ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ
WFTW Body: 

ಜ್ಞಾನೋಕ್ತಿಗಳು 10:12 ರಲ್ಲಿ ”ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ” ಎಂಬುದಾಗಿ ಬರೆದಿದೆ. ಪೇತ್ರನು ತನ್ನ ಪತ್ರಿಕೆಯಲ್ಲಿ ಇದನ್ನು ಉಲ್ಲೇಖಿಸಿದ್ದಾನೆ (1 ಪೇತ್ರ 4:8). ನೀವು ನಿಜವಾಗಿ ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದಾದರೆ, ಆತನ ಬಲಹೀನತೆಗಳನ್ನು ಮುಚ್ಚುತ್ತೀರಿ ಮತ್ತು ಅವುಗಳನ್ನು ಬಹಿರಂಗ ಪಡಿಸುವುದಿಲ್ಲ. ಈ ರೀತಿಯಾಗಿಯೇ ದೇವರು ನಮ್ಮೊಟ್ಟಿಗೆ ವ್ಯವಹರಿಸುತ್ತಾನೆ. ದೇವರು ಯಾರ ಬಳಿಯೂ ನಮ್ಮ ಹಿಂದಿನ ಪಾಪಗಳನ್ನು ಬಹಿರಂಗ ಪಡಿಸಿಲ್ಲ. ದೇವರು ನಮ್ಮನ್ನು ನೋಡಿಕೊಂಡ ರೀತಿಯಲ್ಲಿಯೇ ನಾವು ಸಹ ಮತ್ತೊಬ್ಬರನ್ನು ನೋಡಬೇಕು. ನೀವು ಜ್ಞಾನಿಯಾಗಬೇಕಾದರೆ, ನನ್ನ ಪ್ರಿಯ ಸಹೋದರ ಮತ್ತು ಸಹೋದರಿಯರೆ, ನಿಮ್ಮ ಯೌವನದ ದಿನಗಳಲ್ಲಿ ಒಂದು ಸಣ್ಣ ಸಲಹೆಯನ್ನು ಕೊಡುತ್ತೇನೆ. ಒಬ್ಬರ ಬಗ್ಗೆ ಕೆಟ್ಟದಾದ ಯಾವುದೋ ಒಂದು ಸಂಗತಿ ನಿಮಗೆ ಗೊತ್ತಿದ್ದರೆ, ಅದು ನಿಮ್ಮೊಟ್ಟಿಗೆ ಕೊನೆಗಾಣಲಿ. ಇನ್ನೊಬ್ಬರ ಹತ್ತಿರ ಹೋಗಿ ಅದರ ಬಗ್ಗೆ ಮಾತನಾಡಬೇಡಿ. ನೀವು ಈ ರೀತಿ ಮಾಡಿದರೆ, ದೇವರು ನಿಮ್ಮನ್ನು ಸನ್ಮಾನಿಸುತ್ತಾನೆ. ವಿಶೇಷವಾಗಿ ಒಬ್ಬ ವ್ಯಕ್ತಿಯ ಮಕ್ಕಳಲ್ಲಿ ಒಬ್ಬರ ಬಗ್ಗೆ ಕೆಟ್ಟ ಸಂಗತಿ ನಿಮಗೆ ಗೊತ್ತಿದ್ದರೂ ಸಹ, ಅದು ಮತ್ತೊಬ್ಬರಿಗೆ ಗೊತ್ತಾಗದ ಹಾಗೇ ನಿಮ್ಮೊಟ್ಟಿಗೆ ಕೊನೆಗಾಣಲಿ. ಆಗ ಆ ವ್ಯಕ್ತಿಯು ವಿಶೇಷವಾಗಿ ನಿಮನ್ನು ಪ್ರೀತಿಸುತ್ತಾನೆ. ಒಬ್ಬ ತಂದೆಯ ಬಗ್ಗೆ ಯೋಚಿಸಿ, ಈತನ ಮಗ ಏನೋ ಒಂದು ತಪ್ಪನ್ನು ಮಾಡಿರುತ್ತಾನೆ ಮತ್ತು ನಿಮಗೆ ಇದರೆ ಬಗ್ಗೆ ಗೊತ್ತಿರುತ್ತದೆ ಎಂದು ತಿಳಿದುಕೊಳ್ಳಿ, ನೀವು ಆತನ ಮಗ ಏನು ಮಾಡಿದನು ಎಂದು ಯಾರಿಗೂ ಹೇಳದಿರುವಾಗ, ಅದಕ್ಕಾಗಿ ಆ ಮಗನ ತಂದೆಯು ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾನೆ ಎಂದು ನೀವು ಯೋಚಿಸುವುದಿಲ್ಲವೋ? ನಾವು ದೇವರ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೇವೆ ಎಂದು ನೋಡುವ ದೇವರು ಸಹ ನಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾನೆ. ”ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು” (ಜ್ಞಾನೋಕ್ತಿಗಳು 17:9) ಯಾರಾದರೂ ನಿಮಗೆ ತಪ್ಪನ್ನು ಎಸಗುತ್ತಾರಾ? ಯಾರಾದರೂ ನಿಮಗೆ ನೋವು ಅಥವಾ ಅವಮಾನ ಮಾಡುತ್ತಾರಾ? ಇದನ್ನು ಕ್ಷಮಿಸಿರಿ ಮತ್ತು ಇದನ್ನು ಗಣನೆಗೆ ತೆಗೆದುಕೊಳ್ಳಬೇಡಿರಿ. ಇದು ಪ್ರೀತಿಯ ಮಾರ್ಗವಾಗಿದೆ ಮತ್ತು ಇದರಲ್ಲಿ ದೈವಿಕ ಮನುಷ್ಯನು ನಡೆಯುತ್ತಾನೆ.

ಜ್ಞಾನೋಕ್ತಿಗಳು 11:24 - ”ಒಬ್ಬನು ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ”. ಕ್ರೈಸ್ತ ಜೀವಿತದಲ್ಲಿ ಇದೊಂದು ವಿರೋಧಾಭಾಸವಾಗಿದೆ. ಅದೇನೆಂದರೆ, ಕೊಡುವವನು ಹೆಚ್ಚು ಪಡೆದುಕೊಳ್ಳುವನು, ಏಕೆಂದರೆ ದೇವರು ಕೊಡುವವರನ್ನು ಆಶಿರ್ವದಿಸುತ್ತಾನೆ ಮತ್ತು ಜಿಪುಣನು ಬಡವನಾಗುತ್ತಾನೆ. ಒಬ್ಬ ಜಿಪುಣನು ಪರಿವರ್ತನೆಗೊಂಡಾಗ, ಉದಾರಿಯಾಗುತ್ತಾನೆ. ಯೇಸು ತನ್ನ ಶಿಷ್ಯಂದಿರಿಗೆ ಹೀಗೆ ಹೇಳಿದ್ದಾರೆ - ”ಉಚಿತವಾಗಿ ನೀವು ಪಡೆದುಕೊಂಡಿದ್ದೀರಿ, ಉಚಿತವಾಗಿ ಕೊಡಿರಿ” ಎಂದು. ದೇವರು ನಮಗೆ ಅನೇಕ ಸಂಗತಿಗಳನ್ನು ಉಚಿತವಾಗಿ ಕೊಟ್ಟಿದ್ದಾನೆ. ನಾವು ಸಹ ಮತ್ತೊಬ್ಬರಿಗೆ ಉಚಿತವಾಗಿಯೇ ಕೊಡಬೇಕು. ಸುವಾರ್ತೆಯಲ್ಲಿ ಬರುವಂತಹ ವಿಧವೆಯು, ಕೇವಲ ಎರಡು ನಾಣ್ಯಗಳನ್ನು ಮಾತ್ರ ಹೊಂದಿದ್ದಳು. ಆಕೆಯು ತನ್ನಲ್ಲಿರುವುದನ್ನು ಕೊಟ್ಟಳು ಮತ್ತು ಆಕೆಯನ್ನು ದೇವರು ಸನ್ಮಾನಿಸಿದ್ದಾನೆ ಎಂದು ನಾನು ನಿಶ್ಚಯಿಸಿಕೊಂಡಿದ್ದೇನೆ ಹಾಗೂ ಆಕೆಯು ಯಾವುದೇ ಅಭಾವವನ್ನು ಎದುರಿಸಿ, ಸಂಕಟಪಟ್ಟಿರಲಿಕ್ಕಿಲ್ಲ ಎಂದು ಸಹ ನಾನು ನಂಬುತ್ತೇನೆ. ಜ್ಞಾನೋಕ್ತಿಗಳು 11:25 ರಲ್ಲಿ ಹೀಗೆ ಹೇಳಲ್ಪಟ್ಟಿದೆ - ”ನೀರು ಹಾಯಿಸುವವನಿಗೆ ನೀರು ಸಿಕ್ಕುವದು”. ದೇವರು ನಿಮಗೆ ನೀರು ಹಾಯಿಸಬೇಕಾದರೆ ಮತ್ತು ನಿಮ್ಮನ್ನು ಹುಮ್ಮಸ್ಸಿನಿಂದ ಇಡಬೇಕಾದರೆ, ನೀವು ಮತ್ತೊಬ್ಬರಿಗೆ ನೀರು ಹಾಯಿಸಬೇಕು. ಏಕೆ ಅನೇಕ ಕ್ರೈಸ್ತರು ಹಳಸಾಗಿ ಮತ್ತು ಒಣಗಿಕೊಂಡವರಾಗಿ ಇರುತ್ತಾರೆ? ಏಕೆಂದರೆ ದೇವರು ಅವರಿಗೆ ನೀರನ್ನು ಹಾಯಿಸುತ್ತಿಲ್ಲ ಮತ್ತು ಏಕೆ ದೇವರು ಅವರಿಗೆ ನೀರನ್ನು ಹಾಯಿಸುತ್ತಿಲ್ಲ? ಏಕೆಂದರೆ ಅವರು ಮತ್ತೊಬ್ಬರಿಗೆ ನೀರನ್ನು ಹಾಯಿಸುತ್ತಿಲ್ಲ. ಮತ್ತೊಬ್ಬರ ಅಗತ್ಯತೆಗಳ ಬಗ್ಗೆ ಯೋಚಿಸುವುದನ್ನು ಪ್ರಾರಂಭಿಸಿ ಮತ್ತು ಹೇಗೆ ನೀವು ಅವರನ್ನು ಆಶಿರ್ವದಿಸಬೇಕೆಂದು ನೋಡಿ. ಆಗ ದೇವರು ನಿಮ್ಮನ್ನು ಹೇರಳವಾಗಿ ಆಶಿರ್ವದಿಸುವುದನ್ನು ನೀವು ಕಂಡುಕೊಳ್ಳುವಿರಿ.

ನಾವು ನಿಂತುಕೊಂಡಿದ್ದರೂ ಅಥವಾ ಕೂತುಕೊಂಡಿದ್ದರೂ ನಾವು ಬೀಳಬಹುದು. ಆದರೆ ನಮ್ಮ ಮುಖವನ್ನು ನೆಲಕ್ಕೆ (ತಳಮಟ್ಟಕ್ಕೆ) ಇರಿಸಿದರೆ, ನಾವು ಬೀಳುವುದಿಲ್ಲ!!

