್ಠ ಆಜ್ಞೆಯನ್ನು ಪೂರೈಸುವಾತನು ಅಷ್ಟೇ ಪ್ರಮುಖನಾಗಿದ್ದಾನೆ.

"ಪ್ರವಾದನಾ ಸೇವೆಯು ಹಳೆಯ ಒಡಂಬಡಿಕೆಯಲ್ಲಾಗಲೀ ಅಥವಾ ಹೊಸ ಒಡಂಬಡಿಕೆಯಲ್ಲಾಗಲೀ ಯಾವತ್ತೂ ಜನಪ್ರಿಯತೆಯನ್ನು ಪಡೆದಿಲ್ಲ"

ಆ ಶ್ರೇಷ್ಠ ಆಜ್ಞೆಯ ಮೊದಲ ಅರ್ಧ ಭಾಗವನ್ನು ಪೂರೈಸುವುದು ಒಂದು ಉತ್ತೇಜಕರ ಸಂಗತಿಯಾಗಿದೆ, ಯಾಕೆಂದರೆ ಇದರಲ್ಲಿ ಅನೇಕ ರೋಮಾಂಚಕ ಅನುಭವಗಳು ಸಿಗುತ್ತವೆ. ಮಿಷನರಿ ಸೇವೆ ಹಾಗೂ ಸುವಾರ್ತಾ ಸೇವೆಯ ನಿಜಜೀವನದ ಅನುಭವಗಳು ಯಾವಾಗಲೂ ಉತ್ತೇಜಕರವಾಗಿರುತ್ತವೆ. ದೆವ್ವ ಹಿಡಿದ ಜನರು ಬಿಡುಗಡೆ ಹೊಂದಿದ್ದು, ವಿಗ್ರಹಾರಾಧನೆಯಿಂದ ಜನರು ಬಿಡುಗಡೆಯಾದದ್ದು, ಮುಂತಾದ ಅನೇಕ ಘಟನೆಗಳು ಇದರಲ್ಲಿ ಕಾಣಸಿಗುತ್ತವೆ, ಮತ್ತು ವಿಶೇಷವಾಗಿ ವರದಿ ಒಪ್ಪಿಸುವುದಕ್ಕೆ ಅನೇಕ ಅಂಕಿ-ಅಂಶಗಳು ಸಿಗುತ್ತವೆ. ಸೌವಾರ್ತಿಕರು ತಾವು ಎಷ್ಟು ಜನರನ್ನು ಕ್ರಿಸ್ತನ ಕಡೆಗೆ ನಡೆಸಿದೆವು ಎಂಬುದರ ಬಗ್ಗೆ ಕೊಚ್ಚಿಕೊಳ್ಳಬಹುದು. ಆದರೆ ಆ ಮಾನಸಾಂತರ ಹೊಂದಿದ ವ್ಯಕ್ತಿಯನ್ನು ಸಂಧಿಸಿ, ಅವನನ್ನು ಶಿಷ್ಯನನ್ನಾಗಿ ಮಾಡಿ, ಯೇಸುವಿನ ಬೋಧನೆಯನ್ನೆಲ್ಲಾ ಕೈಗೊಳ್ಳುವಂತೆ ಅವನಿಗೆ ಸಹಾಯ ಮಾಡುವ ಮತ್ತೊಬ್ಬ ಕ್ರೈಸ್ತ ಕಾರ್ಯಕರ್ತನ (ಸೇವಕನ) ಸೇವೆಯ ಬೆಲೆಯೆಷ್ಟು? ಆತನಿಗೆ ಹೊಗಳಿಕೊಳ್ಳಲು ಯಾವುದೇ ಅಂಕಿ ಅಂಶಗಳ ಪಟ್ಟಿ ಇರುವುದಿಲ್ಲ. ಆದರೆ ಆ ವ್ಯಕ್ತಿಯು ಈ ಲೋಕದಲ್ಲಿ ಯಾರ ಗೌರವವನ್ನಾಗಲಿ ಪಡೆಯದೆ ಶಿಷ್ಯರನ್ನು ಮಾಡಿರುವುದು ಹೆಚ್ಚು ನಂಬಿಗಸ್ತಿಕೆಯ ಕೆಲಸವಾಗಿದೆ ಎಂದು ಕ್ರಿಸ್ತನು ಹಿಂತಿರುಗಿ ಬಂದಾಗ ನಾವು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಹೇಳಬೇಕಾದರೆ, ಕ್ರೈಸ್ತರು ಅಂಕಿ ಅಂಶಗಳನ್ನು ತೋರಿಸುವಂತ, ವರದಿ ಒಪ್ಪಿಸುವಂತ ಸೇವೆಗಳನ್ನು ಕೈಗೊಳ್ಳಲು