ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಅಪೋಸ್ತಲರ ಕೃತ್ಯಗಳು 3 ನೇ ಅಧ್ಯಾಯದಲ್ಲಿ ಹುಟ್ಟು-ಕುಂಟನು ಸ್ವಸ್ಥತೆ ಹೊಂದಿದ್ದನ್ನು ನಾವು ಓದುತ್ತೇವೆ. ಆ ಮನುಷ್ಯನಿಗೆ 40 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು (ಅ.ಕೃ. 4:12), ಹುಟ್ಟಿನಿಂದಲೇ ಕುಂಟನಾಗಿದ್ದನು ಮತ್ತು ಪ್ರತಿದಿನ ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಭಿಕ್ಷೆ ಬೇಡುವುದಕ್ಕಾಗಿ ಆತನನ್ನು ಕೂಡ್ರಿಸುತ್ತಿದ್ದರು. ಆತನು ಕಳೆದ 30 ವರ್ಷಗಳಿಂದ ಪ್ರತಿದಿನ ಭಿಕ್ಷೆ ಬೇಡುವುದಕ್ಕಾಗಿ ಅಲ್ಲೇ ಕುಳಿತಿರುತ್ತಿದ್ದನು. ಯೇಸು ಆತನನ್ನು ಪದೇ ಪದೇ ನೋಡುತ್ತಿದ್ದಿರಬಹುದು ಮತ್ತು ಯೇಸು ಪ್ರತಿ ಸಮಯ ಆತನಿಗೆ ಹಣ ಕೊಡುತ್ತಿದ್ದಿರಲೂಬಹುದು. ಆದರೆ ಯೇಸು ಆತನನ್ನು ಗುಣಪಡಿಸಲಿಲ್ಲ. ಯಾಕಾಗಿ ಯೇಸು ಆತನನ್ನು ಗುಣಪಡಿಸಲಿಲ್ಲ? ಏಕೆಂದರೆ ಆತನನ್ನು ಗುಣಪಡಿಸಲು ತನ್ನ ತಂದೆಯಿಂದ ಆತನಿಗೆ ಮುನ್ನಡೆಸುವಿಕೆ (ನಿರ್ದೇಶನ) ಇರಲಿಲ್ಲ. ಕೆಲವರು ಈ ರೀತಿಯಾಗಿ ಕಲ್ಪಿಸಿಕೊಳ್ಳಬಹುದು, ಯೇಸು ಸುತ್ತಮುತ್ತಲು ಹೋಗಿ ಪ್ರತಿಯೊಬ್ಬರನ್ನು ಸ್ವಸ್ಥಪಡಿಸುತ್ತಿದ್ದನು. ಆದರೆ ಈ ಹುಟ್ಟುಕುಂಟನನ್ನು ಮಾತ್ರ ಸ್ವಸ್ಥ ಮಾಡಲಿಲ್ಲವಲ್ಲ. ಆತನು ಬೇತ್ಸಥಾ ಎಂಬ ಕೊಳಕ್ಕೆ ಹೋದನು. ಅಲ್ಲಿ ಬಹು ಮಂದಿ ರೋಗಿಗಳು ಬಿದ್ದುಕೊಂಡಿದ್ದರೂ, ಒಬ್ಬ ಕುಂಟ ಮನುಷ್ಯನನ್ನು ಮಾತ್ರ ಸ್ವಸ್ಥ ಪಡಿಸಿದನು. ಆದರೆ ಆತನು ಈ ಹುಟ್ಟು ಕುಂಟ ಮನುಷ್ಯನನ್ನು ದೇವಾಲಯದ ಬಾಗಿಲ ಬಳಿ ಪದೇ ಪದೇ ನೋಡಿದ್ದರೂ ಸಹ ಸ್ವಸ್ಥಪಡಿಸಲಿಲ್ಲ. ಒಂದು ವೇಳೆ ಯೇಸು ಆತನನ್ನು ಸ್ವಸ್ಥಪಡಿಸಿದ್ದರೆ, ಅಪೊಸ್ತಲರ ಕೃತ್ಯಗಳು 3 ನೇ ಮತ್ತು 4ನೇ ಅಧ್ಯಾಯಗಳಲ್ಲಿ ಕಂಡುಬರುವಂತೆ, ಈ ಮನುಷ್ಯನ ಸ್ವಸ್ಥತೆಯ ಮೂಲಕ ಉಂಟಾದ ಪುನಶ್ಚೇತನವು (ಉಜ್ಜೀವನವು) ಸಂಭವಿಸುತ್ತಿರಲಿಲ್ಲ.

