ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

ಪ್ರಕಟನೆ 13:4 ರಲ್ಲಿ ಹೇಳುವ ಪ್ರಕಾರ "ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟಿದ್ದರಿಂದ ಅವರು ಆ ಘಟಸರ್ಪನನ್ನು ಆರಾಧಿಸಿದರು. ಇದಲ್ಲದೆ ಆ ಮೃಗವನ್ನೂ ಆರಾಧಿಸಿ - ಈ ಮೃಗಕ್ಕೆ ಸಮಾನರು ಯಾರು? ಇದರ ಮೇಲೆ ಯುದ್ಧ ಮಾಡುವದಕ್ಕೆ ಯಾರು ಶಕ್ತರು?" ಅಂದರು.

ಇಂದು ಇಡೀ ಲೋಕವೇ ಸೈತಾನನ್ನು ಆರಾಧಿಸುತ್ತಿದೆ. ಆರಂಭದಿಂದಲೂ ಸೈತಾನನಿಗೆ ಇದೇ ಬೇಕಾಗಿತ್ತು. ನಾವು ಯೆಶಾಯ 14:14 ರಲ್ಲಿ, ಸೈತಾನನು ದೇವರಂತೆ ಆಗಬೇಕೆಂದು ಆಶೆ ಪಡುವದನ್ನು ನೋಡುತ್ತೆವೆ. ದೇವರು ಸೈತಾನನಿಗೆ ಹಲವು ಅದ್ಭುತ ವರಗಳನ್ನು - ಬುದ್ಧಿ, ಸೌಂದರ್ಯ ಮತ್ತು ಸಾಮರ್ಥ್ಯವನ್ನು - ಈಗಾಗಲೇ ಕೊಟ್ಟಿದ್ದನು. ಇವುಗಳಿಗೂ ಹೆಚ್ಚಾಗಿ ಅವನಿಗೆ ಏನು ಬೇಕಾಗಿತ್ತು? ಸೈತಾನನ ಮನಸ್ಸಿನಲ್ಲಿ, ತಾನು ಸಹ ದೇವರ ಹಾಗೆ ಆರಾಧಿಸಲ್ಪಡಬೇಕೆಂಬ ಆಶೆಯಿತ್ತು. ಈ ಕಾರಣದಿಂದಲೇ ಆತನು ಸೈತಾನನಾಗಿ ಮಾರ್ಪಟ್ಟನು.

ನೀವು ಜನರ ಮೆಚ್ಚಿಕೆಯನ್ನು ಆಶಿಸುವದಾದರೆ, ಅದು ಸೈತಾನನ ಇಚ್ಛೆಗೆ ಸಮನಾದುದೆಂದು ನೆನಪಿಡಿರಿ. ಮಾನವರ ಮನ್ನಣೆಯ ಬಯಕೆ ಪೈಶಾಚಿಕವಾದದು. ಇಲ್ಲಿ ನಾವು ಏನು ಕಾಣಬಹುದು ಎಂದರೆ, ಅಂತಿಮವಾಗಿ ಸೈತಾನನು ಇಡೀ ಲೋಕವೇ ತನ್ನನ್ನು ಆರಾಧಿಸುವಂತೆ ಮಾಡುತ್ತಾನೆ. ಇಂತಹ ಪರಿಸ್ಥಿತಿ ಈಗಲೂ ಸ್ವಲ್ಪ ಮಟ್ಟಿಗೆ ಇದೆ. ಆದರೆ ಮುಂದಿನ ದಿನಗಳಲ್ಲಿ ಇದು ಹೆಚ್ಚು ಹೆಚ್ಚಾಗಿ ಬೆಳೆಯುತ್ತಾ ಹೋಗುತ್ತದೆ.

