WFTW Body: 

ಯೊಹಾನ 21: 3 ರಲ್ಲಿ, ಪೇತ್ರನು ತನ್ನ ಜೊತೆಯ ಅಪೊಸ್ತಲರಿಗೆ "ನಾನು ಮೀನು ಹಿಡಿಯುವದಕ್ಕೆ ಹೋಗುತ್ತೇನೆ," ಎಂದು ಹೇಳುವದನ್ನು ನಾವು ನೋಡುತ್ತೇವೆ. ಆತನು ಹೇಳಿದ್ದು ಆ ಒಂದು ಸಂಜೆ ತಾನು ಮೀನು ಹಿಡಿಯುವದಾಗಿ ಅಲ್ಲ. ಆತನ ಮಾತಿನ ಅರ್ಥ; ಆಗಿನಿಂದ ಅವನು ಅಪೊಸ್ತಲನಾಗಿ ಮುಂದುವರಿಯುವದಿಲ್ಲ ಎಂಬುದೇ - ಏಕೆಂದರೆ ಅವನು ಅದರಲ್ಲಿ ಅಸಫಲನಾಗಿದ್ದನು - ಮತ್ತು ಇನ್ನು ಮುಂದೆ ಅವನು ಖಾಯಂಆಗಿ ಬೆಸ್ತನಾಗುವನು, ಎಂಬುದಾಗಿ!

   

ಕರ್ತನು ಇದಕ್ಕೆ ಕೆಲವು ವರ್ಷಗಳ ಹಿಂದೆ ಪೇತ್ರನನ್ನು ಕರೆದಾಗ ಅವನು ತನ್ನ ಮೀನುಗಾರಿಕೆಯ ವ್ಯವಹಾರವನ್ನು ತ್ಯಜಿಸಿದ್ದನು. ಅವನು ಎಲ್ಲವನ್ನೂ ಬಿಟ್ಟು, ಯಥಾರ್ಥನಾಗಿ ತನಗೆ ತಿಳಿದ ಮಟ್ಟಿಗೆ ಕರ್ತನನ್ನು ಹಿಂಬಾಲಿಸಿದ್ದನು. ಆದರೆ ಅವನು ಸೋತಿದ್ದನು. ಈಗ ಅವನಿಗೆ ಈ ಅಪೊಸ್ತಲನ ವ್ಯವಹಾರ ತನಗೆ ಒಪ್ಪದು ಎಂದು ಅನಿಸಿತ್ತು. ಹಿಂದೆಂದೂ ಬೋಧಿಸಿರದಂತ ಅತಿ ಅದ್ಭುತವಾದ ಸಂದೇಶಗಳನ್ನು, ಜಗತ್ತಿನಲ್ಲಿ ಜೀವಿಸಿದ ಅತಿ ಶ್ರೇಷ್ಠ ಬೋಧಕನಿಂದ ಮೂರೂವರೆ ವರ್ಷಗಳ ಕಾಲ ಆಲಿಸಿ, ಆಮೇಲೆ ಅಂತಹ ಕರ್ತನನ್ನು ಅವನು ಪೂರ್ತಿಯಾಗಿ ಅಲ್ಲಗಳೆದಿದ್ದನು - ಅದೂ ಒಂದು ಬಾರಿ ಅಷ್ಟೇ ಅಲ್ಲ, ಆದರೆ ಮೂರು ಬಾರಿ. ಅವನಿಗೆ ಅಪೊಸ್ತಲನಾಗಲು ಶ್ರಮಿಸುವದು ಇನ್ನು ಸಾಕೆಂದು ತೋರಿತು.

   

