WFTW Body: 

ಲೂಕ 17:26-30 ರಲ್ಲಿ ಯೇಸುವು ನಮಗೆ ಹೇಳುವುದೇನೆಂದರೆ, ಕಡೆಯ ದಿನಗಳು ನೋಹ ಮತ್ತು ಲೋಟನ ದಿನಗಳಂತಾಗುವುವು. ಆ ದಿನಗಳಲ್ಲಿ ಜನರು ತಿಂದರು, ಕುಡಿದರು, ಖರೀದಿಸಿದರು, ಮಾರಿದರು, ನೆಟ್ಟರು, ಕಟ್ಟಿದರು, ಇವೇ ಮುಂತಾದವುಗಳನ್ನು ಮಾಡಿದರು. ಈ ಯಾವುವೂ ಪಾಪಗಳಲ್ಲವೆಂಬುದನ್ನು ನೀವು ಗಮನಿಸಿದ್ದೀರಾ? ಇವೆಲ್ಲ ನ್ಯಾಯಬದ್ಧ ಚಟುವಟಿಕೆಗಳು. ಹಾಗಿದ್ದಲ್ಲಿ ಅವೆಲ್ಲಾ ಪಾಪದ ದಿನಗಳ ಗುಣಲಕ್ಷಣಗಳೆಂದು ಯೇಸು ಯಾಕಾಗಿ ಹೇಳಿದನು? ಯಾಕೆಂದರೆ, ಆ ಕಾಲದ ಜನರು ಈ ನ್ಯಾಯಯುತ ಚಟುವಟಿಕೆಗಳಲ್ಲಿ ಎಷ್ಟೊಂದು ತಮ್ಮನ್ನೇ ತೊಡಗಿಸಿಕೊಂಡಿದ್ದರೆಂದರೆ, ದೇವರಿಗಾಗಿ ಅವರಲ್ಲಿ ಸಮಯವೇ ಇರಲಿಲ್ಲ. ಅವರು ತಮ್ಮ ಜೀವನದಿಂದ ದೇವರನ್ನು ಹೊರಗಿಡುವಂತೆ ಮಾಡವುದರಲ್ಲಿ ಸೈತಾನನು ಜಯಶಾಲಿಯಾದನು. ಇಂಥಹ ಜೀವನಕ್ರಮವು ಅನೈತಿಕ ಮತ್ತು ಭ್ರಷ್ಟ ಜೀವನದಲ್ಲಿ ಕೊನೆಗೊಂಡಿತು.

ಈ ಸ್ಥಿತಿಯನ್ನು, ಇಂದು ನಾವು ಜಗತ್ತಿನಲ್ಲಿ ಕಾಣುವ ಸ್ಥಿತಿಯೊಡನೆ ಹೋಲಿಸಿ ನೋಡಿ. ಮನೋಭಾವದಲ್ಲಿ ಇವೆರಡೂ ಒಂದಾಗಿರುವುದನ್ನೂ ಮತ್ತು ಇವೆರಡೂ ಒಂದೇ ರೀತಿಯಲ್ಲಿ ಕೊನೆಗಾಣುವುದನ್ನೂ ನಾವು ಕಾಣಬಹುದು. ಇಂದು ಪುರುಷರು ಮತ್ತು ಸ್ತ್ರೀಯರು ದೇವರ ಸ್ವರವನ್ನು ಕೇಳಲು ಸಮಯವಿಲ್ಲದವರಾಗಿದ್ದಾರೆ. ಇದು ಸರಿಯೋ ಅಲ್ಲವೋ ಎಂದು ನಿಮ್ಮ ಜೀವನವನ್ನೇ ಪರೀಕ್ಷಿಸಿ ನೋಡಿರಿ. ಪ್ರಾಪಂಚಿಕತೆಯ ಆತ್ಮವು ವಿಶ್ವಾಸಿಯ ಹೃದಯವನ್ನು ಹೊಕ್ಕಿದೆ. ನಮ್ಮ ಪೂರ್ವಜರಿಗೆ ಇಲ್ಲದಂತಹ ಅನೇಕ ಸಮಯವನ್ನು ಉಳಿಸುವ ಸಾಧನಗಳನ್ನು ವಿಜ್ಞಾನವು ಕಂಡುಹುಡುಕಿದರೂ, ಮನುಷ್ಯನಿಗೆ ಇಂದು ಸಾಕಷ್ಟು ಸಮಯ ಇಲ್ಲ. ಇಂದು ನಾವು ಕಾರು, ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸಬಹುದು. ಆದರೆ ನಮ್ಮ ಪೂರ್ವಜರು ಪ್ರಾಣಿಗಳ ಸಹಾಯದಿಂದ ಅಥವಾ ತಮ್ಮ ಕಾಲಿನಿಂದ ನಡೆಯಬೇಕಾಗಿತ್ತು. ನಮ್ಮ ಪೂರ್ವಜರು ದೈನಂದಿನ ಅನೇಕ ಕೆಲಸಗಳನ್ನು ಮಾಡಲು ತುಂಬಾ ಸಮಯ ಕಳೆಯಬೇಕಾಗಿತ್ತು ಆದರೆ ನಾವು ಅವನ್ನು ಇಂದು ಅನೇಕ ರೀತಿಯ ಯಂತ್ರಗಳ ಮೂಲಕ ಮಾಡಬಹುದು. ಅಂದು ಹಾಗಿದ್ದಾರೂ ಅವರಲ್ಲಿ ಅನೇಕರಿಗೆ ದೇವರಿಗಾಗಿ ಸಮಯವಿತ್ತು. ಯಾಕೆ? ಯಾಕೆಂದರೆ ಅವರು ತಮ್ಮ ಆಯ್ಕೆಗಳನ್ನು ಸರಿಯಾಗಿ ಮಾಡಿದ್ದರು. ಅವರು ದೇವರಿಗೆ ಬೇರೆ ಎಲ್ಲದಕ್ಕಿಂತಲೂ ಪ್ರಥಮ ಸ್ಥಾನವನ್ನು ಕೊಟ್ಟಿದ್ದರು.

ನಾವು ಕರ್ತನಿಗಾಗಿ ಪರಿಣಾಮಕಾರಿಯಾದ ಸಾಕ್ಷಿಗಳಾಗಬೇಕಾದರೆ, ಕರ್ತನ ಪಾದದ ಬಳಿ ಸಮಯವನ್ನು ಕಳೆದು ಆತನ ಸ್ವರವನ್ನು ಕೇಳಿಸಿಕೊಳ್ಳುವುದು ಅತೀ ಅವಶ್ಯಕ. ಬೋಧನೆ ಮಾಡಬೇಕೆಂಬ ಆಸೆಯಿರುವವರು ಇಂದು ಅನೇಕರಿದ್ದಾರೆ. ಆದರೆ ನಿತ್ಯವೂ ಕರ್ತನ ಸ್ವರವನ್ನು ಕೇಳುವ ಅಭ್ಯಾಸವನ್ನು ಅವರು ರೂಡಿಸಿಕೊಂಡಿರುವುದಿಲ್ಲ. ಅದರ ಫಲಿತಾಂಶವೇನೆಂದರೆ, ಇಂದು "ದೇವರ ವಾಕ್ಯ"ವು ಬಹಳಷ್ಟು ಕಡಿಮೆಯಾಗಿ ಮನುಷ್ಯನ ವಾಕ್ಯ(ಮಾತು)ಗಳೇ ಅಧಿಕವಾಗಿವೆ. "ಕರ್ತನ ವಾಕ್ಯ ಅವನಲ್ಲಿದೆ" ( 2 ಅರಸು. 3:12) ಎಂಬ ಮಾತನ್ನು ಇಂದು ಕೆಲವೇ ಬೋಧಕರ ಬಗ್ಗೆ ಮಾತ್ರ ಹೇಳಬಹುದಾಗಿದೆ.

