ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಎಫೆಸ 5:18ರಲ್ಲಿ ಹೇಳಿರುವುದೇನೆಂದರೆ, "ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಆದರೆ ಪವಿತ್ರಾತ್ಮಭರಿತರಾಗಿರಿ." ಇಲ್ಲಿ ಎರಡು ಆಜ್ಞೆಗಳನ್ನು ಗಮನಿಸಿರಿ. ಮೊದಲನೆಯದಾಗಿ "ಮದ್ಯಪಾನ ಮಾಡಿ ಮತ್ತರಾಗಬೇಡಿರಿ." ಮತ್ತು ಎರಡನೆಯದಾಗಿ "ಪವಿತ್ರಾತ್ಮಭರಿತರಾಗಿರಿ."

ಮೊದಲನೆಯ ಆಜ್ಞೆಗೆ ಎಂದಿಗೂ ಅವಿಧೇಯರಾಗದ ಅನೇಕ ಕ್ರೈಸ್ತರು ಎರಡನೆಯದನ್ನು ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ? ಇದು ಸೈತಾನನು ಸತ್ಯವೇದದಲ್ಲಿರುವ ಅನೇಕ ಸತ್ಯಗಳ ಬಗ್ಗೆ ವಿಶ್ವಾಸಿಗಳನ್ನು ಕುರುಡನ್ನಾಗಿಸಿದುದರ ಉದಾಹರಣೆಯಾಗಿದೆ. ಹೆಚ್ಚಿನ ವಿಶ್ವಾಸಿಗಳು ಮೊದಲನೆಯದನ್ನು ("ಮದ್ಯಪಾನ ಮಾಡಿ ಮತ್ತರಾಗಬೇಡಿರಿ") ಆಜ್ಞೆಯೆಂಬುದಾಗಿ ಸ್ವೀಕರಿಸುತ್ತಾರೆ ಆದರೆ ಎರಡನೆಯದನ್ನು ("ಪವಿತ್ರಾತ್ಮಭರಿತರಾಗಿರಿ") ಸಲಹೆಯೆಂದು ತಿಳಿದುಕೊಳ್ಳುತ್ತಾರೆ!! ಆದರೆ ಇವೆರಡೂ ಆಜ್ಞೆಗಳಾಗಿವೆ ಮತ್ತು ಎರಡೂ ಕೂಡ ಸರಿಸಮಾನವಾದ ಪ್ರಾಮುಖ್ಯತೆ ಹೊಂದಿವೆ. ವರ್ಷದಲ್ಲಿ ಒಂದು ಸಾರಿ ಮದ್ಯಪಾನ ಮಾಡುವದು ಗಂಭೀರವಾಗಿ ಕಂಡರೆ, ವರ್ಷದಲ್ಲಿ ಒಂದು ದಿನವಾದರೂ ಪವಿತ್ರಾತ್ಮನಿಂದ ತುಂಬಲ್ಪಡದೇ ಇರುವದು ಕೂಡ ಅಷ್ಟೇ ಗಂಭೀರವಾಗಿರುತ್ತದೆ. ಇವನ್ನು ಈ ರೀತಿಯಾಗಿ ನೀವೆಂದಾದರೂ ನೋಡಿದ್ದೀರಾ?

ಎಫೆಸ 5:18ರಲ್ಲಿರುವ ಕ್ರಿಯಾಪದವು ("ಭರಿತರಾಗಿರಿ/ತುಂಬಲ್ಪಡಿರಿ") ಎಂಬುದು ನಿರಂತರವಾದದ್ದು. ಇದರ ಅರ್ಥವೇನೆಂದರೆ ’ಯಾವಾಗಲೂ’ ಪವಿತ್ರಾತ್ಮನಿಂದ ತುಂಬಲ್ಪಟ್ಟಿರಬೇಕು; ಕೇವಲ ’ಒಂದೇ’ ಸಾರಿಯಲ್ಲ. ಒಂದು ವೇಳೆ ನೀವು ಬೆಳಗ್ಗಿನ ಜಾವ ಪವಿತ್ರಾತ್ಮನಿಂದ ತುಂಬಲ್ಪಟ್ಟಿದ್ದರೆ, ಸಾಯಂಕಾಲವೂ ಕೂಡ ತುಂಬಲ್ಪಡಬೇಕು. ಅದೇ ರೀತಿಯಾಗಿ ದಿನವಿಡೀ ತುಂಬಲ್ಪಡಬೇಕು. ಆದ್ದರಿಂದ ನಿಮ್ಮನ್ನು ಯಾವಾಗಲೂ ಪವಿತ್ರಾತ್ಮಭರಿತರನ್ನಾಗಿ ಮಾಡಲು ದೇವರಲ್ಲಿ ಪ್ರಾರ್ಥಿಸಿ. ಅಪೋಸ್ತಲರ ಕೃತ್ಯಗಳಲ್ಲಿ ಅಂತಹ ಜನರನ್ನು "ಪವಿತ್ರಾತ್ಮಭರಿತರಾದ" ಸ್ತ್ರೀ-ಪುರುಷರು ಎಂದು ಕರೆಯಲಾಗಿದೆ.