ಬಯಸುತ್ತಾರೆ. ಆದಕಾರಣ ಮಾರ್ಕನು 16:15ರ ಶ್ರೇಷ್ಠ ಆಜ್ಞೆಯ ಅಂಶವು, ಮತ್ತಾಯನು 20:19-20ರಲ್ಲಿರುವ ಅದರ ಮತ್ತೊಂದು ಅಂಶಕ್ಕಿಂತ ಅತಿ ಹೆಚ್ಚು ಜನಪ್ರಿಯವಾಗಿದೆ. ಮತ್ತು ಇದೇ ಕಾರಣಕ್ಕಾಗಿ ನಾವು ಆ ಎರಡನೆಯ ಅರ್ಧಭಾಗದ ಕಡೆಗೆ, ಅಂದರೆ ಜನರನ್ನು ಯೇಸುವಿನ ಶಿಷ್ಯರನ್ನಾಗಿ ಮಾಡಿ ಆತನು ಆಜ್ಞಾಪಿಸಿದ್ದನ್ನೆಲ್ಲಾ ಕೈಗೊಳ್ಳುವುದನ್ನು ಕಲಿಸುವ ಅಂಶಕ್ಕೆ ಹೆಚ್ಚು ಗಮನ ಕೊಡುವವರಾಗಿದ್ದೇವೆ.

ನೀವು ಪ್ರಪಂಚದ ವಿವಿಧ ಭಾಗಗಳಿಗೆ ಹೋಗಿ ಶುಭ ಸಂದೇಶವನ್ನು ಸಾರುತ್ತಾ ಮತ್ತು ಸುವಾರ್ತೆಯನ್ನು ಬೋಧಿಸುತ್ತಾ 25 ವರ್ಷಗಳನ್ನು ಕಳೆದಿದ್ದೀರಿ ಎಂದು ಭಾವಿಸೋಣ. ನೀವು ಒಬ್ಬ ಸೌವಾರ್ತಿಕರಾಗಿದ್ದರೆ, ನೂರಾರು ಜನರನ್ನು ಅಥವಾ ಬಹುಶಃ ಸಾವಿರಾರು ಜನರನ್ನು ಕ್ರಿಸ್ತನ ಬಳಿಗೆ ನಡೆಸಿರುವ ಅಂಕಿ ಅಂಶಗಳನ್ನು ವರದಿ ಮಾಡುವ ಅವಕಾಶ ನಿಮಗಿದೆ. ಆದರೆ ರಕ್ಷಣೆ ಹೊಂದಿ ಇನ್ನೂ ಶಿಷ್ಯರು ಆಗಿರದಂತ ಒಂದು ಗುಂಪಿನ ಜನರಿಗೆ ಯೇಸುವಿನ ಎಲ್ಲಾ ಆಜ್ಞೆಗಳನ್ನು ಕೈಕೊಳ್ಳುವುದನ್ನು ಕಲಿಸುವುದಕ್ಕಾಗಿ ನೀವು ಹಿಂದಿನ 25 ವರ್ಷಗಳನ್ನು ಬಳಸಿಕೊಂಡಿದ್ದರೆ, ನಿಮ್ಮ ಬಳಿ ವರದಿ ಮಾಡಬಹುದಾದ ಅಂಕಿ ಅಂಶಗಳು ಬಹುಶಃ ಹೆಚ್ಚೇನೂ ಇಲ್ಲದಿರಬಹುದು. ಆದಾಗ್ಯೂ, ನೀವು ಭೂಲೋಕದಲ್ಲಿ ಕ್ರಿಸ್ತನಿಗೆ ಶ್ರೇಷ್ಠವಾದ ಸಾಕ್ಷಿಯನ್ನು ನೀಡುವಂತ ಕ್ರಿಸ್ತನ ಸಾರೂಪ್ಯವಿರುವ ಜನರನ್ನು ಸಿದ್ಧಗೊಳಿಸಿದ್ದೀರಿ, ಮತ್ತು ಆದಾಮನ ಸ್ವಭಾವದಿಂದ ಬಿಡಿಸಲ್ಪಟ್ಟಿರುವ ಮತ್ತು ಕ್ರಿಸ್ತನ ಸ್ವಭಾವವನ್ನು ಪ್ರದರ್ಶಿಸುವಂತ ಮಾದರಿ ಜನಾಂಗ ಎಂಬುದಾಗಿ ದೇವರು ಸೈತಾನನಿಗೆ ಸವಾಲಾಗಿ ತೋರಿಸಬಹುದಾದ ಜನರನ್ನು ತಯಾರು ಮಾಡಿದ್ದೀರಿ. ಈ ದುಡಿಮೆಯ ಮಹಿಮೆಯು ಭೂಲೋಕದಲ್ಲಿ ಅಲ್ಲ, ಆದರೆ ಪರಲೋಕದಲ್ಲಿ ತೋರಿಬರುತ್ತದೆ.

