ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ನಾವು ಪ್ರಕಟನೆ 12:10ರಲ್ಲಿ, ಸೈತಾನನು ’ಸಹೋದರರ ಮೇಲೆ ದೂರು ಹೇಳುವ ದೂರುಗಾರನು’ ಮತ್ತು ಅವನು ಹಗಲಿರುಳು ದೇವರ ಮುಂದೆ ದೂರು ಹೇಳುತ್ತಾನೆ ಎಂಬುದಾಗಿ ಓದುತ್ತೇವೆ. ಇದು ಸೈತಾನನ ಪೂರ್ಣಾವಧಿಯ ಸೇವೆಯಾಗಿದೆ. ಈ ಸೇವೆಯಲ್ಲಿ ಆತನ ಜೊತೆಯಲ್ಲಿ ಅನೇಕ ಕಾರ್ಯಕರ್ತರು - ಆತನ ದುರಾತ್ಮಗಳು ಮತ್ತು ಮನುಷ್ಯರು - ಸೇರಿರುತ್ತಾರೆ. ಒಂದು ಬೇಸರದ ಸಂಗತಿ, ಅನೇಕ ಕ್ರೈಸ್ತ ವಿಶ್ವಾಸಿಗಳು ಸಹ ಈ ಆಪಾದಿಸುವಂತಹ ಸೇವೆಯಲ್ಲಿ ಸೈತಾನನ ಸಹ-ಕಾರ್ಯಕರ್ತರಾಗಿದ್ದಾರೆ.

ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪು ಮಾಡುವದಕ್ಕಾಗಿ ಕಳುಹಿಸಲಿಲ್ಲ (ಯೋಹಾನ 3:17). ನಮ್ಮ ಕರ್ತನು ನಮಗೋಸ್ಕರ ಯಾವಾಗಲೂ ವಿಜ್ಞಾಪನೆ ಮಾಡುವುದಕ್ಕೆ ಬದುಕುವದರಿಂದ, ಆತನು ನಮ್ಮನ್ನು ಸಂಪೂರ್ಣವಾಗಿ ರಕ್ಷಿಸಲು ಶಕ್ತನಾಗಿರುತ್ತಾನೆ (ಇಬ್ರಿಯ 7:25). ಸೈತಾನನ ಸೇವೆಯು ಆಪಾದನೆ ಮತ್ತು ತೀರ್ಪು ಮಾಡುವ ಸೇವೆಯಾಗಿದ್ದು, ಇದರಲ್ಲಿ ನಾವು ಯಾವುದೇ ರೀತಿಯ ಪಾತ್ರ ವಹಿಸಬಾರದು. ಮತ್ತೊಂದು ಕಡೆ, ನಮ್ಮ ಕರ್ತನದು ವಿಜ್ಞಾಪನೆ ಮಾಡಿ ರಕ್ಷಣೆ ನೀಡುವಂತಹ ಒಂದು ಪೂರ್ಣಾವಧಿಯ ಸೇವೆಯಾಗಿದೆ. ಇದೇ ನಾವು ಹೊಂದಿರಬೇಕಾದ ಸೇವೆಯಾಗಿದೆ.

