WFTW Body: 

ಪೌಲನು ರೋಮ್ ನಲ್ಲಿನ ಸೆರೆಮನೆವಾಸದಿಂದ ಬರೆಯುತ್ತಾ ಹೇಳುವುದೇನೆಂದರೆ - "ನನ್ನ ಸೆರೆಮನೆವಾಸದ ಬಗ್ಗೆ ನಿರುತ್ಸಾಹಗೊಳ್ಳಬೇಡಿರಿ. ಏಕೆಂದರೆ, ನನ್ನ ಸೆರೆಮನೆವಾಸವು ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತು" (ಪಿಲಿಪ್ಪಿ.1:12). ''ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ'', (ರೋಮಾ. 8:28) ಎಂಬುದಾಗಿ ಪೌಲನು ನಂಬಿದ್ದನು.

ಪೌಲನ ಸೆರೆಮನೆವಾಸವು ಹೇಗೆ ಒಳ್ಳೆಯ ಕಾರ್ಯಕ್ಕೆ ತಿರುಗಿತು? ಪೌಲನ ಸೆರೆಮನೆವಾಸವು ನಮ್ಮನ್ನು ಒಳ್ಳೆಯ ಕಾರ್ಯಕ್ಕೆ ತಿರುಗಿಸಿದ ಒಂದು ಮಾರ್ಗ ಇಲ್ಲಿದೆ: ವೃದ್ಧನಾದಾಗಲೂ ಸಹ ಆತನು ಯಾವಾಗಲೂ ಪ್ರಯಾಣಿಸುವವನಾಗಿದ್ದನು. ಈ ಲೋಕವನ್ನು ಬಿಡುವುದರೊಳಗಾಗಿ ಆತನಿಗೆ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳಿಗೆ ಹೋಗಿ ಆತನು ಸುವಾರ್ತೆಯನ್ನು ಸಾರಬೇಕೆಂದಿದ್ದನು. ಆತನು ದೇವರೊಂದಿಗೆ ಎಷ್ಟೊಂದು ಅನ್ಯೋನ್ಯವಾಗಿ ನಡೆದನೆಂದರೆ, ಆತನು ಅನೇಕ ಕಷ್ಟಗಳನ್ನು, ಶೋಧನೆಗಳನ್ನು ಎದುರಿಸುವ ಮೂಲಕ ಆತ್ಮಿಕವಾಗಿ ತುಂಬಾ ಶ್ರೀಮಂತನಾಗಿದ್ದನು. ಆದರೆ ಕರ್ತನಿಂದ ಕಲಿತಂತಹ ಎಲ್ಲವನ್ನು ಆತನು ಬರೆದಿರಲಿಲ್ಲ. ಈ ಮನುಷ್ಯನ ಆತ್ಮಿಕ ಶ್ರೀಮಂತಿಕೆಯು, ಆತನೊಂದಿಗೆ ಸಮಾಧಿಯೊಳಗೆ ಹೋಗದೆ, ಭವಿಷ್ಯದ ಜನಾಂಗಕ್ಕೆ ಆಶೀರ್ವದಿಸಲ್ಪಡುವ ಸಲುವಾಗಿ ಸಂರಕ್ಷಿಸಿಬೇಕೆಂದು ದೇವರು ನಿರ್ಧರಿಸಿದ್ದರು. ಆದರೆ ಪೌಲನು ತನ್ನ ಪ್ರಯಾಣವನ್ನು ಕಡಿಮೆ ಮಾಡಿ ಒಂದು ಕಡೆ ಕುಳಿತುಕೊಂಡು, ಎಲ್ಲವನ್ನು ಬರೆಯುವಂತೆ ದೇವರು ಹೇಗೆ ಮಾಡಬಹುದಾಗಿತ್ತು? ಆತನು ಸೆರೆಮನೆವಾಸ ಅನುಭವಿಸುವಂತೆ ಅನುಮತಿಸುವ ಮೂಲಕ.

