ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಅಸ್ಥಿವಾರದ ಸತ್ಯಗಳು
WFTW Body: 

ಮಲಾಕಿಯನು 1:2, ಯಲ್ಲಿ ಜನರ ವಿರುದ್ದ ದೇವರ ದೂರು ಹೀಗಿದೆ: "ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವೋ - ಯಾವ ವಿಷಯದಲ್ಲಿ ನಮ್ಮನ್ನು ಪ್ರೀತಿಸಿದ್ದೀ ಅಂದುಕೊಳ್ಳುತ್ತೀರಲ್ಲಾ." ಮಾಲಾಕಿಯ ಪ್ರವಾದನೆಯಲ್ಲಿ ನಾವು ಗಮನಿಸುವುದೇನೆಂದರೆ, ದೇವರು ಅವರಿಗೆ ಯಾವುದನ್ನು ಹೇಳಿದಾಗಲೂ ಅವರು ಅದನ್ನು ಪ್ರಶ್ನಿಸಿದರು.

ಇಲ್ಲಿ ಅವರು ದೇವರ ಪ್ರೀತಿಯನ್ನು ಪ್ರಶ್ನಿಸಿದರು. ಸೈತಾನನು ನಮ್ಮನ್ನು ಬೀಳುವಂತೆ ಮಾಡುವ ಒಂದು ವಿಧಾನವಿದು. ಸೈತಾನನು ಹವ್ವಳನ್ನು ಶೋಧಿಸಿದಾಗ, ಆತನು ಅವಳ ಮನಸ್ಸಿನಲ್ಲಿ ಮೊದಲು ದೇವರು ಪ್ರೀತಿಯ ಬಗ್ಗೆ ಸಂದೇಹಪಡುವಂತೆ ಮಾಡಿದನು. ಈ ಶೋಧನೆಯ ಅರ್ಥವೇನಾಗಿತ್ತೆಂದರೆ, ದೇವರು ನಿನ್ನನ್ನು ನಿಜವಾಗಿಯೂ ಪ್ರೀತಿಸುವುದಿಲ್ಲ. ಅವನು ಪ್ರೀತಿಸುತ್ತಿದ್ದರೆ, ಈ ಸುಂದರವಾದ ಹಣ್ಣನ್ನು ತಿನ್ನಲು ಬಿಡುತ್ತಿದ್ದನು. ಆದು ಹವ್ವಳು ದೇವರ ಪ್ರೀತಿಯ ಬಗ್ಗೆ ಸಂದೇಹ ಪಡುವಂತೆ ಮಾಡಿತು. ಅವಳು ಯೋಚಿಸಲು ಆರಂಭಿಸಿದಳು, "ಬಹುಶ: ದೇವನು ನನ್ನನ್ನು ಪ್ರೀತಿಸುತ್ತಿಲ್ಲವೇನೋ?" ಎಂದು. ಆಗ ಅವಳು ಸುಲಭವಾಗಿ ಪಾಪದಲ್ಲಿ ಬಿದ್ದಳು.

ಕರ್ತನು ಪೇತ್ರನಿಗೋಸ್ಕರ ಪ್ರಾರ್ಥಿಸಿದಾಗ, ಹೇಳಿದ್ದೇನೆಂದರೆ, "ಸೈತಾನನು ನಿನ್ನನ್ನು ಗೋದಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು; ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆಮಾಡಿಕೊಂಡೆನು"(ಲೂಕ 22:31,32). ಪೇತ್ರನು ಪಾಪದ ಕೂಪಕ್ಕೆ ಬಿದ್ದ ಮೇಲೂ ಸಹ (ಕರ್ತನನ್ನು ಮೂರು ಸಲ ನಿರಾಕರಿಸುವಿಕೆ) ದೇವರು ಅವನನ್ನು ಪ್ರೀತಿಸುತ್ತಿದ್ದಾನೆಂಬುದನ್ನು ನಂಬಲಿ ಎಂದು ಕರ್ತನು ಪ್ರಾರ್ಥಿಸಿದನು. ಇದೇ ವಿಶ್ವಾಸ - ದುಂದುಗಾರ ಮಗನಲ್ಲಿ ಅದು ಇತ್ತು. ತನ್ನ ಜೀವನವನ್ನು ಹಾಳು ಮಾಡಿ, ಎಲ್ಲವನ್ನು ಕಳೆದುಕೊಂಡ ಮೇಲೂ, ಅವನು ತಂದೆಯು ತನ್ನನ್ನು ಪ್ರೀತಿಸುತ್ತಾನೆ ಎಂಬುದರಲ್ಲಿ ವಿಶ್ವಾಸವಿಟ್ಟನು.

