ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

ಅಪೊಸ್ತಲ ಕೃತ್ಯಗಳ 2ನೇ ಅಧ್ಯಾಯದಲ್ಲಿ ನಾವು ನೋಡುವಂತೆ, ಆ 120 ಮಂದಿ ಪವಿತ್ರಾತ್ಮನಿಗಾಗಿ ಕಾಯುತ್ತಿದ್ದಾಗ, ಎಷ್ಟು ಸಮಯ ಕಾಯಬೇಕೆಂದು ಅವರಿಗೆ ತಿಳಿದಿರಲಿಲ್ಲ, ಏಕೆಂದರೆ ಯೇಸುವು ಅದನ್ನು ತಿಳಿಸಿರಲಿಲ್ಲ. ಅದು ಕೇವಲ 10 ದಿನವೆಂದು ಅವರಿಗೆ ಒಂದು ವೇಳೆ ತಿಳಿದಿದ್ದರೆ, ಅವರಿಗೆ ಕಾಯುವದು ಸುಲಭವಾಗುತ್ತಿತ್ತು. ಯಾವುದೋ ಸಂದರ್ಭದಲ್ಲಿ ದೇವರು ನಮ್ಮನ್ನು ಕಾಯುವಂತೆ ಮಾಡಿದಾಗ, ಉತ್ತರಕ್ಕಾಗಿ ನಾವು ಎಷ್ಟು ಸಮಯ ಕಾಯಬೇಕೆಂದು ಆತನು ಸಾಮಾನ್ಯವಾಗಿ ತಿಳಿಸುವದಿಲ್ಲ. ನಾವು ನಂಬಿಕೆಯ ಮೂಲಕ ಜೀವಿಸುವದು ದೇವರ ಇಚ್ಛೆಯಾಗಿದೆ, ಏಕೆಂದರೆ ಆತ್ಮಿಕ ಬೆಳವಣಿಗೆಯ ದಾರಿ ಅದೊಂದೇ ಆಗಿದೆ - ಮತ್ತು ನಿರೀಕ್ಷೆಯು ನಮ್ಮ ನಂಬಿಕೆಯನ್ನು ಬಲಗೊಳಿಸುವ ಒಂದು ಮಾರ್ಗವಾಗಿದೆ. ನಾವು ಎಷ್ಟು ಸಮಯ ಕಾದಿರಬೇಕೆಂದು ನಮಗೆ ಮೊದಲೇ ತಿಳಿದಿದ್ದರೆ, ಅದರಲ್ಲಿ ನಂಬಿಕೆಯ ಪಾತ್ರ ಇರುವದಿಲ್ಲ. ಮುಂದೆ ಒಂದು ದಿನ ನಾವು ತಿರುಗಿ ನೋಡಿದಾಗ ಮಾತ್ರ, "ನಾನು ಅದಕ್ಕಾಗಿ ಮೂರು ದಿನ (ಅಥವಾ ಮೂರು ವರ್ಷ) ಕಾಯ ಬೇಕಾಯಿತು," ಎಂದು ಹೇಳಲು ಸಾಧ್ಯವಾಗುತ್ತದೆ.

ದೇವರು ನಮಗೆ ನಮ್ಮ ಪಾಪ ಕ್ಷಮಾಪಣೆಯ ವಿಷಯದಲ್ಲಿ ಭರವಸೆಯನ್ನು ಕೊಟ್ಟಿರುವ ಹಾಗೆಯೇ, ಆತನು ಈ ವಿಷಯದಲ್ಲೂ ನಮಗೆ ಆಶ್ವಾಸನೆಯನ್ನು ನೀಡಬಲ್ಲನು. ನಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಪವಿತ್ರಾತ್ಮನು ನಮ್ಮ ಆತ್ಮದೊಂದಿಗೆ ಸಾಕ್ಷೀಕರಿಸುವ ಹಾಗೆಯೇ, ನಮಗೆ ಬಲವು ಒದಗಿಸಲ್ಪಟ್ಟಿರುವದಾಗಿ ಸಾಕ್ಷೀಕರಿಸುತ್ತಾನೆ

