ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ನಾವು ಯೇಸುವಿನ ಕೆಲವು ಅದ್ಭುತಕಾರ್ಯಗಳನ್ನು ಮತ್ತಾಯ 8ನೇ ಅಧ್ಯಾಯದಲ್ಲಿ ನೋಡುತ್ತೇವೆ. ಆತನು ಜನರಿಗೆ ಬೋಧಿಸಿದ್ದು ಮಾತ್ರವಲ್ಲದೆ, ಕಾಳಜಿಯನ್ನೂ ತೋರಿಸಿದನು. ಯಾರೂ ಮುಟ್ಟದೇ ಇದ್ದ ಕುಷ್ಠರೋಗಿಗಳನ್ನು ಆತನು ಮುಟ್ಟಿದನು. ಆತನು ಅವರನ್ನು ಗುಣಪಡಿಸಿದ್ದು ಮಾತ್ರವಲ್ಲದೆ, ಅವರ ಜೀವನ ಎಷ್ಟು ಬೆಲೆಯುಳ್ಳದ್ದೆಂದು ಅವರಿಗೆ ತಿಳಿಸಿದನು. ಇಲ್ಲಿ ನಾವು ನೋಡುವ ರೋಮದ ಶತಾಧಿಪತಿಯಲ್ಲಿ ಎಂತಹ ನಮ್ರತೆ ಮತ್ತು ದೃಢನಂಬಿಕೆ ಇದ್ದವೆಂದರೆ, ಯೇಸುವು ಆತನ ಸೇವಕನನ್ನು ಗುಣಪಡಿಸಲು ಆತನ ಮನೆಗೆ ತಾನು ಬರುವದಾಗಿ ಹೇಳಿದಾಗ, ಶತಾಧಿಪತಿಯು ಹೀಗೆಂದನು, "ಪ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು." ನಂಬಿಕೆ ಮತ್ತು ದೀನತೆ ಯಾವಾಗಲೂ ಜೊತೆಯಾಗಿ ಇರುತ್ತವೆ. ಯೇಸುವು ಇದನ್ನು ಕೇಳಿದ ತಕ್ಷಣ, "ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎಂದನು (ಮತ್ತಾಯ 8:10).

ಯೇಸುವು ಮೆಚ್ಚುಗೆ ವ್ಯಕ್ತಪಡಿಸಿ ಜನರನ್ನು ಪ್ರೋತ್ಸಾಹಿಸುವದರಲ್ಲಿ ಪ್ರವೀಣನಾಗಿದ್ದನು. ಒಂದು ಸಲ ಪೇತ್ರನಿಗೆ ಹೀಗೆ ಹೇಳಿದ್ದನ್ನು ನೋಡುತ್ತೇವೆ, "ಯೋನನ ಮಗನಾದ ಸಿಮೋನನೇ, ನೀನು ಧನ್ಯನು; ಈ ಗುಟ್ಟನ್ನು ನಿನಗೆ ಪರಲೋಕದಲ್ಲಿರುವ ನನ್ನ ತಂದೆಯೇ ತಿಳಿಸಿದನು" (ಮತ್ತಾಯ 16:17). ಇನ್ನೊಂದು ವಿಷಯದಲ್ಲಿ ಯೇಸುವು ನತಾನಯೇಲನನ್ನು ಹೀಗೆ ಹೊಗಳಿದನು, "ಇಗೋ ಇವನು ನಿಜವಾದ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ" (ಯೋಹಾನ 1:47). ಜನರಲ್ಲಿ ಪರಿಪೂರ್ಣತೆ ಇಲ್ಲದಿದ್ದಾಗಲೂ ಯೇಸುವು ಅವರನ್ನು ಹೇರಳವಾಗಿ ಶ್ಲಾಘಿಸುತ್ತಿದ್ದನು.

