ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ
WFTW Body: 

ನಮ್ಮ ಮನೆಗೆ ಸಂಬಂಧಿಸಿದಂತೆ, ಎಫೆಸ ಅಧ್ಯಾಯ 5 ಮತ್ತು 6ರಲ್ಲಿ ಗಂಡ ಮತ್ತು ಹೆಂಡತಿ (ಎಫೆಸ 5:22-23), ಮಕ್ಕಳು ಮತ್ತು ಪೋಷಕರು (ಎಫೆಸ 6:1-4 ) ಮತ್ತು ಮೇಲಾಧಿಕಾರಿ ಮತ್ತು ಸೇವಕ (ಎಫೆಸ 6:5-9), ಈ ಮೂರು ಸಂಬಂಧಗಳ ಬಗ್ಗೆ ಹೇಳಲಾಗಿದೆ. ಈ ಕೊನೆಯ ಭಾಗ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಸೇವಕರಿಗೆ ಹಾಗೂ ಕಛೇರಿಯಲ್ಲಿ ಅಥವಾ ಕಂಪನಿಯಲ್ಲಿ ಅಥವಾ ಸರ್ಕಾರದಲ್ಲಿನ ಮೇಲಾಧಿಕಾರಿಯ ಕೈಕೆಳಗೆ ಉದ್ಯೋಗ ಮಾಡುವವರಿಗೆ ಅನ್ವಯಿಸುತ್ತದೆ. ಆದ್ದರಿಂದ ನಾವು ಯಜಮಾನ/ಯಜಮಾನಿಯಾಗಿ ಮತ್ತು ಸೇವಕ ಅಥವಾ ಸೇವಕಿಯಾಗಿ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ಹೇಗಿರಬೇಕೆಂದು ಈ ಬೋಧನೆಗಳು ನಮಗೆ ಕಲಿಸುತ್ತವೆ. ನಾವೆಲ್ಲರೂ ನಮ್ಮ ಹೆಚ್ಚಿನ ಸಮಯವನ್ನು ಈ ಎರಡು ಸ್ಥಳಗಳಲ್ಲಿ - ಮನೆ ಅಥವಾ ಕಛೇರಿಯಲ್ಲಿ ಕಳೆಯುತ್ತೇವೆ. ಆತ್ಮಭರಿತ ಒಬ್ಬ ಮನುಷ್ಯನು ಮನೆಯಲ್ಲಿಯೂ ಮತ್ತು ತಾನು ಕೆಲಸ ಮಾಡುವಂತಹ ಕಛೇರಿಯಲ್ಲಿಯೂ ಕ್ರಿಸ್ತನ ಆತ್ಮವನ್ನು ತೋರ್ಪಡಿಸುತ್ತಾನೆ. ಕೇವಲ ಇಂಥಹ ಆತ್ಮನಿಂದ ಮಾತ್ರ ನಾವು ಕ್ತಿಸ್ತನ ದೇಹವನ್ನು ಕಟ್ಟಲು ಸಾಧ್ಯ.

ಎಫೆಸ ಪತ್ರಿಕೆಯು ಕ್ರಿಸ್ತನ ದೇಹವನ್ನು ಕಟ್ಟುವುದರ ಬಗ್ಗೆ ಮಾತನಾಡುತ್ತದೆ. ನಮ್ಮ ನಡತೆಯ ಮೂಲಭೂತ ನಿಯಮವೇನಾಗಿರಬೇಕೆಂದರೆ : ಕ್ರಿಸ್ತನಿಗೆ ಭಯಪಡುವವರಾಗಿದ್ದು, ಒಬ್ಬರಿಗೊಬ್ಬರು ವಿನಯವುಳ್ಳವರಾಗಿ (ಅಧೀನರಾಗಿ) ನಡೆದುಕೊಳ್ಳುವುದು (ಎಫೆಸ 5:21). ಹಾಗಾಗಿ ಹೆಂಡತಿಯರು ತಮ್ಮ ಗಂಡಂದಿರಿಗೆ ವಿನಯವುಳ್ಳವರಾಗಿರುವ ಹಾಗೇ, ಗಂಡಂದಿರು ಸಹ ತಮ್ಮ ಹೆಂಡತಿಯೊಟ್ಟಿಗೆ ವಿನಯವುಳ್ಳವರಾಗಿ ನಡೆದುಕೊಳ್ಳಬೇಕು. ಅದೇ ರೀತಿಯಲ್ಲಿ, ತಂದೆಯರು ಸಹ ತಮ್ಮ ಮಕ್ಕಳೊಡನೆ ವಿನಯವುಳ್ಳವರಾಗಿ ನಡೆದುಕೊಳ್ಳಬೇಕು ಮತ್ತು ಯಜಮಾನರು ತಮ್ಮ ಸೇವಕರೊಡನೆ ವಿನಯವುಳ್ಳವರಾಗಿ ನಡೆದುಕೊಳ್ಳಬೇಕು. ಇದರ ಅರ್ಥವೇನು?

