ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮಹಿಳೆಯರಿಗೆ
WFTW Body: 

ದೇವರು ಹವ್ವಳನ್ನು ಸೃಷ್ಟಿಸಿದ್ದು ಅವಳು ಪುರುಷನಿಗೆ ಸರಿಬೀಳುವ ಸಹಕಾರಿಯಾಗಿ ಇರಲಿಕ್ಕಾಗಿ (ಆದಿಕಾಂಡ 2:18 ). ಈ ಮಹಿಮಾನ್ವಿತ ಸೇವೆಯ ಬೆಲೆ ಎಷ್ಟೆಂದು ತಿಳಿಯುವದು, ಯೇಸುವು ಪವಿತ್ರಾತ್ಮನನ್ನು ಪ್ರಸ್ತಾಪಿಸಿದ್ದು ಸಹ ’ಸಹಾಯಕ’ (ಅಥವಾ ಸಹಕಾರಿ) ಎಂಬ ಬಿರುದಿನಿಂದ (ಯೋಹಾನ 14:16) ಎಂದು ನಾವು ಗಮನಿಸುವಾಗ. ಪವಿತ್ರಾತ್ಮನು ಕಣ್ಮರೆಯಾಗಿ ಮತ್ತು ನಿಶ್ಯಬ್ದವಾಗಿ, ಆದರೆ ಬಲಿಷ್ಠನಾಗಿ ಕ್ರೈಸ್ತ ವಿಶ್ವಾಸಿಗೆ ಸಹಾಯ ಒದಗಿಸುವ ಹಾಗೆಯೇ, ಸ್ತ್ರೀಯೂ ಪುರುಷನಿಗೆ ಸಹಾಯ ನೀಡಲಿಕ್ಕಾಗಿ ಸೃಷ್ಟಿಸಲ್ಪಟ್ಟಳು. ಪವಿತ್ರಾತ್ಮನ ಸೇವೆಯು ‘ತೆರೆಯ ಮರೆಯಲ್ಲಿ’ ಆಗಿದೆ, ಅದೇ ರೀತಿ ಸ್ತ್ರೀಯದ್ದು ಸಹ ಆಗಿರಬೇಕು.

ಯೇಸುವಿನ ಜೀವನವೂ ಸಹ ಸ್ತ್ರೀಗೆ ಒಂದು ಮಾದರಿಯಾಗಿದೆ; ಏಕೆಂದರೆ ದೇವರ ವಾಕ್ಯ ತಿಳಿಸುವಂತೆ, ಕ್ರಿಸ್ತನಿಗೆ ಹೇಗೆ (ತಂದೆಯಾದ) ದೇವರು ಶಿರಸ್ಸಾಗಿರುವರೋ, ನಿಖರವಾಗಿ ಹಾಗೆಯೇ ಸ್ತ್ರೀಗೆ ಪುರುಷನು ಶಿರಸ್ಸಾಗಿ ಇರುವನು (1 ಕೊರಿಂಥ. 11:3). ಯೇಸುವು ಎಲ್ಲಾ ವೇಳೆಯಲ್ಲೂ ಆತನ ತಂದೆಗೆ ವಿಧೇಯನಾಗಿ ನಡೆದನು. ದೇವಭಯವುಳ್ಳ ಒಬ್ಬ ಸಹೋದರಿಯು ತನ್ನ ಪತಿಯ ಸಂಗಡ ಹಾಗೆಯೇ ನಡೆಯುವಳು. ಏದೇನ್ ವನದಲ್ಲಿ ಹವ್ವಳು ಮಾಡಿದ ತಪ್ಪು ಏನಾಗಿತ್ತೆಂದರೆ, ಆಕೆಯು ಒಂದು ನಿರ್ಧಾರಕ್ಕೆ ಬರುವ ಮೊದಲು ತನ್ನ ಪತಿಯ ಸಲಹೆಯನ್ನು ಪಡೆಯಲು ವಿಫಲಳಾದಳು. ಈ ರೀತಿಯಾಗಿ ಸೈತಾನನು ಅವಳನ್ನು ಮೋಸಗೊಳಿಸಿದನು (1 ತಿಮೊಥೆ. 2:14). ಅಲ್ಲಿ ಹವ್ವಳು ವಿಫಲಳಾದರೆ, ದೇವರು ಇಂದು ಕ್ರೈಸ್ತ ಪತ್ನಿಯರನ್ನು ತಮ್ಮ ಗಂಡಂದಿರಿಗೆ ವಿಧೇಯರಾಗುವ ಮಹಿಮೆಯನ್ನು ಪ್ರದರ್ಶಿಸಲು, ನಿಖರವಾಗಿ ಹೇಗೆ ಯೇಸುವು ತಂದೆಗೆ ವಿಧೇಯನಾದನೋ ಮತ್ತು ಹೇಗೆ ಸಭೆಯು ಕ್ರಿಸ್ತನಿಗೆ ವಿಧೇಯವಾಗಬೇಕೋ, ಹಾಗೆಯೇ ಮಾಡಲು ಕರೆಯುತ್ತಾರೆ (ಎಫೆಸ. 5:24).

