WFTW Body: 

ಫರಿಸಾಯರು ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಯೇಸುವಿನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿ, ‘ಬೋಧಕನೇ, ಈ ಹೆಂಗಸು ವ್ಯಭಿಚಾರ ಮಾಡುತ್ತಿರುವಾಗಲೇ ಕೈಗೆ ಸಿಕ್ಕಿದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಈಕೆಯ ವಿಷಯದಲ್ಲಿ ನೀನು ಏನು ಹೇಳುತ್ತೀ?’ ಎಂದು ಆತನನ್ನು ಕೇಳಿದರು.ಆತನ ಮೇಲೆ ತಪ್ಪು ಹೊರಿಸುವುದಕ್ಕೆ ಏನಾದರೂ ಒಂದು ಕಾರಣ ಬೇಕಾಗಿದ್ದದರಿಂದ ಈತನು ಏನನ್ನುತ್ತಾನೋ ನೋಡೋಣ ಎಂದು ಹಾಗೆ ಕೇಳಿದರು (ಯೋಹಾನನು 8:3-6).

ವ್ಯಭಿಚಾರಿ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲುವ ಆದೇಶದ ಹಿಂದೆ ದೇವರ ಹೃದಯದ ಯೋಚನೆ ಏನಿತ್ತೆಂದು ಫರಿಸಾಯರು ಅರಿತಿರಲಿಲ್ಲ. ಸ್ತ್ರೀಯರು ಕಲ್ಲಿನಿಂದ ಕೊಲ್ಲಲ್ಪಡುವುದು ದೇವರಿಗೆ ಇಷ್ಟವಾದ ವಿಷಯವಾಗಿರಲಿಲ್ಲ, ಆದರೆ ಯಾರೂ ವ್ಯಭಿಚಾರದ ದಾರಿಯನ್ನು ಹಿಡಿಯದಿರಲಿ ಎಂದು ಈ ಕ್ರೂರ ಶಿಕ್ಷೆಯನ್ನು ಅವರು ಆದೇಶಿಸಿದ್ದರು. ಶಾಸನದ ಪಾಲನೆ ಫರಿಸಾಯರ ನಿಜವಾದ ಗುರಿಯಾಗಿರಲಿಲ್ಲ. ಅವರಿಗೆ ಬೇಕಾಗಿದ್ದುದು ಯೇಸುಕ್ರಿಸ್ತರನ್ನು ಆಪಾದಿಸಲು ಯಾವುದಾದರೊಂದು ಕಾರಣ. ಪಾಪಿಯಾದ ಆ ಹೆಂಗಸಿನ ಮೇಲೆ ಅವರು ಆಗಲೇ ಆಪಾದನೆಯನ್ನು ಹೊರಿಸಿದ್ದರು, ಮತ್ತು ಪಾಪರಹಿತ ದೇವರ ಮಗನನ್ನು ಆಪಾದಿಸಲು ಕಾರಣವನ್ನು ಹುಡುಕುತ್ತಿದ್ದರು. ಇದೇ ಫರಿಸಾಯರ ರೀತಿ. ದೇವರ ಭಯ ಇಲ್ಲದ ಅವರು ಇತರರನ್ನು ನಿಂದಿಸಿದಂತೆ ಅತೀ ದೈವಿಕರಾದ ಮನುಷ್ಯರನ್ನೂ ನಿಂದಿಸಲು ಹಿಂಜರಿಯದವರು.

