ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ
WFTW Body: 

ನಾವು ನೆಹೆಮೀಯ 1:1-3ರಲ್ಲಿ ನೋಡುವದು ಏನೆಂದರೆ, ಸೆರೆಯಾಗದೆ ಉಳಿದಿದ್ದ ಯೆಹೂದ್ಯರ ಮತ್ತು ಯೆರೂಸಲೇಮಿನ ಬಗ್ಗೆ ನೆಹೆಮೀಯನು ಆಸಕ್ತಿಯಿಂದ ವಿಚಾರಿಸುವುದನ್ನು. ಇದು ದೇವರಿಗೆ ಉಪಯುಕ್ತನಾದ ಪ್ರತಿಯೊಬ್ಬ ಮನುಷ್ಯನ ಮುಖ್ಯ ಗುಣವಾಗಿದೆ - ಅವನಲ್ಲಿ ಜನರ ಬಗ್ಗೆ ಅನುಕಂಪ ಇರುತ್ತದೆ ಮತ್ತು ದೇವರು ಅವನ ಹೃದಯದಲ್ಲಿ ಒಂದು ಭಾರವನ್ನು ಉಂಟುಮಾಡುವರು.

ನೀವು ಕರ್ತನ ಸೇವೆ ಮಾಡಲು ಉತ್ಸುಕರಾಗಿದ್ದಲ್ಲಿ, ಮೊದಲು ಇತರರ ಬಗ್ಗೆ ಅನುಕಂಪ ಹೊಂದಿರಿ. ಇತರರಲ್ಲಿ ಆಸಕ್ತಿ ಇರದ ವ್ಯಕ್ತಿಯನ್ನು ದೇವರು ಎಂದಿಗೂ ಬಳಸುವದಿಲ್ಲ. ನೆಹೆಮೀಯನು ಹನಾನೀಯನನ್ನು, "ಅಲ್ಲಿ ಏನು ನಡೆಯುತ್ತಿದೆ?" ಎಂದು ಕೇಳಿದನು. ಆಗ ಹನಾನೀಯನು ಅಲ್ಲಿ ಪೌಳಿಗೋಡೆಯು ಕೇಡವಲ್ಪಟ್ಟು, ಬಾಗಿಲುಗಳು ಸುಡಲ್ಪಟ್ಟಿವೆ ಎಂದು ತಿಳಿಸಿದನು. ನೆಹೆಮೀಯನಿಗೆ ಕೆಡವಲ್ಪಟ್ಟ ಗೋಡೆಗಳು ಮತ್ತು ಸುಡಲ್ಪಟ್ಟ ಬಾಗಿಲುಗಳ ಬಗ್ಗೆ ಕಳವಳ ಇತ್ತು. ಆ ವಾರ್ತೆಯನ್ನು ಕೇಳಿ ಅವನು ಅತ್ತನು, ಮತ್ತು ಅನೇಕ ದಿನಗಳ ವರೆಗೆ ಶೋಕಿಸಿ, ಉಪವಾಸದೊಡನೆ ದೇವರಲ್ಲಿ ವಿಜ್ಞಾಪನೆ ಮಾಡಿದನು. ಇಂದು ಇಂತಹ ಮನುಷ್ಯನು ದೇವರಿಗೆ ಬೇಕಾಗಿದ್ದಾನೆ - ದೇವಸಭೆಯ ಪರಿಸ್ಥಿತಿಯ ಬಗ್ಗೆ ಕಳವಳಗೊಂಡು, ಅದರ ಬಗ್ಗೆ ಹೃದಯದಲ್ಲಿ ಒಂದು ಭಾರವನ್ನು ಹೊಂದಿರುವವನು.