ಪಾಪವು ಲೂಸಿಫರನ ಬಂಡಾಯದ(ತಿರುಗಿಬೀಳುವ) ಮೂಲಕ ಲೋಕವನ್ನು ಪ್ರವೇಶಿಸಿತು. ಪಾಪಗಳಿಂದ ರಕ್ಷಣೆಯು ಕ್ರಿಸ್ತನ ವಿಧೇಯತೆಯ ಮೂಲಕ ಬಂದಿತು. ದೇವರ ಅಧಿಕಾರಕ್ಕೆ ವಿಧೇಯತೆಯಿಂದ ತಲೆಬಾಗುವ ಮನೋಭಾವವು ವಿಶ್ವದಲ್ಲಿರುವ ಅತಿ ದೊಡ್ಡ ಶಕ್ತಿ - ಏಕೆಂದರೆ ಅದು ಕ್ರಿಸ್ತನ ಆತ್ಮವಾಗಿದೆ. ಆ ಆತ್ಮವು ಎಲ್ಲಾ ಬಂಡಾಯಕಾರಿ ಆತ್ಮಗಳನ್ನು ಶಿಲುಬೆಯ ಮೇಲೆ ಸೋಲಿಸಿತು. ಒಬ್ಬ ಪತ್ನಿಯು ತನ್ನ ಗಂಡನಿಗೆ ವಿಧೇಯಳಾದಾಗ, ನಿಜವಾಗಿ ಆಕೆಯು ತಲೆಬಾಗುತ್ತಿರುವದು ಆಕೆಯನ್ನು ಹಾಗೆ ಮಾಡಲು ಆದೇಶಿಸುವ ದೇವರ ವಾಕ್ಯದ ಅಧಿಕಾರಕ್ಕೆ; ಮತ್ತು ಆ ಮೂಲಕ ಆಕೆಯು ವಿಶ್ವದ ಅತಿ ದೊಡ್ಡ ಶಕ್ತಿಯ ಪ್ರಭಾವಕ್ಕೆ ಒಳಪಟ್ಟಿದ್ದಾಳೆ. ಆ ಶಕ್ತಿಯ ಮೂಲಕ ಮಾನಸಾಂತರ ಹೊಂದದ ಗಂಡಂದಿರನ್ನೂ ಸಹ ಒಲಿಸಲು ಸಾಧ್ಯವಿದೆ (1 ಪೇತ್ರ. 3:1-3). ಈ ಲೋಕದ ಜೀವಿತದಲ್ಲಿ ಆಕೆಯು ಅಂತಹ ವಿಧೇಯತೆಯ ಮನಸ್ಸಿನೊಡನೆ ಜೀವಿಸಿದರೆ ಜಯಶಾಲಿಯಾಗುವಳು, ಮತ್ತು ಯುಗಯುಗಾಂತರಕ್ಕೂ ಯೇಸುವಿನೊಂದಿಗೆ ರಾಜ್ಯಭಾರದ ಅರ್ಹತೆಯನ್ನು ಹೊಂದುವಳು (ಪ್ರಕಟನೆ. 3:21).