ಈಗ ಯೇಸುಸ್ವಾಮಿಯು "ತಪ್ಪಿಸಿಕೊಳ್ಳಲಾರದ" ಸನ್ನಿವೇಷದಲ್ಲಿ ಸಿಲುಕಿ, ಹೇಗೆ ಉತ್ತರಿಸಿದರೂ ಆರೋಪಕ್ಕೆ ಗುರಿಯಾಗುವರು, ಎಂದು ಫರಿಸಾಯರು ಯೋಚಿಸಿದ್ದರು. "ಆಕೆಯನ್ನು ಕಲ್ಲಿಕ್ಕಿ ಕೊಲ್ಲಿರಿ," ಎಂದು ಯೇಸುವು ಹೇಳಿದರೆ ಅವರನ್ನು ದಯಾಹೀನನೆಂದು ದೂಷಿಸುತ್ತಿದ್ದರು; "ಇಲ್ಲ, ಕಲ್ಲೆಸೆದು ಸಾಯಿಸಬೇಡಿರಿ," ಎಂದಿದ್ದರೆ ಅವರನ್ನು ಮೋಶೆಯ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ ಆರೋಪಕ್ಕೆ ಒಳಗಾಗಿಸುತ್ತಿದ್ದರು. ನಾಣ್ಯವನ್ನು ಮೇಲೆಸೆದು, "ತಲೆಯಾದರೆ ನಾವು ಗೆದ್ದೆವು, ಬಾಲವಾದರೆ ನೀನು ಸೋತೆ," ಎಂದು ಹೇಳಿದಂತೆ. ಆದರೆ ಫರಿಸಾಯರು ಗೆಲ್ಲಲಿಲ್ಲ, ಸೋತರು! ಯೆಸುವು ಕೂಡಲೇ ಉತ್ತರಿಸದೆ, ತನ್ನ ತಂದೆಯ ಆದೇಶಕ್ಕಾಗಿ ಕಾದರು. ತಂದೆಯ ಮಾತು ದೊರೆತೊಡನೆ ಅವರಿಗೆ, "ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ" ಎಂದು ಹೇಳಿದರು (ಯೋಹಾನನು 8:7). ತಂದೆಯ ಒಂದೇ ವಾಕ್ಯದಿಂದ ಸಮಸ್ಯೆ ಪರಿಹಾರವಾಯಿತು. ಪವಿತ್ರಾತ್ಮನ ಮಾತಿಗೆ ಕಿವಿಗೊಟ್ಟರೆ ಇಂತಹ ಸನ್ನಿವೇಷಗಳಲ್ಲಿ ದೀರ್ಘವಾದ ಬೋಧನೆ ಅಗತ್ಯವಿಲ್ಲ. ಒಂದೇ ಮಾತು ಶತ್ರುಗಳ ಬಾಯನ್ನು ಮುಚ್ಚಿಸಿ ಬಿಡುತ್ತದೆ. ಯಾರು ಫರಿಸಾಯರಲ್ಲವೋ, ಮತ್ತು ಇತರರನ್ನು ನಿಂದಿಸುವುದಿಲ್ಲವೋ, ಅಂಥವರಿಗೆ ಇಂದೂ ಕೂಡ ದೇವರು ಜ್ಞಾನಭರಿತ ಮಾತನ್ನು ನೀಡುವರು. ಅವರಿಗೆ ದೇವರು ಕೊಟ್ಟಿರುವ ವಚನ, "ವಿರೋಧಿಗಳು ಎದುರುನಿಲ್ಲುವದಕ್ಕೂ ಎದುರುಮಾತಾಡುವದಕ್ಕೂ ಆಗದಂಥ ಬಾಯನ್ನೂ ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ" (ಲೂಕನು 21:15 - NASB ಮತ್ತು Living Bible).

ಯೇಸುಕ್ರಿಸ್ತರು ವ್ಯಭಿಚಾರವನ್ನು ವಿರೋಧಿಸುತ್ತಿದ್ದರೇ? ಹೌದು, ಖಂಡಿತವಾಗಿ. ಆದರೆ ಅವರು ಅಪ್ರಾಮಾಣಿಕ ಧಾರ್ಮಿಕತೆಯನ್ನು ವ್ಯಭಿಚಾರಕ್ಕಿಂತ ಅತಿ ಹೆಚ್ಚಾಗಿ ವಿರೋಧಿಸುತ್ತಿದ್ದರು. ಅಲ್ಲಿದ್ದ ಸಂದರ್ಭದಲ್ಲಿ ಇದನ್ನು ಸ್ಪಷ್ಟವಾಗಿ ಕಾಣುತ್ತೇವೆ: ಯೇಸುವಿನ ಒಂದು ಪಕ್ಕದಲ್ಲಿ ವ್ಯಭಿಚಾರಿ ಹೆಂಗಸು, ಇನ್ನೊಂದು ಪಕ್ಕದಲ್ಲಿ ಧಾರ್ಮಿಕ ಫರಿಸಾಯರು ಇದ್ದರು. ಕೊನೆಯಲ್ಲಿ ಯೇಸುವಿನ ಪಾದದ ಬಳಿಯಲ್ಲಿ ಇದ್ದುದು ಆ ವ್ಯಭಿಚಾರಿ ಮಹಿಳೆ ಮಾತ್ರ. ಯೇಸುವಿನ ಒಂದೇ ಮಾತು ನೆರೆದಿದ್ದ ಇತರರನ್ನು ದೂರ ಸರಿಸಿತ್ತು. ವ್ಯಭಿಚಾರವು ಆ ಮಹಿಳೆಯ ಕಣ್ಣಿನ ರವೆಯಾಗಿದ್ದರೆ, ಕ್ಷುಲಕ ಧಾರ್ಮಿಕತೆ ಹಾಗೂ ದ್ವೇಷಭಾವವು ಫರಿಸಾಯರ ಕಣ್ಣಿನ ತೊಲೆಯಾಗಿತ್ತು.

