ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಕರ್ತನು ಸಭೆಯನ್ನು ಪ್ರೀತಿಸಿದನು ಮತ್ತು ಸಭೆಯನ್ನು ಪ್ರತಿಷ್ಠೆಪಡಿಸುವದಕ್ಕಾಗಿ (ಕಟ್ಟುವುದಕ್ಕಾಗಿ) ತನ್ನನ್ನು ಒಪ್ಪಿಸಿಕೊಟ್ಟನು (ಎಫೆಸ 5:25). ನಾವೂ ಕೂಡ ಸಭೆಯನ್ನು ಈ ರೀತಿಯಾಗಿ ಪ್ರೀತಿಸಬೇಕು. ನಮ್ಮ ಹಣ ಮತ್ತು ಸಮಯವನ್ನು ಕೊಡುವದು ಮಾತ್ರವಲ್ಲದೆ, ನಮ್ಮನ್ನೇ ಅಂದರೆ ನಮ್ಮ ಸ್ವ-ಜೀವಿತವನ್ನು ನಾವು ಸಮರ್ಪಿಸಬೇಕು.

ತನ್ನ ಪ್ರೀತಿಯನ್ನು ತಿಳಿಸಲು, ದೇವರು, ಒಬ್ಬ ತಾಯಿಯು ತನ್ನ ಮೊಲೆಕೂಸಿಗೆ ತೋರಿಸುವ ಪ್ರೀತಿಯ ಜೊತೆ ಹೋಲಿಸುತ್ತಾನೆ (ಯೆಶಾಯ 49:15). ತಾಯಿಯು ತನ್ನ ಮಗುವಿಗೆ ತೋರಿಸುವ ಪ್ರೀತಿಯನ್ನು ಗಮನಿಸುವದಾದರೆ, ಅವಳು ಸಂಪೂರ್ಣ ತ್ಯಾಗದ ಆತ್ಮವನ್ನು (ಮನೋಭಾವವನ್ನು) ಹೊಂದಿರುತ್ತಾಳೆ. ಬೆಳಗಿನಿಂದ ರಾತ್ರಿಯ ತನಕ ಮತ್ತು ರಾತ್ರಿಯಿಡೀ ತಾಯಿಯು ತನ್ನ ಮಗುವಿಗೋಸ್ಕರ ಪ್ರತೀ ಕ್ಷಣವೂ ತ್ಯಾಗ ಮಾಡುತ್ತಿರುತ್ತಾಳೆ. ಮತ್ತು ಅವಳು ಹಿಂತಿರುಗಿ ಏನನ್ನೂ ಪಡೆಯುವದಿಲ್ಲ. ವರ್ಷದಿಂದ ವರ್ಷಕ್ಕೆ ತಾಯಿಯು ಮಗುವಿಗೋಸ್ಕರ ನೋವನ್ನು ಮತ್ತು ಕಷ್ಟಗಳನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾಳೆ ಮತ್ತು ಇದಕ್ಕೆ ಅವಳು ಹಿಂತಿರುಗಿ ಏನನ್ನೂ ಅಪೇಕ್ಷಿಸುವದಿಲ್ಲ. ಇದೇ ರೀತಿಯಾಗಿ ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮಗೂ ಕೂಡ ಇಂತಹ ಮನಸ್ಸು ಕೊಡಲು ಬಯಸುತ್ತಾನೆ. ಪ್ರಾಮಾಣಿಕವಾಗಿ ಹೇಳುವದಾದರೆ ಜಗತ್ತಿನಲ್ಲಿ ಒಬ್ಬರನ್ನೊಬ್ಬರು ಈ ರೀತಿಯಾಗಿ ಪ್ರೀತಿಸುವ ಸಭೆ ಸಿಗುವದು ಅಸಾಧ್ಯವಾಗಿದೆ.

ಅನೇಕ ವಿಶ್ವಾಸಿಗಳು ತಮ್ಮ ವಿಚಾರಗಳಿಗೆ ಸೈ ಅನ್ನುವವರ ಮತ್ತು ಅವರ ಗುಂಪಿಗೆ ಸೇರಿದವರನ್ನು ಪ್ರೀತಿಸಲು ತಿಳಿದಿದ್ದಾರೆ. ಇವರ ಪ್ರೀತಿಯು ಮಾನವೀಯ ಪ್ರೀತಿಯಾಗಿದೆ ಮತ್ತು ತಾಯಿಯ ತ್ಯಾಗದ ಪ್ರೀತಿಗಿಂತಲೂ ಕೆಳಮಟ್ಟದ್ದಾಗಿದೆ!! ಹಾಗಿದ್ದಾಗಲೂ

''ನಾವು ದೈವಿಕ ಪ್ರೀತಿಯನ್ನು ನಮ್ಮ ಗುರಿಯನ್ನಾಗಿಸಿಕೊಂಡು ಅದರ ಕಡೆ ತವಕದಿಂದ ಸಾಗಬೇಕು''
.