ಜ್ಞಾನೋಕ್ತಿಗಳು 15:13 : ”ಹರ್ಷ ಹೃದಯದಿಂದ ಹಸನ್ಮುಖ”. ನಮ್ಮ ಹೃದಯದಲ್ಲಿನ ಹರ್ಷವು ನಮ್ಮ ಮುಖದ ಮೇಲೆ ಹೊಳಪನ್ನು ತರುತ್ತದೆ. ”ಹರ್ಷ ಹೃದಯನಿಗೆ ನಿತ್ಯವೂ ಔತಣ” (ಜ್ಞಾನೋಕ್ತಿಗಳು15:15). ನಮ್ಮ ಜೀವಿತದಲ್ಲಿ ಹರ್ಷವನ್ನು ಹೊಂದಿಕೊಳ್ಳುವ ವಿಚಾರಕ್ಕೆ ಜ್ಞಾನೋಕ್ತಿಗಳಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ”ಹರ್ಷ ಹೃದಯವು ಒಳ್ಳೇ ಔಷಧ” (ಜ್ಞಾನೋಕ್ತಿಗಳು 17:22). ಹಾಗಾಗಿ ಹರ್ಷವು ನಮಗೆ ಒಳ್ಳೇ ಆರೋಗ್ಯವನ್ನು ಸಹ ದಯಪಾಲಿಸುತ್ತದೆ. ದೇವರ ರಾಜ್ಯವು ಕೇವಲ ನೀತಿಯಲ್ಲ, ಆದರೆ ಪವಿತ್ರಾತ್ಮನಿಂದಾಗುವ ಆನಂದದಿಂದ ಮಾಡುವ ನೀತಿಯು ನಿಜವಾದ ನೀತಿಯಾಗಿದೆ. ಹಳೆ ಒಡಂಬಡಿಕೆಯಲ್ಲಿನ ಜನರು ಆನಂದವಿಲ್ಲದ ನೀತಿಯನ್ನು ಹೊಂದಿದ್ದರು. ನಾವು ಈಗ ಆನಂದದ ಜೊತೆಗಿನ ನೀತಿಯನ್ನು ಹೊಂದಿದ್ದೇವೆ. ನಾವು ಯೇಸುವನ್ನು ಹಿಂಬಾಲಿಸುವಾಗ ನಮ್ಮ ಹೆಜ್ಜೆಯಲ್ಲಿ ಹುಮ್ಮಸ್ಸು ಇರುತ್ತದೆ, ನಮ್ಮ ಹೃದಯಗಳಲ್ಲಿ ಹಾಡಿರುತ್ತದೆ ಮತ್ತು ನಮ್ಮ ಮುಖಗಳಲ್ಲಿ ಪ್ರಕಾಶಮಾನ ಇರುತ್ತದೆ.

ಜ್ಞಾನೋಕ್ತಿಗಳು 16:18 - ”ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು” (ಕೆ.ಜೆ.ವಿ.ಭಾಷಾಂತರ). ಯಾರಾದರೂ ಪಾಪದಲ್ಲಿ ಬೀಳುತ್ತಾರೆ ಎಂದರೆ, ಅದಕ್ಕೆ ಮುಖ್ಯ ಕಾರಣ, ಆತನು ಗರ್ವಿಯಾಗಿರುತ್ತಾನೆ. ನಾವು ಏನಾದರೊಂದು ಮೂರ್ಖತನವನ್ನು ಮಾಡಿದಾಗ, ನಾವು ತಿಳಿದುಕೊಳ್ಳಬೇಕಾಗಿರುವುದೇನೆಂದರೆ, ಇದಕ್ಕೆ ಮೂಲ ಕಾರಣ ನಮ್ಮ ಗರ್ವ ಎಂಬುದಾಗಿ. ಕರ್ತನು ನಮ್ಮನ್ನು ಎಡವಿಬೀಳದಂತೆ ಕಾಪಾಡುತ್ತಾನೆ (ಯೂದನು 24). ಆತನು ಹೇಗೆ ಅದನ್ನು ಮಾಡುತ್ತಾನೆ? ನಮ್ಮನ್ನು