ಪೌಲನು ಸೆರೆಮನೆಯಲ್ಲಿದ್ದಾಗ, ಆತನು ಪ್ರಯಾಣಿಸಲಾಗಲಿಲ್ಲ. ಹಾಗಾಗಿ ಆತನು ತನ್ನ ಸಮಯವನ್ನು ಲಾಭಕರವನ್ನಾಗಿ ಕಳೆಯಲು ನಿರ್ಧರಿಸಿದನು ಮತ್ತು ಕೆಲವೊಂದು ಸಭೆಗಳಿಗೆ ಪತ್ರಗಳನ್ನು ಬರೆದನು. ಈ ರೀತಿಯಾಗಿ ಆತನು ಪಿಲಿಪ್ಪಿಯವರಿಗೆ, ಎಫೆಸದವರಿಗೆ ಮತ್ತು ಕೊಲಸ್ಸೆಯವರಿಗೆ (ಪತ್ರಗಳನ್ನು) ಬರೆದನು. ಇದರ ಫಲಿತಾಂಶವೇನು? ಈ ಬರಹಗಳು 2000 ವರ್ಷಗಳಲ್ಲಿ ಮಿಲಿಯನ್ ಗಟ್ಟಲೆ ಜನರಿಗೆ ಆಶೀರ್ವಾದಗಳನ್ನು ತಂದವು. ಹಾಗಾಗಿ, ಪೌಲನ ಸೆರೆಮನೆವಾಸವು ಒಳ್ಳೆಯ ಕಾರ್ಯಕ್ಕೆ ತಿರುಗಲ್ಪಟ್ಟಿತು.