ನೀನು ನಿನ್ನ ಜೀವನವನ್ನು ಹಾಳುಮಾಡಿಕೊಂಡಿರಬಹುದು. ಹಾಗಿದ್ದಲ್ಲಿ, ಒಂದು ವಿಷಯವನ್ನು ನೆನಪಿನಲ್ಲಿಡಿ, ದೇವರು ನಿನ್ನನ್ನು ಇನ್ನೂ ಪ್ರೀತಿಸುತ್ತಾನೆ. ಎಂದಿಗೂ ಆ ವಿಷಯದಲ್ಲಿ ನಂಬಿಕೆಯನ್ನು ಕಳೆದುಕೊಳ್ಳದಿರು. ಜಗತ್ತಿನಲ್ಲಿ ನೀನು ಎಲ್ಲವನ್ನು ಕಳೆದುಕೊಂಡಾಗ - ದೇವರು ನಿನ್ನನ್ನು ಪ್ರೀತಿಸುತ್ತಾನೆ ಎಂಬ ಬದಲಾಗದ ಸತ್ಯಾಂಶವನ್ನು ಹಿಡಿದಿಟ್ಟುಕೊಂಡಿರು. ಜೀವನದಲ್ಲಿ ನೆನಪಿಡಬೇಕಾದ ಬಹಳ ಮಹತ್ವವಾದ ಅಂಶವಿದು.

ಮಲಾಕಿಯನು 1:2-5 ರಲ್ಲಿ ಯಾಕೋಬನನ್ನು ಸಾರ್ವಭೌಮವಾಗಿ ಆರಿಸಿಕೊಂಡದ್ದರ ಬಗ್ಗೆ ದೇವರು ಹೀಗೆ ಹೇಳುತ್ತಾರೆ "ನಾನು ನಿನ್ನ ಪೂರ್ವಜ ಯಾಕೋಬನನ್ನು ಪ್ರೀತಿಸುವದರಿಂದ ನಿನ್ನ ಮೇಲಿನ ಪ್ರೀತಿಯನ್ನು ತೋರಿಸಿದೆನು. ಎಸಾವನು ಯಾಕೋಬನ ಅಣ್ಣನಾಗಿದ್ದರೂ, ಆತನನ್ನು ತಿರಸ್ಕರಿಸಿ ನಿನ್ನನ್ನು ಆರಿಸಿಕೊಂಡೆನು."

ದೇವರು ನಮ್ಮನ್ನು ಪ್ರೀತಿಸುತ್ತಾನೆಂದು ನಮಗೆ ಹೇಗೆ ಗೊತ್ತು? ಪ್ರಥಮವಾಗಿ, ಕ್ರಿಸ್ತನನ್ನು ನಮ್ಮ ಪಾಪಗಳಿಗಾಗಿ ಸಾಯಲು ದೇವರು ಕಳುಹಿಸಿದರು. ಜಗತ್ತಿನಲ್ಲಿನ ಮಿಲಿಯಗಟ್ಟಲೆ ಜನರ ಮಧ್ಯದಿಂದ, ದೇವರ ಮಾರ್ಗವನ್ನು ಕಂಡುಕೊಳ್ಳುವಂತೆ ನಮ್ಮನ್ನು ದೇವರು ಆರಿಸಿದರು. ಅವರು ನಮ್ಮನ್ನು ಯಾಕೆ ಆರಿಸಿದರು? ನಾವು ಇತರರಿಗಿಂತ ಹೆಚ್ಚು ನೀತಿವಂತರು ಎಂಬುದಕ್ಕಾಗಿಯೇ? ಅಲ್ಲ. ಮಾನವೀಯವಾಗಿ ಹೇಳುವುದಾದರೆ, ನಮ್ಮೆಲ್ಲರಿಗೂ, ನಮಗಿಂತಲೂ ಉತ್ತಮರಾದ, ಮಾನಸಾಂತರ ಹೊಂದದ ಮಿತ್ರರು ಹಾಗೂ ನೆಂಟರಿದ್ದಾರೆ. ನಾವು ಪಾಪಿಗಳೆಂದು ಒಪ್ಪಿಕೊಂಡದ್ದರಿಂದ ಮಾತ್ರ ದೇವರು ನಮ್ಮನ್ನು ಆರಿಸಿಕೊಂಡರು. ಯೇಸು ಪಾಪಿಗಳನ್ನು ಕರೆಯಲು ಬಂದರು, ನೀತಿವಂತರನ್ನಲ್ಲ. ಪಾಪಿಗಳಾಗಿದ್ದ ನಮ್ಮನ್ನು ದೇವರು ಚರಂಡಿಯಿಂದ ಆಯ್ದುಕೊಂಡರು.

