ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ
WFTW Body: 

ವಿಮೋಚನಕಾಂಡ 25:8ರಲ್ಲಿ, ಮಾನವನೊಡನೆ ತಾನು ನೆಲೆಸಲು ಇಚ್ಛಿಸುವೆನೆಂಬ ತನ್ನ ಚಿತ್ತವನ್ನು ದೇವರು ಪ್ರಕಟಿಸುವದನ್ನು ನಾವು ಮೊದಲ ಬಾರಿ ಕಾಣುತ್ತೇವೆ. "ನಾನು ಅವರ ಮಧ್ಯದಲ್ಲಿ ವಾಸಿಸುವದಕ್ಕೆ ನನಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು." ಇಲ್ಲಿ ದೇವರ ಅಗ್ನಿಯು, ದೇವರ ಗುಡಾರದ ಮೇಲೆ ನೆಲೆಸಿದ ವಿಚಾರವಾಗಿ - ಆ ಇಸ್ರಾಯೇಲ್ಯರನ್ನು ಭೂಲೋಕದ ಇತರ ಎಲ್ಲಾ ಜನರಿಂದ ವಿಭಿನ್ನವಾಗಿ ಗುರುತು ಮಾಡಿದ ದೇವರ ತೇಜಸ್ಸಿನ ಬಗ್ಗೆ - ಹೇಳಲಾಗಿದೆ. ನಾವು ವಿಮೋಚನಕಾಂಡದಲ್ಲಿ ಓದುವ ದೇವದರ್ಶನದ ಗುಡಾರಕ್ಕೆ ಸಂಪೂರ್ಣವಾಗಿ ಹೋಲುವ ಇನ್ನೊಂದನ್ನು ರಚಿಸುವದು ಸುಲಭ, ಏಕೆಂದರೆ ಅದರ ಎಲ್ಲಾ ಅಳತೆಗಳು ಅಲ್ಲಿ ಕೊಡಲ್ಪಟ್ಟಿವೆ. ನಾವು ಸ್ವಲ್ಪವೂ ತಪ್ಪಿಲ್ಲದೆ ಆ ಗುಡಾರದ ಪ್ರತಿಕೃತಿಯನ್ನು ತಯಾರಿಸಬಹುದು, ಆದರೆ ಒಂದು ಸಂಗತಿಯನ್ನು ನಾವು ನಕಲಿ ಮಾಡಲು ಸಾಧ್ಯವಿಲ್ಲ, ಅದು, ಅದರ ಮೇಲೆ ನೆಲೆಸಿದ ದೇವರ ತೇಜಸ್ಸು. ಆ ದೇವಸ್ಥಾನದ ಅತಿ ಮುಖ್ಯವಾದ ವಿಷಯವೆಂದರೆ, ಅದರೆ ಮೇಲೆ ನೆಲೆಸಿದ ದೇವರ ತೇಜಸ್ಸು - ಇದು ದೇವಜನರ ಮಧ್ಯೆ ದೇವರು ಇರುವದನ್ನು ಸೂಚಿಸುತ್ತಿತ್ತು.

ಒಂದು ಕ್ರೈಸ್ತ ಮನೆಯು, ಯೇಸುವಿಗೆ ಎಲ್ಲಾ ರೀತಿಯಲ್ಲಿ ತನ್ನ ಸ್ವಂತ ಮನೆಯೆಂಬ ಭಾವನೆಯನ್ನು ಕೊಡಬೇಕು. ಅಂದರೆ, ಯೇಸುವು ಅಲ್ಲಿನ ಎಲ್ಲಾ ಚಟುವಟಿಕೆಗಳಿಂದ ಸಂತೋಷಗೊಳ್ಳಬೇಕು - ನಾವು ಓದುವ ಪುಸ್ತಕಗಳು, ನಾವು ಕೊಳ್ಳುವ ಪತ್ರಿಕೆ-ನಿಯತಕಾಲಿಕಗಳು, ಗಂಡ-ಹೆಂಡತಿಯ ನಡುವಿನ ಸಂಭಾಷಣೆ, ನಾವು ಆಡುವ ಮಾತುಗಳು, ನಾವು TVಯಲ್ಲಿ ವೀಕ್ಷಿಸುವ ಕಾರ್ಯಕ್ರಮಗಳು, ಇತ್ಯಾದಿ.. ಯೇಸುವನ್ನು ಖುಷಿಗೊಳಿಸಬೇಕು.

