WFTW Body: 

ಲೂಕ 1:34,35ರಲ್ಲಿ ನಾವು ಓದುವುದೇನೆಂದರೆ, ಗಬ್ರಿಯೇಲನೆಂಬ ದೇವದೂತನು ಮರಿಯಳ ಬಳಿ ಬಂದಾಗ, ಅವಳು ಸ್ವಾಭಾವಿಕವಾಗಿಯೇ ದೇವದೂತನನ್ನು ಕೇಳಿದ್ದೇನೆಂದರೆ, "ಇದು ಹೇಗಾದೀತು? ನಾನು ಕನ್ಯೆಯಾಗಿದ್ದೇನೆ, ಪುರುಷನನ್ನು ಅರಿತವಳಲ್ಲ. ಪುರುಷನನ್ನು ಅರಿಯದೇ ಗರ್ಭಧರಿಸುವುದು ಹೇಗೆ ಸಾಧ್ಯ?" ಅದಕ್ಕೆ ಉತ್ತರವಾಗಿ, ದೂತನು ಹೇಳಿದ್ದೇನೆಂದರೆ, "ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು." ಪವಿತ್ರಾತ್ಮನು ಯಾವಾಗಲೂ ನಮಗೆ ದೇವರ ಶಕ್ತಿಯನ್ನು ದಯಪಾಲಿಸುವವನಾಗಿದ್ದಾನೆ (ಅ.ಕೃ 1:8 & 10:38).

ಯೇಸುವು ಮರಿಯಳಲ್ಲಿ ರೂಪಿಸಲ್ಪಡುವಂತೆ ಅವಳ ಮೇಲೆ ದೇವರ ಪವಿತ್ರಾತ್ಮವು ಇಳಿದು ಬಂದಂತೆ, ನಮ್ಮಲ್ಲಿ ಯೇಸುವು ರೂಪುಗೊಳ್ಳುವಂತೆ ಪವಿತ್ರಾತ್ಮನು ನಮ್ಮ ಮೇಲೆ ಇಳಿದು ಬರುತ್ತಾನೆ. ಇದೇ ನಮ್ಮ ಜೀವಿತದಲ್ಲಿ ಮತ್ತು ನಾವು ಮಾಡುವ ಕ್ರಿಸ್ತನ ಸೇವೆಯಲ್ಲಿ ಪವಿತ್ರಾತ್ಮನ ಸೇವೆಯನ್ನು ಗುರುತಿಸುವಂಥ ಗುರುತಾಗಿದೆ. ಮರಿಯಳ ಗರ್ಭದಲ್ಲಿ ಯೇಸುವಿನ ದೇಹ ಬೆಳೆಯಲು ಸಮಯ ಬೇಕಾದಂತೆಯೇ, ಕ್ರಿಸ್ತನು ನಮ್ಮ ಜೀವಿತದಲ್ಲಿ ಪ್ರಕಟವಾಗಲು ಕಾಲಾವಕಾಶ ಬೇಕು.

ಮರಿಯಳು ದೇವರ ಮಾತಿಗೆ ವಿಧೇಯಳಾಗಿ "ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ ಅಂದಳು"(ಲೂಕ 1:38). ನಾನು (ರೋಮನ್ ಕಥೋಲಿಕನಲ್ಲದಿದ್ದರೂ) ಮರಿಯಳನ್ನು ತುಂಬಾ ಮೆಚ್ಚುತ್ತೇನೆ (ಗೌರವಿಸುತ್ತೇನೆ). ಏಕೆಂದರೆ ಅವಳು ಅತ್ಯಂತ ದೈವಿಕ ಯುವತಿಯಾಗಿದ್ದಳು. ಒಬ್ಬ ದೈವಿಕಳಾದ ಸ್ತ್ರೀಯನ್ನು ಕಂಡುಕೊಳ್ಳಲು ದೇವರು ಇಸ್ರಾಯೇಲ್ಯರನ್ನೆಲ್ಲ ನೋಡಿದಾಗ, ಬಹುಶ 18 ವರ್ಷದವಳಾದ ಮರಿಯಳು ಆತನಿಗೆ ಸಿಕ್ಕಿದಳು. ಲೂಕ 1:46-55 ವಚನಗಳನ್ನು ಓದಿ. ಅವಳು ಹಾಡಿದ ಹಾಡಿನಲ್ಲಿ ಅವಳೆಷ್ಟು ಪ್ರೌಡಿಮೆಯನ್ನು ಹೊಂದಿದ್ದಾಳೆ ಮತ್ತು ದೇವರ ವಾಕ್ಯದ ಜ್ಞಾನ ಆಕೆಗೆ ಎಷ್ಟಿದೆ ಎಂಬುದನ್ನು ಗಮನಿಸಿ. ಇದರಿಂದ ನಾವು ತಿಳಿಯುವುದೇನೆಂದರೆ, ದೇವರ ಭಯವಿರುವುದಾದಲ್ಲಿ, ಒಬ್ಬರು 18ನೆಯ ವಯಸ್ಸಿನಲ್ಲಿಯೇ ಆತ್ಮಿಕತೆಯಲ್ಲಿ ಫ್ರೌಢರಾಗಬಹುದು. ತಾನು ಆರಿಸಿಕೊಳ್ಳುವವರಲ್ಲಿ ದೇವರೆಂದಿಗೂ ತಪ್ಪು ಮಾಡುವದಿಲ್ಲ.