ಒಬ್ಬ ತಾಯಿಯು ತನ್ನ ಮಗುವಿಗೋಸ್ಕರ ಬೇರೆಯವರು ಏನನ್ನಾದರೂ ತ್ಯಾಗ ಮಾಡುವರೋ ಅಥವಾ ಇಲ್ಲವೋ ಎಂಬುದನ್ನು ಗಮನಿಸುವದಿಲ್ಲ. ಅವಳು ಸಂತೋಷದಿಂದ ತಾನಾಗಿಯೇ ಎಲ್ಲವನ್ನೂ ತ್ಯಾಗ ಮಾಡುತ್ತಾಳೆ. ಇದೇ ರೀತಿಯಾಗಿ ಒಬ್ಬನು ಸಭೆಯನ್ನು ತನ್ನ ಸ್ವಂತ ಮಗುವಿನ ಹಾಗೆ ನೋಡಿದರೆ ಅವನ ಅಕ್ಕಪಕ್ಕ ಇನ್ನೊಬ್ಬರು ತ್ಯಾಗ ಮಾಡುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ಗಮನ ಹರಿಸುವದಿಲ್ಲ. ಆತನು ಸಂತೋಷದಿಂದ ತಾನಾಗಿಯೇ ತ್ಯಾಗ ಮಾಡುತ್ತಾನೆ ಹಾಗೂ ಇನ್ನೊಬ್ಬರ ಬಗ್ಗೆ ಯಾವುದೇ ದೂರು ಅಥವಾ ಅಪೇಕ್ಷೆಯನ್ನು ಹೊಂದಿರುವದಿಲ್ಲ.

ಸಭೆಗಾಗಿ ತ್ಯಾಗ ಮಾಡುತ್ತಿಲ್ಲವೆಂದು ಇನ್ನೊಬ್ಬರ ಮೇಲೆ ದೂರು ಹೇಳುವವರು ತಾಯಿಯರಲ್ಲ. ಆದರೆ ಅವರು ಮಕ್ಕಳ ದಾದಿ(ನರ್ಸು)ಯರು. ದಾದಿಯರು ನಿರ್ಧಿಷ್ಟವಾದ ಎಂಟು ಘಂಟೆಗಳ ಕಾಲ ಕೆಲಸ ಮಾಡುತ್ತಾರೆ ಮತ್ತು ತಮ್ಮ ಪಾಳೆ(ಅವಧಿ) ಮುಗಿದ ನಂತರ ಬೇರೆ ದಾದಿ ಬರದೆ ಇದ್ದಾಗ ಗುಣಗುಟ್ಟುತ್ತಾರೆ.

ಆದರೆ ತಾಯಿಯು ದಿನಕ್ಕೆ ಏಂಟು ಘಂಟೆಯ ಅವಧಿಗೆ ಸೀಮಿತಳಲ್ಲ. ಪ್ರತಿ ವರ್ಷ ಅವಳು 24 ಘಂಟೆಗಳ ಕಾಲ ಕೆಲಸ ಮಾಡುತ್ತಾಳೆ ಮತ್ತು ಈ ಕೆಲಸಕ್ಕೆ ಅವಳು ಸಂಬಳ ಕೂಡ ಪಡೆಯುವದಿಲ್ಲ. ಮಗು 20 ವರ್ಷಗಳಾದರೂ ಕೂಡ ಅವಳ ಕೆಲಸ ಮುಗಿಯುವದಿಲ್ಲ.