ನೆಹೆಮೀಯನು ಹಳೆಯ ಒಡಂಬಡಿಕೆಯ ವ್ಯಕ್ತಿ. ಪವಿತ್ರಾತ್ಮನು ನಮ್ಮಲ್ಲಿ ಇರುವಂತೆ, ಅವನಲ್ಲಿ ನೆಲೆಸಿರಲಿಲ್ಲ. ಅವನಿಗೆ ಇಂದು ನಮಗೆ ಧಾರಾಳವಾಗಿ ದೊರೆತಿರುವ ಸಂಪೂರ್ಣ ಸತ್ಯವೇದ, ಪುಸ್ತಕಗಳು, ಅಆ ಮತ್ತು ಆಗಿಆಗಳು, ಸಭೆಯ ಅನ್ಯೋನ್ಯತೆ ಅಥವಾ ಸಮ್ಮೇಳನಗಳು ಇವೆಲ್ಲವೂ ಸಿಕ್ಕಿರಲಿಲ್ಲ. ಅವನು ಶಿಲುಬೆಯ ವಿಷಯವನ್ನು ಕೇಳಿಯೇ ಇರಲಿಲ್ಲ. ಹಾಗಿದ್ದರೂ ಅವನಲ್ಲಿ ಅಷ್ಟು ವಿಶೇಷ ಭಾರವಿತ್ತು. ಅವನು "ಪೂರ್ಣಾವಧಿಯ ಸೇವಕನೂ" ಆಗಿರಲಿಲ್ಲ. ಅವನು ಒಂದು ಪ್ರಾಪಂಚಿಕ ಉದ್ಯೋಗವನ್ನು ಮಾಡುತ್ತಾ, ತನ್ನ ಖರ್ಚು-ವೆಚ್ಚವನ್ನು ಸ್ವತಃ ತಾನೇ ವಹಿಸಿಕೊಂಡು ಕರ್ತನ ಸೇವೆಗೆ ಇಳಿದಿದ್ದನು. ನೆಹೆಮೀಯ ಒಬ್ಬ ಸಂಪೂರ್ಣ ನಿಸ್ವಾರ್ಥಿ ಮತ್ತು ದೇವರ ನಾಮದ ಮಹಿಮೆಯೊಂದನ್ನೇ ಬಯಸುವವನು ಆಗಿದ್ದನು. ನಾವು ಅವನ ಉದಾಹರಣೆಯನ್ನು ಅನುಸರಿಸುವ ಸವಾಲನ್ನು ಸ್ವೀಕರಿಸುವದಾದರೆ, ದೇವರು ನಮ್ಮ ಬಾಳಿನಲ್ಲಿಯೂ ಏನಾದರೂ ಸಾಧಿಸಲು ಸಾಧ್ಯವಿದೆ.

ನೆಹೆಮೀಯನು ಅರಸನ ಸನ್ನಿಧಿಯಲ್ಲಿ ಹಿಂದೆಂದೂ ಖಿನ್ನನಾಗಿ ಇರಲಿಲ್ಲ (ನೆಹೆಮೀಯ 2:1). ಅವನು ವ್ಯಸನಪಡುವ ವ್ಯಕ್ತಿಯಾಗಿರಲಿಲ್ಲ. ಅರಸನು, ಆತನನ್ನು ಯಾವಾಗಲೂ ಹಸನ್ಮುಖಿಯಾಗಿ ಇದ್ದುದನ್ನು ಕಂಡಿದ್ದನು. ಮತ್ತು ಈಗ ಅವನು ಕಳೆಗುಂದಿದ್ದನು. ಆದರೆ ಅವನು ತನ್ನ ಬಗ್ಗೆ ಅಥವಾ ತನ್ನ ಕುಟುಂಬದ ಬಗ್ಗೆ ಶೋಕಿಸಲಿಲ್ಲ. ಯೆರುಸಲೇಮ್ ಅಷ್ಟು ಹಾಳುಗೆಡವಲ್ಪಟ್ಟ ಸ್ಥಿತಿಯಲ್ಲಿ ಇದ್ದುದಕ್ಕಾಗಿ ಅವನಲ್ಲಿ ಶೋಕವಿತ್ತು. ಓ, ಇಂತಹ ಹೃದಯವುಳ್ಳ ಅನೇಕರು ಇಂದು ಸಭೆಯಲ್ಲಿ ಇರುವದಾದರೆ ಎಷ್ಟು ಚೆನ್ನ!