ತಳಮಟ್ಟಕ್ಕೆ ತಗ್ಗಿಸುವುದರಿಂದ! ನಾವು ನಿಂತುಕೊಂಡಿದ್ದರೂ ಅಥವಾ ಕೂತುಕೊಂಡಿದ್ದರೂ ನಾವು ಬೀಳಬಹುದು. ಆದರೆ ನಮ್ಮ ಮುಖವನ್ನು ನೆಲಕ್ಕೆ (ತಳಮಟ್ಟಕ್ಕೆ) ಇರಿಸಿದರೆ, ನಾವು ಬೀಳುವುದಿಲ್ಲ!! ನಾವು ಬೀಳಬಾರದೆಂದರೆ, ನಮ್ಮ ಬಾಯನ್ನು ಎಲ್ಲಾ ಸಮಯದಲ್ಲಿಯೂ ಧೂಳಿನಲ್ಲಿ ಇಡೋಣ. ದೇವರು ನಮ್ಮನ್ನು ಎಷ್ಟೇ ಆಶಿರ್ವದಿಸಿದರೂ ಅಥವಾ ಉಪಯೋಗಿಸಿದರೂ ಪರವಾಗಿಲ್ಲ, ದೇವರ ಮುಂದೆ ನಾವು ಚಿಕ್ಕವರು ಎಂಬುದನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳೋಣ. ಆಗ ಮಾತ್ರವೇ ನಾವು ದೇವರ ಆರಾಧಕರಾಗಲು ಸಾಧ್ಯ ಮತ್ತು ನಾವು ಎಂದಿಗೂ ಎಡವಿ ಬೀಳುವುದಿಲ್ಲ.

ಜ್ಞಾನೋಕ್ತಿಗಳು 17:28 - ”ಮೂಢನು ಕೂಡ ಸುಮ್ಮನಿದ್ದರೆ, ಜ್ಞಾನಿಯೆಂತಲೂ ಅನ್ನಿಸಿಕೊಳ್ಳುವನು”. ನೀವು ಮೂಢರಾಗಿದ್ದುಕೊಂಡು, ಜನರು ನಿಮ್ಮನ್ನು ಜ್ಞಾನಿಯೆಂದು ಪರಿಗಣಿಸಬೇಕೆಂದು ನೀವು ಬಯಸಿದರೆ, ನೀವು ಏನು ಮಾಡಬೇಕು? ನಿಮ್ಮ ಬಾಯನ್ನು ಮುಚ್ಚಿಕೊಂಡಿರಿ!! ಜನರು ಆಗ ಕಲ್ಪಿಸಿಕೊಳ್ಳುವುದೇನೆಂದರೆ, ”ಈ ಮನುಷ್ಯನು ಆಳವಾದ ಜ್ಞಾನವನ್ನು ಹೊಂದಿದ್ದಾನೆ. ಅದಕ್ಕಾಗಿ ಆತನು ಮೌನವಾಗಿದ್ದಾನೆ”!! ಅಲ್ಲಿ ನೀವು ಬಾಯನ್ನು ತೆರೆಯುವುದಾದರೆ, ನೀವು ಮೂಢರು ಎಂದು ಪ್ರತಿಯೊಬ್ಬರು ತಕ್ಷಣವೇ ತಿಳಿದುಕೊಳ್ಳುತ್ತಾರೆ. ಹಾಗಾಗಿ ಕೇಳುವುದರಲ್ಲಿ ತೀವ್ರವಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಇರಿ, ವಿಶೇಷವಾಗಿ ನೀವು ಯೌವನಸ್ಥರಾಗಿರುವಾಗ ಮತ್ತು ಮೂಢರಾಗಿರುವಾಗ. ನಮ್ಮ ಮಾತಿನಲ್ಲಿ ಹತೋಟಿಯನ್ನು ಕಾಯ್ದುಕೊಂಡರೆ ಎಂತಹ ಆಶಿರ್ವಾದ ನಮಗೆ ದೊರೆಯುತ್ತದಲ್ಲವೇ.