ನೀನು ಎಷ್ಟೊಂದುಬಾರಿ ಉತ್ತಮ ಸಹೋದರ ಸಹೋದರಿಯರ ಮೇಲೆ ವ್ಯಭಿಚಾರಕ್ಕಿಂತ ಅತೀ ಅಲ್ಪ ವಿಷಯಗಳಿಗಾಗಿ ಆರೋಪವನ್ನು ಹೊರಿಸಿರುವೆ ಎಂದು ನಿನ್ನನೇ ಈಗ ಪ್ರಶ್ನಿಸಿಕೋ. ಅವರ ಬೆನ್ನ ಹಿಂದೆ ಮನೆಯಲ್ಲೋ ಅಥವಾ ಇನ್ನೆಲ್ಲಾದರೂ ನೀನು ನುಡಿದಿರುವ ಮಾತುಗಳನ್ನು ಜ್ಞಾಪಿಸಿಕೋ. ನಿನ್ನ ಕಣ್ಣಲ್ಲಿರುವ ತೊಲೆಯು - ಅಂದರೆ, ಆ ಕ್ರೂರವಾದ, ಇತರರನ್ನು ತೀರ್ಪುಮಾಡುವ, ಆಪಾದಿಸುವ ಸ್ವಭಾವ - ಪ್ರತೀಬಾರಿ ನೀನು ಆಪಾದನೆಯನ್ನು ಮಾಡಿದಾಗ ದೊಡ್ಡದಾಗುತ್ತ ಹೋಗಿ, ನಿನ್ನನ್ನು ಆತ್ಮಿಕ ವಿಷಯಗಳಲ್ಲಿ ಹೆಚ್ಚು ಹೆಚ್ಚಾಗಿ ಕುರುಡನನ್ನಾಗಿ ಮಾಡಿದೆ. ನೀನು ಅಂತ್ಯದಲ್ಲಿ ಯಾರಿಗೆ ಹಾನಿ ಉಂಟುಮಾಡಿರುವೆ? ಎಲ್ಲರಿಗಿಂತ ಹೆಚ್ಚಾಗಿ ನಿನಗೇ.

ತನ್ನ ಕಣ್ಣಲ್ಲೇ ತೊಲೆ ಇರುವಾತನು ಇತರರ ಕಣ್ಣಿನ ರವೆಯನ್ನು ತೆಗೆಯುವ ವೈದ್ಯನಾಗಬಹುದೇ? ಕರ್ತನಾದ ಯೇಸುವು ಹೇಳುತ್ತಿರುವುದನ್ನು ನೀನು ಆಲಿಸು, "ನಿನ್ನ ಸಹೋದರ ಸಹೋದರಿಯರನ್ನು ಸುಮ್ಮನೆ ಬಿಟ್ಟಿರು. ಅವರ ಕಣ್ಣಲ್ಲಿ ಚಿಕ್ಕ ರವೆ ಮಾತ್ರವೇ ಇದೆ. ಅವರ ರವೆಗಳೆಲ್ಲವನ್ನೂ ನಿನ್ನ ಕಣ್ಣಿನ ತೊಲೆಗೆ ಹೋಲಿಸಿದರೆ ನಿನ್ನ ಸ್ಥಿತಿ ಇನ್ನಷ್ಟು ಕೆಟ್ಟಿದೆ."