ನೀವು ಕಾದುಕೊಂಡಿದ್ದ ಶಿಷ್ಯರನ್ನು ಭೇಟಿಮಾಡಿ, "ನೀವು ಪವಿತ್ರಾತ್ಮನ ದೀಕ್ಷಾಸ್ನಾನ ಪಡೆದಾಗ ನಿಮಗೆ ಅದರ ತಿಳುವಳಿಕೆ ಹೇಗೆ ಉಂಟಾಗುತ್ತದೆ?" ಎಂದು ಪ್ರಶ್ನಿಸಿದ್ದರೆ - ಅವರು ತಾವು ಅನ್ಯ ಭಾಷೆಗಳಲ್ಲಿ ಮಾತನಾಡುವ ವಿಷಯದ ಬಗ್ಗೆ ಹೇಳುತ್ತಿರಲಿಲ್ಲ. ಅವರು ಬಲವನ್ನು ಹೊಂದುವದಾಗಿ ಅವರಿಗೆ ಯೇಸುವು ತಿಳಿಸಿದ್ದನೆಂದು ಹೇಳುತ್ತಿದ್ದರು. ನೀವು ಮರು ಪ್ರಶ್ನಿಸಬಹುದು, "ನಾನು ಬಲ ಹೊಂದಿರುವದು ನನಗೆ ಹೇಗೆ ತಿಳಿಯುತ್ತದೆ?" ದೇವರು ನಮಗೆ ನಮ್ಮ ಪಾಪ ಕ್ಷಮಾಪಣೆಯ ವಿಷಯದಲ್ಲಿ ಭರವಸೆಯನ್ನು ಕೊಟ್ಟಿರುವ ಹಾಗೆಯೇ, ಆತನು ಈ ವಿಷಯದಲ್ಲೂ ನಮಗೆ ಆಶ್ವಾಸನೆಯನ್ನು ನೀಡಬಲ್ಲನು. ನಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಪವಿತ್ರಾತ್ಮನು ನಮ್ಮ ಆತ್ಮದೊಂದಿಗೆ ಸಾಕ್ಷೀಕರಿಸುವ ಹಾಗೆಯೇ, ನಮಗೆ ಬಲವು ಒದಗಿಸಲ್ಪಟ್ಟಿರುವದಾಗಿ ಸಾಕ್ಷೀಕರಿಸುತ್ತಾನೆ. ನೀವು ದೇವರನ್ನು ಈ ಎರಡು ಪ್ರಮುಖ ವಿಷಯಗಳ ಕುರಿತಾಗಿ ಆಶ್ವಾಸನೆಯನ್ನು ನೀಡುವಂತೆ ಕೇಳಿಕೊಳ್ಳಿರಿ.

ಹಾಗಾಗಿ ಅವರು ಆ ಬಲಕ್ಕಾಗಿ ಕಾದಿದ್ದರು. ಆದರೆ ಅವರು ಬಲವನ್ನು ಪಡೆದಾಗ, ಅಜ್ಞಾತ ಭಾಷೆಗಳಲ್ಲಿ ಮಾತನಾಡುವ (ಅನ್ಯಭಾಷೆ) ವರವನ್ನೂ ಹೊಂದಿದರು. ಇಂದಿನ ದಿನದ ದುರಂತವೆಂದರೆ, ಅನ್ಯಭಾಷೆಯ ವರವನ್ನು ಹೊಂದಿದ್ದೇವೆಂದು ಹೇಳಿಕೊಳ್ಳುವ ಅನೇಕರಲ್ಲಿ ಯಾವ ಬಲವೂ ಇದ್ದಂತೆ ಕಾಣುವದಿಲ್ಲ. ಅನ್ಯಭಾಷೆಯನ್ನು ಅನುಕರಣೆ ಮಾಡಬಹುದು, ಆದರೆ ಶಕ್ತಿಯ ಮೂಲಕ ಪಾಪವನ್ನು ಜಯಿಸಿ, ಕ್ರಿಸ್ತನ ಒಬ್ಬ ದೃಢವಾದ ಸಾಕ್ಷಿಯಾಗಿ ನಿಲ್ಲುವದನ್ನು ನಕಲಿ ಮಾಡಲು ಆಗುವದಿಲ್ಲ.