ದೇವರು ಪ್ರತಿಯೊಬ್ಬರ ಸುತ್ತ ಒಂದು ಮೇರೆಯನ್ನು ಹಾಕಿದ್ದಾನೆ ಮತ್ತು ನಾವೆಲ್ಲರೂ ಅದನ್ನು ಗೌರವಿಸಬೇಕು.

ಈ ರೀತಿಯಾಗಿ ಮಾತ್ರ ನಾವು ಎಲ್ಲರನ್ನೂ ಸನ್ಮಾನಿಸಲು ಸಾಧ್ಯ (1 ಪೇತ್ರ 2:17). ಗಂಡಂದಿರು, ಹೆಂಡತಿಯರು, ತಂದೆಯರು, ಮಕ್ಕಳು, ಮೇಲಾಧಿಕಾರಿ ಮತ್ತು ಸೇವಕರು, ಹೀಗೆ ಎಲ್ಲರ ಸುತ್ತಲೂ ದೇವರು ಮೇರೆಯನ್ನು ಹಾಕಿದ್ದಾನೆ. ನಿಮ್ಮ ಮನೆಯಲ್ಲಿ ಯಾರಾದರೂ ಸೇವಕರಾಗಿ ಕೆಲಸ ಮಾಡುತ್ತಿದ್ದರೆ, ಅವನಿಗೆ ಕೆಲವು ಹಕ್ಕುಗಳೆಂಬ ಗಡಿಯಿದೆ. ಅದನ್ನು ನೀವು ಉಲ್ಲಂಘಿಸುವಂತಿಲ್ಲ. ಉದಾಹರಣೆಗೆ, ಆತನಿಗೆ ಪ್ರತಿ ತಿಂಗಳಿಗೆ ಸರಿಯಾಗಿ ಸಂಬಳ ಕೊಡಬೇಕು. ಆತನ ಘನತೆಯನ್ನು ನೀವು ಗೌರವಿಸಬೇಕು. ಆತನನ್ನು ನೀವು ತಿದ್ದುವಾಗ, ನೀವು ಅವನನ್ನು ಅಪಮಾನ ಮಾಡುವಂತಿಲ್ಲ. ಈ ರೀತಿಯಾಗಿ ಮೇಲಾಧಿಕಾರಿಯು ತನ್ನ ಸೇವಕನೊಡನೆ ವಿನಯವುಳ್ಳವನಾಗಿರಬೇಕು.

