WFTW Body: 

ನಾವು 2 ಅರಸು 4:8-37ರಲ್ಲಿ ಒಬ್ಬ ಗಣ್ಯ, ಶ್ರೀಮಂತ, ಪ್ರಭಾವಶಾಲಿ ಮಹಿಳೆಯ ಬಗ್ಗೆ ಓದುತ್ತೇವೆ - ಅವಳು ಎಲೀಷನ ಸೇವಾಕಾರ್ಯದ ಮೂಲಕ ಆಶೀರ್ವದಿಸಲ್ಪಟ್ಟಳು. ದೇವರ ಆಶೀರ್ವಾದ ಸಿಗುವದು ಬಡವ, ಅವಿದ್ಯಾವಂತ ಮತ್ತು ಅನಕ್ಷರಸ್ಥರಿಗೆ ಮಾತ್ರವಲ್ಲ. ಅವನಲ್ಲಿ ಭೇದ ಭಾವವಿಲ್ಲ. ಅವನು ಅನಕ್ಷರಸ್ಥ ಪೇತ್ರನನ್ನು ಆರಿಸಿದನು, ಜೊತೆಗೆ ಬಹಳ ವಿದ್ಯಾವಂತನಾದ ಪೌಲನನ್ನೂ ಆರಿಸಿದನು. ಪೇತ್ರನಿಗೆ ಧರ್ಮಶಾಸ್ತ್ರದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, ಆದರೆ ಪೌಲನು ಧರ್ಮಶಾಸ್ತ್ರದ ವಿದ್ವಾಂಸನಾಗಿದ್ದನು. ಯೇಸು ಮತ್ತು ಅವನ ಶಿಷ್ಯರನ್ನು ಆರ್ಥಿಕವಾಗಿ ಬೆಂಬಲಿಸಿದ ಕೆಲವು ಸ್ತ್ರೀಯರಿದ್ದರು, ಮತ್ತು ಅವರು ದೈವಿಕ ಮಹಿಳೆಯರು ಆಗಿದ್ದರಿಂದ ಯೇಸುವು ಅವರ ಭಾರಿ ಕಾಣಿಕೆಗಳನ್ನು ಸ್ವೀಕರಿಸಿದನು (ಲೂಕ 8:3).

ಇಲ್ಲಿ ಎಲೀಷನನ್ನು ಬೆಂಬಲಿಸಲು ನಿರ್ಧರಿಸಿದ ಒಬ್ಬ ಶ್ರೀಮಂತ ಮಹಿಳೆ ಇದ್ದಳು. ಅವಳೊಬ್ಬ ದೈವಿಕ ಮಹಿಳೆಯೂ ಆಗಿದ್ದಳು, ಏಕೆಂದರೆ ಎಲೀಷನು ಅವಳನ್ನು ಸಂಧಿಸಿದ ಸಂದರ್ಭಗಳಲ್ಲಿ, ಅವಳು ತನ್ನ ಪತಿಗೆ ಹೇಳಿದ್ದೇನೆಂದರೆ, "ಇವನೊಬ್ಬ ದೈವಿಕ ಮನುಷ್ಯನೆಂದು ನಾನು ಅರಿತಿರುವೆ." ಅವನು ಮಾಡಿದ ಒಂದು ಬೋಧನೆಯನ್ನೂ ಕೇಳದೆ, ಅವಳು ಎಲೀಷನು ದೈವಿಕ ಮನುಷ್ಯನೆಂದು ಗುರುತಿಸಿದ್ದು ಹೇಗೆ? ಅವಳು ಊಟದ ಮೇಜಿನಲ್ಲಿ ಅವನು ನಡಕೊಂಡ ರೀತಿಯನ್ನಷ್ಟೇ ನೋಡಿದಳು. ನಮಗೆ ಎಂತಹ ಉತ್ತಮ ಉದಾಹರಣೆ! ಅವನು ಜನರೊಡನೆ ಕುಳಿತುಕೊಂಡು ಮಾತನಾಡುವ ರೀತಿ, ಅವನ ದಿನನಿತ್ಯದ ಆಹಾರ ಪದ್ಧತಿ, ಮತ್ತು ಸಾಮಾನ್ಯ ವಿಷಯಗಳಲ್ಲಿ ಜನರೊಂದಿಗೆ ಅವನ ನಡತೆ - ಒಬ್ಬ ದೈವಿಕ ಮನುಷ್ಯನನ್ನು ಈ ಸಣ್ಣ ಪುಟ್ಟ ವಿಷಯಗಳು ತೋರಿಸುತ್ತವೆ. ನಾವು ಅವನ ಬೋಧನೆಗಳನ್ನು ಕೇಳಿಯೇ ಆಗಬೇಕಿಲ್ಲ.