ಒಂದು ಉದಾಹರಣೆಯನ್ನು ನೋಡಿರಿ: ನೀವು ಒಂದು ಕಂಪ್ಯೂಟರ್ (ಬಲ) ಖರೀದಿಸಲು ಒಂದು ಮಳಿಗೆಗೆ ಹೋಗುತ್ತೀರಿ. ಆ ಅಂಗಡಿಯವನು, ಪ್ರತಿಯೊಂದು ಕಂಪ್ಯೂಟರ್ ನೊಂದಿಗೆ ಒಂದು C.D.ಯನ್ನೂ ಸಹ (ಅನ್ಯಭಾಷೆಗಳು) ಉಚಿತವಾಗಿ ಕೊಡುತ್ತಿದ್ದೇವೆ ಎಂದು ಹೇಳುತ್ತಾನೆ. ನೀವು ಅಲ್ಲಿಗೆ ಹೋದದ್ದು ಒಂದು ಕಂಪ್ಯೂಟರ್ ಕೊಳ್ಳಲಿಕ್ಕಾಗಿ, ಒಂದು C.D.ಯನ್ನಲ್ಲ. ಆದರೆ ಆ C.D.ಯು ಉಚಿತವಾಗಿ ಕೊಡಲ್ಪಟ್ಟದ್ದರಿಂದ, ನೀವು ಕಂಪ್ಯೂಟರ್ ಜೊತೆಗೆ ಆ C.D.ಯನ್ನೂ ತೆಗೆದುಕೊಂಡಿರಿ. ಆದರೆ ಈಗ ನಿಮ್ಮ ಸ್ನೇಹಿತನು ನಿಮ್ಮ C.D.ಯನ್ನು ನೋಡುತ್ತಾನೆ ಮತ್ತು ಅದೇ ಮಳಿಗೆಗೆ ಹೋಗಿ, ಕಂಪ್ಯೂಟರ್ ಗಾಗಿ ಹಣವನ್ನು ಪಾವತಿಸಿ, ಕೇವಲ ಉಚಿತವಾದ C.D.ಯನ್ನು ಮನೆಗೆ ತರುತ್ತಾನೆ!! ಇದು ಎಂತಹ ಮೂರ್ಖತನ! ಕೇವಲ ಅನ್ಯಭಾಷೆಯ ವರವನ್ನು ಸ್ವೀಕರಿಸಿ, ಶಕ್ತಿಯನ್ನು ಹೊಂದದೇ ಇರುವದರ ಒಂದು ಚಿತ್ರಣ ಇದಾಗಿದೆ.

ಅವರು ಪ್ರಾರ್ಥನೆಗಾಗಿ ಸೇರಿದ್ದ ಮನೆಯಲ್ಲಿ ಬಿರುಗಾಳಿ ಬೀಸುವ ಶಬ್ದವುಂಟಾಗಿ ಮನೆಯನ್ನೆಲ್ಲಾ ತುಂಬಿತು ಮತ್ತು ಉರಿಯಂತಿದ್ದ ನಾಲಿಗೆಗಳು ಒಬ್ಬೊಬ್ಬರ ತಲೆಯ ಮೇಲೂ ಕೂತುಕೊಂಡವು ಎಂದು ನಾವು ಓದುತ್ತೇವೆ. ಇವು ಕೇವಲ ಬಾಹ್ಯ ಸಂಗತಿಗಳು ಆಗಿದ್ದವು. ಅಲ್ಲಿ ಪ್ರಾಪ್ತವಾದ ಅಭಿಷೇಕ ಮತ್ತು ಬಲ ಇವು ಪ್ರಮುಖ ಅಂಶಗಳಾಗಿದ್ದವು. ಯೇಸುವು ಅಭಿಷೇಕ ಹೊಂದಿದಾಗ ನಡೆದ ಬಾಹ್ಯ ಘಟನೆಗಳು ಭಿನ್ನವಾಗಿದ್ದವು. ಆ ಸಂದರ್ಭದಲ್ಲಿ, ಬಿರುಗಾಳಿಯ ಶಬ್ದವಾಗಲೀ ಬೆಂಕಿಯಾಗಲೀ ಇರಲಿಲ್ಲ, ಆದರೆ ಅಲ್ಲಿ ಒಂದು ಪಾರಿವಾಳ ಮತ್ತು ಒಂದು ಆಕಾಶವಾಣಿ ಇದ್ದವು. ಆದರೆ ಆತನು ಪಡೆದ ಬಲ ಮತ್ತು ಅಭಿಷೇಕವನ್ನು ಈ ಅಪೊಸ್ತಲರೂ ಪಡೆದರು. ನಾವೆಲ್ಲರೂ ಯೇಸುವಿನ ಹಾಗೆ, "ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಲ್ಪಡಬೇಕು" (ಅ.ಕೃ. 10:38).