ಈ ನಿಂದನೆಯ ಮನೋಭಾವವನ್ನು ಯೇಸುವು ಏಕೆ ಅಷ್ಟು ತೀವ್ರವಾಗಿ ವಿರೋಧಿಸಿದರು? ಏಕೆಂದರೆ, ಅವರು ಪರಲೋಕದಲ್ಲಿದ್ದಾಗ ಸೈತಾನನು ("ಸಹೋದರರ ದೂರುಗಾರನು") ಹಗಲಿರುಳು ದೇವರ ಮುಂದೆ ಸಹೋದರರ ದೂಷಣೆ ಮಾಡುವುದನ್ನು ಅವರು ಕೇಳಿದ್ದರು (ಪ್ರಕಟನೆ 12:10). ಜಗತ್ತಿನಲ್ಲಿ ಅದೇ ಆತ್ಮವನ್ನು ಮನುಷ್ಯರಲ್ಲಿ ಕಂಡಾಗ ಯೇಸುವಿಗೆ ಸೈತಾನನ ನೆನಪಾಯಿತು. ಆ ದೂಷಣೆಯ ಸ್ವಭಾವವನ್ನು ಯೇಸುವು ದ್ವೇಷಿಸಿದ್ದರು, ಮತ್ತು ಈಗಲೂ ದ್ವೇಷಿಸುತ್ತಾರೆ. ನೀನು ಇತರರನ್ನು ನಿಂದಿಸುವಾಗ ಯೇಸುವಿಗೆ ಸೈತಾನನ ನೆನಪು ಹುಟ್ಟಿಸುತ್ತಿರುವೆ ಎಂದು ನಿನಗೆ ತಿಳಿದಿದೆಯೇ? ಹೆಚ್ಚಿನ ವಿಶ್ವಾಸಿಗಳಿಗೆ ಇದು ತಿಳಿಯದಂತೆ ಅವರ ಕಣ್ಣಲ್ಲಿರುವ ತೊಲೆಯು ಅವರನ್ನು ಕುರುಡಾಗಿಸಿದೆ.

ಈ ಮೂವತ್ತು ವರ್ಷಗಳಿಂದ ಎಡೆಬಿಡದೆ ನಾನು ಬೋಧಿಸುತ್ತಿರುವ ಏಕೈಕ ಸಂದೇಶ ಇದು: ನಿನ್ನ ಆತ್ಮಿಕ ಜೀವನದಲ್ಲಿ ಮುನ್ನಡೆ ಸಾಧಿಸಬೇಕಿದ್ದರೆ, ಇತರರನ್ನು ಟೀಕಿಸುವುದನ್ನು ಬಿಟ್ಟುಬಿಡು, ನಿನ್ನನ್ನೇ ತೀರ್ಪುಮಾಡಿಕೋ. ಸೂಕ್ಷ್ಮದರ್ಶಕವನ್ನು ನಿನ್ನೆಡೆಗೆ ತಿರುಗಿಸಿಕೊಂಡು, ಇತರರನ್ನಲ್ಲ, ನಿನ್ನನ್ನೇ ತೀರ್ಪುಮಾಡಿಕೋ. ಇಷ್ಟು ಮಾಡಿದ ಮೇಲೆ ಏನು ಮಾಡಬೇಕೆಂದರೆ, ನಿನ್ನನ್ನೇ ಇನ್ನಷ್ಟು ತೀರ್ಪುಮಾಡಿಕೋ. ಇದನ್ನು ಯಾವಾಗ ನಿಲ್ಲಿಸುವುದು? ನೀನು ಪೂರ್ಣವಾಗಿ ಯೇಸುವಿನ ಸಾರೂಪ್ಯವನ್ನು ಹೊಂದಿದಮೇಲೆ. ಅಪೋಸ್ತಲ ಯೋಹಾನರು ತಮ್ಮ ಜೀವನದ ಕೊನೆಯಲ್ಲಿ ವಿಶ್ವಾಸಿಗಳಿಗೆ ತಿಳಿಸಿದುದೇನೆಂದರೆ, "ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಆತನ ಹಾಗಿರುವೆವು... ಮತ್ತು ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಕ್ರಿಸ್ತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ (1 ಯೋಹಾನನು 3:2-3).

ಆದರೆ ಸಭೆಯ ಹಿರಿಯರು ತಪ್ಪು ಮಾಡುತ್ತಿರುವ ಒಬ್ಬನನ್ನು ಹೇಗೆ ಸರಿಪಡಿಸಬೇಕು? ಕರುಣೆಯೊಡನೆ - ಅತಿಯಾದ ಕರುಣೆಯೊಡನೆ, ಕರ್ತನು ಅವರಿಗೆ ತೋರಿರುವಷ್ಟು ಕರುಣೆಯೊಡನೆ. ಯೇಸುವು ಆ ಸ್ತ್ರೀಯ ವ್ಯಭಿಚಾರವನ್ನು ನಿರ್ಲಕ್ಷಿಸಲಿಲ್ಲ. ಇಲ್ಲ, ಮೊದಲಾಗಿ ಮಿಗಿಲಾದ ಅನುಕಂಪದೊಡನೆ, "ನಾನೂ ನಿನ್ನನ್ನು ಶಿಕ್ಷಿಸೆನು" ಎಂದರು. ಅನಂತರ ಆಕೆಯನ್ನು ದೃಢವಾಗಿ ಎಚ್ಚರಿಸುತ್ತ, "ಇನ್ನು ಎಂದಿಗೂ ಈ ಪಾಪವನ್ನು ಮಾಡದಿರು" ಎಂದರು (ಯೋಹಾನನು 8:11). ದೇವರ ಕೃಪೆಯು ನಮ್ಮ ಪಾಪವನ್ನು ಹಗುರವಾಗಿ ನೋಡುವುದಿಲ್ಲ! ಅದು ಮೊದಲಾಗಿ ಪಾಪವನ್ನು ಮನ್ನಿಸಿ, ಮತ್ತೆ ಪಾಪ ಮರುಕಳಿಸದಿರಲಿ ಎಂದು ನಮ್ಮನ್ನು ಎಚ್ಚರಿಸಿ, ಮುಂದೆ ಪಾಪವನ್ನು ನಾವು ಬಿಟ್ಟುಬಿಡಲು ಸಹಾಯ ನೀಡುವುದು.

ಫರಿಸಾಯರೆಲ್ಲರೂ ಏಕೆ ಹೊರಟುಹೋದರು? ಅವರು ಮನ ಮುರಿದವರಾಗಿ ಪ್ರಭುವಿನ ಬಳಿಗೆ ಬಂದು, "ಪ್ರಭುವೇ, ನನ್ನನ್ನು ಮನ್ನಿಸು. ಇತರರಿಗೆ ಕಾಣದಿರುವ ನನ್ನ ಪಾಪಗಳು ಮತ್ತು ನನ್ನ ಕಠಿಣ ಧಾರ್ಮಿಕ ದೃಷ್ಟಿಯು ಈಗ ನನಗೆ ಗೋಚರಿಸಿವೆ. ನಾನು ಈ ಸ್ತ್ರೀಗಿಂತ ಹೇಗೆ ಬಹಳ ಕೀಳಾಗಿರುವೆನೆಂದು ಈಗ ಅರಿತುಕೊಂಡೆ. ನನ್ನ ಮೇಲೆ ದಯೆ ತೋರಿ" ಎನ್ನಬೇಕಿತ್ತು. ಆದರೆ ಒಬ್ಬನೂ ಹೀಗೆ ಯೇಸುವಿನ ಬಳಿಗೆ ಬರಲಿಲ್ಲ.

ಈಗ ನಿನ್ನ ವಿಷಯ. ಒಬ್ಬೊಬ್ಬರಲ್ಲೂ ಒಂದೊಂದಾಗಿ ಕೇಡನ್ನು ಹುಡುಕುವ ನಿನ್ನ ಮಾತೇನು? ನಿನ್ನನು ಮುರಿಯಲು ಕರ್ತನಿಗೆ ಒಪ್ಪಿಸಿಕೊಳ್ಳುವೆಯಾ?