ಮರಿಯಳು ಗರ್ಭಿಣಿಯೆಂದು ತಿಳಿದ ಕೂಡಲೇ ನಜರೇತಿನಲ್ಲಿರುವರೆಲ್ಲರೂ ತನ್ನ ಬಗ್ಗೆ ಕಳಂಕಿತ ಮಾತುಗಳನ್ನು ಆಡುತ್ತಾರೆಂದು ಆಕೆಗೆ ಗೊತ್ತಿತ್ತು. ಇದು ಪವಿತ್ರಾತ್ಮನ ಕಾರ್ಯವೆಂದು ಯಾರೂ ನಂಬಲಿಕ್ಕಿಲ್ಲ ಹಾಗೂ ಕ್ರಿಸ್ತೇಸುವಿನ ಶರೀರವನ್ನು ತನ್ನ ಶರೀರದಿಂದ ತರುವಾಗ ತನಗಾಗುವ ನಿಂದೆಯನ್ನು ಸಹಿಸಲು ಆಕೆ ಸಿದ್ಧಳಾಗಿದ್ದಳು. ಈಗ ಇದನ್ನು ನಿನ್ನ ಜೀವಿತಕ್ಕೆ ಅಳವಡಿಸಿಕೋ. ಯೇಸುವಿನ ದೇಹವನ್ನು(ಶರೀರ) ನಿಮ್ಮ ಪಟ್ಟಣದಲ್ಲಿ ಕಟ್ಟಲು ನೀನು ಇಚ್ಚಿಸುತ್ತೀಯ? ಇದರಿಂದಾಗಿ ಗೌರವ ಪಡೆಯಲು ನೀನು ಇಚ್ಚಿಸುತ್ತೀಯ ಅಥವಾ ಕ್ರಿಸ್ತನ ಅವಮಾನ/ನಿಂದೆಯನ್ನು ಅನುಭವಿಸಲು ನೀನು ಸಿದ್ಧನಿದ್ದೀಯ? ಕರ್ತನ ಸೇವೆಯಲ್ಲಿ ಗೌರವ ಹುಡುಕುವವರನ್ನು ದೇವರೆಂದಿಗೂ ಬೆಂಬಲಿಸುವದಿಲ್ಲ. ಅಂಥವರು ಕೇವಲ ಒಂದು ಸಂಘವನ್ನು ಕಟ್ಟುತ್ತಾರೆಯೇ ವಿನ: ಕ್ರಿಸ್ತನ ದೇಹವನ್ನಲ್ಲ. ಕ್ರಿಸ್ತನ ದೇಹವನ್ನು ಕಟ್ಟುವುದರಿಂದ ನಿಂದೆ, ಅಪಾರ್ಥ, ವ್ಯಂಗ್ಯ(ಹಾಸ್ಯ) ಮತ್ತು ಚಾಡಿ ಮಾತು, ಗಾಳಿ ಸುದ್ದಿ ಇತ್ಯಾದಿಗಳನ್ನು ನಾವು ಸಹಿಸಬೇಕಾಗುತ್ತದೆ. ಇವೆಲ್ಲವುಗಳಿಂದ ಮರಿಯ ಎದೆಗುಂದಲಿಲ್ಲ. ಆದಾಗ್ಯೂ ಆಕೆ ಕ್ರಿಸ್ತನ ದೇಹಕ್ಕೆ ಜನ್ಮ ನೀಡಿದಳು. ಇಂದೂ ಇದು ಹೀಗೇ ಆಗಿದೆ. ಯಾರು "ಕ್ರೈಸ್ತ ಧಾರ್ಮಿಕ ಗುಂಪುಗಳಿಂದ ಹೊರಹೋಗಿ ಕರ್ತನಿಗಾಗಿ ನಿಂದೆಯನ್ನು ಅನುಭವಿಸಲಿಕ್ಕೆ ಸಿದ್ಧರಿದ್ದಾರೋ" ಅಂಥವರಿಂದ ಕ್ರಿಸ್ತನ ದೇಹವು ಜನ್ಮ ತಾಳುತ್ತದೆ (ಕಟ್ಟಲ್ಪಡುತ್ತದೆ).

ದನದ ಕೊಟ್ಟಿಗೆಯಲ್ಲಿನ ಕಷ್ಟದ ಪರಿಸ್ಥಿತಿಯನ್ನು ನೋಡಿ ಮರಿಯಳು ಗೊಣಗುಟ್ಟಿಲ್ಲವೆಂದು ನಾನು ನಂಬುತ್ತೇನೆ. ಈಗಿನ ಕಾಲದಲ್ಲಿ ಹಾಳಾಗಿರುವ ಯುವತಿಯರಂತೆ ಮರಿಯಳಾಗಿರುವದನ್ನು ಕಲ್ಪಿಸಿಕೊಳ್ಳಿ. ಆಗ ಅವಳು ಯೋಸೇಫನಿಗೆ, "ನಮ್ಮ ಪ್ರಯಾಣವನ್ನು ಒಂದೆರಡು ದಿನ ಮುಂಚಿತವಾಗಿ ಮಾಡಬೇಕೆಂದು ನಾನು ಮೊದಲೇ ಹೇಳಿದ್ದೆನಲ್ಲವೇ. ನಮ್ಮದೇ (ಖಾಸಗಿಯಾಗಿ) ರೀತಿಯಲ್ಲಿ ಸರಿಯಾಗಿ ಇರಲು ನಮಗೆ ಇಲ್ಲಿ ಜಾಗವಿಲ್ಲ. ಈ ದನದ ಕೊಟ್ಟಿಗೆಯಲ್ಲಿನ ಹೊಲಸಿನ ಮಧ್ಯೆ ನಾನು ಮಗುವನ್ನು ಹೆರಬೇಕಾಗಿದೆ. ಎಂಥಾ ಬೇಜವಾಬ್ದಾರಿಯ ಗಂಡನಾಗಿದ್ದೀಯ ನೀನು" ಎಂದು ಏನೇನೋ ಗೊಣುಗುಟ್ಟುತ್ತಾ ಕಿರುಚುತ್ತಿದ್ದಳು. ಗೊಣುಗುಟ್ಟುವ ಮತ್ತು ಜಗಳಮಯವಾದ ವಾತಾವರಣದಲ್ಲಿ ಯೇಸು ಹುಟ್ಟುವದನ್ನು ನೀನು ಕಲ್ಪಿಸ(ಊಹಿಸ)ಬಲ್ಲೆಯಾ? ಇಂಥದ್ದಕ್ಕೆ ದೇವರೆಂದಿಗೂ ಅವಕಾಶ ಮಾಡಿಕೊಡುತ್ತಿರಲಿಲ್ಲ. ದೇವರಿಗೆ ಗೊಣಗುಟ್ಟದೇ ಇರುವ ಸ್ತ್ರೀ ಬೇಕಾಗಿದ್ದಳು. ತನ್ನ ಯೌವನದ ದಿನಗಳಲ್ಲಿ ಬಡತನದ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ಸಂತೃಪ್ತಳಾಗಿರುವದನ್ನು ಕಲಿತಿದ್ದ ಮರಿಯಳನ್ನು ಯೇಸುವಿನ ತಾಯಿಯಾಗಲು ದೇವರು ಆರಿಸಿಕೊಂಡರು. ಆದ್ದರಿಂದ ಇಸ್ರಾಯೇಲ್ಯದಲ್ಲಿನ ಹುಡುಗಿಯರಲ್ಲಿ ಬೇರೆ ಯಾರನ್ನೂ ದೇವರು ಆರಿಸಿಕೊಳ್ಳಲಿಲ್ಲ.