ಆದಾಗ್ಯೂ, ಸತ್ಯವೇದದಲ್ಲಿ, ನಿಜವಾದ ದೇವರ ಸೇವಕನನ್ನು ಗುರುತಿಸುವ ಚಿಹ್ನೆ ಇದಾಗಿತ್ತು. ದೇವರೇ ತನಗೆ ಏನನ್ನು ಹೇಳುತ್ತಾರೆಂಬುದನ್ನು ಕೇಳಿಸಿಕೊಳ್ಳುವುದರಲ್ಲಿ ಸಮಯವನ್ನು ಕಳೆಯದೆ, ದೇವರ ಬಗ್ಗೆ ಇತರರಿಗೆ ಹೇಳುವ ಹಕ್ಕು ಯಾವೊಬ್ಬನಿಗೂ ಇಲ್ಲ. ಇದು ಖಾಸಗಿಯಾಗಿ, ತಮ್ಮ ಸಾಕ್ಷಿ ಕೊಡುವುದಕ್ಕೂ ಮತ್ತು ಸಾರ್ವಜನಿಕವಾಗಿ ಬೋಧಿಸುವುದಕ್ಕೂ ಅನ್ವಯಿಸುತ್ತದೆ. ಮೋಶೆಯ ಬಗ್ಗೆ ಹೇಳಿರುವುದೇನೆಂದರೆ, ಅವನು ಕರ್ತನ ಸನ್ನಿಧಿಗೆ ಹೋಗಿ, ನಂತರ, "ಇಸ್ರಾಯೇಲಿನ ಮಕ್ಕಳಿಗೆ, ಕರ್ತನು ಆಜ್ಞಾಪಿಸಿದ್ದನ್ನೇ ಮಾತನಾಡಿದನು" ಎಂಬುದಾಗಿ (ವಿಮೋ. 34:34). ತಾನು ದೇವರ ವಾಕ್ಯವನ್ನು ದಿನಾಲೂ ಧ್ಯಾನಿಸಿದರೆ ಮಾತ್ರ ತನ್ನ ಜೀವನವು ಯಶಸ್ವಿಯಾಗುವುದೆಂದು ಯೆಹೋಶುವನಿಗೆ ಹೇಳಲಾಗಿತ್ತು (ಯೆಹೋ. 1:8). ದೇವರು ಮಾತನಾಡುವುದನ್ನು ಕೇಳಲು ತಾಳ್ಮೆಯಿಂದ ಕಾದು, ನಂತರ ಮಾತನಾಡಿದ ಸಮುವೇಲನು ಇನ್ನೊಂದು ಉಧಾಹರಣೆ. ಇದರ ಫಲಿತಾಂಶವೆಂದರೆ, "ಅವನ ಯಾವೊಂದು ಮಾತೂ ನೆಲಕ್ಕೆ ಬಿದ್ದು ವ್ಯರ್ಥವಾಗಲು" ಕರ್ತನು ಬಿಡಲಿಲ್ಲ (1ಸಮು. 3:19).

ಯೆಶಾಯ 50:4 ರಲ್ಲಿ ಪ್ರವಾದಿಯು ಯೇಸುವಿನ ಬಗ್ಗೆ ಮಾಡಿದ ಉಲ್ಲೇಖದಲ್ಲಿ, ಹೇಳಲ್ಪಟ್ಟಿರುವುದೇನೆಂದರೆ, ಬೆಳಿಗ್ಗೆಯಿಂದ ಬೆಳಿಗ್ಗೆ (ಪ್ರತೀ ಬೆಳಿಗ್ಗೆ), ದೇವರು ಆತನೊಡನೆ ಮಾತನಾಡಿದನು. ಯಾಕೆಂದರೆ ತನ್ನ ತಂದೆಯ ಸ್ವರವನ್ನು ಕೇಳಲು ಆತನು ತನ್ನ ಕಿವಿಗಳನ್ನು ತರಬೇತುಗೊಳಿಸಿದ್ದನು. ಇದರ ಫಲಿತಾಂಶವೆಂದರೆ, ಅದೇ ಉಲ್ಲೇಖ ನಮಗೆ ಹೇಳುವಂತೆ, ಯಾವುದೇ ಅಗತ್ಯದಲ್ಲಿ ತನ್ನ ಬಳಿಗೆ ಬಂದ ಪ್ರತಿಯೊಬ್ಬರಿಗೆ ಅವನಲ್ಲಿ ದೇವರ ವಾಕ್ಯವೊಂದು ಸಿದ್ಧವಾಗಿತ್ತು. ಅವನು ನಿಜವಾಗಿಯೂ ಪರಿಪೂರ್ಣವಾಗಿ ದೇವರ ಬಾಯಿಯಾಗಿದ್ದನು. ದೇವರ ವಾಕ್ಯವನ್ನು ದಿನಾಲೂ ಕೇಳುವ ಅಭ್ಯಾಸವು ಯೇಸುವಿಗೆ ಅಗತ್ಯವಾಗಿದ್ದರೆ, ನಮಗೆ ಇನ್ನೆಷ್ಟು ಅದರ ಅವಶ್ಯಕತೆಯಿದೆ. ಈ ವಿಶಯದಲ್ಲಿ ನಾವು ಸೋತು ಹೋದರೆ, ಅಗತ್ಯವಿರುವವರಿಗೆ ನಾವು ಸಾಕಷ್ಟಾಗಿ ಸಹಾಯ ಮಾಡಲಾರೆವು. "ಶಿಷ್ಯನಂತೆ ಕೇಳಿಸಿಕೊಂಡಾಗ" ಮಾತ್ರ ನಾವು ಶಿಷ್ಯನಂಥಹ ನಾಲಿಗೆ"ಯನ್ನು ಪಡೆಯುವೆವು. ಇತರರಿಗೆ ಕಲಿಸಬೇಕಾದ ಅನೇಕರು, ಇಂದು ಇನ್ನೂ ಆತ್ಮಿಕ ಶಿಶುಗಳಂತಿರುವ ಕಾರಣವೇನೆಂದರೆ, ಅವರು, "ಈ ಒಂದು ವಿಷಯವನ್ನು" ಕಡೆಗಾಣಿಸಿದ್ದಾರೆ ಅಥವಾ ಇದರ ಬಗ್ಗೆ ಅವರಿಗೆ ಅರಿವಿಲ್ಲವಾಗಿದೆ.

