ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

2 ಅರಸು 3:11ರಲ್ಲಿ ಇಸ್ರಾಯೇಲಿನಲ್ಲಿ ಪ್ರವಾದಿ ಎಲೀಷನಿಗೆ ಕೊಡಲ್ಪಟ್ಟ ಸುಂದರವಾದ ಬಿರುದನ್ನು ಕಾಣುತ್ತೇವೆ: "ಎಲೀಯನ ಕೈಗಳ ಮೇಲೆ ನೀರು ಹೊಯಿದವ." ಪ್ರತೀ ಸಲ ಎಲೀಯನು ಊಟ ಮಾಡಿದ ಮೇಲೆ, ಎಲೀಷನು ಸ್ವಲ್ಪ ನೀರು ತಂದು ಎಲೀಯನು ಕೈ ತೊಳೆಯಲು ಸುರಿಯುತ್ತಿದ್ದನು. ಅವನು ಆ ಕೆಲಸವನ್ನು ಎಷ್ಟು ನಂಬಿಗಸ್ಥನಾಗಿ ಮತ್ತು ಕ್ರಮಬದ್ಧವಾಗಿ ಮಾಡಿದನೆಂದರೆ, ಇತರರು ಅದನ್ನು ಗಮನಿಸಿ ಅವನಿಗೆ ಆ ಬಿರುದನ್ನು ನೀಡಿದರು! ಆ ರೀತಿಯಾಗಿ ಎಲೀಷನು ತನ್ನ ಸೇವಾಕಾರ್ಯವನ್ನು ಆರಂಭಿಸಿದನು.

     

ನಮಗೆ ಒಂದು ಸೇವಾಕಾರ್ಯವನ್ನು ಕೊಡುವ ಮೊದಲು ಸಣ್ಣಪುಟ್ಟ ವಿಷಯಗಳಲ್ಲಿ ದೇವರು ನಮ್ಮ ನಂಬಿಗಸ್ಥತೆಯನ್ನು ಪರೀಕ್ಷಿಸುತ್ತಾರೆ. ಮೋಶೆಯ ನಂತರದ ನಾಯಕನಾಗುವ ಮೊದಲು, ಯೆಹೋಶುವನು ನಂಬಿಗಸ್ಥನಾಗಿ ಮೋಶೆಯ ಸೇವೆ ಮಾಡಿದ್ದನು. ತಿಮೋಥೆಯನು ನಂಬಿಗಸ್ಥನಾಗಿ ಪೌಲನ ಸೇವೆ ಮಾಡಿದನು ಹಾಗೂ ಒಬ್ಬ ಅಪೋಸ್ತಲನಾದನು.

   

ತಾನು ಆರಂಭಿಸಿದಾಗ, ಎಲೀಷನೊಬ್ಬ ಮಹಾ ಬೋಧಕ ಅಥವಾ ಪ್ರವಾದಿಯಾಗಿರಲಿಲ್ಲ. ಅವನು ಕೇವಲ ಒಬ್ಬ ಸೇವಕನೆಂದು ತಿಳಿಯಲ್ಪಟ್ಟಿದ್ದನು. ಅನೇಕ ಯುವಜನರು ಇತರರ ಸೇವೆ ಮಾಡುವ ಸಂದರ್ಭಗಳ ಬದಲಾಗಿ ಸೇವಾಕಾರ್ಯದಲ್ಲಿ ಪ್ರಸಿದ್ಧಿಯನ್ನು ಕಂಡುಕೊಳ್ಳಬಯಸುವುದರಿಂದ ದೇವರ ಅತ್ಯುತ್ತಮವಾದುದನ್ನು ಅವರು ಕಳೆದುಕೊಳ್ಳುತ್ತಾರೆ.

   

ನಾವು ನಮ್ಮ ಜೀವನದ ಕೊನೆಯ ತನಕ ಜನರ ಪಾದಗಳನ್ನು ತೊಳೆಯಬೇಕೆಂದು ತನ್ನ ಉಧಾಹರಣೆಯ ಮೂಲಕ ಯೇಸುವು ನಮಗೆ ಕಲಿಸಿದನು. ನಾವು ಕೆಲವು ವರ್ಷಗಳ ಕಾಲ ಜನರ ಪಾದ ತೊಳೆದು ನಂತರ ಮಹಾ ಸೇವಾಕಾರ್ಯಗಳಿಗೆ ಸಾಗುವುದಲ್ಲ. ನಮ್ಮ ಜೀವನದ ಕೊನೆಯವರೆಗೆ ಜನರ ಪಾದಗಳನ್ನು ತೊಳೆಯಲು ನಾವು ಕರೆಯಲ್ಪಟ್ಟಿದ್ದೇವೆ. ಕೀಳು ಕೆಲಸಗಳನ್ನು ಮಾಡಲು ನಾವು ಸದಾ ಸಿದ್ಧರಿರಬೇಕು.

   

ತಾನು ಇತರರಿಂದ ಸೇವೆ ಪಡೆದುಕೊಳ್ಳಲಲ್ಲ ಬದಲಾಗಿ ಇತರರ ಸೇವೆ ಮಾಡಲು ಬಂದಿದ್ದೇನೆಂದು ಯೇಸು ಹೇಳಿದನು. ನಿನ್ನ ಜೀವಾಂತ್ಯದವರೆಗೂ ಸದಾ ಸೇವಕನಾಗಿರು. ನೀನು ಯಾವಾಗಲೂ ದೇವರ ಸೇವಕನಾಗಿರಬಯಸುವುದಾದರೆ, ಯಾವಾಗಲೂ ಜನರ ಸೇವಕನಾಗಿರು. ನೀನು ಯಾವತ್ತೂ ಇತರರ ಸೇವಕನೆಂದಲ್ಲದೆ, ಬೇರೇನೆಂದೂ ಪರಿಗಣಿಸಬೇಡ. ನೀನು ದೇವರ ಸೇವೆ ಮಾಡುವಾಗ ಇತರರು ನಿನಗೆ ದಯೆತೋರಿಸಿ ನಿನ್ನ ಸೇವೆ ಮಾಡುವರು. ಆದರೆ ಎಂದಿಗೂ ಅದರಲ್ಲಿ ಆನಂದಿಸಬೇಡ. ಎಂದಿಗೂ ಅವರನ್ನು ನಿನ್ನ ಸೇವಕರೆಂದು ಕಾಣಬೇಡ. ಅವರು ನಿನ್ನ ಸಹೋದರರು. ಅವರ ಸೇವೆ ಮಾಡಲು ಮತ್ತು ಅವರ ಪಾದ ತೊಳೆಯಲು ಸಿದ್ಧನಾಗಿರು. ಬಹಳಷ್ಟು ಬೋಧಕರು ಇಂದು "ಯಜಮಾನ"ರಾಗಿದ್ದಾರೆ. ಮತ್ತು ಅದ್ದರಿಂದಲೇ ಅವರ ಸೇವಾಕಾರ್ಯದಿಂದ ಅಭಿಷೇಕ ಹೊರಟು ಹೋಗಿದೆ.