ಅವರು ಕ್ರಿಸ್ತವಿರೋಧಿಯನ್ನು ಸಹ ಆರಾಧಿಸಿದರು. ನಮ್ಮ ನಡುವೆ ಕ್ರಿಸ್ತವಿರೋಧಿಯ ಆರಾಧನೆ - ಅಂದರೆ ಮನುಷ್ಯರ ಆರಾಧನೆ - ಎಲ್ಲೆಲ್ಲೂ ಕಂಡುಬರುತ್ತದೆ. ಅವರು "ಈ ಮೃಗಕ್ಕೆ ಸಮಾನರು ಯಾರು?" ಎನ್ನುತ್ತಾ ಕ್ರಿಸ್ತವಿರೋಧಿಯನ್ನು ಆರಾಧಿಸಿದರು. ನಿಜವಾದ ದೇವರನ್ನು ನಾವು, "ದೇವರೇ, ನಿನ್ನ ಸಮಾನರು ಯಾರು?" ಎಂದು ಆರಾಧಿಸುವಂತೆಯೇ ಅವರು ಸೈತಾನ ಮತ್ತು ಕ್ರಿಸ್ತವಿರೋಧಿಯನ್ನು ಆರಾಧಿಸುತ್ತಾರೆ. ಜನರು ಕ್ರಿಸ್ತವಿರೋಧಿಯನ್ನು ಹೆಸರೆತ್ತಿ "ಕ್ರಿಸ್ತವಿರೋಧಿ" ಎಂದು ಕರೆಯುವದಿಲ್ಲ. ಇಲ್ಲ. ಅವರು ಅವನಿಗೆ ಒಂದು ಗೌರವಾನ್ವಿತ ಹೆಸರನ್ನು ನೀಡುತ್ತಾರೆ.

ನಾವು 1 ಯೋಹಾನ 2:18 ರಲ್ಲಿ ಹೀಗೆ ಓದುತ್ತೇವೆ, "ಮಕ್ಕಳಿರಾ, ಇದು ಕಡೇ ಗಳಿಗೆಯಾಗಿದೆ; ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ತಿಳಿದುಕೊಳ್ಳುತ್ತೇವೆ. ಅವರು ನಮ್ಮನ್ನು ಬಿಟ್ಟು (ಸಭೆಯ ಒಳಗಿನಿಂದ) ಹೊರಟು ಹೋದರು." ಇದರಿಂದ ನಾವು ಏನು ತಿಳಿಯಬಹುದು ಎಂದರೆ, ಮೊದಲನೆಯ ಶತಮಾನದ ಕ್ರಿಸ್ತ ಸಭೆಯ ಒಳಗೆಯೇ ಕ್ರಿಸ್ತವಿರೋಧಿ ಆತ್ಮ ಹೊಂದಿದ್ದ ಜನರಿದ್ದರು. ಅಂಥವರು ಈಗಲೂ ನಮ್ಮ ನಡುವೆ ಕ್ರಿಸ್ತ ಲೋಕದಲ್ಲಿ ಕಾಣಸಿಗುತ್ತಾರೆ. ಕ್ರಿಸ್ತವಿರೋಧಿ ಆತ್ಮ ಹೊಂದಿರುವ ಜನ ನಮಗೆ ರಾಜಕೀಯದಲ್ಲಿ, ವ್ಯಾಪಾರ ಜಗತ್ತಿನಲ್ಲಿ, ಅನ್ಯ ಜಾತಿ-ಮತಗಳ ಗುಂಪುಗಳಲ್ಲಿ ಮತ್ತು "ಕ್ರಿಸ್ತಸಭೆ"ಗಳೆಂದು ಕರೆಯಲ್ಪಡುವಲ್ಲಿಯೂ ಕಂಡುಬರುತ್ತಾರೆ.