1. ದೇವರು ಎಲ್ಲಿ ನೆಲೆಸುತ್ತಾರೆ? ಮೊದಲನೆಯದಾಗಿ, ಸಮಾಧಾನ ಎಲ್ಲಿರುವದೋ ಆ ಮನೆಯಲ್ಲಿ. ಲೂಕ 10:5-7ರಲ್ಲಿ, ಯೇಸುವು ತನ್ನ ಶಿಷ್ಯರನ್ನು ಬೋಧನೆ ಮಾಡಲು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸುವಾಗ, ಅವರು ಶಾಂತಿ ಸಮಾಧಾನವಿರುವ ಒಂದು ಮನೆಯನ್ನು ಹುಡುಕಲು ತಿಳಿಸಿದರು. ಮತ್ತು ಅಂತಹ ಒಂದು ಮನೆ ಸಿಕ್ಕಾಗ, ಅವರು ಬೇರೆ ಯಾವುದೇ ಮನೆಯನ್ನು ಹುಡುಕದೇ ಅಲ್ಲಿಯೇ ನೆಲೆಸಿರಬೇಕಿತ್ತು. ಅವರು ಏಕೆ ಹಾಗೆಂದರು? ಏಕೆಂದರೆ ಸಮಾಧಾನ ತುಂಬಿರುವ ಅನೇಕ ಮನೆಗಳು ಅವರಿಗೆ ಸಿಗಲಾರವೆಂದು ಅವರಿಗೆ ತಿಳಿದಿತ್ತು. ಯಾವ ಮನೆಯಲ್ಲಿ ಘರ್ಷಣೆ ಇಲ್ಲವೋ ಅಲ್ಲಿ ದೇವರು ನೆಲೆಸುತ್ತಾರೆ.

ಗಂಡಂದಿರು ಮತ್ತು ಹೆಂಡಂದಿರು ಯಾವ ವಿಷಯಕ್ಕಾಗಿ ಜಗಳಾಡುತ್ತಾರೆ? ಹೆಚ್ಚಾಗಿ ಲೌಕಿಕ ಸಂಗತಿಗಳಿಗಾಗಿ - ಯಾವುದೋ ಪ್ರಾಪಂಚಿಕ ಸಂಗತಿ ಸರಿಯಾಗಿ ಆಗದಿದ್ದುದಕ್ಕಾಗಿ. ಈ ಪ್ರಪಂಚದಲ್ಲಿ ಸಂಗತಿಗಳು ತಪ್ಪಿ ಹೋಗುತ್ತಿರುತ್ತವೆ. ಆದರೆ ಸಂಗತಿಗಳು ಸರಿಯಾಗಿ ನಡೆಯದಿದ್ದಾಗ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ, ಪಾಪ ಮಾತ್ರವೇ ಅಪಾಯಕಾರಿಯಾದುದು, ಇತರ ಎಲ್ಲಾ ವಿಷಯಗಳೂ ಮುಖ್ಯವಲ್ಲದವು. ನಾವು ಇದನ್ನು ಸ್ಪಷ್ಟವಾಗಿ ತಿಳಕೊಳ್ಳುವೆವು ಎಂದು ನನ್ನ ನಿರೀಕ್ಷೆ: ಪಾಪವೊಂದೇ ಗಂಭೀರವಾದ ಸಂಗತಿಯಾಗಿದೆ ಎಂದು. ನಮ್ಮ ಮನೆಯು ದೇವರಿಗಾಗಿ ಒಂದು ದೇವಸ್ಥಾನ ಆಗಿರಬೇಕೆಂದು ನೆನಪಿಡಿರಿ.

2. ನಾನು ಹೇಳಲು ಬಯಸುವ ಎರಡನೆಯ ವಿಷಯ ಯೆಶಾಯ 57:15ರಲ್ಲಿ ಇದೆ: "ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನಮನದೊಂದಿಗೂ ಇರುವೆನು". ದೇವರು ಮುರಿಯಲ್ಪಟ್ಟ ಮತ್ತು ಪರಿತಪಿಸುವ ಆತ್ಮ ಇರುವವರ ಜೊತೆಯಲ್ಲಿ ನೆಲೆಸುವರು. ಸ್ವತಃ ತನ್ನ ಕೊರತೆ ಮತ್ತು ಸೋಲಿನ ಪರಿಸ್ಥಿತಿಯನ್ನು ಬೇರೆಯವರ ಸ್ಥಿತಿಗಿಂತ ಹೆಚ್ಚಾಗಿ ಅರಿತಿರುವವನೇ ಒಬ್ಬ ಮುರಿಯಲ್ಪಟ್ಟ ವ್ಯಕ್ತಿಯು. ಈ ಲೋಕದಲ್ಲಿ ಇತರರ ಸೋಲುಗಳ ಬಗ್ಗೆ ತಿಳಿದಿರುವ ಜನ ಧಾರಾಳವಾಗಿ ಇದ್ದಾರೆ. ಇಂದಿನ ಸಾಮಾನ್ಯ ಕುಟುಂಬದಲ್ಲಿ, ಹೆಚ್ಚಿನ ಮಾತುಕತೆಯು ಬೇರೆ ಜನರು ಮತ್ತು ಅವರ ಕುಟುಂಬಗಳ ತಪ್ಪು-ಸೋಲುಗಳ ವಿಷಯವಾಗಿ ಇರುತ್ತದೆ. ನಾವು ಬೇರೆಯವರ ವಿಫಲತೆಗಳನ್ನು ತಕ್ಷಣವೇ ಗಮನಿಸುತ್ತೇವೆ. ಆದರೆ ಅನೇಕಸಲ, ಆ ಜನರ ಉತ್ತಮ ಅಂಶಗಳು ನಮ್ಮ ಗಮನಕ್ಕೆ ಬರುವದಿಲ್ಲ.

