1 ಅರಸುಗಳು 19:19-21ರಲ್ಲಿ ಎಲೀಯನು ಎಲೀಷನನ್ನು ಕರೆಯುವುದನ್ನು ನಾವು ನೋಡುತ್ತೇವೆ. ಎಲೀಯನು ತನ್ನನ್ನು ಕರೆಯುವಾಗ, ಎಲೀಷನು ಹೊಲದಲ್ಲಿ ತನ್ನ ಎತ್ತುಗಳೊಡನೆ ಕಠಿಣವಾಗಿ (ಪರಿಶ್ರಮದಿಂದ) ಕೆಲಸ ಮಾಡುತ್ತಿದ್ದನು.
ಕಠಿಣವಾಗಿ ಕೆಲಸ ಮಾಡುವವರನ್ನು ಮತ್ತು ತಮ್ಮ ಪ್ರಾಪಂಚಿಕ ಕೆಲಸಕಾರ್ಯಗಳಲ್ಲಿ ನಂಬಿಗಸ್ಥನಾಗಿರುವವರನ್ನು ದೇವರು ಯಾವತ್ತೂ ಕರೆಯುತ್ತಾರೆಂಬುದನ್ನು ಮೊದಲಾಗಿ ಗಮನಿಸಿ. ದೇವರು ಮೋಶೆಯನ್ನು ಕರೆಯುವಾಗ ಅವನು ನಂಬಿಗಸ್ಥನಾಗಿ ತನ್ನ ಮಾವನ ಕುರಿಗಳನ್ನು ಮೇಯಿಸುತ್ತಿದ್ದನು. ದಾವೀದನು ತನ್ನ ಕುರಿಗಳನ್ನು ಮೇಯಿಸುತ್ತಿದ್ದನು ಮತ್ತು ಸಿಂಹ ಹಾಗೂ ಕರಡಿಗಳೊಡನೆ ಹೋರಾಡುತ್ತಿದ್ದನು. ಅಮೋಸನು ಕಠಿಣವಾಗಿ ಕೆಲಸಮಾಡುವ ಗೊಲ್ಲ ಹಾಗೂ ಅತ್ತಿಹಣ್ಣನ್ನು ಕೀಳುವವನಾಗಿದ್ದನು. ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೇಯರು ಕಠಿಣವಾಗಿ ಕೆಲಸಮಾಡುವ ಮೀನುಗಾರರಾಗಿದ್ದರು. ಮತ್ತಾಯನು ತನ್ನ ಮೇಜಿನ ಬಳಿ ಕುಳಿತುಕೊಂಡು ಲೆಕ್ಕಮಾಡುತ್ತಿದ್ದನು. ತನ್ನ ಸೇವೆಯನ್ನು ಮಾಡಲು ದೇವರು ಒಬ್ಬ ಸೋಮಾರಿಯನ್ನು ಕರೆದದ್ದನ್ನು ನಾವು ಹಳೆಯ ಅಥವಾ ಹೊಸ ಒಡಂಬಡಿಕೆಯಲ್ಲಿ ಎಲ್ಲೂ ಕಾಣುವುದಿಲ್ಲ.
ಎಲೀಷನು ಗಾಢ ನಿದ್ರೆಯಲ್ಲಿರುವಾಗ ಅವನಲ್ಲಿ ಹೋಗಿ ಅವನನ್ನು ಎಲೀಯನು ಕರೆಯುವುದನ್ನು ನಾವು ಕಾಣುವುದಿಲ್ಲ - ಹಾಗಾಗಿದ್ದಲ್ಲಿ, ಅವನೊಬ್ಬ ಸೋಮಾರಿಯೆಂದು ನಾವು ತಿಳಿಯುತ್ತಿದ್ದೆವು. ಪೇತ್ರನನ್ನು ಕರೆಯಲು ಯೇಸುವು ಸಾಯಂಕಾಲ ಅವನ ಬಳಿ ಹೋಗಲಿಲ್ಲ. ಅವನು ಮೀನು ಹಿಡಿಯುತ್ತಿದ್ದಾಗ ಯೇಸುವು ಅವನನ್ನು ಕರೆದನು. ದೇವರು ನಮ್ಮನ್ನು ಅವನ ಸೇವೆಗೆ ಕರೆಯುವ ಮೊದಲು, ನಾವು ನಮ್ಮ ಪ್ರಾಪಂಚಿಕ ಕೆಲಸಗಳಲ್ಲಿ ನಂಬಿಗಸ್ಥರಾಗಿರಬೇಕು ಮತ್ತು ಪರಿಶ್ರಮಪಡುವವರಾಗಿರಬೇಕು ಎಂಬುದನ್ನು ಈ ಎಲ್ಲಾ ಉದಾಹರಣೆಗಳು ನಮಗೆ ತೋರಿಸುತ್ತವೆ. ನೀನು ಪ್ರಾಪಂಚಿಕ ವಿಷಯಗಳಲ್ಲಿ ನಂಬಿಗಸ್ಥನಾಗಿರದಿದ್ದರೆ, ಸ್ವರ್ಗೀಯ ವಿಷಯಗಳಲ್ಲಿ ನೀನು ಹೇಗೆ ನಂಬಿಗಸ್ಥನಾಗಿರುವೆ? ನೀನು ಇನ್ನೂ ಯುವಕ ಹಾಗೂ ಮನೆಯಲ್ಲೇ ವಾಸಿಸುತ್ತಿದ್ದರೆ, ಒಬ್ಬ ನಂಬಿಗಸ್ಥ ಮಗ ಅಥವಾ ಮಗಳಾಗಿರು.