ಈ ಕ್ರಿಸ್ತವಿರೋಧಿಯ ಆತ್ಮದ ಗುರುತು ಏನು? ಅನೇಕ ಗುರುತುಗಳು ಇವೆ. ಆದರೆ ಅವುಗಳಲ್ಲಿ ಒಂದು ಪ್ರಮುಖ ಗುರುತು ಏನೆಂದರೆ, ಅವರು ಇತರರ ಮೆಚ್ಚುಗೆ ಮತ್ತು ಹೊಗಳಿಕೆಯನ್ನು ಬಯಸುತ್ತಾರೆ - ಇದು ಜನರಿಂದ ಆರಾಧನೆ ಸ್ವೀಕರಿಸುವದಕ್ಕೆ ಸಮನಾಗಿದೆ. ಇಂತಹ ಮಾನ-ಸಮ್ಮಾನಗಳನ್ನು ನೀಡುವದು ಮತ್ತು ಸ್ವೀಕರಿಸುವದರ ವಿರೋಧವಾಗಿ ಒಂದು ಸಭೆ ಹೋರಾಡದಿದ್ದರೆ, ಶೀಘ್ರವೇ ಆ ಸಭೆಯು ಕ್ರಿಸ್ತವಿರೋಧಿಯ ಆತ್ಮದ ಹಿಡಿತಕ್ಕೆ ಒಳಗಾಗುತ್ತದೆ.

ಜನರ ಮಾನ್ಯತೆಯ ಅಪೇಕ್ಷೆ ನಮ್ಮ ಶರೀರಸ್ವಭಾವ. ಶುರುವಿನಲ್ಲಿ ಅದು ಒಂದು ಚಿಕ್ಕ ಬೀಜ ಅಥವಾ ಒಂದು ಮಗುವಿನಂತಿದ್ದು - ಮೊದಲು ಸ್ವಲ್ಪ ಮೆಚ್ಚುಗೆಯನ್ನು ಬಯಸಿ, ಆ ಮೇಲೆ ಇನ್ನೊಬ್ಬರ ಅಂಗೀಕಾರ ಅಥವಾ ಹೊಗಳಿಕೆಗಾಗಿ ಹಾತೊರೆಯುತ್ತದೆ. ಕೊನೆಗೆ ಇದು ಇನ್ನೊಬ್ಬರಿಂದ ಆರಾಧನೆಯನ್ನು ಹಂಬಲಿಸುವ ಮಟ್ಟವನ್ನು ತಲಪುತ್ತದೆ. ಇದೇ ಕ್ರಿಸ್ತವಿರೋಧಿ ಆತ್ಮವಾಗಿದೆ. ಆದ್ದರಿಂದ ನಮ್ಮಲ್ಲಿ ಈ ಸರ್ಪದ ಮೊಟ್ಟೆ ಕಾಣಿಸಿದಾಗ ತಪ್ಪದೆ ಅದನ್ನು ಜಜ್ಜ ಬೇಕು. ಇಲ್ಲವಾದರೆ ಒಂದು ದಿನ ಇದು ಒಂದು ಸರ್ಪವಾಗಲಿದೆ. ಇಂತಹ ಆತ್ಮ ಒಬ್ಬ ಅತೀ ಶ್ರೇಷ್ಠ ದೇವದೂತನಲ್ಲಿ ಪ್ರಕಟವಾಗಿರುವಾಗ, ನಮ್ಮಲ್ಲಿಯೂ ಇದು ಪ್ರಕಟವಾಗುವದರಲ್ಲಿ ಸಂದೇಹವಿಲ್ಲ. ಕಿವಿಯುಳ್ಳವನು ಇದನ್ನು ಕೇಳಲಿ.

ಇಡೀ ಲೋಕವೇ ಆ ಕ್ರಿಸ್ತವಿರೋಧಿಯನ್ನು ಹಿಂಬಾಲಿಸುವದಾಗಿ ನಮಗೆ ತಿಳಿಸಲಾಗಿದೆ. ಲೋಕವು ಕ್ರಿಸ್ತನನ್ನು ಹಿಂಬಾಲಿಸಲಿಲ್ಲ. ಅವರು "ಆತನನ್ನು ಶಿಲುಬೆಗೆ ಹಾಕಿರಿ" ಎಂದು ಕೂಗಿದರು. ಆದರೆ ಅವರು ಕ್ರಿಸ್ತವಿರೋಧಿ ಆತ್ಮನನ್ನು ಹಿಂಬಾಲಿಸುವರು, ಏಕೆಂದರೆ ಅವನು ಹಿಂದಿನ ಸುಳ್ಳು ಪ್ರವಾದಿಗಳಂತೆ ನುಣ್ಣನೆಯ ಮಾತುಗಳನ್ನು ನುಡಿಯುತ್ತಾನೆ.