ನೆಹೆಮೀಯನು ಯೆರುಸಲೇಮಿಗೆ ಹೋಗಿ, ಅಲ್ಲಿ ಮೂರು ದಿನಗಳು ಏನೂ ಮಾಡದೆ ಸುಮ್ಮನೆ ಇದ್ದನು - ಬಹುಶಃ ಉಪವಾಸ ಮತ್ತು ಪ್ರಾರ್ಥನೆ ಮಾಡಿರಬೇಕು (ನೆಹೆಮೀಯ 2:11). ಅನಂತರ ರಾತ್ರಿಯಲ್ಲಿ ಎದ್ದು, ತನ್ನ ಜೊತೆಯಲ್ಲಿ ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟನು. ಅವನು ತನ್ನಲ್ಲಿ ದೇವರು ಇರಿಸಿದ್ದ ಯೋಜನೆಯನ್ನು ಯಾರಿಗೂ ತಿಳಿಸಿರಲಿಲ್ಲ, ಏಕೆಂದರೆ ತನಗೆ ತಡೆಯೊಡ್ಡಲು ಅನೇಕ ಶತ್ರುಗಳು ಅಲ್ಲಿ ತಯಾರಾಗಿ ಇದ್ದುದು ಅವನಿಗೆ ತಿಳಿದಿತ್ತು (ನೆಹೆಮೀಯ 2:10). ದೇವರ ಕಾರ್ಯಕ್ಕಾಗಿ ಭಾರವಿಲ್ಲದ ಜನರನ್ನು ಸೇರಿಸಿಕೊಂಡು ಉಪಯೋಗವಿಲ್ಲ ಎಂದು ಅವನಿಗೆ ತಿಳಿದಿತ್ತು. ಹಾಗಾಗಿ ಅವನು ಕೆಲವೇ ಜನರೊಂದಿಗೆ ಹೋಗಿ, ಗೋಡೆಗಳು ಮತ್ತು ಬಾಗಿಲುಗಳನ್ನು ಪರೀಕ್ಷಿಸಿದನು.

ನೆಹೆಮೀಯನು ಒಬ್ಬ ಉತ್ತಮ ಕಾರ್ಯ ಸಂಯೋಜಕ ಮತ್ತು ಜನರನ್ನು ಪ್ರೇರೇಪಿಸಬಲ್ಲ ವ್ಯಕ್ತಿ ಆಗಿದ್ದನು. ಜನರು ಅವನೊಂದಿಗೆ ಕೆಲಸಮಾಡಲು ಇಷ್ಟಪಡುತ್ತಿದ್ದರು, ಏಕೆಂದರೆ ಅವನು ಸ್ವತಃ ದುಡಿಯುತ್ತಿದ್ದನು. ಇಂದು ದೇವರಿಗೆ ಇಂತಹ ಮುಖಂಡನು ಬೇಕಾಗಿದ್ದಾನೆ - ಉಪವಾಸ ಮತ್ತು ಪ್ರಾರ್ಥನೆಯಲ್ಲಿ ತೊಡಗಿರುವವನು, ದೇವರ ನಾಮದ ಬಗ್ಗೆ ಕಾಳಜಿ ಉಳ್ಳವನು, ಕಾರ್ಯ ಸಂಯೋಜನೆಯಲ್ಲಿ ನಿಪುಣನು ಮತ್ತು ಕರ್ತರಿಗಾಗಿ ಜನರನ್ನು ಪ್ರೇರೇಪಿಸಿ ಅವರೊಂದಿಗೆ ತಾನೂ ಸೇರಿ ದುಡಿಯಲು ಸಿದ್ಧನಿರುವವನು.

ನೆಹೆಮೀಯ 5:1-13ರಲ್ಲಿ, ಇಸ್ರಾಯೇಲ್ಯರ ನಡುವೆ ಇದ್ದ ಬಡವರು, ಶೋಷಿತರು ಮತ್ತು ಸಾಲಕ್ಕೆ ಸಿಲುಕಿದ್ದವರ ಬಗ್ಗೆ ನೆಹೆಮೀಯನಲ್ಲಿದ್ದ ವಿಶೇಷ ಕಾಳಜಿಯನ್ನು ನಾವು ನೋಡುತ್ತೇವೆ. ಅವನು ಅವರಿಗೆ ಸಾಲ ಕೊಟ್ಟಿದ್ದವರೊಂದಿಗೆ ಮಾತನಾಡಿ, ಅವರೆಲ್ಲರನ್ನು ಸಾಲದಿಂದ ಬಿಡುಗಡೆ ಮಾಡಿದನು. 18ನೇ ವಚನದಲ್ಲಿ, ನೆಹೆಮೀಯನು ಆ ಪ್ರಾಂತ್ಯದ ದೇಶಾಧಿಕಾರಿಯಾಗಿ ತನಗೆ ಸಲ್ಲತಕ್ಕ ವರಮಾನವನ್ನೂ ತೆಗೆದುಕೊಳ್ಳದೆ ಇದ್ದ ಅತ್ಯುತ್ತಮ ಉದಾಹರಣೆಯನ್ನು ನಾವು ನೋಡುತ್ತೇವೆ - ಅವನು ಸ್ವತಃ ಬಹಳ ಶ್ರಮಿಸಿ ದುಡಿಯುವದು ಅಲ್ಲದೆ, ತನ್ನ ಊಟದ ಮೇಜಿನಲ್ಲಿ ದಿನಾಲೂ ಉಣ್ಣುತ್ತಿದ್ದ 150 ಯೆಹೂದ್ಯರು ಮತ್ತು ಇತರ ದೇಶಗಳಿಗೆ ಸೇರಿದವರಿಗೆ ಆಹಾರ ಒದಗಿಸುತ್ತಿದ್ದನು.