ನಾನು ಮುರಿಯದಿರುವ ಆತ್ಮವನ್ನು ನನ್ನ ವಿರುದ್ಧವಾಗಿ ತಾವು ನುಡಿದ ಅಥವಾ ಮಾಡಿದ ಯಾವುದೋ ವಿಷಯಕ್ಕಾಗಿ ಕ್ಷಮಾಪ್ಪಣೆ ಕೇಳಿರುವ ಕೆಲವರಲ್ಲಿ ಕಂಡಿದ್ದೇನೆ. ನಿಜವಾದ ಪಶ್ಚಾತ್ತಾಪವನ್ನು ಹೊಂದದ ಸೂಚನೆಯಿದು. ಅವರು ಶಾಸ್ತ್ರದ ನಿಬಂಧನೆಯಂತೆ ತಮ್ಮ ಅಂತರಾತ್ಮ ಶುದ್ಧಿಯನ್ನು ಬಯಸಿದ್ದರು. ಅವರನ್ನು ನಾನು ತಡಮಾಡದೆ ಕ್ಷಮಿಸಿದೆನು. ಆದರೆ ಇನ್ನೂ ಧಾರ್ಮಿಕರಾಗಿದ್ದ ಅವರು ಅದೇ ಪಾಪಕ್ಕೆ ಮತ್ತೆ ಸಿಲುಕುವರು ಎಂದು ನನಗೆ ಖಚಿತವಿದೆ. "ಕಾನೂನು ಸಂಖ್ಯೆ 347: ಸಭೆಯ ಹಿರಿಯರ ವಿರುದ್ಧವಾಗಿ ಅವರ ಬೆನ್ನಹಿಂದೆ ಮಾತನಾಡದಿರು," ಇದನ್ನು ತಾನು ಉಲ್ಲಂಘಿಸಿದ್ದೆನೆ, ಹಾಗಾಗಿ ಕ್ಷಮಾಪಣೆಯನ್ನು ಕೇಳಬೇಕು, ಎಂಬುದು ಅವರಿಗೆ ಮನವರಿಕೆಯಾಗಿತ್ತು. ಅದರ ಪರಿಹಾರದ ನೆಪಕ್ಕೆ, "ಕಾನೂನು ಸಂಖ್ಯೆ 9: ತಪ್ಪಿಗಾಗಿ ಕ್ಷಮಾಪಣೆ ಕೇಳು," ಇದನ್ನು ಪಾಲಿಸಿ ಪೂರೈಸುವರು!! ಆದರೆ ಮನದಲ್ಲಿ ಯಾವ ಬದಲಾವಣೆಯೂ ಆಗಿರದ ಅವರು ಬಾಳನ್ನು ಹಿಂದಿನಂತೆಯೇ ಸಾಗಿಸುವರು.

ದೇವರ ಬೆಳಕು ನಮ್ಮ ಪಾಪಗಳನ್ನು ನಮಗೆ ತೋರಿಸಿದಾಗ, ಆ ಬೆಳಕಿನ ಪ್ರಭೆಯಿಂದ ನಾವು ಸತ್ತಂತಾಗಿ ಯೇಸುವಿನ ಪಾದಗಳಿಗೆ ಅಡ್ಡಬೀಳುವೆವು (ಪ್ರಕಟನೆ 1:17), ಹಾಗೂ ನಮ್ಮನ್ನು "ಲೋಕದ ಪಾಪಿಗಳಲ್ಲಿ ಮುಖ್ಯನು" ಎಂದು ತಿಳಕೊಳ್ಳುವೆವು (1 ತಿಮೊ. 1:15). ನಿನಗೆ ಎಂದಾದರೂ ಹೀಗೆ ಅನಿಸಿದೆಯೆ? ಅಥವಾ, ಎಲ್ಲೋ ಸ್ವಲ್ಪ ಕಾಲು ಜಾರಿದೆನು, ಎಂದು ಅನಿಸಿದೆಯೋ? ಹೀಗಿದ್ದರೆ ನೀನೊಬ್ಬ ಫರಿಸಾಯನು, ಮತ್ತು ಬಡ ಜನರ ಕಣ್ಣಿನ ರವೆಗಾಗಿ ಅವರನ್ನು ಕಲ್ಲೆಸೆದು ಕೊಂದಿರುವ ಪಾಪಕ್ಕಾಗಿ ಪಶ್ಚಾತ್ತಾಪ ಪಡುವವರೆಗೆ ನಿನಗೆ ಜೀವನದಲ್ಲಿ ಒಳಿತಾಗದು. ದೇವರು ನಿನ್ನ ಕಠಿಣ ಹೃದಯವನ್ನು ಮುರಿಯಲಿ.