ದೇವರು ಈ ಸೇವೆಯಲ್ಲಿ ನಮ್ಮನ್ನು ಯೇಸುವಿನ ವಧುವಾಗಿ ಮತ್ತು ಆತನ "ಸಹಾಯಕರಾಗಿ" ಇರುವಂತೆ ಆತನಿಗೆ ಕೊಟ್ಟಿದ್ದಾನೆ. ಹಾಗಾಗಿ ಈ ವಿಜ್ಞಾಪನಾ ಸೇವೆಯಲ್ಲಿ ನಾವು ನಮ್ಮ ಕರ್ತನ ಸಹ-ಕಾರ್ಯಕರ್ತರು ಆಗಬೇಕು. ಹೇಗೆ ತಂದೆಯು ಯೇಸುವನ್ನು ಈ ಲೋಕಕ್ಕೆ ಕಳುಹಿಸಿದ್ದಾನೋ - ಲೋಕವನ್ನು ಖಂಡಿಸುವದಕ್ಕಾಗಿ (ತೀರ್ಪು, ಆಪಾದನೆ ಮಾಡಲು) ಅಲ್ಲ, ಆದರೆ ರಕ್ಷಣೆಗಾಗಿ - ಹಾಗೆಯೇ ಆತನು ನಮ್ಮನ್ನು ಸಹ ಈ ಲೋಕಕ್ಕೆ ಕಳುಹಿಸಿರುವದು ಇತರರ ಖಂಡನೆ, ತೀರ್ಪು ಅಥವಾ ಆಪಾದನೆಗಾಗಿ ಅಲ್ಲ, ಆದರೆ ಅವರ ರಕ್ಷಣೆಗಾಗಿ (ಯೋಹಾನ 20:21). ಆದುದರಿಂದ ನಾವು "ನಿಂದನೆಯ ಆತ್ಮ"ದಿಂದ (ಅದು ಸೈತಾನನ ಆತ್ಮ) ಸಂಪೂರ್ಣವಾಗಿ ಬಿಡಿಸಿಕೊಂಡು, ಅದರ ಜಾಗದಲ್ಲಿ "ವಿಜ್ಞಾಪನೆಯ ಆತ್ಮ"ವನ್ನು (ಅದು ಕ್ರಿಸ್ತನ ಆತ್ಮ) ಇರಿಸುವದಾದರೆ ಮಾತ್ರ, ಇಂದು ಈ ಲೋಕದ ದೇವ-ಕಾರ್ಯದಲ್ಲಿ ನಾವು ದೇವರ ಕೈಯಲ್ಲಿ ಯಶಸ್ವೀ ಉಪಕರಣಗಳು ಆಗಬಹದು.

ನೀವು ಒಬ್ಬನ ಕುರಿತಾಗಿ ಕ್ರಮವಾಗಿ ಪ್ರಾರ್ಥಿಸುತ್ತಿದ್ದರೆ, ಅವನ ಬಗ್ಗೆ ಕೆಟ್ಟ ಮಾತನಾಡುವದು ಅಥವಾ ಆಪಾದನೆ ಮಾಡುವದು ಅಸಾಧ್ಯವಾದ ಸಂಗತಿ. ಇದು ನಿಜವೇ ಎಂದು ಪರೀಕ್ಷಿಸಿ ನೋಡಿ: ನೀವು ಯಾರನ್ನು ಆಪಾದಿಸುತ್ತಿರೋ, ಅವರಿಗೋಸ್ಕರ ಯಾವತ್ತೂ ಪ್ರಾರ್ಥಿಸುವುದಿಲ್ಲ. ಹೌದೇ?? ಆದುದರಿಂದಲೇ ಈ "ಅಪಾದನೆಯ ಆತ್ಮವೆಂಬ ಕ್ಯಾನ್ಸರ್" ನಿಮ್ಮನ್ನು ಎಂದಿಗೂ ಬಿಡುವಂತೆ ಕಾಣುವದಿಲ್ಲ, ಬದಲಾಗಿ - ಯಾವುದೇ ಕ್ಯಾನ್ಸರ್ ಖಾಯಿಲೆಯಂತೆ - ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ! ಇಂದು ಬಹಳಷ್ಟು ವಿಶ್ವಾಸಿಗಳ ಜೀವನ ಮತ್ತು ಹೃದಯಗಳಲ್ಲಿ ಸೈತಾನನ ಅಪಾದನೆಯ ಆತ್ಮಗಳಿಗೆ ಸುಲಭ ಪ್ರವೇಶ ದೊರೆತಿದ್ದು, ಕ್ರೈಸ್ತಲೋಕದಲ್ಲಿ ಸೈತಾನನು ಸಡಗರದ ದಿನವನ್ನು ಕಾಣುತ್ತಿದ್ದಾನೆ.