ರೋಮದ ಶತಾಧಿಪತಿ, ಪೇತ್ರ ಮತ್ತು ನತಾನಯೇಲ ಇವರೆಲ್ಲರೂ ಕೊರತೆಯುಳ್ಳ ವ್ಯಕ್ತಿಗಳಾಗಿದ್ದರು. ಆದರೆ ಯೇಸುವು ಇವರೆಲ್ಲರಲ್ಲಿ ಮೆಚ್ಚುಗೆಗೆ ಯೋಗ್ಯವಾದ ಯಾವುದೋ ವಿಷಯವನ್ನು ಗಮನಿಸಿದನು. ಅವನು ಮಾನಸಾಂತರ ಪಡೆಯದ ವಿಗ್ರಹಾರಾಧಕ, ನಿಜ ದೇವರು ಮತ್ತು ಸತ್ಯವೇದದ ಬಗ್ಗೆ ಯಾವ ತಿಳಿವಳಿಕೆಯೂ ಇಲ್ಲದ ಒಬ್ಬ ಸೇನಾಧಿಪತಿಯಲ್ಲಿ ಅವನಿಗೆ ಕಂಡುಬಂದ ಒಳ್ಳೆಯತನವನ್ನು ವ್ಯಕ್ತಪಡಿಸಲು ಹಿಂಜರಿಯಲಿಲ್ಲ. ಇಂತಹ ಮೆಚ್ಚುಗೆಯ ಮಾತನ್ನು ಆ ಶತಾಧಿಪತಿಯು ತನ್ನ ಜೀವನವಿಡೀ ಮರೆಯಲು ಸಾಧ್ಯವಿತ್ತೇ? ಇಲ್ಲ. ಈ ಪ್ರಶಂಸೆಯಿಂದ ಆತನು ಎಷ್ಟು ಪ್ರೋತ್ಸಾಹ ಪಡೆದಿರಬೇಕು ಎಂದರೆ, ಬಹುಶಃ ಆತನು ಯೇಸುವಿನ ಒಬ್ಬ ನಿಜವಾದ ಅನುಯಾಯಿ ಆಗಿರಬಹುದು.

ಇದರ ಮೂಲಕ ನಾವು ನಿಜವಾದ ದೈವಭಕ್ತಿ ಹಾಗೂ ಪರಲೋಕ ರಾಜ್ಯದ ಬಗ್ಗೆ ಕಲಿಯತಕ್ಕಂತ ಸಂಗತಿ ಇದೆ. ಆದಾಮನ ಮಕ್ಕಳು ಜನರನ್ನು ಪ್ರಶಂಸಿಸುವದರಲ್ಲಿ ಎಷ್ಟು ಜಿಪುಣರೋ, ಅವರನ್ನು ಟೀಕಿಸುವದರಲ್ಲಿ ಅಷ್ಟೇ ಪ್ರವೀಣರು. ಜನರಲ್ಲಿ ಜಂಬ ಉಂಟಾಗುತ್ತದೆ ಎಂಬ ಭಯದಿಂದಾಗಿ, ನಾವು ಅವರನ್ನು ಎಲ್ಲರ ಮುಂದೆ ಪ್ರಶಂಸಿಸಲು ಹಿಂಜರಿಯುತ್ತೇವೆ. ನಿಜವಾದ ದೈವಿಕ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೂ ಸಹ ನಮಗೆ ಬಾರದು. ಹೆಚ್ಚಿನ ವಿಶ್ವಾಸಿಗಳು ಕ್ರಿಸ್ತನ ಈ ಸ್ವಭಾವವನ್ನು ಕಲಿತಿಲ್ಲ. ನಾವು ಯಾರನ್ನೂ ಕೇವಲ ಮುಖಸ್ತುತಿ ಖಂಡಿತವಾಗಿ ಮಾಡಬಾರದು, ಏಕೆಂದರೆ ಸುಳ್ಳು ಪ್ರಶಂಸೆ ಸೈತಾನನ ರೀತಿಯಾಗಿದೆ. ಆದರೆ ಪ್ರಾಮಾಣಿಕವಾದ ಮೆಚ್ಚುಗೆಯು ಒಂದು ದೈವಿಕ ಸ್ವಭಾವವಾಗಿದೆ. ಒಬ್ಬ ದೈವಿಕ ಮನುಷ್ಯನು ಇನ್ನೊಬ್ಬ ಸಹೋದರನನ್ನು ಮೆಚ್ಚಿ ಒಂದು ಮಾತು ನುಡಿದರೆ, ಆ ಒಂದು ಪದವು ಆತನು ಯೇಸುವನ್ನು ಹೃತ್ಪೂರ್ವಕವಾಗಿ ಹಿಂಬಾಲಿಸುವಂತೆ ಪ್ರೋತ್ಸಾಹಿಸಬಹುದು.