ನೀವು ಮನುಷ್ಯರಿಂದ (ಹಾಗೂ ಸಹ-ವಿಶ್ವಾಸಿಗಳಿಂದಲೂ!) ಗೌರವವನ್ನು ಬಯಸುವಂತ ಕ್ರೈಸ್ತರಾಗಿದ್ದರೆ, ಯೇಸುವಿನ ಶ್ರೇಷ್ಠ ಆಜ್ಞೆಯ ಎರಡನೇ ಭಾಗದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸುವುದಿಲ್ಲ, ಏಕೆಂದರೆ ಅದರಲ್ಲಿ ನಿಮಗೆ ವರದಿ ಒಪ್ಪಿಸುವಂತ ಯಾವುದೇ ಸಂಗತಿ ಸಿಗುವುದಿಲ್ಲ. ಅಂಕಿ ಅಂಶಗಳು ಮತ್ತು ಸಂಖ್ಯೆಗಳು ಮತ್ತು ಜನರ ಮಾನ್ಯತೆಯನ್ನು ಪಡೆಯುವ ಆಸಕ್ತಿ ನಿಮ್ಮದಾಗಿದ್ದರೆ, ನೀವು ಶ್ರೇಷ್ಠ ಆಜ್ಞೆಯ ಮೊದಲ ಭಾಗದಲ್ಲಿ ಮಾತ್ರ ಆಸಕ್ತಿ ಹೊಂದಿರುತ್ತೀರಿ. ಹಳೆಯ ಒಡಂಬಡಿಕೆಯ ಪ್ರವಾದಿಗಳು ಎಂದಿಗೂ ಜನಪ್ರಿಯರಾಗಿರಲಿಲ್ಲ; ಆದರೆ ಇಸ್ರಾಯೇಲಿನ ಸುಳ್ಳು ಪ್ರವಾದಿಗಳು ಜನಪ್ರಿಯರಾಗಿದ್ದರು. ಇವರ ನಡುವಿನ ವ್ಯತ್ಯಾಸವೇನು? ಇವರ ನಡುವಿನ ವ್ಯತ್ಯಾಸವೆಂದರೆ, ಸುಳ್ಳು ಪ್ರವಾದಿಗಳು ಜನರಿಗೆ ಇಷ್ಟವಾದುದನ್ನು ಪ್ರವಾದಿಸಿದರು, ಆದರೆ ನಿಜವಾದ ಪ್ರವಾದಿಗಳು ಜನರು ದೇವರಿಂದ ಕೇಳಬೇಕಾಗಿದ್ದ ಪ್ರವಾದನೆಯನ್ನು ನುಡಿದರು. ಮತ್ತು ಹೆಚ್ಚಾಗಿ ಇದು ಅವರ ಪಾಪದ ಖಂಡನೆಯ ಪ್ರವಾದನೆಯಾಗಿತ್ತು, ಮತ್ತು ಅವರ ಪ್ರಾಪಂಚಿಕತೆ, ಅವರ ವಿಗ್ರಹಾರಾಧನೆ, ವ್ಯಭಿಚಾರ, ಮತ್ತು ಅವರು ದೇವರಿಂದ ದೂರ ಸರಿದಿದ್ದುದರ ಖಂಡನೆಯ ಜೊತೆಗೆ, ಮಾನಸಾಂತರಕ್ಕೆ (ದೇವರ ಕಡೆಗೆ ತಿರುಗುವಂತೆ) ನೀಡಿದ ಕರೆಯಾಗಿತ್ತು.