ಪವಿತ್ರಾತ್ಮಭರಿತರಾಗಿರುವುದರ ಒಂದು ಮುಖ್ಯ ಗುರುತೇನೆಂದರೆ- ನಾವು ಮಾತಾಡುವ ರೀತಿಯಲ್ಲಿನ ಬದಲಾವಣೆ. ನಮ್ಮ ನಾಲಿಗೆಯು "ಉರಿಯಂತಿರುವ (ಬೆಂಕಿಯ) ನಾಲಿಗೆ"ಯಾಗಿ (ಅ.ಕೃ 2:3) ಮಾರ್ಪಡುತ್ತದೆ. ಇದು ಅನ್ಯಭಾಷೆಗಳಲ್ಲಿ ಮಾತಾಡುವದಲ್ಲ, ಆದರೆ ಮಾತೃಭಾಷೆಯನ್ನು ದೇವರ ಪ್ರೀತಿಯ ಜ್ವಾಲೆಯಲ್ಲಿ(ಉರಿಯಲ್ಲಿ) ಮತ್ತು ಪವಿತ್ರತೆಯಲ್ಲಿ ಮಾತಾಡುವದಾಗಿದೆ. ನಮ್ಮ ಭಾಷೆಯು ದೈವಿಕವಾಗುತ್ತದೆ.

ಎಫೆಸ 5:19,20,21ರಲ್ಲಿ, ಮಾತುಗಳಿಗೆ ಕೊಟ್ಟಿರುವ ಪ್ರಾಮುಖ್ಯತೆಯನ್ನು ಗಮನಿಸಿ. "ಆತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ, ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನ ಮಾಡುತ್ತಾ ಕೀರ್ತನೆ ಹಾಡುತ್ತಾ ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಕ್ರಿಸ್ತನಿಗೆ ಭಯಪಡುವವರಾಗಿದ್ದು ವಿನಯವುಳ್ಳವರಾಗಿ ನಡೆದುಕೊಳ್ಳಿರಿ." ಪವಿತ್ರಾತ್ಮಭರಿತರಾಗಿರುವದರಿಂದ ಚಾಡಿಮಾತು, ನಿಂದೆ(ಅವಮಾನ), ಕಹಿಮನಸ್ಸು ಮತ್ತು ಸಿಟ್ಟು ಇವುಗಳುಳ್ಳ ಮನಸ್ಸಿನಿಂದ ಸ್ವತಂತ್ರರಾಗಿ ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸುವ ಮನಸ್ಸಿಗೆ ನಾವು ಬದಲಾಗುತ್ತೇವೆ.

ಎಫೆಸ 5:18ರಿಂದ ಮುಂದುವರೆದ ವಚನಗಳು ಪವಿತ್ರಾತ್ಮಭರಿತರಾದ ಜನರ ಗುಣಲಕ್ಷಣಗಳನ್ನು ವ್ಯಕ್ತಪಡಿಸುತ್ತವೆ (5:19ರಿಂದ 6:24 ತನಕ). ಸ್ತುತಿಸ್ತೋತ್ರಗಳನ್ನು ಮಾಡುವುದರಿಂದ ಆರಂಭವಾಗಿ ಸಭೆಯಲ್ಲಿನ ಮತ್ತು ಮನೆಯಲ್ಲಿನ ಸಂಬಂಧಗಳಲ್ಲಿ ಒಬ್ಬರಿಗೊಬ್ಬರ ಅಧೀನತೆಯಲ್ಲಿ ನಡೆಯಲ್ಪಡುವದರೆಡೆಗೆ ಅದು ಮುಂದುವರೆಯುತ್ತದೆ (ಎಫೆಸ. 5:21 ರಿಂದ 6:9 ತನಕ); ಮತ್ತು ಇನ್ನೂ ಮುಂದುವರೆದು ಸೈತಾನನ ವಿರುದ್ಧ ಹೋರಾಡುವದು ಮತ್ತು ಆತನನ್ನು ಜಯಿಸುವದರೆಡೆಗೂ ಅದು ಮುಂದುವರೆಯುತ್ತದೆ ( 6:11 ). ಆದ್ದರಿಂದ ಈ ಲೋಕದಲ್ಲಿರುವಾಗ ಕ್ರಿಸ್ತನೊಂದಿಗೆ ಸಾಗುವ ಮತ್ತು ಸೈತಾನನ ವಿರುದ್ಧ ಹೋರಾಡುವುದರ ರಹಸ್ಯ ’ಯಾವಾಗಲೂ’ ಪವಿತ್ರಾತ್ಮಭರಿತರಾಗಿರುವದರಲ್ಲಿದೆ.’

ಪವಿತ್ರಾತ್ಮಭರಿತರಾಗಿಲ್ಲದಿದ್ದರೆ ನಾವು ದೇವರನ್ನು ಯುಕ್ತವಾಗಿ(ಸರಿಯಾಗಿ) ಸ್ತುತಿಸಲಾಗುವದಿಲ್ಲ. ನಾವು ದೈವಿಕವಾದ ಗಂಡ-ಹೆಂಡತಿಗಳಾಗಿರಲು ಸಾಧ್ಯವಿಲ್ಲ. ಮತ್ತು ನಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯವಾಗುವದಿಲ್ಲ. ಹಾಗೂ ನಾವು ಸೈತಾನನ ಶಕ್ತಿಯನ್ನು ಕೂಡ ಸೋಲಿಸಲು ಸಾಧ್ಯವಾಗದು. ಆದ್ದರಿಂದ ಕ್ರಿಸ್ತೀಯ ಜೀವನದಲ್ಲಿ ಎಲ್ಲವೂ ಪವಿತ್ರಾತ್ಮಭರಿತ ಜೀವಿತದ ಮೇಲೆ ಆತುಕೊಂಡಿದೆ.

ಮನೆಗೆ ಸಂಬಂಧಿಸಿದಂತೆ, ಇಲ್ಲಿ ಮೂರು ರೀತಿಯ ಸಂಬಂಧಗಳ ಬಗ್ಗೆ ಹೇಳಲಾಗಿದೆ - ಗಂಡ-ಹೆಂಡತಿಯರು (ಎಫೆಸ. 5:22-23), ಮಕ್ಕಳು ಮತ್ತು ತಂದೆ-ತಾಯಿಯರು(ಎಫೆಸ.6:1-4) ಹಾಗೂ ದಣಿ ಮತ್ತು ಆಳು( (ಎಫೆಸ.6:5-9). (ಈ ಕೊನೆಯ ಭಾಗ ನಮ್ಮ ಮನೆಯಲ್ಲಿ ಕೆಲಸ ಮಾಡುವ ಕೆಲಸದವರಿಗೆ ಮತ್ತು ಸರ್ಕಾರಿ ಅಥವಾ ಒಂದು ಕಂಪನಿಯ ಕಛೇರಿಯಲ್ಲಿ ಯಜಮಾನನ ಕೆಳಗೆ ಸೇವಕರಾಗಿ ನೌಕರಿ ಮಾಡುವ ಕೆಲಸಗಾರರಿಗೆ ಅನ್ವಯವಾಗುತ್ತದೆ. ಇಲ್ಲಿರುವ ಸೂಚನೆಗಳು ನಾವು ಯಾವ ರೀತಿಯಲ್ಲಿ ದಣಿಯಾಗಿ ಇಲ್ಲವೆ ಆಳಾಗಿ (ಮನೆಯಲ್ಲಿ ಅಥವಾ ಕಛೇರಿಯಲ್ಲಿ) ಸೇವೆ ಸಲ್ಲಿಸಬೇಕೆಂದು ತಿಳಿಸುತ್ತವೆ. ನಾವೆಲ್ಲರೂ ಬಹುತೇಕವಾಗಿ ನಮ್ಮ ಸಮಯವನ್ನು ಕಛೇರಿಯಲ್ಲಿ ಅಥವಾ ಮನೆಯಲ್ಲಿ ಕಳೆಯುತ್ತೇವೆ.

ಪವಿತ್ರಾತ್ಮಭರಿತನಾಗಿದ್ದವನು ಕಛೇರಿಯಲ್ಲಿಯೂ ಮತ್ತು ಮನೆಯಲ್ಲಿಯೂ ಕರ್ತನ ಆತ್ಮವನ್ನು ಪ್ರಕಟಪಡಿಸುತ್ತಾನೆ. ಆದ್ದರಿಂದ ಪವಿತ್ರಾತ್ಮನನ್ನು ಪಡೆಯುವದರಿಂದ ಮಾತ್ರ ಕರ್ತನ ದೇಹವನ್ನು ಕಟ್ಟಬಹುದಾಗಿದೆ.