ನಮ್ಮಲ್ಲಿ ಒಬ್ಬೊಬ್ಬರ ಭೌತಿಕ ಮತ್ತು ಭಾವಾನಾತ್ಮಕ ಅನುಭವಗಳು ಬೇರೆ ಬೇರೆ ಆಗಿರಬಹುದು. ಯಾರಾದರೂ ಒಂದು ಅಮೂಲ್ಯ ವಜ್ರವನ್ನು ನಿಮಗೆ ಪಾರಿತೋಷಕವಾಗಿ ಕೊಟ್ಟರೆ, ಅದನ್ನು ಒಂದು ಕಳಪೆ ಕಂದು ಬಣ್ಣದ ಕಾಗದದಲ್ಲಿ ಮಡಚಿ ಇಟ್ಟಿದ್ದರೋ ಅಥವಾ ಚಮಕಿಸುವ ಹಾಳೆಯಲ್ಲಿ ಅಂದವಾಗಿ ಸುತ್ತಿ, ವಿಶೇಷವಾದ ರೇಷ್ಮೆ ಪಟ್ಟಿಯಿಂದ ಕಟ್ಟಿದ್ದರೋ ಎನ್ನುವದು ಮುಖ್ಯವಲ್ಲ. ಒಳಗಿರುವ ಉಡುಗೊರೆಯೇ ಬಹಳ ಮುಖ್ಯವಾದದ್ದು. ಎಳೆಯ ಕೂಸುಗಳು ಮಾತ್ರ ಹೊರಕವಚಕ್ಕೆ - ಬಿರುಗಾಳಿಯ ಶಬ್ದ, ಬೆಂಕಿ, ಕೂಗಾಟದ ಸದ್ದು, ಪುಳಕಿತ ಭಾವನೆ, ಇತ್ಯಾದಿಗಳಿಗೆ - ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ. ವಯಸ್ಕರು ಉಡುಗೊರೆಗೆ - ಅಭಿಷೇಕ ಮತ್ತು ಪವಿತ್ರಾತ್ಮನ ಬಲಕ್ಕೆ - ಗಮನ ನೀಡುತ್ತಾರೆ. ಕೆಲವರು ಉಡುಗೊರೆಯನ್ನು ಸುತ್ತಿದ್ದ ಬಣ್ಣದ ಕಾಗದದ ಕುರಿತಾಗಿ ಸಾಕ್ಷಿ ನೀಡುವದು ಮತ್ತು ಅದರ ಬಗ್ಗೆ ಹೆಚ್ಚಳ ಪಡುವದನ್ನು ನೋಡುವಾಗ, ಅವರು ಕೇವಲ ಕ್ರೈಸ್ತ ಕೂಸುಗಳು ಎಂದು ನಿಮಗೆ ಗೊತ್ತಾಗುತ್ತದೆ.

ಹೊಸ ಒಡಂಬಡಿಕೆಯ ಅವಧಿಯಲ್ಲಿ ದೇವರು ಉಪಯೋಗಿಸುವ ದೇಹದ ಅತೀ ಮುಖ್ಯ ಅಂಗ ನಾಲಿಗೆಯಾಗಿದೆ - ಪವಿತ್ರಾತ್ಮನ ಬಲದಿಂದ ಉರಿದು, ಎಲ್ಲಾ ಸಮಯದಲ್ಲೂ ಆತನ ಸಂಪೂರ್ಣ ನಿಯಂತ್ರಣಕ್ಕೆ ಒಳಗಾಗಿರುವ ನಾಲಿಗೆಯು - ಎನ್ನುವದನ್ನು ಪ್ರತಿಯೊಬ್ಬರ ತಲೆಯ ಮೇಲೆ ಕುಳಿತ ಬೆಂಕಿಯ ನಾಲಿಗೆಗಳು ಸೂಚಿಸಿದವು. ಅನ್ಯಭಾಷೆಯ ವರವೂ ಒಂದು ರೀತಿಯಲ್ಲಿ ಇದನ್ನೇ ಸೂಚಿಸುತ್ತದೆ. ನಿಮ್ಮ ನಾಲಿಗೆ ಮೂಲಕ ದೇವರು ಇತರರನ್ನು ಆಶೀರ್ವದಿಸಲು ಇಚ್ಛಿಸುತ್ತಾರೆ - ಪ್ರಸಂಗಿಗಳ ನಾಲಿಗೆ ಅಷ್ಟೇ ಅಲ್ಲ, ನಿಮ್ಮ ಪ್ರತಿನಿತ್ಯದ ಮಾತುಗಳೂ ಜನರನ್ನು ಆಶೀರ್ವದಿಸಬೇಕು. ಆದರೆ ಇದಕ್ಕಾಗಿ, ಪವಿತ್ರಾತ್ಮನು ನಿಮ್ಮ ನಾಲಿಗೆಯನ್ನು ದಿನದ 24 ಗಂಟೆ, ವಾರದ ಏಳು ದಿನಗಳೂ ಸಂಪೂರ್ಣವಾಗಿ ಹಿಡಿತದಲ್ಲಿ ಇರಿಸುವದನ್ನು ನೀವು ಸಮ್ಮತಿಸಬೇಕು.