ಪ್ರವಾದನೆಯ ಸೇವೆಯು ಹಳೆ ಒಡಂಬಡಿಕೆಯಲ್ಲಾಗಲೀ ಅಥವಾ ಹೊಸ ಒಡಂಬಡಿಕೆಯಲ್ಲಾಗಲೀ ಜನಪ್ರಿಯವಾಗಿರಲಿಲ್ಲ. ಅದೇ ರೀತಿಯಲ್ಲಿ ಹೊಸ ಒಡಂಬಡಿಕೆಯ ಪ್ರವಾದನಾ ಸೇವೆಯು ಜನರನ್ನು ದೇವರ ಬಳಿಗೆ ಹಿಂದಿರುಗುವಂತೆ ಕರೆಯುವುದು, ದೇವರ ವಾಕ್ಯಕ್ಕೆ ಹಿಂದಿರುಗಿಸುವುದು, ದೇವರ ವಾಕ್ಯದ ವಿಧೇಯತೆಯ ಮೂಲಕ ಯೇಸುವು ಆಜ್ಞಾಪಿಸಿದೆಲ್ಲವನ್ನು ಕೈಕೊಳ್ಳುವಂತೆ ಕರೆ ನೀಡುವುದಾಗಿದೆ. ಇದು ಸುವಾರ್ತೆಯನ್ನು ಸಾರುವ ಸೇವೆಗಿಂತ ಬಹಳ ವಿಭಿನ್ನವಾಗಿದೆ - ಮತ್ತು ಕ್ರಿಸ್ತನ ದೇಹವನ್ನು ಕಟ್ಟುವ ಕಾರ್ಯವನ್ನು ಕೇವಲ ಪ್ರವಾದಿಗಳಾಗಲೀ ಅಥವಾ ಕೇವಲ ಸೌವಾರ್ತಿಕರಾಗಲೀ ಪೂರೈಸಲು ಸಾಧ್ಯವಾಗುವುದಿಲ್ಲ (ಇವರಿಬ್ಬರೂ ಅವಶ್ಯಕರಾಗಿದ್ದಾರೆ).

ಒಂದು ಉದಾಹರಣೆಯನ್ನು ಉಪಯೋಗಿಸುವುದಾದರೆ, ಸುವಾರ್ತಾ ಪ್ರಸಾರದ ಮೂಲಕ ಯೇಸುವಿನ ಶ್ರೇಷ್ಠ ಆಜ್ಞೆಯ ಮೊದಲನೇ ಅರ್ಧಭಾಗವನ್ನು (ಮಾರ್ಕ. 16:15) ನೆರವೇರಿಸುವುದು, ಒಂದು ತಟ್ಟೆಯಿಂದ ಆಹಾರವನ್ನು ತೆಗೆದುಕೊಂಡು ಅದನ್ನು ಬಾಯಿಯೊಳಗೆ ಹಾಕಿದಂತೆ ಎನ್ನಬಹುದು. ಸುವಾರ್ತಾ ಸೇವೆಯ ಅಂತಿಮ ಗುರಿಯೇನು? ಕ್ರಿಸ್ತನ ದೇಹದ (ಕ್ರೈಸ್ತ ಸಭೆಯ) ಸದಸ್ಯರಲ್ಲದ ಜನರನ್ನು ಕರೆತಂದು ಕ್ರಿಸ್ತನ ಶರೀರದ ಅಂಗಗಳಾಗಿ ಮಾಡುವುದೇ ಆಗಿದೆ. ಸುವಾರ್ತಾ ಪ್ರಸಾರವೆಂದರೆ ಪ್ರಾಥಮಿಕವಾಗಿ ಇದೇ ಆಗಿದೆ. ಸುವಾರ್ತಾ ಸೇವೆಯು ಅವಿಶ್ವಾಸಿಗಳು, ವಿಗ್ರಹಾರಾಧಕರು ಅಥವಾ ದೇವರನ್ನರಿಯದ ವ್ಯಕ್ತಿಗಳನ್ನು ಕ್ರಿಸ್ತನ ಶರೀರದ ಭಾಗಗಳಾಗಿ ಸೇರಿಸುವುದಕ್ಕಾಗಿ ಇರುವುದಾಗಿದೆ. ನನ್ನ ಕೈಯು ಈ ಸಮಯದಲ್ಲಿ ನನ್ನ ದೇಹದ ಹೊರಗೆ ಇರುವಂತ ಆಹಾರವನ್ನು ತಟ್ಟೆಯಿಂದ ಎತ್ತಿಕೊಂಡು ನನ್ನ ಶರೀರದೊಳಕ್ಕೆ ಸೇರಿಸುತ್ತದೆ. ಸುವಾರ್ತಾ ಬೋಧನೆಯು ಕ್ರೈಸ್ತರಲ್ಲದವರನ್ನು ಕ್ರಿಸ್ತನ ಶರೀರದೆಡೆಗೆ ಹೇಗೆ ತರುತ್ತದೆ ಎಂಬುದರ ಚಿತ್ರಣ ಇಲ್ಲಿದೆ.