1980ನೇ ವರ್ಷದ ಮಧ್ಯದಲ್ಲಿ, ನಾನು ಸ್ವಲ್ಪ ಸಮಯದ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದೆನು. ಆಗ ದೇವರಿಗೆ ನಾನು ಹೀಗೆ ಕೇಳಿದೆ. ನಾನು ನಿಮ್ಮ ಸೇವೆಯಲ್ಲಿ ಕಾರ್ಯನಿರತನಾಗಿರಬಹುದಾಗಿರುವಂತ ಸಂದರ್ಭದಲ್ಲಿ, ನಾನು ಆಸ್ಪತ್ರೆಯಲ್ಲಿರುವಂತೆ ಯಾಕೆ ಮಾಡಿದಿರಿ? ಆಗ ಕರ್ತನು ನನಗೆ ಹೇಳಿದ್ದೇನೆಂದರೆ, ನೀನು ಹಾಸಿಗೆಯಲ್ಲಿಯೇ ಸ್ವಲ್ಪ ದಿನ ಮಲಗಿಕೊಂಡು ನಾನು ನಿನಗೆ ಹೇಳುವಂತದ್ದನ್ನು ನೀನು ಕೇಳಿಸಿಕೊಳ್ಳಬೇಕು ಎಂಬುದಾಗಿ. ನಾನು ಸೇವಾಕಾರ್ಯದಲ್ಲಿ ಎಷ್ಟು ಕಾರ್ಯನಿರತನಾಗಿದ್ದೆಯೆಂದರೆ, ಕರ್ತನೊಟ್ಟಿಗೆ ಮಾತನಾಡಲು ನನಗೆ ಸಮಯವೇ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ನಾನು ಆಸ್ಪತ್ರೆಯಲ್ಲಿ ಇರಬೇಕಾಗಿದೆ ಎಂಬುದನ್ನು ತಿಳಿದುಕೊಂಡಾಗ, ನಾನು ಬಹಳ ಸಂತೋಷಪಟ್ಟೆ ಹಾಗೂ ಕರ್ತನು ಬಯಸುವವರೆಗೂ ನಾನು ಹಾಸಿಗೆಯಲ್ಲಿ ಮಲಗಿರಲು ನಿರ್ಧರಿಸಿದೆ. ಏಕೆಂದರೆ ಆತನು ನನಗೆ ಹೇಳುವುದನ್ನು ನಾನು ಕೇಳಿಸಿಕೊಳ್ಳಬೇಕಾಗಿತ್ತು. ನೀವು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವುದರ ಒಂದು ಪ್ರಯೋಜನವೇನೆಂದರೆ, ನೀವು ಯಾವಾಗಲೂ ಮೇಲಕ್ಕೆ ಮಾತ್ರ ನೋಡಬೇಕು! ಹಾಗೇ ನಾನು ಮಲಗಿರುವಾಗ, ಕರ್ತನು ನನ್ನೊಟ್ಟಿಗೆ ಪ್ರತಿದಿನ ಮಾತನಾಡಲು ಪ್ರಾರಂಭಿಸಿದನು. ದೇವರು ನನ್ನೊಟ್ಟಿಗೆ ಮಾತನಾಡಿದ ಹಾಗೇ, ನಾನು ಅದನ್ನು ಕೇಳಿಸಿಕೊಂಡು ಬರೆಯಲು ಪ್ರಾರಂಭಿಸಿದೆ. ನಾನು ಬರೆದ ಎಲ್ಲ ಬರವಣಿಗೆಗಳಲ್ಲಿ, ಕರ್ತನು ನನ್ನೊಟ್ಟಿಗೆ ಮಾತನಾಡಿ, ನನಗೆ ಕೊಟ್ಟ ಯೋಚನೆಯ ಪ್ರಕಾರ ನಾನು ಬರೆದದ್ದು ಆ ಬರಹ (ಸಂದೇಶ) ಮಾತ್ರ. ಅದನ್ನು "ದೇವರಿಗೆ ಮನುಷ್ಯರ ಅಗತ್ಯವಿದೆ" ಎಂಬ ಪುಸ್ತಕವಾಗಿ ಪ್ರಕಟಿಸಲಾಗಿದೆ (ಅದು ನನ್ನ ಪುಸ್ತಕ - ಹೊಸ ದ್ರಾಕ್ಷಾಚೀಲಗಳಲ್ಲಿ ಹೊಸ ದ್ರಾಕ್ಷಾರಸ ಎಂಬ ಪುಸ್ತಕದ ಎರಡನೇ ಅಧ್ಯಾಯ). ಹಾಗೂ ನಂತರ ಕಿರುಹೊತ್ತಿಗೆಯಾಗಿ ಪ್ರಕಟಿಸಿದ "ದೈವಿಕ ಮನುಷ್ಯನ ಐವತ್ತು ಗುರುತುಗಳು". ದೇವರು ಈ ದೈವಿಕ ಸಂದೇಶವನ್ನು ಮತ್ತು ಕಿರುಹೊತ್ತಿಗೆಯನ್ನು ಅನೇಕ ದೇಶಗಳಲ್ಲಿ ಉಪಯೋಗಿಸಿದರು. ಇವುಗಳನ್ನು ನಾನು ನನ್ನ ಎಲ್ಲಾ ಬರಹಗಳಲ್ಲಿ ತುಂಬಾ ಮಹತ್ವವುಳ್ಳದ್ದೆಂಬುದಾಗಿ ನಾನು ಪರಿಗಣಿಸಿದ್ದೇನೆ. ಒಂದು ವೇಳೆ ದೇವರು ನನ್ನನ್ನು ಆಸ್ಪತ್ರೆಯಲ್ಲಿ ದಾಖಲಾಗಲು ಅನುಮತಿಸದಿದ್ದರೆ, ನಾನಿದನ್ನು ಬರೆಯಲಾಗುತ್ತಿರಲಿಲ್ಲ!

