ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

"ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ತೀರ್ಪುಗಾರನಂತಿರಲಿ," ಎಂಬುದಾಗಿ ಕೊಲಸ್ಸೆ. 3:15ರಲ್ಲಿ ಬರೆಯಲ್ಪಟ್ಟಿದೆ. ನೀವು ದಾರಿತಪ್ಪಿದಾಗ ನಿಮಗೆ ತಿಳಿಯುವದು ಹೇಗೆ? ನೀವು ದೇವರ ಚಿತ್ತದಿಂದ ತಪ್ಪಿದ್ದನ್ನು ಹೇಗೆ ಗುರುತಿಸಬಹುದು? ನಿಮ್ಮ ಹೃದಯದೊಳಗೆ ಒಬ್ಬ ತೀರ್ಪುಗಾರನು ಇದ್ದಾನೆ. ನೀವು ಕಾಲ್ಚೆಂಡಿನ (ಫುಟಬಾಲ್) ಪಂದ್ಯವನ್ನು ನೋಡಿದ್ದೀರಾ? ಒಬ್ಬ ತೀರ್ಪುಗಾರನು (’ರೆಫ್ರಿ’) ಇಲ್ಲದೆ ಫುಟ್‌ಬಾಲ್ ಪಂದ್ಯವನ್ನು ಅಡಲು ಸಾಧ್ಯವೇ ಇಲ್ಲ, ಏಕೆಂದರೆ ಆಗ ಪ್ರತಿಯೊಬ್ಬರು ನಿಯಮಗಳಿಗೆ ವಿರುದ್ಧವಾಗಿ ಆಟವಾಡುತ್ತಾರೆ. ಆದರೆ ಒಬ್ಬ ತೀರ್ಪುಗಾರನು ಅಲ್ಲಿ ಇದ್ದಾಗ, ಯಾರೋ ಒಬ್ಬರು ಅಕ್ರಮವಾಗಿ ಆಡಿದರೆ ತಕ್ಷಣವೇ ಆತನು ಸೀಟಿ ಊದುತ್ತಾನೆ.

ನೀವು ಫುಟ್‌ಬಾಲ್ ಪಂದ್ಯ ಆಡುತ್ತಿರುವಾಗ ತೀರ್ಪುಗಾರನು ಸೀಟಿ ಊದುತ್ತಾನೆ ಎಂದುಕೊಳ್ಳೋಣ. ಎಲ್ಲರೂ ಆಟವನ್ನು ನಿಲ್ಲಿಸುತ್ತಾರೆ. ಆದರೆ ನೀವು ತೀರ್ಪುಗಾರನನ್ನು ಲಕ್ಷಿಸದೆ, "ಅದ್ಭುತ ಅವಕಾಶ! ಎಲ್ಲರೂ ಆಟವನ್ನು ನಿಲ್ಲಿಸಿದ್ದಾರೆ, ನಾನು ಹೋಗಿ ಒಂದು ಗೋಲ್ ಹೊಡೆಯುತ್ತೇನೆ," ಎನ್ನುತ್ತೀರಿ. ನೀವು ಚೆಂಡನ್ನು ಒದ್ದು, ಗುರಿ ತಲಪಿಸುತ್ತೀರಿ. ಆದರೆ ತೀರ್ಪುಗಾರನು, “ಆ ಚೆಂಡನ್ನು ಹಿಂದಕ್ಕೆ ತೆಗೆದುಕೊಂಡು ಬಾ, ಅದು ನಿಜವಾದ ಗೋಲ್ ಅಲ್ಲ, ಏಕೆಂದರೆ ಈಗ ಎರಡು ನಿಮಿಷಗಳ ಮೊದಲು ನೀನು ಅಕ್ರಮವಾಗಿ ಆಟ ಆಡಿದ್ದೀಯಾ, ನೀನು ಅದನ್ನು ಸರಿಪಡಿಸುವ ವರೆಗೆ ಏನು ಮಾಡಿದರೂ ಉಪಯೋಗವಿಲ್ಲ," ಎನ್ನುತ್ತಾನೆ. ನಂತರ ನೀವು ತಗ್ಗಿಸಿಕೊಂಡು ಚೆಂಡನ್ನು ಹಿಂದಕ್ಕೆ ತಂದು, ತಪ್ಪನ್ನು ಸರಿಪಡಿಸುತ್ತೀರಿ. ಆತನು ಸೀಟಿಯನ್ನು ಊದಿದ ನಂತರ ನೀವು ಬಾರಿಸಿದ ಗೋಲುಗಳು ಎಣಿಕೆಗೆ ಬಾರವು.