ಅಪೊ. ಕೃತ್ಯ 2:14ರಲ್ಲಿ, ಎಲ್ಲಾ ಅಪೊಸ್ತಲರಲ್ಲಿ ಆತ್ಮನು ವಾಸ ಮಾಡಿದ್ದರಿಂದ ಉಂಟಾದ ಒಂದು ಅದ್ಭುತ ಫಲಿತಾಂಶವನ್ನು ನಾವು ನೋಡುತ್ತೇವೆ. ನಾವು ಇಲ್ಲಿ ಓದುವಂತೆ, "ಪೇತ್ರನು ಹನ್ನೊಂದು ಅಪೊಸ್ತಲರ ಬೆಂಬಲದೊಂದಿಗೆ ಎದ್ದು ನಿಂತನು" (ಭಾವಾನುವಾದ - MSG). ಯಾವುದನ್ನು ಯೇಸುವು ತನ್ನ ಸಂಪೂರ್ಣ ಜೀವಾವಧಿಯಲ್ಲಿ ನೆರವೇರಿಸಲು ಆಗಲಿಲ್ಲವೋ, ಅದು ಕೊನೆಯಲ್ಲಿ ಈ ರೀತಿಯಾಗಿ ನೆರವೇರುತ್ತದೆ: ಈಗ ಹನ್ನೆರಡು ಮಂದಿಯೂ ಒಂದೇ ದೇಹವಾಗಿದ್ದಾರೆ. ಅವರಲ್ಲಿ ಪ್ರಸಂಗ ಮಾಡಿ ಗೌರವ ಸಂಪಾದಿಸುವ ಪೈಪೋಟಿ ಇರಲಿಲ್ಲ. ಅವರು ಪೇತ್ರನನ್ನು ಬೆಂಬಲಿಸಿದರು ಮತ್ತು ಶೇಕಡಾ 100ರಷ್ಟು ಸಂಪೂರ್ಣವಾಗಿ ಆತನ ಮಾತನ್ನು ಬೆಂಬಲಿಸಿ ನಿಂತರು. "ಅವರು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವರು," ಎಂದು ಪವಿತ್ರಾತ್ಮನ ಬರುವಿಕೆಯ ನಂತರದ ಕಾರ್ಯಗಳ ಕುರಿತಾಗಿ ಯೇಸುವು ಹೇಳಿದ ಮಾತಿನ ಅರ್ಥ ಇದೇ ಆಗಿತ್ತು - ದೀಕ್ಷಾಸ್ನಾನದ ಮೂಲಕ ಪವಿತ್ರಾತ್ಮನು ಅವರನ್ನು ಒಂದೇ ದೇಹವಾಗಿ ಜೋಡಿಸಿದ್ದನು.

ಅಪೊ. ಕೃತ್ಯ 2:17ರಲ್ಲಿ, ಪವಿತ್ರಾತ್ಮನು ಸುರಿಸಲ್ಪಡುವದು ಯೋವೇಲನ ಪ್ರವಾದನೆಯ ನೆರವೇರಿಕೆಯೆಂದು ಪೇತ್ರನು ಹೇಳುತ್ತಾನೆ. ಎಲ್ಲ ಗಂಡಸರೂ ಹೆಂಗಸರೂ ಆತ್ಮನನ್ನು ಹೊಂದಿಕೊಂಡು ಪ್ರವಾದಿಸಲು ಈಗ ಸಾಧ್ಯವಾಯಿತು. ಹಳೆಯ ಒಡಂಬಡಿಕೆಯಲ್ಲಿ ಕೇವಲ ರಾಜರು ಮತ್ತು ಮಹಾಯಾಜಕರು ಈ ಸೌಭಾಗ್ಯವನ್ನು ಹೊಂದಿದ್ದರು. ಆದರೆ ಹೊಸ ಒಡಂಬಡಿಕೆಯಲ್ಲಿ, ಪ್ರತಿಯೊಬ್ಬನೂ ಆತ್ಮನನ್ನು ಸ್ವೀಕರಿಸಬಹುದು. ಇದು ಎಂತಹ ಶ್ರೇಷ್ಠ ಗೌರವವೆಂದು ನಾವು ಗ್ರಹಿಸಿಕೊಳ್ಳಬೇಕು.