ಯಾಕೋಬನು 2:13 ನಮಗೆ ಹೀಗೆ ನೆನಪಿಸುತ್ತದೆ, "ಕರುಣೆ ತೋರಿಸದೆ ಇರುವವನಿಗೆ ದೇವರು ನ್ಯಾಯತೀರ್ಮಾನದಲ್ಲಿ ಕರುಣೆ ತೋರಿಸುವುದಿಲ್ಲ." ಈ ತಪ್ಪು ಮಾಡುವವರಲ್ಲಿ ಸಭೆಯ ಹಿರಿಯರು ಸಾಮಾನ್ಯವಾಗಿ ಪ್ರಥಮ ಸ್ಥಾನದಲ್ಲಿರುತ್ತಾರೆ. ತಂದೆತಾಯಂದಿರು ಸಹ ತಮ್ಮ ಮಕ್ಕಳ ಬಗ್ಗೆ ಕರುಣೆ ಇಲ್ಲದವರಾಗಿ ಇರದಂತೆ ಜಾಗರೂಕರಾಗಿ ಇರಬೇಕು.

ಒಬ್ಬ ಸಭಾನಾಯಕರು ವ್ಯಭಿಚಾರಕ್ಕೆ ಸಿಲುಕಿ ಸಭೆಯನ್ನು ನಾಶಗೊಳಿಸಲಾರರು, ಏಕೆಂದರೆ ಪ್ರತೀ ವಿಶ್ವಾಸಿಗೂ ವ್ಯಭಿಚಾರವು ಒಂದು ಪಾಪವೆಂದು ತಿಳಿದಿದೆ, ಮತ್ತು ಆ ನಾಯಕರು ಶೀಘ್ರದಲ್ಲಿ ಅವರ ಸ್ಥಾನದಿಂದ ತೆಗೆಯಲ್ಪಡುವರು. ಆದರೆ ಒಬ್ಬ ಸಭಾನಾಯಕರು ಧಾರ್ಮಿಕರಾಗಿದ್ದರೆ ಅವರು ಅತಿ ಹೆಚ್ಚಿನ ಅಪಾಯಕಾರಿಯಾಗಿದ್ದಾರೆ - ಏಕೆಂದರೆ ಅವರು "ಪವಿತ್ರತೆ"ಯನ್ನು ಬೊಧಿಸುವರು. ಮತ್ತು ಧಾರ್ಮಿಕ ಮನೋಭಾವದ ವಿಷಯವಾಗಿ ಬೆಳಕನ್ನು ಕಂಡಿರದವರು ಅವರನ್ನು ಹಿಂಬಾಲಿಸಿ ತಾವೂ ಧಾರ್ಮಿಕರಾಗುವರು. ಇಂತಹ ನಾಯಕ ಕುರುಡ ಫರಿಸಾಯನಂತೆ ಇತರರನ್ನೂ ತಾನು ಬಿದ್ದಿರುವ ಧಾರ್ಮಿಕತೆಯ ಆಳವಾದ ಗುಂಡಿಗೆ ನಡೆಸುವರು.

ಇತರರನ್ನು ತೀರ್ಪುಮಾಡುವ ಮತ್ತು ಆರೋಪಿಸುವ ನಿನ್ನ ಪ್ರವೃತ್ತಿಯು ವ್ಯಭಿಚಾರದಲ್ಲಿ ಹತ್ತುಸಲ ಜಾರುವುದಕ್ಕಿಂತ ಕೆಟ್ಟದು ಎಂದು ನಿನಗೆ ನಿಜವಾಗಿ ಅರಿವಾಗಿದೆಯೇ? ಹಿಂದಿನ ಮೂವತ್ತು ದಿನಗಳಲ್ಲಿ ನೀನು ಹತ್ತುಬಾರಿ ವ್ಯಭಿಚಾರದಲ್ಲಿ ಜಾರಿದ್ದರೆ ಹೇಗೆ ಪಶ್ಚಾತ್ತಾಪ ಪಡುತ್ತಿದ್ದಿ? ನಿನ್ನ ಆರೋಪಣೆಯ ಆತ್ಮಕ್ಕಾಗಿ ನೀನು ಅದಕ್ಕಿಂತಲೂ ಹೆಚ್ಚಿನ ಪಶ್ಚಾತ್ತಾಪ ಪಡಬೇಕಿದೆ.