ಆದರೆ ಈಗಲೂ ಅವನು ಒಂದು ಸಂಗತಿಯನ್ನು ಅಚ್ಚುಕಟ್ಟಾಗಿ ಮಾಡಬಲ್ಲವನಾಗಿದ್ದನು ಅದು - ಮೀನುಗಾರಿಕೆ. ಅದನ್ನು ಅವನು ಎಳೆಪ್ರಾಯದಿಂದ ಮಾಡಿದ್ದನು ಮತ್ತು ಅದರಲ್ಲಿ ಪ್ರವೀಣ ಎಂದೆನಿಸಿದ್ದನು. ಹಾಗಾಗಿ ಅವನು ಮತ್ತೊಮ್ಮೆ ಬೆಸ್ತನಾಗಲು ನಿರ್ಧರಿಸಿದನು.  ಉಳಿದ ಅಪೊಸ್ತಲರಲ್ಲಿ ಇನ್ನೂ ಕೆಲವರಿಗೂ ಅದೇ ರೀತಿ ಅನಿಸಿತ್ತು. ಅವರೆಲ್ಲರು ಸಹ ಕರ್ತನನ್ನು ಆತನಿಗೆ ಅವಶ್ಯಕತೆಯಿದ್ದ ಗಳಿಗೆಯಲ್ಲಿ ಅವರ ಕೈಬಿಟ್ಟು ಓಡಿದ್ದರು. ಅವರು "ಅಪೊಸ್ತಲರಾಗಿ" ನಿಂತಿರಲಿಲ್ಲ, ಹಾಗಾಗಿ ಅವರೂ ಸಹ ಮೀನುಗಾರಿಕೆಗೆ ಹಿಂದಿರುಗಲಿದ್ದರು!! ಪ್ರಾಮಾಣಿಕ ಜನ ಅವರು. ಅವರು ಯೇಸುವಿನ ಬೋಧನೆಗಳನ್ನು ಮೆಚ್ಚಿದ್ದರು, ಮತ್ತು ಅವರ ಮಾತುಗಳನ್ನು ಕೇಳಿ ಅವರ ಹೃದಯಗಳು ಕುದಿದಿದ್ದವು. ಅವರ ಶಿಷ್ಯರಾಗಲು ಅವರು ಮನಸಾರೆ ಬಯಸಿದ್ದರು. ಆದರೆ ಅವರು ಸೋತಿದ್ದರು.

   

ನಿನಗೂ ಅವರ ಅನುಭವದಂತೆಯೇ ಆಗಿರಬಹುದು. ನೀನು ಕೇಳಿದ ಪ್ರಭಾವಶಾಲಿ ಸಂದೇಶಗಳು ನಿನ್ನನ್ನು ಅಲುಗಾಡಿಸಿರಬಹುದು. ದೇವರ ವಚನವನ್ನು ಆಲಿಸಿದ ನಿನ್ನ ಆಂತರ್ಯವು ದಗದಗಿಸಿ ಉರಿದಿರಬಹುದು. ನೀನು ಎಲ್ಲವನ್ನೂ ಬಿಟ್ಟಿರಬಹುದು ಮತ್ತು ಯಥಾರ್ಥನಾಗಿ ಕರ್ತರನ್ನು ಹಿಂಬಾಲಿಸುವ ಪ್ರಯತ್ನ ಮಾಡಿರಬಹುದು. ಬಹುಶಃ ಶಕ್ತಿಯುತ ಸಂದೇಶಗಳನ್ನು ಕೇಳಿ, ನೀನು ಸಹ ಮೇಲಿಂದ ಮೇಲೆ "ತೀರ್ಮಾನಗಳನ್ನು" ಮಾಡಿರಬಹುದು. ಬಹುಶಃ ಅನೇಕ ಅಸಫಲ ಪ್ರಯತ್ನಗಳ ನಂತರ ನೀನು, "ನಾನು ಈ ಬಾರಿ ಇದನ್ನು ಮಾಡಿಯೇ ತೀರುತ್ತೇನೆ" ಎಂದುಕೊಂಡಿರಬಹುದು.

   

ಆದರೆ ಮತ್ತೊಮ್ಮೆ ನೀನು ಮಾಡಬೇಕಿದ್ದನ್ನು ಮಾಡಲಾಗಲಿಲ್ಲ. ಇಂದು ನೀನು ಹಿಂದಿರುಗಿ ನೋಡುವಾಗ, ಬಹುಶಃ ನಿನಗೆ ಸಾವಿರಾರು ಬಾರಿ ಸೋತಿರುವ ಉದಾಹರಣೆಗಳು ಕಾಣಿಸಬಹುದು. ಬಹುಶಃ ನಿಮ್ಮಲ್ಲಿ ಕೆಲವರು ಇವತ್ತು, "ಇನ್ನು ಪ್ರಯೋಜನವಿಲ್ಲ, ನಾನು ಇದನ್ನು ಕೈಬಿಡುವದು ಒಳ್ಳೆಯದು. ಸುವಾರ್ತೆಯು ಇತರರಿಗೆ ನಿಜವಾಗಬಹುದು. ಆದರೆ ನನಗೆ ಇದು ಅಸಾಧ್ಯವೆಂದು ತೋರುತ್ತದೆ. ನಾನು ಬಹಳ ಹಿಂದೆ ಜಾರಿದ್ದೇನೆ. ನನ್ನ ಕೈಲಾಗದು," ಎಂದು ಯೋಚಿಸುವಷ್ಟು ನಿರಾಶೆಗೊಂಡಿರಬಹುದು.