ಬೇರೆ ಸಂದರ್ಭದಲ್ಲಿ ನಾವು ದೇವರಿಗೆ ಮಾಡಲಾಗದನ್ನು ಮಾಡುವಂತೆ, ಕೆಲವು ಸಮಯದಲ್ಲಿ ಅನಾರೋಗ್ಯದ ಅಥವಾ ಸೆರೆಮನೆವಾಸದ ಮೂಲಕ ದೇವರು ನಮ್ಮನ್ನು ನಿಲ್ಲಿಸುತ್ತಾರೆ. ನಮ್ಮ ಹಳಿಗಳಲ್ಲಿ ಯಾವತ್ತಾದರೂ ದೇವರು ನಮ್ಮನ್ನು ನಿಲ್ಲಿಸಿದಾಗ ನಾವು ದೇವರಿಗೆ ಕೃತಜ್ಞತೆಯುಳ್ಳವರಾಗಿರಬೇಕು. ಇದರಲ್ಲಿ ಆತನ ಉದ್ದೇಶವಿರುತ್ತದೆ, ಸತ್ಪುರುಷನ ಗತಿ ಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ (ಕೀರ್ತನೆ. 37:23).

ಪೌಲನ ಸೆರೆಮನೆವಾಸವು ಇನ್ನೊಂದು ರೀತಿಯಲ್ಲಿ ಒಳ್ಳೆಯ ಕಾರ್ಯವಾಯಿತು. ಅವನು ಹೀಗೆನ್ನುತ್ತಾನೆ. ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಪಹರೆಯವರೆಲ್ಲರಿಗೂ ಮಿಕ್ಕಾದವರೆಲ್ಲರಿಗೂ ಪ್ರಸಿದ್ಧವಾಯಿತುಎಂಬುದಾಗಿ (ಪಿಲಿಪ್ಪಿ 1:13). ನಂತರ, ಇಲ್ಲಿರುವ ದೇವಜನರು ನಿಮ್ಮನ್ನು ವಂದಿಸುತ್ತಾರೆ. ಚಕ್ರವರ್ತಿಯ ಅರಮನೆಗೆ ಸೇರಿದವರು ವಿಶೇಷವಾದ ವಂದನೆಗಳನ್ನು ಹೇಳುತ್ತಾರೆ (ಪಿಲಿಪ್ಪಿ. 4:22). ಚಕ್ರವರ್ತಿಯ ಅರಮನೆಯವರು ಹೇಗೆ ಪರಿವರ್ತನೆ ಹೊಂದಿದರು? ಏಕೆಂದರೆ ಪೌಲನು ಸೆರಮನೆಯ ಕಾವಲುಗಾರರೊಟ್ಟಿಗೆ ಕಟ್ಟಿಹಾಕಲ್ಪಟ್ಟಾಗ, ಪೌಲನು ಅವರಿಗೆ ಸುವಾರ್ತೆಯನ್ನು ಬೋಧಿಸಿದನು. ಆ ದಿನಗಳಲ್ಲಿ, ಸೆರೆಮನೆವಾಸಿಗಳು ತಪ್ಪಿಸಿಕೊಳ್ಳಬಾರದೆಂದು, ಅವರನ್ನು ಕಾವಲುಗಾರರೊಂದಿಗೆ ಕಟ್ಟಿಹಾಕುತ್ತಿದ್ದರು. ಆ 8 ತಾಸುಗಳ ಅವಧಿಯಲ್ಲಿ ರೋಮ್ ದೇಶದ ಒಬ್ಬ ಕಾವಲುಗಾರನು ಆತನೊಂದಿಗೆ ಕಟ್ಟಲ್ಪಡುತ್ತಿದ್ದನು. ಆಗ ಪೌಲನು ಆತನಿಗೆ ಸುವಾರ್ತೆಯನ್ನು ಬೋಧಿಸುತ್ತಿದ್ದನು. ಆ ಕಾವಲುಗಾರನು ಹೊರಗೆ ಹೋಗುವಂತಿರಲಿಲ್ಲ! ಆತನು ಪೌಲನು ಹೇಳಿದ್ದನ್ನು ಕೇಳಲೇಬೇಕಿತ್ತು. ಒಬ್ಬ ಕಾವಲುಗಾರನ ಕೆಲಸದ ಅವಧಿ 8 ತಾಸು ಮುಗಿದ ನಂತರ, ಮತ್ತೊಬ್ಬ ಕಾವಲುಗಾರನು ಆತನ ಬದಲಿಗೆ ಮುಂದಿನ 8 ತಾಸುಗಳು ಕಾರ್ಯನಿರ್ವಹಿಸುತ್ತಿದ್ದನು. ಆಗ ಪೌಲನು ಆತನಿಗೂ ಸುವಾರ್ತೆಯನ್ನು ಸಾರುತ್ತಿದ್ದನು. ಅನೇಕ ಸಂಖ್ಯೆಯಲ್ಲಿ ಕಾವಲುಗಾರರು ಈ ರೀತಿಯಾಗಿ ಪರಿವರ್ತನೆ ಹೊಂದಿದರು. ಆದಷ್ಟು ಬೇಗನೆ ಚಕ್ರವರ್ತಿಯ ಅರಮನೆಯಲ್ಲಿ ಸಣ್ಣ ಸಭಾ ಕೂಟವೂ ಸಹ ಆರಂಭವಾಗಿತ್ತು.