ಸೈತಾನನು ಸ್ತ್ರೀಯನ್ನು ಇನ್ನೊಮ್ಮೆ ಮೋಸಗೊಳಿಸುವದು ಇದೇ ಸಂದರ್ಭದಲ್ಲಿ. ಅವನು ದೇವದೂತರನ್ನು ತಪ್ಪುದಾರಿಗೆ ನಡೆಸಿದ ಹಾಗೆ - ಬಂಡಾಯದ ಆತ್ಮದ ಮೂಲಕ - ಅವನು ಸ್ತ್ರೀಯನ್ನು ತಪ್ಪುದಾರಿಗೆ ನಡೆಸುವನು. ತಿರುಗಿಬೀಳುವ ಪತ್ನಿಯು ಅವಳ ಮನೆಯನ್ನು ಒಂದು ಮರಳುಗಾಡಿಗಿಂತ ಕೀಳಾದ, ಬರಡು ತಿಪ್ಪೆಯ ಪ್ರದೇಶವಾಗಿ ಮಾರ್ಪಡಿಸುವಳು (ಜ್ಞಾನೋಕ್ತಿ 21:19ರ ಒಳಾರ್ಥ ಇದು). ಇನ್ನೊಂದೆಡೆ, ಒಬ್ಬ ಸದ್ಗುಣವತಿ, ವಿಧೇಯ ಪತ್ನಿಯು ಆಕೆಯ ಗಂಡನನ್ನು ಅರಸನ ಪಟ್ಟಕ್ಕೆ ಏರಿಸುವಳು ಮತ್ತು ತನ್ನ ಮನೆಯನ್ನು ಅರಮನೆಯನ್ನಾಗಿ ಮಾರ್ಪಡಿಸುವಳು (ಜ್ಞಾನೋಕ್ತಿ 12:4). ಆತ್ಮಿಕವಾಗಿ, ನಿಮ್ಮ ಮನೆ ಒಂದು ಅರಮನೆ ಅಥವಾ ಒಂದು ಮರಳುಗಾಡು ಆಗಲು ಸಾಧ್ಯವಿದೆ. ಅವೆಲ್ಲವೂ ನೀನು ಎಂತಹ ಪತ್ನಿಯಾಗಿರುವೆ ಎನ್ನುವದರ ಮೇಲೆ ಅವಲಂಬಿಸಿದೆ. ನಮೃತೆ (ಒರಟುತನವಿಲ್ಲದ) ಮತ್ತು ಶಾಂತತೆ ಇರುವ ಮನಸ್ಸು ದೇವರ ದೃಷ್ಟಿಯಲ್ಲಿ ಬಹು ಬೆಲೆಯುಳ್ಳದ್ದು ಎನ್ನುವದರಲ್ಲಿ ಆಶ್ಚರ್ಯವೇನೂ ಇಲ್ಲ (1 ಪೇತ್ರ. 3:4).