3. ಎಲ್ಲಿ ಪ್ರತಿದಿನ ಗಂಡ ಮತ್ತು ಹೆಂಡತಿ ಪವಿತ್ರತೆಯಲ್ಲಿ ನಡೆಯುವರೋ, ಆ ಮನೆಯಲ್ಲಿ ದೇವರು ನೆಲೆಸುತ್ತಾರೆ. ಯೆಹೆಜ್ಕೇಲ. 43:12 ಹೀಗೆ ಹೇಳುತ್ತದೆ: "ದೇವಾಲಯದ ಪ್ರದೇಶವೆಲ್ಲಾ ಸುತ್ತು ಮುತ್ತಲು ಅತಿ ಪರಿಶುದ್ಧವಾಗಿ ಇರಬೇಕು. ಇಗೋ, ದೇವಸ್ಥಾನದ ನಿಯಮವು ಇದೇ." ದೇವರ ಗುಡಾರವು ಮೂರು ಭಾಗಗಳನ್ನು ಒಳಗೊಂಡಿತ್ತು - ಹೊರಗಣ ಪ್ರಾಕಾರ, ಪವಿತ್ರಸ್ಥಾನ ಮತ್ತು ಮಹಾಪವಿತ್ರಸ್ಥಾನ. ಮತ್ತು ಈ ಮೂರರಲ್ಲಿ, ಮಹಾಪವಿತ್ರಸ್ಥಾನವು ಎಲ್ಲಕ್ಕಿಂತ ಚಿಕ್ಕದಾಗಿತ್ತು. ಆದರೆ ನಾವು ಇಲ್ಲಿ ಓದುವದು ಏನೆಂದರೆ, ಹೊಸ ಒಡಂಬಡಿಕೆಯಲ್ಲಿ ಹೊರಗಣ ಪ್ರಾಕಾರ ಮತ್ತು ಪವಿತ್ರಸ್ಥಾನಗಳು ಇರುವದಿಲ್ಲ. ಇಡೀ ಪ್ರದೇಶ ಮಹಾಪವಿತ್ರಸ್ಥಾನವಾಗಿ ಇರುವದು. ಇದರ ಅರ್ಥವೇನೆಂದರೆ ಹೊಸ ಒಡಂಬಡಿಕೆಯ ವ್ಯವಸ್ಥೆಯಲ್ಲಿ ದೇವರ ಮಹಿಮೆಯು ಗುಡಾರದಲ್ಲಿ ಇದ್ದಂತೆ ಒಂದು ಮೂಲೆಗೆ ಸೀಮಿತವಾಗಿಲ್ಲ, ಅದು ಇಡೀ ಆವರಣದಲ್ಲಿ ಹರಡಿರುತ್ತದೆ. ನಮ್ಮ ಜೀವನದಲ್ಲಿ ಇದರ ಅರ್ಥವೇನೆಂದರೆ, ನಾವು ಎಲ್ಲಾ ವೇಳೆಯಲ್ಲೂ ಪವಿತ್ರರಾಗಿ ಇರುವೆವು - ಭಾನುವಾರ ಮಾತ್ರವೇ ಅಲ್ಲ, ಆದರೆ ಪ್ರತಿದಿನ. ನಾವು ಸತ್ಯವೇದವನ್ನು ಓದುವ ಸಮಯದಲ್ಲಿ ಮಾತ್ರವೇ ಪವಿತ್ರರಾಗಿ ಇರುವದಿಲ್ಲ, ಆದರೆ ಯಾವುದೇ ಕಾರ್ಯವನ್ನು ಮಾಡುವಾಗಲೂ ಹಾಗೆ ಇರುವೆವು. ನಮ್ಮ ಜೀವಿತದ ಉದ್ದಗಲ ಮತ್ತು ನಮ್ಮ ಮನೆಯ ಮೂಲೆಮೂಲೆಯೂ ಪವಿತ್ರವಾಗಲಿದೆ. ಅದಲ್ಲದೆ, ಪವಿತ್ರತೆಯು ಕೆಲವು ಧಾರ್ಮಿಕ ಸಂಸ್ಕಾರಗಳ ಆಚರಣೆಯ ಪ್ರಶ್ನೆಯಲ್ಲ, ಆದರೆ ದೇವರಿಗೆ ಇಷ್ಟವಿಲ್ಲದ ಪ್ರತಿಯೊಂದು ವಿಷಯವನ್ನೂ ಬಿಟ್ಟುಬಿಡುವದಾಗಿದೆ - ನಿಮಗಿರುವ ತಿಳಿವಳಿಕೆಗೆ ಅನುಸಾರವಾಗಿ. ಇದು ನಮ್ಮ ಜೀವನದಲ್ಲಿ ನಿಜವಾಗಲಿ.