   

ನಿನಗೆ ಈ ದಿನ ಹಾಗೆ ಅನಿಸುತ್ತಿದೆಯಾ? ‘ಇನ್ನು ಮುಂದೆ ಎಂದಿಗೂ ಪ್ರಯತ್ನಿಸುವದಿಲ್ಲ, ಅದರಿಂದ ಯಾವ ಪ್ರಯೋಜನವೂ ಇಲ್ಲ’, ಎಂದು ನೀನು ನಿಶ್ಚಯಿಸಿರುವೆಯಾ? ನೀನು ಪ್ರಪಂಚಕ್ಕೆ ಹಿಂದಿರುಗಿ, ಅಲ್ಲಿ ಅದೃಷ್ಟವನ್ನು ಅಥವಾ ಪೊಳ್ಳು ಸುಖವನ್ನು ಹುಡುಕಲು ಬಯಸಿದ್ದೀಯಾ? ‘ನೀನು ಕರ್ತ ಯೇಸುವಿನ ಶಿಷ್ಯನೆಂದು ಹೇಳಿಕೊಳ್ಳುವ ಬದಲಾಗಿ, ಕ್ರೈಸ್ತನೆಂಬ ಯಾವುದೇ ತೋರಿಕೆಯಿರದ ಪಕ್ಕಾ ಪ್ರಾಪಂಚಿಕ ವ್ಯಕ್ತಿ ಆಗಿದ್ದರೆ ಒಳ್ಳೆಯದಿತ್ತು’, ಎಂದು ನಿನಗೆ ಅನಿಸುತ್ತಿದೆಯಾ?

   

ನಿಜ, ಆ ಅಪೊಸ್ತಲರು ಮತ್ತೊಮ್ಮೆ ಮೀನುಗಾರರಾಗಲು ನಿರ್ಧರಿಸಿದಾಗ ಅವರಲ್ಲಿದ್ದ ಭಾವನೆ ನಿಖರವಾಗಿ ಅದೇ ಆಗಿತ್ತು. ಅದಲ್ಲದೆ ಕರ್ತನು ಅವರನ್ನು ಹೋಗಲು ಅನುಮತಿಸಿದಂತೆ ಮಾಡಿ ಹೀಗೆ ಹೇಳಿರಬಹುದು, "ಹೋಗಿ ನೋಡಿರಿ. ಮೀನು ಸಿಗುವುದೇನೋ ಎಂದು ಪ್ರಯತ್ನಿಸಿರಿ" ಎಂದು. ಪೇತ್ರ ಮತ್ತು ಅವನ ಗೆಳೆಯರು ರಾತ್ರಿಯೆಲ್ಲಾ ಮೀನು ಹಿಡಿಯಲು ಪ್ರಯತ್ನಿಸಿದರು - ಮತ್ತು ಅದರಲ್ಲಿ ಸೋತು ಸುಣ್ಣವಾದರು. ಅವರು ಅಂತಹ ದುರಾಳ ರಾತ್ರಿಯನ್ನು ಇಡೀ ಜೀವಿತದಲ್ಲಿ ಕಂಡಿರಲಿಲ್ಲ.