ನಾವು ಪ್ರತಿಯೊಬ್ಬರೂ ಈ ವಿಜ್ಞಾಪನೆಯ ಸೇವೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದನ್ನು ಬಿಟ್ಟರೆ ಸಭೆಯಲ್ಲಿ ಸೈತಾನನ್ನು ಜಯಿಸುವ ಬೇರೆ ಯಾವ ಮಾರ್ಗವೂ ಇಲ್ಲ. ನಮ್ಮ ಕರ್ತನು, ನಮ್ಮನ್ನು ಹಿಂಸೆ ಪಡಿಸುವವರನ್ನು ಕ್ಷಮಿಸುವದು ಮಾತ್ರವಲ್ಲ, ಜೊತೆಗೆ ಅವರಿಗೋಸ್ಕರ ಪ್ರಾರ್ಥಿಸಿರಿ, ಎಂದು ಹೇಳಿದ್ದಾನೆ (ಮತ್ತಾಯ 5:44). ನಾವು ಅವರಿಗಾಗಿ ಪ್ರಾರ್ಥಿಸದೆ ಕೇವಲ ಅವರನ್ನು ಕ್ಷಮಿಸಿದರೆ, ಆಗ ಅಪಾದನೆಯ ಆತ್ಮವು ನಮ್ಮ ಜೀವನವನ್ನು ಪುನಃ ಪ್ರವೇಶಿಸುವ ಸಾಧ್ಯತೆ ಇದೆ. ನಾವು ಒಬ್ಬರು ಇನ್ನೊಬ್ಬರಿಗೋಸ್ಕರ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಪ್ರಾರಂಭಿಸೋಣ, ಏಕೆಂದರೆ ಇದರ ಮೂಲಕವೇ ಎಲ್ಲಾ ನಿಜವಾದ ವಿಜ್ಞಾಪನೆಯ ಆರಂಭವಾಗುವದು. “ನೀವು ಒಂದೇ ದೇಹಕ್ಕೆ ಸೇರಿದವರಾದದರಿಂದ, (ಒಬ್ಬರಿಗೊಬ್ಬರು) ಕೃತಜ್ಞತೆಯುಳ್ಳವರಾಗಿರ್ರಿ” (ಕೊಲಸ್ಸೆಯವರಿಗೆ 3:15).

ನಾವು ಪೌಲನ ಪತ್ರಗಳಲ್ಲಿ ಆತನ ಈ ವಾಡಿಕೆಯನ್ನು ಕಾಣುತ್ತೇವೆ: ಆತನು ಕ್ರೈಸ್ತರಿಗಾಗಿ - ರೋಮ, ಕೊರಿಂಥ, ಎಫೆಸ, ಫಿಲಿಪ್ಪಿ, ಕೊಲೊಸ್ಸೆ ಮತ್ತು ಥೆಸಲೋನಿಕದವರು, ಅಲ್ಲದೆ ತಿಮೊಥೆಯ ಮತ್ತು ಫಿಲೆಮೋನರಿಗಾಗಿಯೂ - ತಪ್ಪದೆ ದೇವರಿಗೆ ಕೃತಜ್ಞತೆ ಸಲ್ಲಿಸುವದರ ಮೂಲಕ ತನ್ನ ಪತ್ರಗಳನ್ನು ಆರಂಭಿಸಿದನು (ರೋಮಾ. 1:8; 1 ಕೊರಿಂಥ. 1:4; ಎಫೆಸ. 1:15,16; ಪಿಲಿಪ್ಪಿ. 1:3; ಕೊಲಸ್ಸೆ. 1:3; 1 ಥೆಸಲೋನಿಕ. 1:2; 2 ಥೆಸಲೋನಿಕ. 1:3; 2 ತಿಮೊಥೆಯ 1:3; ಫಿಲೆಮೋನ. 1:4). ಪೌಲನಂತಹ ದೈವಿಕ ಮನುಷ್ಯನಿಗೆ ನಿಸ್ಸಂದೇಹವಾಗಿ ಆ ಎಲ್ಲಾ ಕ್ರೈಸ್ತರಲ್ಲಿ ಅನೇಕ ತಪ್ಪುಗಳು ಸುಲಭವಾಗಿ ಕಾಣಿಸುತ್ತಿದ್ದವು. ಆದರೆ ಆತನು ಅವರನ್ನು ದೂರುವ ದೂರಗಾರನೊಂದಿಗೆ ಕೈಗೂಡಿಸಲು ನಿರಾಕರಿಸಿದನು. ದೇವರು ಆತನನ್ನು ಕಳುಹಿಸಿದ್ದು ಅವರ ಸಹಾಯ ಮತ್ತು ರಕ್ಷಣೆಗಾಗಿಯೇ ಹೊರತು, ಅವರನ್ನು ದೂರಲು ಮತ್ತು ಆಪಾದಿಸಲಿಕ್ಕಾಗಿ ಅಲ್ಲ.