ಈ ಗುಣಶೀಲೆಯಾದ ಹೆಂಡತಿಯ ಕೆಲವು ಗುಣವಿಶೇಷಗಳನ್ನು ಜ್ಞಾನೋಕ್ತಿ 31:10-31 ವಿವರಿಸುತ್ತದೆ. ಆಕೆಯ ಮನಸ್ಸು, ಕೈಗಳು ಮತ್ತು ನಾಲಿಗೆಯು ಅತಿ ಶ್ರೇಷ್ಠವಾದವು ಎಂದು ವಿವರಿಸಲಾಗಿದೆ. ಆಕೆಯ ಬಾಹ್ಯ ಸೌಂದರ್ಯ ಅಥವಾ ಸ್ತ್ರೀ ಸಹಜ ಲಾವಣ್ಯಗಳ ಬಗ್ಗೆ ಏನೂ ತಿಳಿಸಿಲ್ಲ, ಏಕೆಂದರೆ ಇವು ಕೆಲಸಕ್ಕೆ ಬಾರದವು ಮತ್ತು ಕಪಟವಾದವು ಎಂದು ತಿಳಿಯಪಡಿಸಲಾಗಿದೆ (ಜ್ಞಾನೋಕ್ತಿ 31:30). ಈ ವಿಷಯವನ್ನು ಎಲ್ಲಾ ಸ್ತ್ರೀಯರು ಮತ್ತು ಯುವತಿಯರು, ಮತ್ತು ವಿಶೇಷವಾಗಿ ವಿವಾಹದ ಬಗ್ಗೆ ಯೋಚಿಸುತ್ತಿರುವ ಯುವಕರು ಅರಿತುಕೊಂಡಲ್ಲಿ ಅದೊಂದು ಅತ್ಯುತ್ತಮ ಸಂಗತಿ ಆಗುವದು.

ಇಲ್ಲಿ ವಿವರಿಸಿರುವ ಸುಶೀಲ ಮಹಿಳೆಯು ದೇವಭಯದ ಮನಸ್ಸನ್ನು ಹೊಂದಿದ್ದಾಳೆ (ಜ್ಞಾನೋಕ್ತಿ 31:30). ಇದು ಆಕೆಯ ಇಡೀ ಜೀವನದ ಅಸ್ತಿವಾರವಾಗಿದೆ. ಆಕೆಯು ತನ್ನ ಕೈಗಳಿಂದ ಉಡುಪನ್ನು ತಯಾರಿಸುವಳು, ಅಡುಗೆ ಮಾಡುವಳು, ಮರಗಳನ್ನು ನೆಡುವಳು ಮತ್ತು ಬಡವರಿಗೆ ಸಹಾಯ ನೀಡುವಳು (ಜ್ಞಾನೋಕ್ತಿ 31:13-22). ಆಕೆಯು ತನ್ನ ನಾಲಿಗೆಯನ್ನು ವಾತ್ಸಲ್ಯದಿಂದ ಮತ್ತು ಬುದ್ಧಿವಂತಿಕೆಯಿಂದ ಉಪಯೋಗಿಸುವಳು (ಜ್ಞಾನೋಕ್ತಿ 31:26). ಆಕೆಯು ದೇವಭಯವುಳ್ಳವಳು, ಕಷ್ಟಪಟ್ಟು ದುಡಿಯುವವಳು ಮತ್ತು ಮೃದುಸ್ವಭಾವದವಳು - ಒಂದು ವೇಳೆ ಆಕೆ ಸುಂದರಿಯಲ್ಲದೇ ಇರಬಹುದು. ದೇವರ ಮಹಿಮೆಯು ಆಕೆಯ ಶುದ್ಧ ಮನಸ್ಸು, ದುಡಿದು ಗಡಸಾದ ಕೈಗಳು ಮತ್ತು ಮೃದುವಾದ ನಾಲಿಗೆಯ ಮೂಲಕ ಪ್ರಕಟಗೊಳ್ಳುವದು (ಇದಕ್ಕೆ ವಿರುದ್ಧವಾಗಿ, ಲೌಕಿಕ ಸ್ತ್ರೀಯರು, ಅಶುದ್ಧ ಮನಸ್ಸು, ಮೃದುವಾದ ಕೈಗಳು ಮತ್ತು ಒರಟಾದ ನಾಲಿಗೆಯನ್ನು ಹೊಂದಿರುತ್ತಾರೆ!). ಈ ಕ್ಷೇತ್ರಗಳಲ್ಲಿ ತನ್ನ ಮಹಿಮೆಯನ್ನು ಇಂದಿನ ಸ್ತ್ರೀಯರು ವ್ಯಕ್ತಗೊಳಿಸಲಿ ಎಂದು ದೇವರು ನಿರೀಕ್ಷಿಸುತ್ತಾರೆ.