   

ವಾಸ್ತವವಾಗಿ ಗಲಿಲಾಯದ ಸಮುದ್ರದಲ್ಲಿ ಯಥೇಚ್ಛವಾಗಿ ಮೀನುಗಳು ಇದ್ದವು, ಮತ್ತು ಆ ರಾತ್ರಿ ಇತರ ಬೆಸ್ತರು ಹೇರಳವಾಗಿ ಮೀನು ಹಿಡಿದರೆಂದು ನನಗೆ ಖಾತರಿಯಿದೆ. ಇತರ ಎಲ್ಲಾ ದೋಣಿಗಳ ಬಳಿಗೆ ಆ ಮೀನುಗಳು ಹೋದವು. ಆದರೆ ದೇವರು ಆ ಮೀನುಗಳನ್ನು ಪೇತ್ರನ ದೋಣಿಯಿಂದ ದೂರವಿಟ್ಟರು, ಎಷ್ಟರ ಮಟ್ಟಿಗೆ ಎಂದರೆ, ಒಂದು ಮೀನೂ ಸಹ ಅವನ ಬಲೆಯ ಹತ್ತಿರ ಹೋಗಲಿಲ್ಲ. ಬಹುಶಃ ಇತರ ಬೆಸ್ತರು ಪೇತ್ರನ ದೋಣಿಯ ಬಳಿಬಂದು, ತಮಗೆ ಮೀನಿನ ಎಷ್ಟು ಭಾರಿ ಹೊರೆ ಸಿಕ್ಕಿತೆಂದು ತಿಳಿಸಿರಬಹುದು. ಅದು ಪೇತ್ರ ಮತ್ತು ಅವನ ಗೆಳೆಯರು ತಮಗೇಕೆ ಏನೂ ಸಿಗಲಿಲ್ಲವೆಂದು ಇನ್ನೂ ಹೆಚ್ಚಾಗಿ ಯೋಚಿಸುವಂತೆ ಮಾಡಿರಬೇಕು!

   

ಪೇತ್ರನು ತನ್ನ ಜೀವನದಲ್ಲಿ ದೇವರ ಕರೆಯಿಂದ ತಿರುಗಿ ಹೋಗುತ್ತಿದ್ದನು ಮತ್ತು ದೇವರು ಸೋಲಿನ ಮೂಲಕ ಅವನನ್ನು ಇನ್ನೊಮ್ಮೆ ಮುರಿಯುವದು ಅವಶ್ಯವಾಗಿತ್ತು. ಆ ಅಪೊಸ್ತಲರು ಸಾಯಂಕಾಲ 6 ಗಂಟೆಗೆ ಮೀನು ಹಿಡಿಯಲು ಹೊರಟರು. ಆದರೆ ಮರುದಿನ ಬೆಳಗ್ಗಿನ 5 ಗಂಟೆಯವರೆಗೆ ಯೇಸುವು ಅವರ ಬಳಿಗೆ ಬರಲಿಲ್ಲ. ಪೇತ್ರನಿಗೆ ಆ ರಾತ್ರಿ ಮೀನು ಸಿಗುವುದಿಲ್ಲವೆಂದು ಕರ್ತನಿಗೆ ತಿಳಿದಿತ್ತು. ಹಾಗಾದರೆ ಸಮಯದ ದುರುಪಯೋಗ ಆಗದಿರಲು ಮೊದಲೇ - ಅವರು ಹೊರಟೊಡನೆ - ತಾನು ಬರುವುದರ ಮೂಲಕ ಏಕೆ ಅವರನ್ನು ಯೇಸು ತಡೆಯಲಿಲ್ಲ? ಕನಿಷ್ಟಪಕ್ಷ ರಾತ್ರಿ 9 ಗಂಟೆಗಾದರೂ ಆತನು ಅವರ ಬಳಿಗೆ ಏಕೆ ಬರಲಿಲ್ಲ? ಮರುದಿನ ಬೆಳಿಗ್ಗಿನ 5 ಗಂಟೆಯ ವರೆಗೆ ಏಕೆ ತಾಳಿದನು? ಅವರು 11 ಗಂಟೆಗಳ ಕಾಲ ಪ್ರಯಾಸಪಟ್ಟು ಕೊನೆಗೆ ಸೋಲು ಅನುಭವಿಸುವ ವರೆಗೆ ಆತನು ಕಾದದ್ದು ಏಕೆ?