ನಾವು ಪ್ರಾರ್ಥನೆಯಲ್ಲಿ ದೇವರ ಚಿತ್ತವನ್ನು ಹುಡುಕದೇ ಇದ್ದು, ನಮ್ಮ ಸ್ವಂತ ಬುದ್ಧಿವಂತಿಕೆಯ ಪ್ರಕಾರವಾಗಿ ನಡೆದರೆ ನಾವು ದೇವರ ಕಾರ್ಯಕ್ಕೆ ಅಡ್ಡಿ ಮಾಡುತ್ತೇವೆ. ಇದಕ್ಕಾಗಿಯೇ ಯೇಸು ಮಾರ್ಥಳಿಗೆ ಹೇಳಿದ್ದೇನೆಂದರೆ, ಜೀವನದಲ್ಲಿ ಅತಿ ಪ್ರಮುಖವಾದ ಸಂಗತಿಯೇನೆಂದರೆ, ನಾವು ಆತನಿಗಾಗಿ ಯಾವುದೇ ಸೇವೆ ಮಾಡುವುದಲ್ಲ, ಬದಲಾಗಿ (ಮರಿಯಳಂತೆ) ಆತನಿಗೆ ಕಿವಿಗೊಡುವುದು ಮತ್ತು ಆತನು ನಮಗೆ ಏನು ಹೇಳುತ್ತಾನೋ ಅದನ್ನು ಮಾಡುವುದು. ತಂದೆಯ ಸಮಯದ ಪ್ರಕಾರ ಆ ಮನುಷ್ಯನು ಪಂಚಾಶತ್ತಮ ದಿನದ ನಂತರ ಪೇತ್ರನ ಮೂಲಕ ಗುಣಹೊಂದಬೇಕಾಗಿತ್ತು. ಇದು ನಮಗೊಂದು ಪಾಠವನ್ನು ಕಲಿಸುತ್ತದೆ. ಅದೇನೆಂದರೆ, ಒಂದು ವೇಳೆ ನಮಗೆ ಆತ್ಮಿಕ ವರವಿದ್ದರೂ ಸಹ, ನಾವು ಅದನ್ನು ದೇವರು ನಮಗೆ ನಡೆಸಿದ ಹಾಗೆ ಮಾತ್ರ ಉಪಯೋಗಿಸಬೇಕೇ ಹೊರತು, ನಾವು ಸರಿ ಎಂದು ಯೋಚಿಸಿದ ಹಾಗೆ ಅಲ್ಲ. ಇಲ್ಲವಾದಲ್ಲಿ, ದೇವರ ಉದ್ದೇಶಗಳಿಗೆ ನಾವು ಅಡ್ಡಿಯಾಗುತ್ತೇವೆ. ಆದರೆ ಈ ದಿನಗಳಲ್ಲಿ ಇದನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ?

ಅನೇಕ ವಿಶ್ವಾಸಿಗಳು ಪವಿತ್ರಾತ್ಮನ ಜೊತೆ ಸಂಪರ್ಕವನ್ನು ಇಟ್ಟುಕೊಂಡಿಲ್ಲ. ಅವರು ನಿಯಮಗಳಿಂದ (ಕಾನೂನಿನ ಪ್ರಕಾರವಾಗಿ) ಜೀವಿಸುವವರಾಗಿದ್ದಾರೆ. ಆ ನಿಯಮಗಳೇನೆಂದರೆ, ತಾನು ಪೆಂಟಕೋಸ್ಟನು ಅಥವಾ ಪೆಂಟಕೋಸ್ಟನಲ್ಲದವನು ಎಂಬುದರ ಮೇಲೆ ಹೊಂದಿಕೊಂಡು, "ಪ್ರತಿಯೊಬ್ಬರೂ ಪ್ರಕೃತ್ಯತೀತವಾಗಿ (ಆಧ್ಯಾತ್ಮಿಕವಾಗಿ/ಅಸಾಧಾರಣವಾಗಿ) ಸ್ವಸ್ಥ ಹೊಂದಬಹುದು" ಅಥವಾ "ಯಾರೂ ಸಹ ಪ್ರಕೃತ್ಯತೀತವಾಗಿ ಸ್ವಸ್ಥ ಹೊಂದುವುದಿಲ್ಲ".