ಸತ್ಯವೇದವನ್ನು ಓದುವುದು ಮಾತ್ರ ಕರ್ತನನ್ನು ಕೇಳಿಸಿಕೊಳ್ಳುವುದು ಎಂಬುದರ ಅರ್ಥವಲ್ಲ. ತಮ್ಮ ದಿನಚರಿಯಂತೆ ಅನೇಕರು ಸತ್ಯವೇದವನ್ನು ಓದುತ್ತಾರೆ. ಕರ್ತನನ್ನು ಕೇಳಿಸಿಕೊಳ್ಳುವುದೆಂದರೆ ಅದಕ್ಕಿಂತಲೂ ಹೆಚ್ಚಾದದ್ದು. ಅದೇನೆಂದರೆ, ನಾವು ಕರ್ತನ ಸಂದೇಶವನ್ನು ಪಡೆಯುವ ತನಕ ದೇವರ ವಾಕ್ಯವನ್ನು ಧ್ಯಾನಿಸುವುದು. ಈ ರೀತಿಯಾಗಿ ಮಾತ್ರ ನಮ್ಮ ಮನಸ್ಸುಗಳು ನವೀಕರಿಸಲ್ಪಡುವುವು ಮತ್ತು ನಮ್ಮ ಮನಸ್ಸುಗಳೂ ಕರ್ತನ ಮನಸ್ಸಿನಂತಾಗುವುವು. ಆದರೆ ದೇವರ ವಾಕ್ಯವನ್ನು ಓದುವ ಹಲವರು ಈ ರೀತಿಯಾಗಿ ದ್ಯಾನಿಸಲು ಅರಿಯದವರಾಗಿದ್ದಾರೆ.

ಮರಿಯಳು ಯೇಸುವಿನ ಪಾದದ ಬಳಿ ಕುಳಿತುಕೊಂಡಿರುವ ಉದಾಹರಣೆಯಿಂದ ನಾವು ಕಡೇ ಪಕ್ಷ ಮೂರು ಆತ್ಮಿಕ ಸತ್ಯಗಳನ್ನು ಕಲಿಯಬಹುದು.