ಒಬ್ಬ ಪತ್ನಿಯಾಗಿ, ಈ ಗುಣವತಿಯಾದ ಮಹಿಳೆಯು ಆಕೆಯ ಪತಿಯ ನಿಜವಾದ ಸಹಕಾರಿಯಾಗಿ ಇರುತ್ತಾಳೆ. ಆಕೆಯು ತನ್ನ ಜೀವಮಾನವೆಲ್ಲಾ ನಿರತವಾಗಿ - ಆಗೊಮ್ಮೆ ಈಗೊಮ್ಮೆ ಅಲ್ಲ - ಅವನಿಗೆ ಹಿತವನ್ನೇ ಮಾಡುವಳು (ಜ್ಞಾನೋಕ್ತಿ 31:12). ಬೇರೆ ಮಾತುಗಳಲ್ಲಿ ಹೇಳುವದಾದರೆ, ಆತನಿಗಾಗಿ ಆಕೆಯ ಮೊದಲ ಪ್ರೀತಿ ಎಂದಿಗೂ ಕಡಿಮೆಯಾಗದು. ಇದಲ್ಲದೆ ಆಕೆಯು ಆತನ ಜೀವನದ ಉದ್ಯೋಗ ಮತ್ತು ಪ್ರೇರಣೆಗಳಿಗೆ ಅನುಕೂಲವಾದ ಹೊಂದಾಣಿಕೆಯನ್ನು ಮಾಡಿ, ಜೊತೆಗೆ ತಾನು ಮಿತವ್ಯಯದಿಂದ ಮತ್ತು ಖರ್ಚು-ವೆಚ್ಚಗಳ ನಿಯಂತ್ರಣದಿಂದ ಹಣದ ದುಂದುವೆಚ್ಚವನ್ನು ತಪ್ಪಿಸಿ, ಮನೆಯಲ್ಲಿ ಶ್ರಮವಹಿಸಿ ಹೆಚ್ಚುವರಿ ಆದಾಯವನ್ನು ಸಹ ಉತ್ಪತ್ತಿ ಮಾಡುವಳು. ಅವಳು ಮನೆಯಲ್ಲಿ ತನ್ನ ಗಂಡನ ಗೃಹಕೃತ್ಯದ ಭಾರವನ್ನು ಹಗುರಗೊಳಿಸಿ, ಅವನು ಸುತ್ತುಮುತ್ತು ಕರ್ತರಿಗಾಗಿ ಒಂದು ಸೇವೆಯನ್ನು ಮಾಡಲು ಸಹಾಯ ಒದಗಿಸುವಳು (ಜ್ಞಾನೋಕ್ತಿ 31:23-27). ಆಕೆಯ ಪತಿಯೂ ಸಹ ಜಗತ್ತಿನ ಎಲ್ಲಾ ಸ್ತ್ರೀಯರಿಗಿಂತ (ಅದರಲ್ಲಿ ಮಹಿಳಾ ಪ್ರಧಾನ ಮಂತ್ರಿಗಳು ಮತ್ತು ಮಹಿಳಾ ಬೋಧಕರು ಸೇರಿದ್ದಾರೆ) ನೀನೇ ಶ್ರೇಷ್ಠಳು ಎಂದು ಅವಳನ್ನು ಕೊಂಡಾಡುವದು ಆಶ್ಚರ್ಯಕರವೇನೂ ಅಲ್ಲ (ಜ್ಞಾನೋಕ್ತಿ 31:29). ಅಂತಹ ಮಹಿಳೆಯು ತಾನು ಒಬ್ಬ ಸ್ತ್ರೀಯಾಗಿ ಇರುವ ಕರೆ ಎಷ್ಟು ಮಹತ್ವವುಳ್ಳದ್ದು ಎಂದು ಅರಿತಿರುವದರಿಂದ, ಬಹಿರಂಗವಾದ ಹೊಗಳಿಕೆಗೂ ಆಕೆ ಖಂಡಿತವಾಗಿ ಅರ್ಹಳೇ (ಜ್ಞಾನೋಕ್ತಿ 31:31).