ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಅನೇಕ ರೀತಿಯಲ್ಲಿ ದೇವರು ನಮ್ಮೊಡನೆ ಮಾತನಾಡುತ್ತಾರೆ. ಪ್ರಾಥಮಿಕವಾಗಿ ಅವರು ತಮ್ಮ ವಾಕ್ಯದ ಮೂಲಕ ಮಾತನಾಡುತ್ತಾರೆ, ಏನಾದರೂ ದೇವರ ವಾಕ್ಯದಲ್ಲಿ ಸ್ಪಷ್ಟವಾಗಿ ಬರೆದಿದ್ದರೆ, ನಾವು ದೇವರ ಚಿತ್ತವನ್ನು ತಿಳಿದುಕೊಳ್ಳಲು ಅದರ ಬಗ್ಗೆ  ಪ್ರಾರ್ಥನೆ ಮಾಡಬೇಕಾಗಿಲ್ಲ. ಯಾಕೆಂದರೆ, ಅದು ಆವಾಗಲೇ ಪ್ರಕಟಿಸಲ್ಪಟ್ಟಿದೆ. 

 

ನಮ್ಮ ಸನ್ನಿವೇಶಗಳ ಮೂಲಕ ದೇವರು ನಮ್ಮೊಡನೆ ಮಾತನಾಡುತ್ತಾನೆ. ನಮ್ಮ ಕರ್ತನಲ್ಲಿ ಪ್ರತಿಯೊಂದು ದ್ವಾರಕ್ಕೂ/ಬಾಗಿಲಿಗೂ  ಕೀಲಿಯಿದೆ (ಪ್ರಕ 1:18) ಹಾಗೂ ಅವನು ತೆರೆದ ಬಾಗಿಲನ್ನು ಯಾರೂ ಮುಚ್ಚಲಾರರು ಮತ್ತು ಅವನು ಬಾಗಿಲನ್ನು ಮುಚ್ಚಿದಾಗ ಆರೂ ತೆರಯಲಾರರು (ಪ್ರಕ 3:8).  ಆದುದರಿಂದ ನಮ್ಮ ಸನ್ನಿವೇಶಗಳು, ನಾವು ಒಂದು ನಿರ್ದಿಷ್ಟವಾದ ದಾರಿಯಲ್ಲಿ ಹೋಗಲು ದೇವರ ಇಚ್ಚೆಯಾಗಿದೆಯೋ ಇಲ್ಲವೋ ಎಂಬುದರ ಸೂಚನೆಯಾಗಿದೆ. ದೇವರು ತೆರೆದಿಲ್ಲದ ಬಾಗಿಲಿನ ಮೇಲೆ ನಾವು ಬಡಿಯಬೇಕಾಗಿಲ್ಲ. ಒಂದು ಬಾಗಿಲು ಮುಚ್ಚಿರುವಾಗ ನಾವು ನಿಜವಾಗಿಯೂ ಪ್ರಾರ್ಥಿಸಬೇಕು. ಆದರೆ ಪುನ: ಪುನ: ಪ್ರಾರ್ಥಿಸಿದ ಮೇಲೂ ಒಂದು ಬಾಗಿಲು ಮುಚ್ಚಿದ್ದರೆ, ಆ ಬಾಗಿಲಿನ ಮೂಲಕ ನಾವು ಹಾದು ಹೋಗಬಾರದೆಂದು ದೇವರ ಇಚ್ಚೆಯಾಗಿರಬಹುದೆಂದು ನಾವು ಅರ್ಥಮಾಡಿಕೊಳ್ಳಬಹುದು. ಇದು ಈ ರೀತಿ (ದೇವರ ಇಚ್ಚೆ) ಎಂಬುದಾಗಿ ತೋರಿಸಿ ಕೊಡಲು ಅಥವಾ ಬಾಗಿಲನ್ನು ತೆರೆಯುವಂತೆ ನಾವು ಪ್ರಾರ್ಥನೆಯಲ್ಲಿ ಮುಂದುವರಿಯಬೇಕೋ ಇಲ್ಲವೋ ಎಂಬುದಾಗಿ ನಾವು ದೇವರನ್ನು ಕೇಳಬೇಕು (ಲೂಕ 11:5-9).