ಕುಳಿತುಕೊಂಡಿರುವುದು - ನಡೆಯುವುದು, ಓಡುವುದು, ಅಥವಾ ನಿಂತುಕೊಂಡಿರುವುದು ಇವೆಲ್ಲವುಗಳಿಗಿಂತ ಮೊದಲನೆಯದಾಗಿ ಇದೊಂದು ವಿಶ್ರಾಂತಿಯ ಚಿತ್ರ. ಇದು ನಮಗೆ ತಿಳಿಸುವುದೇನೆಂದರೆ, ನಾವು ದೇವರು ನಮ್ಮೊಡನೆ ಮಾತನಾಡುವುದನ್ನು ಕೇಳುವ ಮೊದಲು, ನಮ್ಮ ಹೃದಯಗಳು ಮತ್ತು ನಮ್ಮ ಮನಸ್ಸು ವಿಶ್ರಾಂತಿಯಲ್ಲಿರಬೇಕು ಎಂದು. ಅರಿಕೆ ಮಾಡದ ಪಾಪವು ಮೊದಲನೆಯದನ್ನು ತಡೆಯುತ್ತದೆ ಮತ್ತು ಈ ಜಗತ್ತಿನ ಶ್ರೀಮಂತಿಕೆಯಲ್ಲಿ ಅತಿಯಾಗಿ ತೊಡಗಿಸಿಕೊಂಡಿರುವುದು ಎರಡನೆಯದಕ್ಕೆ ಅಡ್ಡಿಯಾಗುತ್ತದೆ. ನಮ್ಮ ಆತ್ಮಸಾಕ್ಷಿ ಗೊಂದಲದಲ್ಲಿದ್ದಾಗ ಮತ್ತು ನಮ್ಮ ಮನಸ್ಸು ಚಿಂತೆ ಅಥವಾ ಭಯದಲ್ಲಿ ತುಂಬಿರುವಾಗ ನಾವು ದೇವರ "ಶಾಂತ ಮತ್ತು ಸಣ್ಣ ಸ್ವರವನ್ನು" ಹೇಗೆ ಕೇಳಬಹುದು? ಕೀರ್ತನೆ 46:10 ನಮಗೆ ಹೇಳುವುದೇನೆಂದರೆ, ದೇವರನ್ನು ನಾವು ತಿಳಿಯಬೇಕಾದರೆ ನಾವು ಶಾಂತವಾಗಿರಲೇಬೇಕು ಎಂಬುದಾಗಿ.

ಎರಡನೆಯದಾಗಿ, ಒಬ್ಬ ವ್ಯಕ್ತಿಯ ಪಾದದ ಬಳಿ ಕುಳಿತುಕೊಂಡಿರುವುದು ದೀನತೆಯ ಚಿತ್ರ. ಯೇಸುವಿನಂತೆ, ಮರಿಯಳು ಅವನ ಮಟ್ಟದಲ್ಲೇ ಒಂದು ಕುರ್ಚಿಯ ಮೇಲೆ ಕುಳಿತುಕೊಂಡಿರಲಿಲ್ಲ ಬದಲಾಗಿ ಕೆಳಮಟ್ಟದಲ್ಲಿ ಕುಳಿತುಕೊಂಡಿದ್ದಳು. ನ್ಯಾಯತೀರ್ಪಿನ ಹೊರತಾಗಿ, ಒಬ್ಬ ಅಹಂಕಾರಿಯೊಡನೆ ದೇವರು ಮಾತನಾಡುವುದಿಲ್ಲ. ತನ್ನ ಮುಂದೆ ಮಗುವಿನಂತಾಗುವ ಒಬ್ಬ ದೀನ ವ್ಯಕ್ತಿಯೊಡನೆ ಅವನಿಗೆ ಕೃಪೆಯನ್ನು ಕೊಡುವುದಕ್ಕಾಗಿ ಮತ್ತು ಅವನೊಡನೆ ಮಾತನಾಡುವುದಕ್ಕಾಗಿ ದೇವರು ಸದಾ ಸಿದ್ಧನಾಗಿರುತ್ತಾನೆ (ಮತ್ತಾ. 11:25).