ಆದರೆ, ಯೇಸು ನಿಯಮದ ಪ್ರಕಾರ ಜೀವಿಸಲಿಲ್ಲ. ಬದಲಾಗಿ, ಪವಿತ್ರಾತ್ಮನ ಮುನ್ನಡೆಸುವಿಕೆಯಲ್ಲಿ ಜೀವಿಸಿದನು. ನಿಯಮದಿಂದ ಜೀವಿಸುವವರು ಕಾನೂನಿಗೆ ಅಂಟಿಕೊಂಡವರಾಗಿದ್ದಾರೆ ಮತ್ತು ಅವರು ದೇವರ ಚಿತ್ತವನ್ನು ಎಂದಿಗೂ ಪೂರ್ಣಗೊಳಿಸುವುದಿಲ್ಲ. ಯೇಸು ಪವಿತ್ರಾತ್ಮನೊಟ್ಟಿಗೆ ಸಂಪರ್ಕ ಹೊಂದಿದ್ದರೂ, ಆತನ ಆತ್ಮದಲ್ಲಿ ಈ ಮನುಷ್ಯನನ್ನು ಸ್ವಸ್ಥಪಡಿಸಲು ಪವಿತ್ರಾತ್ಮನು ಯೇಸುವಿಗೆ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಹಾಗಾಗಿ, ಪ್ರತಿ ಸಲ ಯೇಸು ಆತನನ್ನು ಸಂಧಿಸಿದಾಗ, ಆತನಿಗೆ ಕೇವಲ ಹಣವನ್ನು ಮಾತ್ರ ಕೊಡುತ್ತಿದ್ದನು. ಇದರಿಂದಾಗಿ ಯೇಸು ದೇವರ ಚಿತ್ತವನ್ನು ಪೂರ್ಣಗೊಳಿಸಿದನು. ನಂತರದಲ್ಲಿ ಪೇತ್ರ ಆತನ ಬಳಿ ಬಂದಾಗ, ಆ ಮನುಷ್ಯನು ಪೇತ್ರನ ಬಳಿ ಹಣ ಕೇಳಲು, ಪೇತ್ರನು ಆತನಿಗೆ, "ನಿನಗೆ ಕೊಡಲು ನನ್ನ ಬಳಿ ಹಣವಿಲ್ಲ. ಆದರೆ ಯೇಸುವಿನ ಹೆಸರಲ್ಲಿ ಎದ್ದೇಳು" ಎಂದನು. ಇದರ ಫಲಿತಾಂಶವಾಗಿ 5000 ಜನ ಅಲ್ಲಿ ರಕ್ಷಣೆ ಹೊಂದಿದರು. 5000 ಮಂದಿಯು ಹೊಸದಾಗಿ ಹುಟ್ಟಿದರು, ಏಕೆಂದರೆ ಯೇಸು 3 1/2 ವರ್ಷಗಳ ಕಾಲ ಪವಿತ್ರಾತ್ಮನಿಗೆ ವಿಧೇಯರಾಗಿದ್ದುದರಿಂದ, ಈ ಮನುಷ್ಯನನ್ನು ಸ್ವಸ್ಥಪಡಿಸಲಿಲ್ಲ.

ಇದು ನನಗೆ ದೊಡ್ಡ ಎಚ್ಚರಿಕೆಯಾಗಿದೆ - ಒಂದು ವೇಳೆ ನಾನು ಪವಿತ್ರಾತ್ಮನ ಮುನ್ನಡೆಸುವಿಕೆಯಿಲ್ಲದೆ ಕೆಲಸ ಮಾಡಿದರೆ, "ನಾನು ಸ್ವ ಬುದ್ಧಿಯನ್ನೇ ಆಧಾರ ಮಾಡಿಕೊಂಡಿರುವ" ಮೂಲಕ (ಜ್ಞಾನೋಕ್ತಿಗಳು 3:5 ), ನಾನು ದೇವರ ಕಾರ್ಯಕ್ಕೆ ಅಡ್ಡಿ ಮಾಡಬಹುದು. ಇದು ಒಳ್ಳೆ ಕಾರ್ಯವಾಗಿರಬಹುದು. (ಕುಂಟ ಮನುಷ್ಯನ್ನು ಸ್ವಸ್ಥ ಮಾಡುವುದಕ್ಕಿಂತ ಉತ್ತಮವಾದದ್ದೇನು?), ಆದರೆ ಇದು ದೇವರ ಕಾರ್ಯವನ್ನು ಅಡ್ಡಿ ಮಾಡುತ್ತದೆ. ದೇವರ ಮಾರ್ಗಗಳು ನಮ್ಮ ಮಾರ್ಗಗಳಲ್ಲ. ನಿಯಮದಿಂದ ಜೀವಿಸುವ ಒಬ್ಬ ಚತುರ ಮನುಷ್ಯನು, ದೇವರ ಉದ್ದೇಶಗಳಿಗೆ ಅಡ್ಡಿಯಾಗುತ್ತಿರಬಹುದು. ಅನೇಕ ಕ್ರೈಸ್ತರು ಪ್ರಾಮಾಣಿಕ ನಡತೆಯ ತತ್ವಗಳಿಂದ ಬದುಕುತ್ತಿರಬಹುದು. ಆದರೆ ಅಂಥಹ ತತ್ವಗಳು/ನಿಯಮಗಳು ದೇವರ ಕಾರ್ಯಕ್ಕೆ ಅಡ್ಡಿಯಾಗಿವೆ. ದೇವರಿಗೆ ಹೆಚ್ಚು ಉಪಯುಕ್ತವಾಗಿರುವಂತ ಮನುಷ್ಯನು ಪವಿತ್ರಾತ್ಮನಿಗೆ ಕಿವಿಗೊಡುವವನಾಗಿದ್ದಾನೆ.

).