ತಮ್ಮ ಮಕ್ಕಳಿಗಾಗಿ ಕುಡಿಸಲಿಕ್ಕೆ ಕೇವಲ ತಾಯಂದಿರು ಹಾಲನ್ನು ಹೊಂದಿರುತ್ತಾರೆ. ತಾವು ಕಾಳಜಿ (ಆರೈಕೆ) ಮಾಡುವ ಮಕ್ಕಳಿಗಾಗಿ ದಾದಿಯರು ಹಾಲನ್ನು ತಯಾರಿಸಲು ಸಾಧ್ಯವಿಲ್ಲ. ಅದೇ ರೀತಿ ಸಭೆಯಲ್ಲಿ ಯಾರು ತಾಯಿಯ ಹಾಗೆ ಇರುತ್ತಾರೋ ಅವರು ತಮ್ಮ ಆತ್ಮಿಕ ಮಕ್ಕಳೊಡನೆ ಹಂಚಿಕೊಳ್ಳಲು ಪ್ರತಿ ಕೂಟದಲ್ಲಿ ದೇವರ ವಾಕ್ಯವನ್ನು ಹೊಂದಿರುತ್ತಾರೆ. ಅನೇಕ ಸಭಾ ಹಿರಿಯರಲ್ಲಿ(ನಾಯಕರಲ್ಲಿ) ಸಭೆಯೊಡನೆ ಹಂಚಿಕೊಳ್ಳಲು ದೇವರ ವಾಕ್ಯವಿಲ್ಲ. ಯಾಕೆಂದರೆ ಅವರು ತಾಯಂದಿರಲ್ಲ, ದಾದಿಯರಾಗಿದ್ದಾರೆ.

ತಾಯಿಯು ತನ್ನ ಮಕ್ಕಳಿಂದ ಯಾವುದೇ ಸಂಬಳವನ್ನು ಅಪೇಕ್ಷಿಸುವದಿಲ್ಲ. ಯಾವ ಮಕ್ಕಳೂ ಕೂಡ ತನ್ನ ತಾಯಿ ಮಾಡಿದ ತ್ಯಾಗಕ್ಕೋಸ್ಕರ ಹಣ ಪಾವತಿಸುವದಿಲ್ಲ. ಒಂದು ವೇಳೆ ತಾಯಿಯು ಮಾಡಿದ ಕೆಲಸಕ್ಕಾಗಿ ಸಂಬಳ ಎಷ್ಟೆಂದು ನೋಡುವದಾದರೆ, ಒಂದು ಘಂಟೆಗೆ (ನರ್ಸ್ಗೆ ಕೊಡುವ ಪ್ರಕಾರ) 200 ರೂಪಾಯಿ ಪ್ರಕಾರ ಲೆಕ್ಕ ಹಾಕಿದ್ರೆ, ಮಗು 20 ವರ್ಷವಾಗುವಾಗ ಆ ಮಗುವು 30 ಲಕ್ಷ ರೂಪಾಯಿಯಷ್ಟು ಸಂಬಳ ತಾಯಿಗೆ ಕೊಡಬೇಕಾಗುತ್ತದೆ!! ಯಾವ ಮಗು ತಾನೇ ಇಷ್ಟೊಂದು ಹಣವನ್ನು ತನ್ನ ತಾಯಿಗೆ ಕೊಡಲು ಸಾಧ್ಯ?

ಹಾಗಿದ್ದಾಗ ನಮಗೆ ಒಂದು ಪ್ರಶ್ನೆ ಬರುತ್ತದೆ: ಯಾರು ಕರ್ತನಿಗಾಗಿ ಮತ್ತು ಆತನ ಸಭೆಗಾಗಿ ಸಂಬಳ ಪಡೆಯದೇ, ತಮ್ಮನ್ನೇ ಅರ್ಪಿಸಿ, ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ತ್ಯಾಗದ ಮನೋಭಾವದಿಂದ ಕರ್ತನಾದ ಕ್ರಿಸ್ತೇಸುವು ಬರುವ ತನಕ ಕೆಲಸ ಮಾಡಲು ಮನಸ್ಸುಳ್ಳವರಾಗಿರುತ್ತಾರೆ?

ಇಂತಹ ಮನೋಭಾವವನ್ನು ಹೊಂದಿರುವ ಯಾವುದೇ ಒಬ್ಬ ಮನುಷ್ಯನನ್ನು ದೇವರು ಎಲ್ಲಾದರೂ ನೋಡಿದರೆ, 10,000 ಅರ್ಧಮನಸ್ಸುಳ್ಳ, ತ್ಯಾಗದ ಮನೋಭಾವವಿಲ್ಲದ ಜನರಿಗಿಂತ ಇಂಥವನನ್ನು, ತನ್ನ ಸಭೆಯನ್ನು ಕಟ್ಟಲು ದೇವರು ಉಪಯೋಗಿಸುತ್ತಾರೆ.