ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಪುರುಷರಿಗೆ
WFTW Body: 

ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರದಲ್ಲಿ, 4:1-8 ರಲ್ಲಿ, ಪೌಲನು ಲೈಂಗಿಕತೆಯ ಕ್ಷೇತ್ರದಲ್ಲಿ ಶುದ್ಧವಾಗಿರುವುದರ ಬಗ್ಗೆ ಮಾತನಾಡುತ್ತಾನೆ. ಈ ಪತ್ರದ 4:4 ರಲ್ಲಿನ ವಾಕ್ಯದ ಪದವನ್ನು ಎರಡು ರೀತಿಯಲ್ಲಿ ಅನುವಾದ ಮಾಡುವ (ಅರ್ಥ ಮಾಡುವ) ಸಾಧ್ಯತೆಯಿದೆ. ಇಲ್ಲಿ "ಪಾತ್ರೆ” (ಗ್ರೀಕ್ ಭಾಷೆಯಲ್ಲಿ, "ಸ್ಕೆಉಒಸ್") ಎಂಬ ಪದವು ಬಹುಶ: ನಮ್ಮ ದೇಹಕ್ಕೆ ಅಥವಾ ನಮ್ಮ ಹೆಂಡತಿಗೆ ಉಲ್ಲೇಖಿಸಲ್ಪಟ್ಟಿರಬಹುದು.

ಆದ್ದರಿಂದ, ಇದರ ಅರ್ಥ ಈ ಹೀಗಿರಬಹುದು: "ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ದೇಹವನ್ನು ಪವಿತ್ರತೆಯಿಂದಲೂ ಮತ್ತು ಘನತೆಯಿಂದಲೂ ಹೇಗೆ ಹೊಂದಿರಬೇಕೆಂದು ತಿಳಿದಿರಬೇಕು”. ನಾವು ನಮ್ಮ ದೇಹವನ್ನು ಪವಿತ್ರತೆಯಿಂದಲೂ ಮತ್ತು ಶುದ್ಧತೆಯಿಂದಲೂ ಇಟ್ಟುಕೊಳ್ಳುವುದನ್ನು ಕಲಿಯಬೇಕು, ಏಕೆಂದರೆ ದೇವರ ಚಿತ್ತವು ನಾವು ಶುದ್ಧ(ಪವಿತ್ರ)ರಾಗಿರಬೇಕೆಂಬುದೇ ಆಗಿದೆ (1ಥೆಸಲೋನಿಕದವರಿಗೆ 4:3).ಹಲವು ಕ್ಷೇತ್ರಗಳಲ್ಲಿ ದೇವರ ಚಿತ್ತವೇನೆಂಬುದು ನಮಗೆ ಗೊತ್ತಿಲ್ಲ. ಆದರೆ ಈ ಒಂದು ಕ್ಷೇತ್ರದಲ್ಲಿ ದೇವರ ಚಿತ್ತ ಏನೆಂಬುದು ನಮಗೆ ಸ್ಪಷ್ಟವಾಗಿ ಗೊತ್ತು. ಪಾಪವುಳ್ಳ ಎಲ್ಲವುಗಳಿಂದ, ಪ್ರಾಪಂಚಿಕತೆಯಿಂದ ಮತ್ತು ಕ್ರಿಸ್ತನ ರೀತಿ ಇಲ್ಲದೇ ಇರುವಂತದ್ದರಿಂದ ಬೇರ್ಪಡುವುದೇ ಶುದ್ಧತೆ ಎಂಬುದರ ಅರ್ಥವಾಗಿದೆ. ಇಂತಹ ಎಲ್ಲಾ ಕೆಟ್ಟತನಗಳಿಂದ ನಮ್ಮ ದೇಹಗಳನ್ನು ಹೇಗೆ ಬೇರ್ಪಡಿಸಬೇಕು (ಬಿಡುಗಡೆಗೊಳಿಸಬೇಕು) ಎಂಬುದನ್ನು ನಾವು ಕಲಿಯಬೇಕು.

4:4ರಲ್ಲಿನ ಪದವನ್ನು ನಾವು ಹೀಗೂ ಅರ್ಥೈಸಬಹುದು - "ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಹೆಂಡತಿಯನ್ನು ಪವಿತ್ರವಾದ ಮನಸ್ಸಿನಿಂದಲೂ (ಶುದ್ಧತೆ) ಮತ್ತು ಘನತೆಯಿಂದಲೂ ಹೇಗೆ ಪಡೆದುಕೊಳ್ಳಬೇಕೆಂದು ತಿಳಿದಿರಬೇಕು”. ಇದರ ಅರ್ಥವೇನೆಂದರೆ, ನಿಮ್ಮ ಹೆಂಡತಿಯನ್ನು ಪಡೆದುಕೊಳ್ಳುವ ದಾರಿಯು ಪವಿತ್ರತೆಯಿಂದಲೂ ಮತ್ತು ಶುದ್ಧತೆಯಿಂದಲೂ ಕೂಡಿರಬೇಕು. ಜನರು ತಮ್ಮ ಹೆಂಡತಿಯರನ್ನು ಹಲವು ಅಪವಿತ್ರವಾದ ರೀತಿಯಲ್ಲಿ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ವರದಕ್ಷಿಣೆಯನ್ನು ಪಡೆಯುವುದು ಅಪವಿತ್ರವಾದ ದಾರಿಗಳಲ್ಲಿ ಒಂದಾಗಿದೆ. ನೀನು ಪವಿತ್ರವಾದ ರೀತಿಯಲ್ಲಿ ಹೆಂಡತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತೀಯ ಅಥವಾ ಪ್ರಾಪಂಚಿಕ ಆರ್ಹತೆಗಳಿಗೆ ಗಮನ ಕೊಡುತ್ತೀಯಾ? "ಕಾಮೋದ್ರೇಕ”ದ ದೃಷ್ಟಿಯಿಂದ ಹೆಂಡತಿಯನ್ನು ಪಡೆಯಲು ಪ್ರಯತ್ನಿಸುವುದು, ಕ್ರೈಸ್ತನಲ್ಲದವನು ಹೆಂಡತಿಯನ್ನು ಪಡೆಯುವ ರೀತಿಯಾಗಿದೆ. ಆದರೆ ನೀನು ದೇವರ ಸೇವೆ ಮಾಡಬೇಕೆಂದು ಬಯಸಿದರೆ, ನಿನಗಿರುವ ದೈವಿಕ ಬಯಕೆಯನ್ನೇ ಹೊಂದಿರುವವಳನ್ನು ನಿನ್ನ ಹೆಂಡತಿಯನ್ನಾಗಿ ನೀನು ಪಡೆಯಬೇಕು.