ಜ್ಞಾನೋಕ್ತಿಗಳು 18:16 - ”ಮನುಷ್ಯನ ದಾನವು ತನಗೆ ಅನುಕೂಲವಾಗಿದ್ದು ದೊಡ್ಡವರ ಸನ್ನಿಧಾನಕ್ಕೆ ಅವನನ್ನು ಕರೆದುಕೊಂಡು ಹೋಗುತ್ತದೆ” (ಕೆ.ಜೆ.ವಿ.ಭಾಷಾಂತರ). ವರಗಳ ಮುಖಾಂತರ, ಸಭೆಯಲ್ಲಿ ಸೇವೆ ಮಾಡುವಂತೆ ದೇವರು ನಮಗೆ ಅನುಕೂಲವನ್ನು ಮಾಡಿಕೊಡುತ್ತಾನೆ. ಇಂದು ಅನೇಕರನ್ನು ನೋಡಿ ಮರುಕ ಹುಟ್ಟುತ್ತದೆ, ಏಕೆಂದರೆ ಅನೇಕರು ದೇವರು ಕೊಡಲು ಇಚ್ಛಿಸುವ ವರಗಳನ್ನು ಹೊಂದಿಲ್ಲ. ಅವರು ಸಭೆಯಲ್ಲಿನ ಸ್ಥಾನಮಾನ ಮತ್ತು ಸನ್ಮಾನವನ್ನು ಹುಡುಕುತ್ತಾರೆ ಮತ್ತು ಅದನ್ನು ಪಡೆದುಕೊಳ್ಳಲು ಹೊಡೆದಾಡಿಕೊಳ್ಳುತ್ತಾರೆ. ”ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅವುಗಳೊಳಗೆ ವಿಶೇಷವಾಗಿ ಪ್ರವಾದಿಸುವ ವರವನ್ನೇ ಅಪೇಕ್ಷಿಸುವವರಾಗಿರಬೇಕು” ಎಂದು ನಾವು ಪ್ರೇರೆಪಿಸಲ್ಪಟ್ಟಿದ್ದೇವೆ (1 ಕೊರಿಂಥ 14:1). ಪ್ರವಾದಿಸುವಂತದ್ದು ಎಂದರೆ, ಒಪ್ಪಿಕೊಳ್ಳುವಂತೆ ಮಾಡುವ, ಪ್ರೋತ್ಸಾಯಿಸುವ, ಸಂತೈಸುವ, ಸವಾಲುಗೊಳಿಸುವ, ಮತ್ತೊಬ್ಬರನ್ನು ಆತ್ಮಿಕವಾಗಿ ಅಭಿವೃದ್ಧಿಗೊಳಿಸುವ ರೀತಿಯಲ್ಲಿ ದೇವರ ವಾಕ್ಯವನ್ನು ಮಾತನಾಡುವಂತದ್ದಾಗಿದೆ (1 ಕೊರಿಂಥ 14:3). ಯಾರು ಇವುಗಳನ್ನು ಮೌಲ್ಯವೆಂದು ಎಣಿಸುವುದಿಲ್ಲವೋ ಅವರಿಗೆ ದೇವರು ತನ್ನ ವರಗಳನ್ನು ಕೊಡುವುದಿಲ್ಲ. ದೇವರಿಂದ ಬರುವಂತ ಸಂದೇಶವನ್ನು ಕೊಡುವ ಮನುಷ್ಯನ ಮಾತುಗಳನ್ನು ಕೇಳಿಸಿಕೊಳ್ಳಲು ಜನರು ನೂರು ಕಿಲೋ ಮೀಟರ್ ಗಟ್ಟಲೆ ಪ್ರಯಾಣ ಮಾಡುತ್ತಾರೆ. ಸ್ನಾನಿಕನಾದ ಯೋಹಾನನು ಕಾಡಿನಲ್ಲಿದ್ದನು. ಆದರೂ ಸಹ ಯೂದಾಯದಲ್ಲಿರುವ ಜನರೆಲ್ಲರೂ ಆತನಿಂದ ಸಂದೇಶವನ್ನು ಕೇಳಿಸಿಕೊಳ್ಳಲು ಕಾಡಿಗೆ ಹೋಗುತ್ತಿದ್ದರು. ಏಕೆಂದರೆ ಆತನು ಪರಲೋಕದಿಂದ ಬರುವ ಸಂದೇಶವನ್ನು ಹೊಂದಿದ್ದನು.