ದೇವರು ನಮ್ಮನ್ನು ಪ್ರೀತಿಸುತ್ತಾರೆಂಬ ಈ ಸಾಕ್ಷಾಧಾರವನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ವಿಶ್ವದಲ್ಲಿ ಏನನ್ನೂ ಸೃಷ್ಟಿಸುವ ಮೊದಲು ದೇವರು ಮಿಲಿಯಗಟ್ಟಲೆ ಜನರ ಮಧ್ಯದಿಂದ ನಿನ್ನನ್ನು ಆರಿಸಿಕೊಂಡು, ನಿನ್ನ ಹೆಸರನ್ನು ಜೀವಿತದ ಪುಸ್ತಕದಲ್ಲಿ ಬರೆದಿದ್ದಾರೆ ಎಂಬ ಸತ್ಯವನ್ನು ಎಂದಿಗೂ ಮರೆಯಬೇಡ. ಅದು ದೇವರ ಸಾರ್ವಭೌಮ ಆಯ್ಕೆಯಾಗಿತ್ತು.

ರೋಮಪುರದವರಿಗೆ ಬರೆದ ಪತ್ರಿಕೆ( ರೋಮಾ. 9:11-13 )ಯಲ್ಲಿ ಹೀಗೆಂದು ಹೇಳಲಾಗಿದೆ: "ಅವರು ಇನ್ನೂ ಹುಟ್ಟದೆಯೂ, ಒಳ್ಳೆಯದನ್ನಾಗಲಿ, ಕೆಟ್ಟದನ್ನಾಗಲಿ ಮಾಡದೆಯೂ ಇದ್ದಾಗ, ಆಕೆಗೆ (ರೆಬೆಕ್ಕ) ಹೇಳಲ್ಪಟ್ಟಿತು (ದೇವರು ನಮ್ಮ ಒಳ್ಳೆಯ ಅಥವಾ ಕೆಟ್ಟ ಕೆಲಸಗಳ ಪ್ರಕಾರ ನಮ್ಮನ್ನು ಆರಿಸುವುದಿಲ್ಲ, ತಮ್ಮ ಯೋಜನೆಯ ಪ್ರಕಾರ ಆರಿಸುತ್ತಾರೆಂದು ಈ ಸಂದೇಶ ಸಾಕ್ಷಾತ್ಕರಿಸುತ್ತದೆ). ಹಿರಿಯವನ ಜನಾಂಗದವರು, ಕಿರಿಯವನ ಜನಾಂಗದವರನ್ನು ಸೇವೆ ಮಾಡುವರೆಂಬುದಾಗಿ" ಇಲ್ಲಿ ನಮ್ಮನ್ನು ಆರಿಸುವುದರಲ್ಲಿ ದೇವರ ಸಾರ್ವಭೌಮತೆಯ ಬಗ್ಗೆ ನಾವು ಓದುತ್ತೇವೆ. ಇದು ನಮ್ಮ ಒಳ್ಳೆಯ ಕೆಲಸಗಳನ್ನು ಆದರಿಸಿದ್ದಲ್ಲ. ನೀನು ದೇವರನ್ನು ಮೊದಲು ಆರಿಸಿಕೊಂಡೆ ಎಂದು ಯೋಚಿಸುವುದಾದರೆ, ಅದೂ ಸರಿಯಲ್ಲ. ಯೋಹಾನನು 15:16 ರಲ್ಲಿ ಯೇಸು ಬಹಳ ಸ್ಪಷ್ಟವಾಗಿ ತಿಳಿಸುತ್ತಾರೆ: "ನೀವು ನನ್ನನ್ನು ಆರಿಸಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ" ಎಂದು. ಇದನ್ನು ಎಂದಿಗೂ ಮರೆಯದಿರು.