ಅವನು ಅತಿಥಿ ಸತ್ಕಾರ ಮಾಡುತ್ತಾ, ನೋಹ ಮತ್ತು ಪೌಲರಂತೆ, ತನ್ನ ಸ್ವಂತ ಖರ್ಚಿನಲ್ಲಿ ದೇವರ ಸೇವೆ ಮಾಡಿದ ಒಬ್ಬ ವ್ಯಕ್ತಿಯಾಗಿದ್ದನು. ಅವನು ಸಂಗ್ರಹವಾದ ಎಲ್ಲಾ ಹಣವನ್ನೂ ಗೋಡೆಯ ನಿರ್ಮಾಣಕ್ಕಾಗಿ ಬಳಸಿದನು. ದೇವಕಾರ್ಯಕ್ಕಾಗಿ ಇದ್ದ ಹಣದಲ್ಲಿ ಸ್ವಲ್ಪವನ್ನೂ ತನ್ನ ಸ್ವಂತಕ್ಕಾಗಿ ಉಪಯೋಗಿಸದಿದ್ದ, ಮಹಾ ತ್ಯಾಗಿಯಾಗಿದ್ದ ಒಬ್ಬ ವ್ಯಕ್ತಿಯನ್ನು ಇಲ್ಲಿ ನೋಡುತ್ತೇವೆ. ದೇವರು ತನ್ನ ಒಬ್ಬ ಸೇವಕನು ಹಣದ ವಿಷಯದಲ್ಲಿ ನಿಷ್ಠೆಯಿಂದ ನಡೆಯುವದನ್ನು ನೋಡಿದಾಗ, ಅವರು ಅವನನ್ನು ಉಪಯೋಗಿಸುವದಕ್ಕೆ ಪರಿಮಿತಿ ಇರುವದಿಲ್ಲ. ದೇವರು ತಮ್ಮ ಅನೇಕ ಸೇವಕರ ಕೈ ಬಿಟ್ಟುಬಿಡುವದು ಏಕೆಂದರೆ, ಅವರು ಆರ್ಥಿಕ ವಿಷಯದಲ್ಲಿ ತಮ್ಮ ಸಹೋದರರ ದುರುಪಯೋಗ ಮಾಡುವದು ಅವರಿಗೆ ತಿಳಿದಿರುವುದರಿಂದ.