ಮೂರನೆಯದಾಗಿ, ಮರಿಯಳು ಕುಳಿತಂತೆ ಕುಳಿತಿರುವುದು ಅಧೀನತೆಯ ಚಿತ್ರ. ಇದು ಗುರುವಿನ ಸನ್ನಿಧಿಯಲ್ಲಿರುವ ಶಿಷ್ಯನ ಮನೋಭಾವ. ನಮಗೆ ಮಾಹಿತಿಯನ್ನು ಕೊಡುವುದಕ್ಕಾಗಿ ಅಥವಾ ನಮ್ಮ ಕುತೂಹಲವನ್ನು ತೃಪ್ತಿಪಡಿಸುವುದಕ್ಕಾಗಿ ದೇವರು ತನ್ನ ವಾಕ್ಯದ ಮೂಲಕ ಮಾತನಾಡಲಿಲ್ಲ. ಅವನ ವಾಕ್ಯವು ಅವನ ಹೃದಯದ ಆಸೆಯನ್ನು ವ್ಯಕ್ತಪಡಿಸುತ್ತದೆ. ನಾವು ವಿಧೇಯರಾಗುವುದಕ್ಕಾಗಿ ಅವನು ನಮ್ಮೊಡನೆ ಮಾತನಾಡುತ್ತಾನೆ. ಯೋಹಾನ 7:17ರಲ್ಲಿ ಯೇಸುವು ಸ್ಪಷ್ಟಪಡಿಸಿದ್ದೇನೆಂದರೆ, ನಾವು ದೇವರ ಚಿತ್ತವನ್ನು ಮಾಡಲು ಮನಸ್ಸುಳ್ಳವರಾದರೆ, ನಾವು ದೇವರ ಚಿತ್ತವನ್ನು ಕಂಡುಕೊಳ್ಳುವೆವು. ದೇವರ ವಾಕ್ಯಕ್ಕೆ ನಮ್ಮ ವಿಧೇಯತೆಯು ನಮ್ಮ ಅಧೀನತೆಯಲ್ಲಿ ತೋರ್ಪಡಿಸಲ್ಪಡುತ್ತದೆ.

ಅನೇಕ ಕ್ರೈಸ್ತರು ಸತ್ಯವೇದವನ್ನು ಓದುವುದರಲ್ಲಿ ತುಂಬಾ ವರ್ಷಗಳನ್ನು ಕಳೆಯುತ್ತಾರೆ. ಆದರೆ ಸತ್ಯವೇದದ ಮೂಲಕ ದೇವರು ಮಾತನಾಡುವುದನ್ನು ಅವರು ಕೇಳಿಸಿಕೊಳ್ಳುವುದಿಲ್ಲ. ಆದರೂ ಅವರು ತುಂಬಾ ತೃಪ್ತಿಹೊಂದಿದವರಂತೆ ಕಾಣುತ್ತಾರೆ. ನೀವು ನಿತ್ಯವೂ ದೇವರ ಸ್ವರವನ್ನು ಕೇಳುತ್ತೀರಾ? ಇಲ್ಲದಿದ್ದಲ್ಲಿ ಅದಕ್ಕೆ ಕಾರಣವೇನು? ಕೇಳಿಸಿಕೊಳ್ಳುವವರೊಡನೆ ದೇವರು ಮಾತನಾಡುತ್ತಾನೆ. ನೀನು ಕೇಳದಂತೆ ನಿನ್ನ ಆತ್ಮದ ಕಿವಿಗಳನ್ನು ತಡೆಯುವುದೇನು? ಅವನ ಮುಂದೆ ಶಾಂತತೆಯಿಂದ ಇಲ್ಲದಿರುವುದೇ ಅಥವಾ ದೀನತೆಯ ಕೊರತೆಯೇ ಅಥವಾ ಅವನು ಅವಾಗಲೇ ಹೇಳಿರುವುದಕ್ಕೆ ನೀನು ವಿಧೇಯನಾಗದಿರುವುದು ಇದಕ್ಕೆ ಕಾರಣವಾಗಿರಬಹುದೇ? ಅದೇನಾಗಿದ್ದರೂ, ಶಾಶ್ವತವಾಗಿ ಮತ್ತು ಒಂದೇ ಸಲಕ್ಕೆ ಅದು ಪರಿಹಾರವಾಗಲಿ(ಕೊನೆಗೊಳ್ಳಲಿ). ಸಮುವೇಲನ ಪ್ರಾರ್ಥನೆಯನ್ನು ನೀನು ಪ್ರಾರ್ಥಿಸು, "ಮಾತಾಡಿ ಸ್ವಾಮಿ. ನಿನ್ನ ಸೇವಕನು ಕೇಳುತ್ತಾನೆ". ನಂತರ ನಿನ್ನ ಸತ್ಯವೇದವನ್ನು ತೆರೆ ಮತ್ತು ಕರ್ತನ ಮುಖವನ್ನು ಆಸಕ್ತಿಯಿಂದ ಹುಡುಕು. ಆಗ ನೀನೂ ಆತನ ಸ್ವರವನ್ನು ಕೇಳುವಿ.