ಪೌಲನ ಸೆರೆಮನೆವಾಸದ ಇನ್ನೊಂದು ಫಲಿತಾಂಶವೇನೆಂದರೆ, ಸತ್ಯವೇದವು ಬರೆಯಲ್ಪಟ್ಟಿತು ಮತ್ತು ಜನರು (ಸಭಾಕೂಟಕ್ಕೆ ಎಂದೂ ಬಾರದವರು) ಮನಪರಿವರ್ತನೆ ಹೊಂದುತ್ತಾ ಬಂದರು.

ಆದರೆ ಅದು ಅಲ್ಲಿಗೇ ಮುಗಿಯಲಿಲ್ಲ. ಮೂರನೇ ಆಶೀರ್ವಾದವೂ ಸಹ ಇದೆ. ಅದು ಸಹ ಪೌಲನ ಸೆರೆಮನೆಯಿಂದ ಬಂದದ್ದಾಗಿದೆ. ಇದರ ಮೂಲಕ ಬಂದ ಇನ್ನೊಂದು ಆಶೀರ್ವಾದವೇನೆಂದರೆ, ಪೌಲನ ಸೆರೆಮನೆವಾಸದ ಬಗ್ಗೆ ಕೇಳಿದಾಗ, ಅನೇಕ ವಿಶ್ವಾಸಿಗಳ ಭಯವು ತೊಲಗಿಹೋಗಿ, ಸುವಾರ್ತೆಯನ್ನು ಸಾರಲು ಅವರು ಧೈರ್ಯ ಪಡೆದರು. (ಪಿಲಿಪ್ಪಿ 1:14). ಅವರು ಸುವಾರ್ತೆ ಸಾರುವುದಕ್ಕೆ ಭಯಪಡುವುದನ್ನು ಬಿಟ್ಟು ಧೈರ್ಯವಾಗಿ ಕ್ರಿಸ್ತನನ್ನು ಸಾರುವುದಕ್ಕೆ ಪ್ರಾರಂಭಿಸಿದರು. ಈ ರೀತಿಯಾಗಿ ಪೌಲನ ಸೆರೆಮನೆವಾಸವು ಸುವಾರ್ತೆಯನ್ನು ಸಾರುವುದಕ್ಕೆ ಕಾರಣವಾಯಿತು.

ನಮ್ಮ ದೇವರು ಕೇಡಿನಿಂದ ಒಳ್ಳೆಯದನ್ನು ತರುವಾತನು. ಕರ್ತನಿಗೆ ಸ್ತೋತ್ರ