ಆದ್ದರಿಂದ, ಅವಳು ತನ್ನ ಮನೆಯಲ್ಲಿ ಎಲೀಷನು ತಂಗಲಿಕ್ಕಾಗಿ ಒಂದು ಮಂಚ, ಒಂದು ಮೇಜು, ಒಂದು ಕುರ್ಚಿ ಮತ್ತು ಒಂದು ದೀಪವಿದ್ದ ಅತಿಥಿ ನಿವಾಸವನ್ನು ಸಿದ್ಧಪಡಿಸಿದಳು. ಎಲೀಷನು ತನಗೆ ಈ ಅನುಕೂಲಗಳು ಬೇಕೆಂದು ಎಂದೂ ಸೂಚಿಸಿರಲಿಲ್ಲ. ಆದರೆ ಅವಳು, ಎಲ್ಲಾ ದೈವಿಕ ಮಹಿಳೆಯರಂತೆ, ವಿಚಾರವಂತೆಯೂ, ಸಹಾಯ ಮಾಡುವ ಮಹಿಳೆಯೂ ಆಗಿದ್ದಳು. ದೇವರು ತನ್ನ ಸೇವಕರ ವಿಶ್ರಾಂತಿಗಾಗಿ ಅಂತಹ ಸ್ಥಳಗಳನ್ನು ಒದಗಿಸಿ, ಅವರು ನಿರೀಕ್ಷಿಸದೇ ಇದ್ದಾಗಲೂ ಅವರನ್ನು ನೋಡಿಕೊಳ್ಳುತ್ತಾನೆ. ಆದರೆ ಒಬ್ಬ ನಿಜವಾದ ದೇವಭಕ್ತನು ಎಂದಿಗೂ ಅಂತಹ ಜನರ ಹಂಗಿನಲ್ಲಿ ಇರುವದಿಲ್ಲ. ಹಾಗಾಗಿ, ಎಲೀಷನು ಅವಳಿಗೆ ಏನು ಪ್ರತ್ಯುಪಕಾರ ಮಾಡಬಹುದೆಂದು ತನ್ನ ಸೇವಕ ಗೇಹಜಿಯನ್ನು ಕೇಳಿದನು. ಅವಳಿಗೆ ಮಕ್ಕಳಿಲ್ಲವೆಂದು ಗೇಹಜಿಯು ಎಲೀಷನಿಗೆ ತಿಳಿಸಿದನು. ಆಗ ಎಲೀಷನು ಅವಳಿಗಾಗಿ ಪ್ರಾರ್ಥಿಸಿ, ಅವಳು ಒಂದು ವರ್ಷದಲ್ಲಿ ಮಗುವನ್ನು ಪಡೆಯುವಳೆಂದು ಹೇಳಿದನು. ಹಾಗೆಯೇ ಅವಳು ಒಬ್ಬ ಮಗನನ್ನು ಹೆತ್ತಳು.

ಬೆಳೆಯುತ್ತಿದ್ದ ಆ ಮಗನು, ಒಂದು ದಿನ ರೋಗಪೀಡಿತನಾಗಿ ಸತ್ತುಹೋದನು (2 ಅರಸು 4:20). ಆ ತಾಯಿಯು ಸತ್ತ ಮಗನನ್ನು ಒಡನೆಯೇ ಸಮಾಧಿ ಮಾಡಲಿಲ್ಲ, ಆದರೆ ಆಕೆ ಹೀಗೆಂದಳು, "ನಾನು ಬೇಗನೆ ದೇವರ ಮನುಷ್ಯನ ಬಳಿಗೆ ಹೋಗಿ ಬರುತ್ತೇನೆ" (4:25) - ಅವಳ ನಂಬಿಕೆಯನ್ನು ನೋಡಿರಿ!

ಅವಳು ಬೇಗನೆ ಎಲೀಷನನ್ನು ಭೇಟಿಯಾಗಲು ಹೋದಳು. ಎಲೀಷನು ಅವಳನ್ನು ದೂರದಿಂದ ನೋಡಿ, ಗೇಹಜಿಯನ್ನು ಅವಳ ಬಳಿಗೆ ಕಳುಹಿಸಿ, "ನಿನಗೂ, ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೋ?" ಎಂದು ಕೇಳಿದನು (ವ.26). ಆಗ ಆಕೆ ತನ್ನ ಸತ್ತ ಮಗನ ಬಗ್ಗೆ ಕೊಟ್ಟ ನಂಬಿಕೆಯ ಉತ್ತರವನ್ನು ಕೇಳಿರಿ: "ಕ್ಷೇಮ". ಎಂತಹ ಅಸಾಮಾನ್ಯ ನಂಬಿಕೆ! ಆಗ ಎಲೀಷನು ಅವಳ ಮಗುವಿಗಾಗಿ ಪ್ರಾರ್ಥಿಸಿದನು ಮತ್ತು ಅವಳ ಮಗುವನ್ನು ಸತ್ತವರಿಂದ ಎಬ್ಬಿಸಿದನು. ತಾಯಿಯ ನಂಬಿಕೆಯು ಮಗುವಿಗೆ ಮಾಡಿದ ಅದ್ಭುತವನ್ನು ನೋಡಿ. ಅವಳು ತನ್ನ ನಂಬಿಕೆಗೆ ತಕ್ಕಂತೆ ಪಡೆದಳು. ಆದುದರಿಂದಲೇ ಅವಳು ನಂಬಿಕೆಯ ವೀರರ ಮೊಗಸಾಲೆಯಲ್ಲಿ ಸೇರಿಸಲ್ಪಟ್ಟಿದ್ದಾಳೆ (ಇಬ್ರಿ.11:35, 39). ಆ ತಾಯಿಗೆ ವಿಶ್ವಾಸವಿರದಿದ್ದರೆ ಆಕೆಯು ತನ್ನ ಮಗುವನ್ನು ಸಮಾಧಿ ಮಾಡುತ್ತಿದ್ದಳು. ದೇವರು ನಂಬಿಕೆ ಇರುವವನನ್ನು ಕಂಡಾಗ ಪ್ರತಿಸಾರಿ ಎಂಥಹ ಅದ್ಭುತಗಳನ್ನು ಮಾಡುವರು!