 

ನುರಿತ(ಹಿರಿಯ) ದೈವೀಕ ಸಹೋದರರ ಮೂಲಕವೂ ದೇವರು ನಮ್ಮೊಡನೆ ಮಾತನಾಡುತ್ತಾರೆ. ಆ ಸಹೋದರರು ಅನೇಕ ಅನುಭವಗಳನ್ನು ಅನುಭವಿಸಿದ್ದಾರೆ ಮತ್ತು ನಮಗೆ ಅರಿವಿಲ್ಲದ ಅನೇಕ ತೊಡರುಗಳ ಬಗ್ಗೆ ಅವರು ನಮ್ಮನ್ನು ಎಚ್ಚರಿಸಬಹುದು. ನಾವು ಕುರುಡರಾಗಿ ಅವರಿಗೆ ವಿಧೇಯರಾಗಬೇಕಾಗಿಲ್ಲ ಆದರೆ ಅವರ ದೈವೀಕ ಸಲಹೆ ನಮಗೆ ನೆರವಾಗಬಹುದು.

 

ನಾವು ಇತರ ಸಹೋದರರೊಡನೆ ಅನ್ಯೋನ್ಯತೆಯಿಂದಿರುವಾಗ ದೇವರು ಅನೇಕ ಸಲ ನಮ್ಮೊಡನೆ ಮಾತನಾಡುತ್ತಾರೆ. ಹೀಗೆ ದೇವರ ವಾಕ್ಯದ ಪ್ರಕಟನೆಗಾಗಿ ನಾವು ಕ್ರಿಸ್ತನ ಶರೀರದ ಇತರ ಸದಸ್ಯರೊಡನೆ ಹೊಂದಿಕೊಂಡಿರಬೇಕೆಂದು ಇದು ನಮಗೆ ತಿಳಿಸುತ್ತದೆ.

 

ನಾವು ಕಾಯಿಲೆಗೊಳಗಾದಾಗ, ಅಥವಾ ಯಾವುದೇ ಕಷ್ಟದಲ್ಲಿರುವಾಗ, ಪ್ರಮುಖವಾದದ್ದನ್ನು ದೇವರು ನಮಗೆ ಹೇಳಬಯಸುತ್ತಾರೆ.

 

ಇತರರ ಸೋಲುವಿಕೆಗಳ ಮೂಲಕ ದೇವರು ನಮ್ಮನ್ನು ಎಚ್ಚರಿಸುತ್ತಾರೆ. ಉಧಾಹರಣೆಗೆ, ದೇವರ ಸೇವಕನು  ಪಾಪದಲ್ಲಿ ಬಿದ್ದಾಗ, ಆ ವ್ಯಕ್ತಿಯ ಸೋಲಿನಿಂದ ನಾವು ಏನನ್ನು ಕಲಿಯಬಹುದು ಹಾಗೂ ನಾವು ನಮ್ಮನ್ನೇ ಹೇಗೆ ಉಳಿಸಿಕೊಳ್ಳಬಹುದೆಂಬುದಾಗಿ ನಾವು ಕೇಳುವುದು ಒಳ್ಳೆಯದು (ನಾವು ಪ್ರತಿಯೊಬ್ಬರೂ ಬಲಹೀನರು) .

 

ಎಲ್ಲೋ ಕೆಟ್ಟದ್ದನ್ನು ಮಾಡಿದುದರ ಬಗ್ಗೆ ಅಥವಾ ಎಲ್ಲೋ ನಡೆದಿರುವ ಅಪಘಾತಗಳ ಸುದ್ದಿಯನ್ನು ನಾವು ಕೇಳಿದಾಗ ಕೂಡ ದೇವರ ನಮ್ಮೊಡನೆ ಮಾತಾಡಬಹುದು. ಜನರು ಪಿಲಾತನು ಕೆಲವು ಯೂದರನ್ನು ಕೊಂದ  ಮತ್ತು ಸಿಲೋಮಿನಲ್ಲಿ ಗೋಪುರವೊಂದು ಬಿದ್ದು ಕೆಲವು ಜನರನ್ನು ಕೊಂದ ಘಟನೆಗಳನ್ನು  ಜನರು ಏಸುವಿಗೆ ಹೇಳಿದಾಗ ಅವರು ಮಾನಸಾಂತರ ಹೊಂದಬೇಕೆಂದು ಯೇಸು ಅವರಿಗೆ ಹೇಳಿದನು. ಯಾಕೆಂದರೆ ಅಂಥಹ ಘಟನೆಗಳು ಯಾರಿಗೂ ಸಂಭವಿಸಬಹುದು (ಲೂಕ 13:1-4).