ಆಹಾರವು ಸಂಪೂರ್ಣವಾಗಿ ದೇಹದ ಭಾಗವಾಗುವುದು ಹೇಗೆ? ಮೊದಲನೆಯದಾಗಿ, ಇರಿಸಿರುವ ಆಹಾರವನ್ನು ನೋಡಿದಾಗ ನಾನು ಅದನ್ನು ನನ್ನ ಕೈಯಿಂದ ತೆಗೆದುಕೊಂಡು ನನ್ನ ಬಾಯಿಗೆ ಹಾಕಿಕೊಳ್ಳುತ್ತೇನೆ. ಇದು ಸುವಾರ್ತಾ ಪ್ರಸಾರ - ಅವಿಶ್ವಾಸಿಗಳನ್ನು ಕ್ರಿಸ್ತನ ಬಳಿಗೆ  ಕರೆ ತರುವಂತದ್ದು. ಆದರೆ ಈ ಆಹಾರವು ನನ್ನ ಬಾಯಿಯಲ್ಲೇ ಉಳಿದರೆ, ಅದು ನನ್ನ ದೇಹದ ಭಾಗವಾಗುವುದಿಲ್ಲ. ಅದು ಕೊಳೆತು ಹೋಗುತ್ತದೆ, ಮತ್ತು ನಾನು ಅದನ್ನು ಹೊರಗೆ ಉಗಿದು ಬಿಡುತ್ತೇನೆ. ಬಹಳಷ್ಟು ಜನರು ಸಭಾಕೂಟಗಳಲ್ಲಿ ತಮ್ಮ ಕೈಗಳನ್ನು ಎತ್ತುವದರ ಮೂಲಕ ತಾವು ಕ್ರಿಸ್ತನ ಬಳಿಗೆ ಬಂದಿದ್ದೇವೆ ಎಂದು ಹೇಳಿ ನಿರ್ಧಾರ-ಕಾರ್ಡ್‌ಗಳಿಗೆ ಸಹಿ ಹಾಕುವಂತವರು, ಬಾಯಿಯಲ್ಲಿ ಇಟ್ಟುಕೊಂಡ ಆಹಾರದಂತೆ ಇರುತ್ತಾರೆ. ಮುಂದೆ ನೀವು ಅಲ್ಲಿಗೆ ಹೋಗಿ ಈ ನಿರ್ಧಾರ-ಕಾರ್ಡ್‌ಗಳಿಗೆ ಸಹಿ ಮಾಡಿದ ಐನೂರು ಜನರನ್ನು ಭೇಟಿ ಮಾಡಿದರೆ, ಬಹುಶಃ ಅವರಲ್ಲಿ ಒಬ್ಬರು ಮಾತ್ರ ನಿಜವಾದ ಶಿಷ್ಯರಾಗಿರುವುದನ್ನು ನೀವು ಕಾಣಬಹುದು. ಉಳಿದ 499 ಜನರು ಹಿಂಜಾರಿ ಹೋಗಿರುತ್ತಾರೆ. ಇದು ಯಾವಾಗಲೂ ನಡೆಯುತ್ತಿರುತ್ತದೆ. ಆಹಾರವನ್ನು ಕೇವಲ ಬಾಯಿಗೆ ಹಾಕಿಕೊಂಡರೆ ಸಾಕಾಗುವುದಿಲ್ಲ. ಹಲ್ಲುಗಳು ಆಹಾರವನ್ನು ಅಗಿಯಬೇಕು, ಮತ್ತು ನಂತರ ಅದು ಗಂಟಲಿನ ಮೂಲಕ ಹೊಟ್ಟೆಯೊಳಗೆ ಸೇರುತ್ತದೆ, ಅಲ್ಲಿ ಅದು ಜೀರ್ಣವಾಗಲು ಅನೇಕ ಆಮ್ಲಗಳು ಅದರ ಮೇಲೆ ಸುರಿಸಲ್ಪಡುತ್ತವೆ. ಈ ಹಂತಕ್ಕೆ ತಲುಪಿದಾಗ, ಇದು ಈಗ ಆಲೂಗಡ್ಡೆ, ಅಥವಾ ಚಪಾತಿ, ಅಥವಾ ಅನ್ನವಾಗಿರುವುದಿಲ್ಲ. ಅದು ಇತರ ರೂಪಗಳಾಗಿ ಪರಿವರ್ತನೆಯಾಗುತ್ತದೆ, ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೂಲಕವಾಗಿ ಮತ್ತು ದೇಹದೊಳಗೆ ನಡೆಯುವ ಅನೇಕ ಇತರ ವಿಷಯಗಳ ಪರಿಣಾಮವಾಗಿ, ಅಂತಿಮವಾಗಿ ಆ ಆಹಾರವು ಸಂಪೂರ್ಣವಾಗಿ ದೇಹದ ಭಾಗವಾಗುತ್ತದೆ. ಈ ಪರಿವರ್ತನೆಯ ಪ್ರಕ್ರಿಯೆಯು ಬಹಳ ಸೌಮ್ಯವಾದ ಸೇವೆಯಾಗಿರುತ್ತದೆ, ಆರಂಭದಲ್ಲಿ ಕೈಯ ಮೂಲಕ ಆಹಾರವನ್ನು ತೆಗೆದುಕೊಂಡು ಬಾಯಿಯೊಳಕ್ಕೆ ಹಾಕಿಕೊಳ್ಳುವಂತದ್ದು ಸುವಾರ್ತಾ ಬೋಧನೆಯಾಗಿದೆ. ಆದರೆ ಅದರ ನಂತರ, ದೇಹದ ಇತರ ಭಾಗಗಳು ಆಹಾರವನ್ನು ಜೀರ್ಣಿಸುತ್ತವೆ ಮತ್ತು ಕೈಯು ಮಾಡಲಾಗದ ಕಾರ್ಯಗಳನ್ನು ಅವು ಮಾಡುತ್ತವೆ. ಇದರಂತೆಯೇ, ಸುವಾರ್ತಾ ಬೋಧಕರು ಎಂದಿಗೂ ಮಾಡಲಾಗದ ಕಾರ್ಯಗಳನ್ನು ಇತರ ಸೇವಕರು ನಿರ್ವಹಿಸುತ್ತಾರೆ, ಉದಾಹರಣೆಗೆ ಪ್ರವಾದನಾ ಸೇವೆ, ಬೋಧನಾ ಸೇವೆ, ಸಭಾ ಪಾಲನೆಯ ಸೇವೆ ಮತ್ತು ಅಪೊಸ್ತಲ ಸೇವೆ ಇವೆಲ್ಲವೂ ಒಬ್ಬ ವ್ಯಕ್ತಿಯನ್ನು ಕ್ರಿಸ್ತನ ದೇಹದ ಜೀವಂತ ಅಂಗವಾಗಿ, ದೇಹದ ಕಾರ್ಯವನ್ನು ನಿರ್ವಹಿಸುವವನಾಗಿ, ಪರಿಣಾಮಕಾರಿ ಮತ್ತು ಶಕ್ತಿಯುತ ಅಂಗವಾಗಿ ಆಗುವಂತೆ ಮಾಡುತ್ತವೆ. ಆ ಆಹಾರವು ಕೆಲವು ವಾರಗಳ ನಂತರ, ಮೇಲೆ ಹೇಳಿದಂತೆ ಆಲೂಗಡ್ಡೆಯೋ ಅಥವಾ ಚಪಾತಿಯೋ ಆಗಿರುವುದಿಲ್ಲ, ಆದರೆ ಮಾಂಸ ಮತ್ತು ರಕ್ತ ಮತ್ತು ಮೂಳೆಯಾಗಿ ಮಾರ್ಪಡುತ್ತದೆ, ಹೀಗೆಯೇ ಸುವಾರ್ತಾ ಬೋಧಕನು ಕ್ರಿಸ್ತನ ಬಳಿಗೆ ತರುವಂತ ಪ್ರತಿಯೊಬ್ಬ ವ್ಯಕ್ತಿಯೂ ಈ ರೀತಿಯ ಬದಲಾವಣೆಯನ್ನು ಕಾಣಬೇಕು.