ಕೊರಿಂಥದವರಲ್ಲಿ ಅನೇಕ ಗಂಭೀರ ಸಮಸ್ಯೆಗಳಿದ್ದರೂ ಸಹ, ಪೌಲನು ಅವರಿಗೆ ಬರೆದ ಪತ್ರದ ಆರಂಭದಲ್ಲಿ ತಾನು ಅವರಲ್ಲಿ ನೋಡಿದ ಒಳ್ಳೆಯದಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಇದರ ನಂತರವಷ್ಟೇ, ಆತನು ಅವರನ್ನು ತಿದ್ದಿದನು. ಬಹುಶ: ಇದರಿಂದಾಗಿಯೇ ಕೊರಿಂಥದ ಕ್ರೈಸ್ತರು ಪೌಲನ ತಿದ್ದುವಿಕೆಯನ್ನು ಒಡನೆಯೇ ಸ್ವೀಕರಿಸಿದರು (2 ಕೊರಿಂಥ 7:8,9). ಬಹುಶ: ಇದಕ್ಕಾಗಿಯೇ ಬೇರೆಯವರು ನಮ್ಮ ತಿದ್ದುವಿಕೆಯನ್ನು ಮತ್ತು ಒತ್ತಾಯದ ಬುದ್ಧಿವಾದವನ್ನು ಸ್ವೀಕರಿಸುವದಿಲ್ಲ - ಏಕೆಂದರೆ ನಾವು ಯಾವತ್ತೂ ಅವರ ಒಳ್ಳೆಯ ಗುಣಗಳನ್ನು ಗುರುತಿಸಿ ಮೆಚ್ಚಿಲ್ಲ.

ನೀವು ತಂದೆತಾಯಿಗಳು ಆಗಿದ್ದರೆ, ಒಂದು ವಿಷಯವನ್ನು ಗಮನಿಸಿ: ನೀವು ನಿಮ್ಮ ಮಕ್ಕಳಲ್ಲಿ ಕಂಡಿರುವ ಒಳ್ಳೆಯತನವನ್ನು ಮೆಚ್ಚದೆ, ಅವರ ಸೋಲುಗಳು ಮತ್ತು ತಪ್ಪುಗಳನ್ನು ತಕ್ಷಣ ಗುರುತಿಸಿದ್ದೀರಿ ಎನ್ನುವದು ನಿಜವೇ? ನೀವು ಎಂದಾದರೂ ನಿಮ್ಮ ಮಕ್ಕಳನ್ನು ಮೆಚ್ಚಿ ಪ್ರೋತ್ಸಾಹದ ಮಾತುಗಳನ್ನು ಹೇಳಿದ್ದೀರಾ? ಅವರೊಂದಿಗೆ ಮೊಳಕಾಲೂರಿ, ಅವರಿಗಾಗಿ ದೇವರನ್ನು ಸ್ತುತಿಸಿದ್ದೀರಾ? ನೀವು ಅವರನ್ನು ಮೆಚ್ಚದೆ ಕೇವಲ ಟೀಕಿಸಿದ್ದಲ್ಲಿ, ನಿಮ್ಮ ಮಕ್ಕಳಲ್ಲಿ ಯಾವುದೇ ಒಳ್ಳೆಯ ಬದಲಾವಣೆ ಆಗದಿರುವದರಲ್ಲಿ ಆಶ್ಚರ್ಯವೇನಿಲ್ಲ!! ನೀವು ಏಕೆ ಇನ್ನೊಂದು ವಿಧಾನವನ್ನು - ಹೆಚ್ಚು ದೈವಿಕವಾದುದನ್ನು - ಬಳಸಿ ನೋಡಬಾರದು? ನಿಮ್ಮ ನಡತೆ ಬದಲಾದಾಗ, ನಿಮ್ಮ ಮಕ್ಕಳೂ ಸಹ ಬದಲಾಗುವದನ್ನು ನೀವು ಕಾಣುತ್ತೀರಿ. ಇದನ್ನು ಮಾಡಲು ಪ್ರಯತ್ನಿಸಿ ಮತ್ತು ಇದು ಸಫಲವಾಗುವದೋ, ಇಲ್ಲವೋ ಎಂದು ನೋಡಿರಿ.

ವಿಶ್ವಾಸಿಗಳಾದ ನಾವು ನಮ್ಮನ್ನು ಈ ರೀತಿಯಾಗಿ ಪ್ರಶ್ನಿಸಿಕೊಳ್ಳಬೇಕು: ಸೈತಾನನು ನಮಗೆ ಪದೇ ಪದೇ ಮನದಟ್ಟು ಮಾಡಿರುವಂತೆ, ನಾವು ಹಲವಾರು ವರ್ಷಗಳಿಂದ ಆಪಾದಿಸಿಕೊಂಡು ಬಂದಿರುವ ಆ ಎಲ್ಲಾ ಕ್ರೈಸ್ತ ವಿಶ್ವಾಸಿಗಳಲ್ಲಿ ಒಳ್ಳೇಯದು ಏನೂ ಇಲ್ಲ ಎನ್ನುವದು ನೂರಕ್ಕೆ ನೂರರಷ್ಟು ನಿಜವಾದುದೇ?

ನಮ್ಮ ಪೂರ್ವಸ್ಥಿತಿಯಲ್ಲಿ, ಇತರರ ವಿರುದ್ಧವಾಗಿ ಆಪಾದನೆ, ದೂರು ಮತ್ತು ಚಾಡಿ ಹೇಳುವ ಆತ್ಮವು ಹೇಗೆ ನಮ್ಮ ಯೋಚನೆಗಳು ಮತ್ತು ನಮ್ಮ ಹೃದಯಗಳಲ್ಲಿ ಇದ್ದಿತೋ, ಈಗ ಅದಕ್ಕೆ ಸಮನಾಗಿ - ಅದಕ್ಕಿಂತ ಹೆಚ್ಚಾಗಿಯೇ - ಒಬ್ಬರಿಗಾಗಿ ಇನ್ನೊಬ್ಬರು ಕೃತಜ್ಞತೆ ಮತ್ತು ವಿಜ್ಞಾಪನೆ ಮಾಡುವ ಆತ್ಮವು ನಮ್ಮೊಳಗೆ ಬರುವಂತೆ ದೇವರು ಅನುಗ್ರಹಿಸಲಿ. ಅದಾದ ಮೇಲೆ, ಶತ್ರುವಿಗೆ ನಮ್ಮ ಜೀವನದಲ್ಲಿ ಜಾಗ ಸಿಗುವದಿಲ್ಲ. ವಿಜ್ಞಾಪನೆಯ ಆತ್ಮದ ಮೂಲಕ ದೂಷಕ ಮತ್ತು ಆತನಿಗೆ ಸೇರಿದ ಆತ್ಮಗಳು ಸೋಲಿಸಲ್ಪಟ್ಟು ಹೊರಕ್ಕೆ ದಬ್ಬಲ್ಪಡುತ್ತವೆ. ನೀವು ಈಗ ಮತ್ತೊಬ್ಬರನ್ನು ಆಪಾದಿಸುವ ಈ ಹವ್ಯಾಸವನ್ನು - ಕೊನೆಗಾದರೂ - ನಿರ್ದಾಕ್ಶಿಣ್ಯವಾಗಿ ತೆಗೆದುಹಾಕಿ, ಅದರ ಬದಲಾಗಿ ವಿಜ್ಞಾಪನೆಯ ಆತ್ಮಕ್ಕೆ ಜಾಗ ನೀಡುತ್ತೀರಾ? ಹೀಗೆ ಮಾಡಲು ಕರ್ತನು ನಮಗೆ ಸಹಾಯ ಮಾಡಲಿ.

"ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ" (ಪ್ರಕಟನೆ 22:11).