9ನೇ ಅಧ್ಯಾಯದಲ್ಲಿ, ದೇವರು ನೆಹೆಮೀಯನ ಮೂಲಕ ಏನು ಮಾಡಿದರೆಂದು ನಾವು ಓದುತ್ತೇವೆ. ಆ ಅಧ್ಯಾಯದ ಆರಂಭ, ಇಸ್ರಾಯೇಲ್ಯರು ಉಪವಾಸದೊಂದಿಗೆ ತಮ್ಮ ಪಾಪಗಳನ್ನು ಅರಿಕೆಮಾಡಿ, ಅನ್ಯಕುಲದವರಿಂದ ತಮ್ಮನ್ನು ಬೇರೆ ಮಾಡಿಕೊಳ್ಳುವದರೊಂದಿಗೆ ಆಗುತ್ತದೆ (ವಚನ 1,2). ಅನಂತರ ಅವರು ಮೂರು ತಾಸುಗಳು ಧರ್ಮಶಾಸ್ತ್ರ ಪಾರಾಯಣ ಮಾಡಿ, ಇನ್ನೂ ಮೂರು ತಾಸು ದೇವರಿಗೆ ತಮ್ಮ ಪಾಪಗಳನ್ನು ಅರಿಕೆಮಾಡುತ್ತಾರೆ. ಇಲ್ಲಿ ಮತ್ತೊಮ್ಮೆ ಪುನರುಜ್ಜೀವನ ಕಾಣಿಸುತ್ತದೆ (ವಚನ 3). ಅನಂತರ ಲೇವಿಯರು ಎದ್ದು ನಿಂತು ಮಹಾ ಶಬ್ದದೊಂದಿಗೆ ಕರ್ತನಿಗೆ ಮೊರೆಯಿಡುವರು (ವಚನ 4). ಇಡೀ ಸತ್ಯವೇದದಲ್ಲಿ ಕಂಡುಬರುವ ಅತೀ ದೀರ್ಘವಾದ ಪ್ರಾರ್ಥನೆ ವ. 6ರಿಂದ ವ. 31ರ ವರೆಗೆ ಇರುತ್ತದೆ. ಲೇವಿಯರು ಅಬ್ರಹಾಮನ ಸಮಯದಿಂದ ಮೊದಲುಗೊಂಡು ಇಸ್ರಾಯೇಲ್ಯರ ಚರಿತ್ರೆಯನ್ನು ನೆನಸಿಕೊಂಡು, ಅವರು 40 ವರ್ಷಗಳು ಮರಳುಗಾಡಿನ ಅಲೆದಾಟದಲ್ಲಿ ಮತ್ತು ನ್ಯಾಯಸ್ಥಾಪಕರು ಮತ್ತು ಅರಸುಗಳ ಅವಧಿಗಳಲ್ಲಿ ಗೈದ ಪಾಪಗಳನ್ನು ಅರಿಕೆಮಾಡಿ, ಅವರ ನಡುವೆ ದೇವರು ಕಳುಹಿಸಿದ ಪ್ರತಿಯೊಂದು ನ್ಯಾಯತೀರ್ಪು ನೀತಿಯುತ ಮತ್ತು ಪ್ರಾಪ್ತವಾದುದು ಎಂದು ಒಪ್ಪಿಕೊಂಡರು. ಅಯ್ಯೋ, ನಾವು ಪಾಪ ಮಾಡಿದೆವು ಎಂದು ಹೇಳಿಕೊಂಡು, ದೇವರ ಮುಂದೆ ಒಂದು ಪ್ರತಿಜ್ಞೆಯನ್ನು ಬರೆದು, ಅದಕ್ಕೆ ನೆಹೆಮೀಯನು ಮೊದಲ್ಗೊಂಡು ಎಲ್ಲರೂ ಸಹಿ ಮಾಡಿದರು (ನೆಹೆಮೀಯ 10:1).

12ನೇ ಅಧ್ಯಾಯದಲ್ಲಿ, ನೆಹೆಮೀಯನು ಯೆರೂಸಲೇಮಿನ ಗೋಡೆಗಳು ಮತ್ತು ಪ್ರವೇಶದ್ವಾರಗಳನ್ನು ಕಾಯತಕ್ಕ ಜನರನ್ನೂ, ದೇವರ ಕೀರ್ತನೆಗಳನ್ನು ಮತ್ತು ಕೃತಜ್ಞತಾ ಸ್ತುತಿಯನ್ನು ಹಾಡತಕ್ಕ ಲೇವಿಯರ ಪಂಗಡಗಳನ್ನೂ ಹೇಗೆ ನೇಮಕ ಮಾಡಿದನು ಎಂದು ನಾವು ಓದುತ್ತೇವೆ. ದೇವಜನರು ಬಾಬೇಲಿನಿಂದ ಯೆರೂಸಲೇಮಿಗೆ ಚಲಿಸುವಲ್ಲಿ, ಉಪವಾಸ, ಪ್ರಾರ್ಥನೆ, ಪಾಪದ ಅರಿಕೆ, ಅನೇಕ ಗಂಟೆಗಳ ಕಾಲ ಸತ್ಯವೇದ ಅಧ್ಯಯನ, ದೀರ್ಘ ಸಭಾಕೂಟಗಳು, ಹೇರಳವಾಗಿ ದೇವರ ಸ್ತೋತ್ರ ಮತ್ತು ಆರಾಧನೆಗಳು, ಇವಕ್ಕೆ ಎಡೆಬಿಡದೆ ಮಹತ್ವ ನೀಡಿದ್ದನ್ನು ಗಮನಿಸಿರಿ.