ಕ್ರಿಸ್ತನ ಆತ್ಮ ನಮ್ಮಲ್ಲಿರುವಾಗ ನಮಗೆ ಜನರಿಂದ ನಿಂದನೆ, ಅಪಹಾಸ್ಯ ಮತ್ತು ವಿರೋಧಗಳು ಬರುತ್ತವೆ. ಜನರ ಮೆಚ್ಚುಗೆಯನ್ನು ಬಯಸುವ ಕ್ರೈಸ್ತರು ಅಪಾಯಕಾರಿ ನೆಲೆಯಲ್ಲಿ - ಕ್ರಿಸ್ತವಿರೋಧಿಯ ಸ್ಥಳದಲ್ಲಿ - ನಿಂತಿದ್ದಾರೆ. ಜನರು ಯೇಸುವಿಗೆ ರಾಜನ ಕಿರೀಟವನ್ನು ತೊಡಿಸಲು ಬಯಸಿದಾಗ ಅವನು ಸಂತೋಷಿಸಲಿಲ್ಲ. ಏಕೆಂದರೆ ಅವನು ಜನರ ಅಭಿಪ್ರಾಯ ಕಸದ ತೊಟ್ಟಿಗೆ ಯೋಗ್ಯವಾದುದೆಂದು ತಿಳಿದಿದ್ದನು. ಆದ್ದರಿಂದ ಕ್ರಿಸ್ತನು ಜನರಿಗೆ ಹೀಗೆ ಹೇಳುತ್ತಾನೆ, "ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ, ತಾಯಿ, ಆಸ್ತಿ, ಹೆಂಡತಿ, ಮಕ್ಕಳು, ಸಹೋದರರು, ಅಕ್ಕತಂಗಿಯರು ಹಾಗೂ ತನ್ನ ಸ್ವಂತ ಪ್ರಾಣವನ್ನು ಸಹ ತ್ಯಜಿಸದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು." ಇದನ್ನು ಲೂಕ 14:26-33ರಲ್ಲಿ ಓದಬಹುದು. ಈ ತೀಕ್ಷ್ಣವಾದ ಮಾತುಗಳು ಅನೇಕರನ್ನು ಬೇಸರ ಪಡಿಸಿದವು. ಇಂದಿನ ದಿನ ನಿಜವಾದ ಕ್ರೈಸ್ತ ಸಭೆಯು ಇದನ್ನೇ ಬೋಧಿಸುತ್ತದೆ, ಮತ್ತು ಈ ಬೋಧನೆಯೂ ಕೂಡ ಅಷ್ಟೇ ತೀಕ್ಷ್ಣವಾಗಿದೆ - ಮತ್ತು ಕ್ರಿಸ್ತನ ದಿನದಲ್ಲಿ ಆದಂತೆ ಅದು ಜನರನ್ನು ಬೇಸರ ಪಡಿಸುತ್ತದೆ. ಇದರ ಮೂಲಕ ನಮಗೆ ಕ್ರಿಸ್ತನ ನಿಂದೆ ಬರುತ್ತದೆ. ಇದು ನಾವು ಕ್ರಿಸ್ತವಿರೋಧಿಯ ಆತ್ಮದಿಂದ ರಕ್ಷಣೆ ಹೊಂದುವ ರೀತಿ. ಆದರೆ ಈ ಸತ್ಯವನ್ನು ಬಾಬೆಲ್‍ನ ಕ್ರೈಸ್ತ ಸಭೆಯು ಬೋಧಿಸುವದಿಲ್ಲ ಮತ್ತು ಅದು ಜನರಿಂದ ಹೊಗಳಲ್ಪಟ್ಟು, ಆ ಮೂಲಕ ಕ್ರಿಸ್ತವಿರೋಧಿಯ ಆತ್ಮ ಪ್ರಕಟವಾಗುವದಕ್ಕೆ ದಾರಿಯನ್ನು ಮಾಡಿಕೊಡುತ್ತದೆ.