   

ನಾವು ಸೋಲುವುದನ್ನು ಅನುಮತಿಸುವ ದೇವರ ಯೋಜನೆ ಎಂಥದ್ದು ಎನ್ನುವದನ್ನು ಆ ಪ್ರಶ್ನೆಯ ಉತ್ತರದಲ್ಲಿ ನಾವು ಕಾಣುತ್ತೇವೆ. ‘ಮಾನವನ ಸೋಲಿನಲ್ಲಿ ದೇವರ ಸಂಕಲ್ಪವಿದೆ’, ಎಂದು ನಾವು ಅಲ್ಲಿ ನೋಡುತ್ತೇವೆ. ಹಿಂದೆ ನಾವು ಪ್ರಯಾಸ ಪಡುತ್ತಿದ್ದಾಗ, ಎಷ್ಟೋ ಬಾರಿ ನೆರವಿಗಾಗಿ ನಾವು ಮೊರೆ ಇಟ್ಟಾಗಲೂ ನಮ್ಮ ಸಹಾಯಕ್ಕೆ ಅವರು ಏಕೆ ಬರಲಿಲ್ಲವೆಂದೂ, ಮತ್ತು ಈಗಲೂ ಕೆಲವೊಮ್ಮೆ ನಾವು ಸಹಾಯ ಯಾಚಿಸಿದಾಗ ಉತ್ತರ ಏಕೆ ಸಿಗುವದಿಲ್ಲವೆಂದೂ, ನಾವು ಅರಿಯುವೆವು.

   

ಪೇತ್ರ ಮತ್ತು ಅವನ ಗೆಳೆಯರು ಸಾಯಂಕಾಲ 6 ಗಂಟೆಗೆ ಮೀನು ಹಿಡಿಯಲು ಹೊರಟಾಗ, ಅವರು ಸೋತ ಮನುಷ್ಯರು ಆಗಿರಲಿಲ್ಲ. ಅವರಲ್ಲಿ ನಿರೀಕ್ಷೆ ತುಂಬಿ ತುಳುಕುತ್ತಿತ್ತು. ರಾತ್ರಿ 9 ಗಂಟೆಗೆ ಇನ್ನೂ ಮೀನು ಸಿಗದಿದ್ದಾಗ, ಅವರು ಸ್ವಲ್ಪ ನಿರಾಶರಾಗಿರಬಹುದು. ಆದರೆ ಅವರ ಪ್ರಯತ್ನ "ನಿಷ್ಫಲ" ಎನ್ನುವಷ್ಟು ಕೆಟ್ಟಿರಲಿಲ್ಲ. ಮಧ್ಯರಾತ್ರಿಯ ಹೊತ್ತಿಗೆ ಅವರು ಬಹುಶಃ ಬಹಳ ಹತಾಶರೂ ಆಗಿರಬಹುದು. ಮುಂಜಾನೆ 4 ಗಂಟೆಯ ಹೊತ್ತಿಗೆ, ಅವರ ಆಶೆಯೆಲ್ಲಾ ನಿರಾಶೆಯಾಗುತ್ತಾ ಬಂತು. ಆದರೆ ಅವರು ಇನ್ನೂ ಸಂಪೂರ್ಣವಾಗಿ ಸೋತಿರಲಿಲ್ಲ. ಹಾಗೆ ಆಗಲು ಅವರು ಇನ್ನೂ ಸ್ವಲ್ಪ ಸೋಲಬೇಕಾಗಿತ್ತು. ಅವರ ಆತ್ಮವಿಶ್ವಾಸದ ರೇಖೆ ಕೆಳಗೆ ಇಳಿಯುತ್ತಾ ಇತ್ತು. ಆದರೆ ಅದು ಶೂನ್ಯದ ಮಟ್ಟಕ್ಕೆ - ತಳ ಮುಟ್ಟುವಷ್ಟು - ಇನ್ನೂ ಇಳಿಯಬೇಕಿತ್ತು. ಆ ಜಾಗವನ್ನು ಅವರು ಮುಂಜಾನೆ 5 ಗಂಟೆಗೆ ತಲುಪಿದರು. ಆಗ ಅವರು ಸೋಲೊಪ್ಪಿಕೊಳ್ಳಲು ಸಿದ್ಧರಾಗಿದ್ದರು. ಅವರು, "ಇನ್ನೂ ಪ್ರಯತ್ನಿಸುವದು ವ್ಯರ್ಥ. ಮನೆಗೆ ಹೋಗೋಣ," ಎಂದು ಹೇಳಿರಬೇಕು.