13ನೇ ಅಧ್ಯಾಯದಲ್ಲಿ, ದೇವಾಲಯದ ಪರಿಶುದ್ಧತೆಗಾಗಿ ನೆಹೆಮೀಯನ ಹುರುಪನ್ನು ನಾವು ಕಾಣಬಹುದು. ಅವನು ದೇವಾಲಯದ ಒಳಕ್ಕೆ ಪ್ರವೇಶಿಸಿ, ಯೆರೂಸಲೇಮಿನ ದೇವಾಲಯದಲ್ಲಿ ಯೇಸುವು ಮಾಡಿದಂತೆ ಮಾಡಿದನು. ಜನರು ತಮ್ಮ

ಅನ್ಯಜಾತಿಯ ಸಂಬಂಧಿಕರಿಗೆ ದೇವಾಲಯದ ಕೊಠಡಿಗಳಲ್ಲಿ ವಾಸಿಸುವ ಅವಕಾಶ ನೀಡಿದ್ದನ್ನು ನೆಹೆಮೀಯನು ನೋಡಿದನು. ಯಾಜಕನಾದ ಎಲ್ಯಾಷೀಬನು ಟೋಬೀಯನ ಬೀಗನಾಗಿದ್ದನು (ನೆಹೆಮೀಯ 13:4), ಹಾಗಾಗಿ ಅವನಿಗೋಸ್ಕರ ದೇವಾಲಯ ಪ್ರಾಕಾರದೊಳಗೆ ಅವನು ಒಂದು ದೊಡ್ಡ ಕೊಠಡಿಯನ್ನು ಸಿದ್ಧಮಾಡಿ ಕೊಟ್ಟಿದ್ದನು. ನೆಹೆಮೀಯನು ಅವರೆಲ್ಲರನ್ನು ಹೊರಗೆ ಹಾಕಿಸಿದನು. ಅವನು "ಟೋಬೀಯನ ಮನೆಯ ಸಾಮಾನುಗಳನ್ನು ಆ ಕೊಠಡಿಯಿಂದ ಹೊರಕ್ಕೆ ಹಾಕಿಸಿ ಕೊಠಡಿಯನ್ನು ಶುದ್ಧಿ ಮಾಡುವದಕ್ಕೆ ಅಪ್ಪಣೆಕೊಟ್ಟನು" (ವಚನ 8). ಸಬ್ಬತ್ ದಿನದಲ್ಲಿ ಯೆರೂಸಲೇಮಿನಲ್ಲಿ ಅನೇಕ ಮಂದಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದುದನ್ನು ಅವನು ಗಮನಿಸಿದನು (ವ. 15). ಅವನು ಅವರನ್ನು ಗದರಿಸಿ, ತಿರಿಗಿ ಹೀಗೆ ಮಾಡಿದರೆ ಅವರನ್ನು ಹಿಡಿಸುವದಾಗಿ ಬೆದರಿಕೆ ನೀಡಿದನು (ವ. 21).

ಜನರಲ್ಲಿ ದೇವಭಯ ಇಲ್ಲದಿದ್ದಲ್ಲಿ, ಅವರಲ್ಲಿ ಒಬ್ಬ ದೈವಿಕ ಮನುಷ್ಯನ ಭಯವಾದರೂ ಇರಬೇಕು. ಕೆಲವು ಯೆಹೂದ್ಯರು ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದು ಅವನಿಗೆ ತಿಳಿಯಿತು. ನೆಹೆಮೀಯನು "ಕೋಪಗೊಂಡು ಅವರನ್ನು ಶಪಿಸಿ, ಅವರಲ್ಲಿ ಕೆಲವರನ್ನು ಹೊಡೆದು, ಅವರ ಕೂದಲುಗಳನ್ನು ಕಿತ್ತುಬಿಟ್ಟು, ಅನ್ಯರ ಮಕ್ಕಳಿಗೆ ಹೆಣ್ಣು ಕೊಡಬಾರದು, ಮತ್ತು ಅವರಿಂದ ತರಲೂ ಬಾರದು ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದನು" ವ. 25). ಈ ರೀತಿಯಾಗಿ ನೆಹೆಮೀಯನು ಯಾಜಕ ವಂಶಸ್ಥರನ್ನು ಯಾವುದೇ ಪಕ್ಷಪಾತವಿಲ್ಲದೆ ಶುದ್ಧಪಡಿಸಿದನು, ಯಾಜಕರ ಸೇವಾಕಾರ್ಯಗಳು ಕ್ರಮಬದ್ಧವಾಗಿ ಇರುವಂತೆ ಮಾಡಿದನು, ಅಷ್ಟೇ ಅಲ್ಲ, ಯಜ್ಞವೇದಿಯಲ್ಲಿ ಬೆಂಕಿ ಉರಿಸುವದಕ್ಕೆ ಕಟ್ಟಿಗೆಯ ಪೂರೈಕೆಯಂತಹ ವಿವರಗಳನ್ನೂ ಸಹ ವ್ಯವಸ್ಥೆಗೊಳಿಸಿದನು (ವ. 30,31)!