ದೇವರು ಕರೆದಾಕ್ಷಣ ಇವರೆಲ್ಲರೂ ಎಲ್ಲವನ್ನೂ ಬಿಟ್ಟು ಹೋದುದನ್ನು ಎರಡನೆಯದಾಗಿ ಗಮನಿಸಿ. ಪೇತ್ರ, ಯೋಹಾನ, ಮತ್ತು ಮತ್ತಾಯ ಹಾಗೂ ಎಲೀಷನಲ್ಲೂ ನಾವು ಇದನ್ನು ಕಾಣುತ್ತೇವೆ. ತನ್ನ ಕರೆಗೆ ತಕ್ಷಣವೇ ಮತ್ತು ಹೃತ್ಪೂರ್ವಕವಾಗಿ ಓಗೊಡುವವರರನ್ನು ದೇವರು ಕರೆಯುತ್ತಾರೆ. ತಮಗೆ ದೇವರ ಕರೆಯನ್ನು ಧೃಡೀಕರಿಸಲು ಮತ್ತು ತಮ್ಮದೇ ಭಾವನೆಗಳಿಂದ ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ದೈವೀಕ ಮನುಷ್ಯರೊಡನೆ ಚರ್ಚೆ ಮಾಡಬಹುದು. ತನ್ನ ಸೇವೆ ಮಾಡಲು ದೇವರು ಅಂಥಹ ಜನರನ್ನು ಮಾತ್ರ ಉಪಯೋಗಿಸಬಹುದು, ಯಾಕೆಂದರೆ, ಅವನ ಸೇವೆಗೆ, ತಕ್ಷಣದ ವಿಧೇಯತೆ, ಸಂಪೂರ್ಣ ಸಮರ್ಪಣೆ ಮತ್ತು ಕಠಿಣ(ಪರಿಶ್ರಮ) ಕೆಲಸದ ಅಗತ್ಯವಿದೆ.
ನಾವು ನಂಬಿಗಸ್ಥರಾಗಿದ್ದೇವೆಯೇ ಎಂದು ದೇವರು ನಮ್ಮನ್ನು ನಮ್ಮ ಪ್ರಾಪಂಚಿಕ ಕೆಲಸಗಳಲ್ಲಿ ಪರೀಕ್ಷಿಸುತ್ತಾನೆ. ಒಂದು ಕೋಣೆಯನ್ನು ಶುಚಿಗೊಳಿಸಲು ನಿನಗೆ ಹೇಳಿದರೆ, ನೀನು ಅದನ್ನು ಮಾಡುವುದರಲ್ಲಿ ಅಜಾಗರೂಕತೆ ತೋರಿಸಿದರೆ ಅಥವಾ ಅಸಡ್ಡೆಯಿಂದಿದ್ದರೆ, ಅವನ ಸೇವೆ ಮಾಡಲು ದೇವರು ನಿನ್ನನ್ನು ಕರೆಯುತ್ತಾರೆಂಬುದುದರಲ್ಲಿ ನನಗೆ ಸಂಶಯವಿದೆ. ನೀನು ಆ ರೀತಿ ಒಂದು ಕೋಣೆಯನ್ನು ಶುಚಿಮಾಡುವುದಾದರೆ, ಬಹುಶ: ನೀನು ನಿನ್ನ ಹೃದಯವನ್ನು ಶುಚಿಮಾಡುವುದೂ ಅದೇ ರೀತಿಯಾಗಿರಬಹುದು. ಹಾಗಾದಲ್ಲಿ, ಸಭೆಯನ್ನು ಶುಚಿಗೊಳಿಸಲು ದೇವರು ನಿನ್ನನ್ನು ಉಪಯೋಗಿಸುವುದು ಹೇಗೆ? ಸಣ್ಣ ವಿಷಯಗಳಲ್ಲಿನ ನಂಬಿಗಸ್ಥತೆಯನ್ನು ದೇವರು ಎದುರು ನೋಡುತ್ತಾರೆ.