   

ಅವರ ಮುಂದೆ ಕರ್ತನು ಕಾಣಿಸಿದ್ದು ಸಂಪೂರ್ಣ ಸೋತ ಆ ಕ್ಷಣದಲ್ಲಿ. ದೇವರ ಕಾರ್ಯವಿಧಾನ ಈ ರೀತಿ ಇದೆ. ಆಗ ಕರ್ತನು ಅವರ ಬಲೆಯನ್ನು ತುಂಬಿ ತುಳುಕುವಷ್ಟು ಭರ್ತಿ ಮಾಡಿದರು. ಅವರ ಜೀವಿತವಿಡೀ ಒಂದೇ ದಿನದಲ್ಲಿ ಅಷ್ಟು ಹೇರಳವಾದ ಮೀನಿನ ರಾಶಿ ಅವರಿಗೆ ಎಂದೂ ಸಿಕ್ಕಿರಲಿಲ್ಲ. ಆ ಬೆಳಗ್ಗೆ ಅವರು ದೊಡ್ಡ ಗಾತ್ರದ 153 ಮೀನುಗಳನ್ನು ಹಿಡಿದರು. ಹಿಂದೆ ಉತ್ತಮ ದಿನಗಳಲ್ಲಿ ಅವರು 20 ಇಲ್ಲವೇ 30 ಮೀನುಗಳನ್ನು ಹಿಡಿದಿರಬಹುದು. ಆದರೆ ಇದು ನಿಜವಾದ ಅದ್ಭುತವಾಗಿತ್ತು. ಗಲಿಲಾಯದ ಚರಿತ್ರೆಯಲ್ಲೇ ಶ್ರೇಷ್ಠ ದಾಖಲೆ ಇದಾಗಿತ್ತು! ನಿರಾಶರಾಗಿ ಅವರು ಕೈಚೆಲ್ಲಿದ ಕ್ಷಣದಲ್ಲೇ, ಕರ್ತರು ಅವರಿಗಾಗಿ ಒಂದು ಚಮತ್ಕಾರವನ್ನು ಮಾಡಿದರೆಂದು ಅವರು ತಮ್ಮ ಜೀವನವಿಡೀ ನೆನಸುವಂತಾಯಿತು!

   

ನೀನು ಈ ದಿನ ಕೈಹಾಕಿದ್ದೆಲ್ಲಾ ನಿಷ್ಫಲವಾಗಿ, ನಿರೀಕ್ಷೆಯೆಲ್ಲಾ ಸುಳ್ಳಾಗಿ, ಇನ್ನು ಏನು ಮಾಡುವದು, ಎಲ್ಲಿಗೆ ಹೋಗುವದು ಎಂದು ತಿಳಿಯದೆ, "ದಿಗ್ಭ್ರಮೆ"ಗೆ ಒಳಗಾಗಿರುವ ಪರಿಸ್ಥಿತಿಗೆ ತಲುಪಿದ್ದೀಯಾ? ಹಾಗಿದ್ದಲ್ಲಿ ನಿನ್ನೆದುರು ಕರ್ತನು ಕಂಡುಬರುವ ಜಾಗಕ್ಕೆ ತುಂಬಾ ಸಮೀಪದಲ್ಲಿ ನೀನು ಇರಬಹುದು. ನಿನ್ನ ಪ್ರಯತ್ನವನ್ನು ಕೈಬಿಡದಿರು(ನಿರಾಶನಾಗದಿರು). ನಿನ್ನ ಆತ್ಮವಿಶ್ವಾಸವು ಶೂನ್ಯಬಿಂದುವನ್ನು ತಲುಪುವದಕ್ಕಾಗಿ ಅವರು ಕಾಯುತ್ತಿರುವರು, ಅಷ್ಟೇ. ಅವರು ಇನ್ನೂ ನಿನ್ನ ಬಳಿಗೆ ಬಂದಿರದಿದ್ದರೆ, ಅದರ ಅರ್ಥ ನಿನ್ನ ಆತ್ಮವಿಶ್ವಾಸ ಇನ್ನೂ ಶೂನ್ಯಬಿಂದುವನ್ನು ತಲುಪಿಲ್ಲ. ಇನ್ನೂ ನಿನ್ನಲ್ಲಿ ಸ್ವಲ್ಪ ಸ್ವ-ಬಲ ಉಳಿದಿರುವುದನ್ನು ಅವರು ಕಾಣುತ್ತಿದ್ದಾರೆ, ಅದೂ ಸಹ ಖಾಲಿ ಆಗಬೇಕಿದೆ.