 

ಮನಬಂದಂತೆ (ಗೊತ್ತುಗುರಿಯಿಲ್ಲದೆ) ಬೈಬಲನ್ನು ತೆರೆದು  ನೀನು ನೋಡುವ ಮೊದಲ ವಚನವನ್ನು ಓದುವುದರ ಮೂಲಕ ದೇವರು ಏನು ಹೇಳುತ್ತಾರೆಂದು ಕಂಡುಕೊಳ್ಳುವುದರ ಬಗ್ಗೆ  ನಾನು ಎಚ್ಚರಿಕೆಯ ಮಾತನ್ನು ಹೇಳಲಿಚ್ಚಿಸುತ್ತೇನೆ.

 

ನೀನು ಒಬ್ಬ ನಿರ್ದಿಷ್ಟ ಹುಡುಗಿಯನ್ನು ಮದುವೆಯಾಗಲು ತವಕಿಸುವುದಾದರೆ, ನೀನು ಗೊತ್ತುಗುರಿಯಿಲ್ಲದೆ ಬೈಬಲನ್ನು ತೆರೆಯಬಹುದು ಮತ್ತು ನಿನ್ನ ನಿರ್ಧಾರವನ್ನು ದೃಢಪಡಿಸುವ ವಚನವನ್ನು ಕಂಡುಕೊಳ್ಳಬಹುದು. ಹಾಗೂ ನೀನು ಅದನ್ನು ಪಡೆಯದಿದ್ದರೆ, ನಿನಗೆ ಬೇಕಾದ ವಚನವನ್ನು ಪಡೆಯುವ ತನಕ ನೀನು ಬೈಬಲನ್ನು ತೆರೆಯಬಹುದು. ಈ ರೀತಿ ನಿನ್ನನ್ನು ನೀನೇ ಮೋಸಗೊಳಿಸಬಹುದು. 

   

ದೇವರ ಇಚ್ಚೆಯನ್ನು ಈ ರೀತಿ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಒಬ್ಬಾತನ ಕಥೆಯನ್ನು ನಾನು ಕೇಳಿದ್ದೇನೆ. ಅವನು ಬೈಬಲನ್ನು ಮನಬಂದಂತೆ ತೆರೆದಾಗ, ಈ ರೀತಿ ಓದಿದನು: "ಅವನು ಹೊರಟುಹೋಗಿ ಉರ್ಲು ಹಾಕಿಕೊಂಡು ಸತ್ತನು" (ಮತ್ತಾ 27:5). ಅವನು ಪುನ: ಬೈಬಲನ್ನು ತೆರೆದಾಗ ಇದನ್ನು ಕಂಡನು, "ಹೋಗು ನೀನೂ ಅದರಂತೆ ಮಾಡು (ಲೂಕ 10:37). ಅವನು ಮೂರನೆಯ ಸಲ ಬೈಬಲನ್ನು ತೆರೆದಾಗ ಇದನ್ನು ಓದಿದನು, "ನೀನು ಮಾಡುವುದನ್ನು ಬೇಗನೇ ಮಾಡಿಬಿಡು" (ಯೋಹಾ 13:27) ಇದು ದೇವರ ಇಚ್ಚೆಯನ್ನು ಈ ರೀತಿ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಅವನಲ್ಲಿ ಸಂಪೂರ್ಣವಾಗಿ ಗುಣಪಡಿಸಿತು!

 

ನಾವು ಒತ್ತಡದಲ್ಲಿರುವಾಗ, ಕೆಲವೊಮ್ಮೆ ಗೊತ್ತುಗುರಿಯಿಲ್ಲದೆ ಬೈಬಲನ್ನು ತೆರೆದಾಗ ಒಂದು ವಚನದ ಮೂಲಕ ದೇವರು ನಮ್ಮನ್ನು ಪ್ರೋತ್ಸಾಹಿಸುವ ಸಂದರ್ಭಗಳಿರಬಹುದು. ನಾವು ಉತ್ತೇಜನವನ್ನು ಎದುರುನೋಡುತ್ತಿರುವಾಗ ಈ ಕ್ರಮವನ್ನು ಅನುಸರಿಸುವುದು ಸರಿ ಆದರೆ ಮಾರ್ಗದರ್ಶನವನ್ನು ಎದುರುನೋಡುತ್ತಿರುವಾಗ ಅಲ್ಲ.

 

ಪ್ರಿಯ ಸಹೋದರರೆ, ದೇವರ ಸ್ವರವನ್ನು  ಆಲಿಸುವ ಅಭ್ಯಾಸವನ್ನು ಬೆಳೆಸುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಇದು ನೀವು ಬೆಳೆಸಿಕೊಳ್ಳಬಹುದಾದ ಅತ್ಯಂತ ಪ್ರಮುಖವಾದ ಒಂದು ಅಭ್ಯಾಸ.