ಅದೇ ರೀತಿ, ಕೆಟ್ಟ ನಡತೆಗಾಗಿ ಒಂದು ಮಗುವು ತನ್ನ ತಂದೆಯಿಂದ ಶಿಕ್ಷಿಸಲ್ಪಟ್ಟಾಗ, ಮಗುವಿನ ಘನತೆಯು ಗೌರವಿಸಲ್ಪಡಬೇಕು. ತಂದೆಯರು ತಮ್ಮ ಮಕ್ಕಳ ಸುತ್ತಲಿರುವ ಮೇರೆಗೆ ತಕ್ಕುದಾಗಿ ವಿನಯವುಳ್ಳವರಾಗಿ ನಡೆದುಕೊಳ್ಳಬೇಕು. ಒಬ್ಬ ತಂದೆಯಾಗಿ ನಾನೊಂದು ನಿಯಮವನ್ನು ಮಾಡಿದ್ದೆ. ಅದೇನೆಂದರೆ, ನಾನು ನನ್ನ ಮಕ್ಕಳನ್ನು ಇನ್ನೊಬ್ಬರ ಮುಂದೆ, ನಮ್ಮ ಮನೆಗೆ ಬಂದವರ ಮುಂದೆ ಅಥವಾ ಆತನ ಸಹೋದರರ ಮುಂದೆ ನಾನು ಶಿಕ್ಷಿಸಲಾರೆ ಎಂದು. ಏಕೆಂದರೆ ಅದು ಅವರಿಗೆ ಎರಡು ರೀತಿಯಾಗಿ ಶಿಕ್ಷಿಸಿದಂತಾಗುತ್ತದೆ. ಮೊದಲನೆಯದಾಗಿ ಕೋಲಿನ ಹೊಡೆತ ಹಾಗೂ ಎರಡನೆಯದಾಗಿ, ಇನ್ನೊಬ್ಬರ ಮುಂದೆ ಅಪಮಾನ. ಅಪಮಾನವು ಅವರಿಗೆ ಕೋಲಿನಿಂದ ಹೊಡೆತಕ್ಕಿಂತಲೂ ದೊಡ್ಡದಾದ ನೋವಾಗಿರುತ್ತದೆ. ಹಾಗಾಗಿ ಮಗುವು ಸಹ ತನ್ನ ಸುತ್ತ ಒಂದು ಘನತೆಯನ್ನು ಹೊಂದಿರುತ್ತದೆ ಹಾಗೂ ಆತನ ತಂದೆಯು ಆ ಮೇರೆಯನ್ನು ಗೌರವಿಸಬೇಕು.

ಅದರಂತೆಯೇ, ಹೆಂಡತಿಯು ತನ್ನ ಸುತ್ತ ಒಂದು ಮೇರೆಯನ್ನು ಹೊಂದಿದ್ದಾಳೆ. ಆಕೆಯು ಅಡುಗೆ ಮನೆಯಲ್ಲಿ ಏನು ಬೇಕಾದರೂ ಮಾಡಬಹುದು. ಅದು ಆಕೆಯ ಕ್ಷೇತ್ರ. ಆಕೆಯ ಗಂಡನು ಅಡುಗೆ ಮನೆಯ ವಿಷಯದಲ್ಲಿ ತಲೆ ಹಾಕಬಾರದು. ಎಲ್ಲಾ ವಿಷಯಗಳಲ್ಲಿ ಕ್ರಮಬದ್ಧವಾಗಿದ್ದ ಒಬ್ಬ ದೈವಿಕ ಮನುಷ್ಯನ ಬಗ್ಗೆ ನಾನು ಕೇಳಿದ್ದೇನೆ. ಆದರೆ ಆತನ ಹೆಂಡತಿಯು ಇದಕ್ಕೆ ತದ್ವಿರುದ್ಧವಾದವಳಾಗಿದ್ದಳು. ಆಕೆಯು ತನ್ನ ಅಡುಗೆ ಮನೆಯಲ್ಲಿ ತಟ್ಟೆಗಳನ್ನು ಮತ್ತು ಪಾತ್ರೆಗಳನ್ನು ಕ್ರಮಬದ್ಧವಾಗಿಡದೆ, ಎಲ್ಲವನ್ನು ಒಟ್ಟಾಗಿ ಇಡುತ್ತಿದ್ದಳು. ಗಂಡನು ಪಾತ್ರೆಗಳನ್ನು ತೊಳೆಯಲು ಅಡುಗೆ ಮನೆಗೆ ಹೋದಾಗ, ಪಾತ್ರೆಗಳನ್ನು ಕ್ರಮವಾಗಿ (ಸರಿಯಾಗಿ) ಇಡುವಂತ ಶೋಧನೆಯು ಆತನಿಗೆ ಬರುತ್ತಿತ್ತು. ಆದರೆ ಆತನು ಈ ರೀತಿ ಮಾಡುವುದರಿಂದ, ತನ್ನ ಹೆಂಡತಿಗೆ ಈ ರೀತಿ ಮಾಡಲಾಗದೆ, ಆಕೆಯು ನಿರುತ್ಸಾಹಗೊಳ್ಳಬಹುದು ಎಂದರಿತು ಆಕೆಯು ಸಂತೋಷದಿಂದಿರಲಿ ಎಂದು ಅವನೂ ಪಾತ್ರೆಗಳನ್ನು ಕ್ರಮವಿಲ್ಲದೆಯೇ ಇಡುತ್ತಿದ್ದನು. ಇದರ ಫಲಿತಾಂಶವೇನು? ಅವರ ಅಡುಗೆ ಅಡುಗೆ ಮನೆ ವ್ಯವಸ್ಥಿತವಿಲ್ಲದಿದ್ದರೂ , ಅವರಿಬ್ಬರ ಮಧ್ಯೆ ಅದ್ಭುತವಾದ ಅನ್ಯೋನ್ಯತೆಯಿತ್ತು! ಕ್ರಿಸ್ತನೊಡನೆ ಭಯಭಕ್ತಿಯುಳ್ಳವನಾಗಿ, ತನ್ನ ಹೆಂಡತಿಯೊಡನೆ ಹೇಗೆ ವಿನಯವುಳ್ಳವನಾಗಿರಬೇಕೆಂದು ಈ ದೈವಿಕ ಸಹೋದರನಿಗೆ ಗೊತ್ತಿತ್ತು! ಆತನು ಜ್ಞಾನಿಯಾಗಿದ್ದನು ಮತ್ತು ತನ್ನ ಮತ್ತು ಹೆಂಡತಿಯ ನಡುವಿನ ಅನ್ಯೋನ್ಯತೆಯು ಬಹು ಮುಖ್ಯವಾದುದೆಂದು ಆತನು ಗ್ರಹಿಸಿಕೊಂಡಿದ್ದನು. ಆತನು ತನ್ನ ಅಡುಗೆ ಮನೆಯಲ್ಲಿ ತಟ್ಟೆಗಳು ಮತ್ತು ಪಾತ್ರೆಗಳು ವ್ಯವಸ್ಥಿತವಾಗಿ ಇವೆಯೋ, ಇಲ್ಲವೋ ಎಂಬುದರ ಬಗ್ಗೆ ಆತನಿಗೆ ಗಮನವಿರಲಿಲ್ಲ. ಕೆಲವು ದಂಪತಿಗಳು ಮೂರ್ಖರಾಗಿರುತ್ತಾರೆ. ಪರಸ್ಪರ ಅನ್ಯೋನ್ಯತೆಗಿಂತ ತಮ್ಮ ಮನೆಯು ಚೆನ್ನಾಗಿ ಕಾಣಬೇಕು ಎಂದು ಅವರು ಬಯುಸುತ್ತಾರೆ.

ಶುಚಿಯಾದ ಮತ್ತು ಅಚ್ಚುಕಟ್ಟಾದ ಮನೆಗಿಂತ, ಪೋಷಕರ ಮತ್ತು ಮಕ್ಕಳ ನಡುವಿನ ಅನ್ಯೋನ್ಯತೆಯು ಬಹು ಮುಖ್ಯವಾದದ್ದಾಗಿದೆ. ನಾವು ಖಂಡಿತವಾಗಿ ನಮ್ಮ ಮಕ್ಕಳಿಗೆ ಶುಚಿಯಾಗಿ ಮತ್ತು ಅಚ್ಚುಕಟ್ಟಾಗಿರಲು ಕಲಿಸಬೇಕು ಮತ್ತು ಪ್ರತಿಯೊಂದು ವಸ್ತುವನ್ನು ಸರಿಯಾದ ಜಾಗದಲ್ಲಿ ಇಡುವಂತೆ ತಿಳಿಸಬೇಕು. ಆದರೆ ಅವರು ಚಿಕ್ಕವರಾಗಿರುವಾಗ ಮತ್ತು ಮನೆಯಲ್ಲಿ ಆಟ ಆಡುವಾಗ, ಎಲ್ಲವನ್ನು ಶುಚಿಯಾಗಿ ಮತ್ತು ಅಚ್ಚುಕಟ್ಟಾಗಿ ಯಾವಾಗಲೂ ಇಡುವುದು ಅಸಾಧ್ಯವಾದುದಾಗಿದೆ. ಮನೆಯಲ್ಲಿ ಮಾತ್ರ ನಮ್ಮ ಮಕ್ಕಳು ಸ್ವತಂತ್ರವಾಗಿ, ಹೇಗೆ ಬೇಕಾದರೂ ಇರಲು ಸಾಧ್ಯ. ವೈಯುಕ್ತಿಕವಾಗಿ, ಮತ್ತೊಬ್ಬರು ನನ್ನ ಮನೆಯು ಶುಚಿಯಾಗಿ ಇದೆಯೋ, ಇಲ್ಲವೋ ಎಂದು ಯೋಚಿಸುತ್ತರೋ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಹೆಂಡತಿ ಮತ್ತು ಮಕ್ಕಳು ನನ್ನ ಮನೆಯಲ್ಲಿ ಸಂತೋಷವುಳ್ಳವರಾಗಿರಬೇಕು ಮತ್ತು ನಾನು ಅವರೊಟ್ಟಿಗೆ ಅನ್ಯೋನ್ಯತೆಯಿಂದಿರಬೇಕು. ಅದು ನನಗೆ ತುಂಬಾ ಮುಖ್ಯವಾದದ್ದು. ಮನೆಯನ್ನು ಶುಚಿ ಮತ್ತು ಅಚ್ಚುಕಟ್ಟಾಗಿ ಇಡುವುದಕ್ಕಿಂತ, ಅನ್ಯೋನ್ಯತೆಗೆ ಯಾವಾಗಲೂ ಹೆಚ್ಚಿನ ಬೆಲೆ ಕೊಡಿ.

ಎಫೆಸ 5 ರಲ್ಲಿ ಮುಂದೆ ಹೇಳಿರುವುದೇನೆಂದರೆ, ಗಂಡನು ತನ್ನ ಶಿರಸ್ಸುಎಂದು ಹೆಂಡತಿಯು ತನ್ನ ಗಂಡನ ಅಧಿಕಾರವನ್ನು ಗ್ರಹಿಸಿಕೊಳ್ಳಬೇಕು. ದೇವರು ಗಂಡನನ್ನು ಶಿರಸ್ಸನ್ನಾಗಿ ನೇಮಿಸಿದ್ದಾನೆ. ನಮ್ಮ ದೇಹದಲ್ಲಿ ಮೆದುಳು ಹೇಗೋ ಹಾಗೇ. ಮೆದುಳು (ತಲೆ) ದೇಹದ ಎಲ್ಲ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ . ಅದೇ ರೀತಿ, ಗಂಡನು ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಶಿರಸ್ಸಾಗಿರುವುದೆಂದರೆ , ಕೇವಲ ಅಪ್ಪಣೆ ಕೊಡುವುದಲ್ಲ. ಮೆದುಳು ದೇಹಕ್ಕೆ ಆಜ್ಞೆ ಕೊಡುತ್ತದೆ ಮತ್ತು ಕೈ, ಕಾಲು ಮತ್ತು ನಾಲಿಗೆಗೆ ಅನೇಕ ಸಂಗತಿಗಳನ್ನು ಮಾಡಲು ಹೇಳುತ್ತದೆ. ಅದರ ಜೊತೆಗೆ ಮೆದುಳು ದೇಹದ ಈ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ದೇಹದ ಯಾವುದೇ ಒಂದು ಭಾಗದಲ್ಲಿ ಒಂದು ಸಣ್ಣ ಗಾಯವಾಗಿದ್ದರೂ, ತಲೆಯು ಅದನ್ನು ತಕ್ಷಣವೇ ತಿಳಿದುಕೊಂಡು, ಆ ಭಾಗವನ್ನು ಸರಿ ಮಾಡಲು ಪ್ರಯತ್ನಿಸುತ್ತದೆ. ಅದೇ ರೀತಿ ಗಂಡನು, ಶಿರಸ್ಸಾಗಿದ್ದುಕೊಂಡು, ತನ್ನ ಹೆಂಡತಿಯ ಯಾವುದೇ ನೋವಿಗೆ ಸೂಕ್ಷ್ಮಮತಿಯುಳ್ಳವನಾಗಿರಬೇಕು. ಕ್ರಿಸ್ತನು ನಮ್ಮ ಶಿರಸ್ಸಾಗಿರುವುದು ಇದೇ ರೀತಿ. ನಾನು ದೈಹಿಕವಾದ ನೋವಿನ ಬಗ್ಗೆ ಮಾತ್ರ ಹೇಳುತ್ತಿಲ್ಲ, ಬದಲಾಗಿ ಭಾವನಾತ್ಮಕ ನೋವುಗಳ ಬಗ್ಗೆ ಸಹ ಹೇಳುತ್ತಿದ್ದೇನೆ. ಹೆಂಡತಿಯು ಯಾವಾಗ ಬೇಸರದಿಂದಿರುವಳೋ ಅಥವಾ ನಿರುತ್ಸಾಹಗೊಂಡಿರುವಳೋ ಅಥವಾ ಯಾವುದಾದರ ಬಗ್ಗೆ ನೋವಿನಿಂದಿರುವಾಗ, ಗಂಡನು ಆಕೆಯನ್ನು ಅರ್ಥಮಾಡಿಕೊಂಡು, ಆಕೆಗೆ ಸ್ವಸ್ಥತೆಯನ್ನು ತರಬೇಕು. ಯಾವ ಗಂಡನಾದರೂ ಈ ರೀತಿಯಾಗಿ ತನ್ನ ಹೆಂಡತಿಯನ್ನು ನೋಡಿಕೊಳ್ಳುತ್ತಿಲ್ಲವಾದರೆ, ಆತನು ಶಿರಸ್ಸಾಗಿರಲು ಅರ್ಹನಲ್ಲ. ಕೇವಲ ಅಪ್ಪಣೆಯನ್ನು ಕೊಡುವ ಶಿರಸ್ಸು ಸರ್ವಾಧಿಕಾರಿಯಾಗಿರುತ್ತದೆ! ಒಬ್ಬ ಸೂಕ್ಷ್ಮಮತಿಯಾದ ಗಂಡ ಮತ್ತು ಅಧೀನನಾಗಿರುವ ಹೆಂಡತಿ ಜೊತೆಯಾಗಿ - ಕ್ರಿಸ್ತ ಮತ್ತು ಸಭೆ ಎಂದರೆ ಏನು ಎಂಬುದನ್ನು ಈ ಜಗತ್ತಿಗೆ ತೋರಿಸಿಕೊಡುವವರಾಗಿದ್ದಾರೆ. ಈ ರೀತಿಯಾದಂತಹ ಮನೆಯನ್ನು ನಾವೆಲ್ಲರೂ ಕಟ್ಟಬೇಕು. ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಆದರೆ ಇದನ್ನು ನಾವು ನಮ್ಮ ಪೂರ್ಣ ಮನಸ್ಸಿನಿಂದ ಹಾತೊರೆಯಬೇಕು.

ಮಕ್ಕಳು ತಮ್ಮ ಪೋಷಕರಿಗೆ ವಿಧೇಯರಾಗಿ ನಡೆದುಕೊಳ್ಳುವಂತೆ ಅವರನ್ನು ಬೆಳೆಸಬೇಕು (ಎಫೆಸ 6:1-4) ನಮ್ಮ ಮಕ್ಕಳಿಗೆ ನಾವು ಕಲಿಸಬೇಕಾದ ಬಹು ಪ್ರಮುಖವಾದ ವಿಷಯವೆಂದರೆ, ಪೋಷಕರಿಗೆ ವಿಧೇಯರಾಗುವುದು. ಗುಲಾಮರು ತಮ್ಮ ಯಜಮಾನರಿಗೆ, ತೋರ್ಪಡಿಕೆಗೆ ಮಾತ್ರವಲ್ಲ, ಬದಲಾಗಿ ಹೃದಯಪೂರ್ವಕವಾಗಿ ವಿಧೇಯರಾಗಬೇಕು. ಮೇಲಾಧಿಕಾರಿಗಳು ತಮ್ಮ ಸೇವಕರೊಡನೆ ಕೃಪೆಯುಳ್ಳವರಾಗಿ ಮತ್ತು ಪಕ್ಷಪಾತವಿಲ್ಲದೆ ನಡೆದುಕೊಳ್ಳಬೇಕೆಂದು ಮೇಲಾಧಿಕಾರಿಗಳನ್ನು ಎಚ್ಚರಿಸಲಾಗಿದೆ. (ಎಫೆಸ 6:5-9).