ಹಾಗಾದರೆ ಯಾವ ಸೇವೆಯ ಅವಶ್ಯಕತೆ ಹೆಚ್ಚಾಗಿದೆ? ಸೌವಾರ್ತಿಕನೋ, ಅಥವಾ ಪ್ರವಾದಿಯೋ, ಅಥವಾ ಸಭಾಪಾಲಕನೋ, ಅಥವಾ ಶಿಕ್ಷಕನೋ? ಈ ಪ್ರಶ್ನೆ ಯಾವ ರೀತಿ ಇದೆಯೆಂದರೆ, "ಕೈಯು ಹೆಚ್ಚು ಮುಖ್ಯವಾದ ಅಂಗವೋ, ಅಥವಾ ಹಲ್ಲೋ, ಅಥವಾ ಹೊಟ್ಟೆಯೋ?"ಎಂದು ಕೇಳುವಂತಿದೆ. ದೇಹದ ಅಂಗಾಂಗಗಳನ್ನು ಒಂದಕ್ಕೊಂದನ್ನು ಹೋಲಿಕೆ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಕೈಯು ಆಹಾರವನ್ನು ತೆಗೆದುಕೊಂಡು ಅದನ್ನು ಬಾಯಿಯೊಳಗೆ ಹಾಕದಿದ್ದರೆ, ಹಲ್ಲು ಮತ್ತು ಹೊಟ್ಟೆಗೆ ಯಾವುದೇ ಕೆಲಸವಿರುವುದಿಲ್ಲ; ಮತ್ತು ಆಹಾರವನ್ನು ಬಾಯಿಗೆ ಹಾಕುವ ಕೆಲಸವನ್ನು ಕೈಯು ಮಾಡಿದರೂ, ಹಲ್ಲು ಮತ್ತು ಹೊಟ್ಟೆ ಕೆಲಸ ಮಾಡದಿದ್ದರೆ, ಆಹಾರವು ವ್ಯರ್ಥವಾಗುತ್ತದೆ. ಆದ್ದರಿಂದ ಸುವಾರ್ತಾ ಬೋಧಕನು ಪ್ರವಾದಿಗಿಂತ ಮುಖ್ಯ, ಅಥವಾ ಸುವಾರ್ತಾ ಬೋಧಕನಿಗಿಂತ ಪ್ರವಾದಿಯು ಮುಖ್ಯ ಎಂದು ಯೋಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಒಬ್ಬರು ಇನ್ನೊಬ್ಬರಿಗಿಂತ ಹೆಚ್ಚು ಮುಖ್ಯವಾದ ಕಾರ್ಯವನ್ನು ಪೂರೈಸುವಂತೆ ತೋರಬಹುದು. ಆದರೆ ಎರಡೂ ನಮ್ಮ ದೇಹಕ್ಕೆ ಸಮಾನವಾಗಿ ಅವಶ್ಯಕವಾಗಿವೆ. ದೇಹದ ಪ್ರತಿಯೊಂದು ಅಂಗಾಂಗವು ತನ್ನ ಕಾರ್ಯವನ್ನು ಪೂರೈಸುವುದಕ್ಕಾಗಿ ಆರೋಗ್ಯಕರವಾಗಿರಬೇಕು ಮತ್ತು ಬಲಶಾಲಿಯಾಗಿರಬೇಕು ಎಂದು ದೇವರು ಸಂಕಲ್ಪಿಸಿದ್ದಾರೆ.