1 ಥೆಸಲೋನಿಕ 4:6ರಲ್ಲಿ ಪೌಲನು ಮುಂದೆ ಹೇಳುತ್ತಾ ಹೋಗುತ್ತಾನೆ - "ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು." ಇದರ ಅರ್ಥವೇನೆಂದರೆ - "ಇನ್ನೊಬ್ಬನ ಹೆಂಡತಿಯ ಜೊತೆ ಅತೀ ಸ್ನೇಹದಿಂದಿರಬೇಡಿ." ಏಕೆಂದರೆ, ಯಾರು ಈ ರೀತಿಯಾಗಿ ವರ್ತಿಸುತ್ತಾರೋ, ಅವರಿಗೆ ದೇವರು ಮುಯ್ಯಿಗೆ ಮುಯ್ಯಿ ತೀರಿಸುವವನಾಗಿದ್ದಾನೆ” ವಿರುದ್ಧ ಲಿಂಗದ ವ್ಯಕ್ತಿಗಳ ಜೊತೆಗಿನ ನಮ್ಮ ಸಂಬಂಧದಲ್ಲಿ ನಾವು ತುಂಬಾ ಎಚ್ಚರಿಕೆಯುಳ್ಳವರಾಗಿರಬೇಕು. ಏಕೆಂದರೆ, ಇಂದು ನಾವು ಜೀವಿಸುತ್ತಿರುವ ಸಮಾಜವು ಲೈಂಗಿಕ ಅನೈತಿಕತೆ (ದುರಾಚಾರ) ಪಾಪವೆಂದು ಪರಿಗಣಿಸದ ಥೆಸಲೋನಿಕದವರು ಜೀವಿಸಿದ ಸಮಾಜದಂತಿದೆ. ದೌರ್ಭಾಗ್ಯವೇನೆಂದರೆ, ಈ ದಿನಗಳಲ್ಲಿ ಅನೇಕ ಸಭೆಗಳಲ್ಲಿನ ಯುವಜನರಲ್ಲಿ ಮತ್ತು ಕ್ರೈಸ್ತ ಸೇವಕರಲ್ಲಿಯೂ ಲೈಂಗಿಕ ಅನೈತಿಕತೆಯಿದೆ. ಕ್ರೈಸ್ತರಾಗಿದ್ದು, ನಾವು ಲೋಕದಿಂದ ವಿಭಿನ್ನವಾಗಿರಬೇಕು ಮತ್ತು ಈ ಕ್ಷೇತ್ರದಲ್ಲಿ ನಾವು ಸ್ಪಷ್ಟವಾದ ಸಾಕ್ಷಿಯನ್ನು ಹೊಂದಿರಬೇಕು. ಇದು ಅತೀ ಮುಖ್ಯವಾದದ್ದು. ಈ ಕ್ಷೇತ್ರದಲ್ಲಿ ನಿಮ್ಮ ದೇಹವನ್ನು ಶುದ್ಧತೆಯಿಂದ ಹೇಗೆ ಸಂರಕ್ಷಿಸಿಡಬೇಕೆಂದು ನಿಮಗೆ ಗೊತ್ತಿರಬೇಕು. ಇಲ್ಲವಾದರೆ ನೀವು ದೇವರಿಗೆ ನಿರಾಸೆಯನ್ನುಂಟು ಮಾಡುತ್ತೀರಿ. ಸಮ್ಸೊನ ಮತ್ತು ದಾವೀದರಿಬ್ಬರೂ ದೇವರನ್ನು ಅರಿತಿದ್ದೂ, ಈ ಕ್ಷೇತ್ರದಲ್ಲಿ ವಿಫಲರಾದುದು ಬಹಳ ದು:ಖದಾಯಕ ಉದಾಹರಣೆಗಳಾಗಿದ್ದಾರೆ. ಈ ದಿನಗಳಲ್ಲಿಯೂ ಸಹ ಇವರ ರೀತಿಯಲ್ಲಿವವರು ಅನೇಕರಿದ್ದಾರೆ.