ನಮ್ಮ ಕ್ರಿಸ್ತೀಯ ಜೀವಿತದಲ್ಲಿ ಇದು ಹೇಗೆ ಅನ್ವಯಿಸುತ್ತದೆ? ನಿಮ್ಮ ಮನಸ್ಸಾಕ್ಷಿಗೆ ತೀರ್ಪುಗಾರನ ಒಂದು ಸೀಟಿ ಕೇಳಿಸಿದರೆ, ಆಗ ನೀವು ಎನೋ ತಪ್ಪು ಮಾಡಿದ್ದೀರಿ. ನೀವು ನಿಮ್ಮ ಪತ್ನಿಯೊಡನೆ ಒರಟಾಗಿ ಮಾತಾಡಿದ್ದು ತಪ್ಪು. ಇನ್ನೊಂದು ಸಂದರ್ಭದಲ್ಲಿ ನೀವು ಅನ್ಯಾಯವಾಗಿ ಹಣವನ್ನು ಪಡೆದದ್ದು ಸರಿಯಲ್ಲ. ಒಮ್ಮೆ ಸೀಟಿ ಕೇಳಿಬಂದ ನಂತರ, ನೀವು ಕರ್ತನಿಗಾಗಿ ಏನು ಮಾಡಿದರೂ ಅದು ಲೆಕ್ಕಿಸಲ್ಪಡುವದಿಲ್ಲ. ಕರ್ತನು ಹೀಗೆನ್ನುತ್ತಾನೆ, "ಹಿಂದಿರುಗಿ ಬಾ, ಮೊದಲು ಈ ತಪ್ಪನ್ನು ಸರಿಪಡಿಸು. ಹೋಗಿ ನಿನ್ನ ಹೆಂಡತಿಯಿಂದ ಕ್ಷಮೆ ಯಾಚಿಸು. ಈಗ ಕ್ರೈಸ್ತ ಸುವಾರ್ತೆಯನ್ನು ಸಾರುವದನ್ನು ನಿಲ್ಲಿಸಿ, ಮೊದಲು ನಿನ್ನ ಹೆಂಡತಿಯಿಂದ ಕ್ಷಮೆಯನ್ನು ಕೇಳು. ನೀನು ಗಳಿಸಿದ ಯಶಸ್ಸುಗಳು ಗಣನೆಗೆ ಬರುವದಿಲ್ಲ."

ಕ್ತಿಸ್ತನ ಸಮಾಧಾನವು ನಿಮ್ಮ ತೀರ್ಪುಗಾರನಾಗಿರಲಿ. ಈ ತೀರ್ಪುಗಾರನನ್ನು ನೀವು ಹಿಂಬಾಲಿಸಿದರೆ, ಎಂದಿಗೂ ತಪ್ಪು ಮಾಡುವದಿಲ್ಲ. ನೀವು ತೀರ್ಪುಗಾರನಿಗೆ ವಿಧೇಯನಾಗಲು ಎಷ್ಟು ಸಮಯ ಕಾಯುತ್ತೀರಿ? ಫುಟ್‌ಬಾಲ್ ಪಂದ್ಯದಲ್ಲಿ ಆಟಗಾರರು ತೀರ್ಪುಗಾರನೊಂದಿಗೆ ವಾಗ್ವಾದ ಮಾಡುವುದನ್ನು ನೀವು ನೋಡಿದ್ದೀರಾ? ಒಂದು ನೆನಪಿರಲಿ, ಆ ವಾಗ್ವಾದದಲ್ಲಿ ಯಾವಾಗಲೂ ಗೆಲ್ಲುವದು ತೀರ್ಪುಗಾರನೇ. ಯಾವಾಗಲೂ ಆ ತೀರ್ಪುಗಾರನ ಮಾತೇ ಅಂತಿಮವಾಗಿರುತ್ತದೆ. ಒಂದು ವೇಳೆ ಅತಿಯಾಗಿ ವಾಗ್ವಾದ ಮಾಡಿದರೆ, ಆಟಗಾರರು ಮೈದಾನದಿಂದ ಹೊರಕ್ಕೆ ಕಳುಹಿಸಲ್ಪಡುತ್ತಾರೆ.

ಆದ್ದರಿಂದ ನಿಮ್ಮ ತೀರ್ಪುಗಾರನ ಸಂಗಡ ಅತಿಯಾಗಿ ವಾಗ್ವಾದ ಮಾಡಬೇಡಿ, ಆತನು ನಿಮ್ಮನ್ನು ಸಹ ಮೈದಾನದಿಂದ ಹೊರಕ್ಕೆ ಕಳುಹಿಸಬಹುದು."ಸರಿ, ಕರ್ತನೇ, ನೀನು ಏನು ಹೇಳುತ್ತೀಯೋ ಅದನ್ನು ನಾನು ಮಾಡುತ್ತೇನೆ," ಎಂದು ಹೇಳಿರಿ. ವಿಷಯವನ್ನು ಸರಿಪಡಿಸಿ, ನಂತರ ಮುಂದೆ ಹೋಗಿ. ಆ ಸೀಟಿ ಊದಲ್ಪಟ್ಟಿದೆ ಎಂದು ನಿಮಗೆ ತಿಳಿಯುವದು ಹೇಗೆ? ನೀವು ನಿಮ್ಮ ಸಮಾಧಾನವನ್ನು ಕಳೆದುಕೊಳ್ಳುತ್ತೀರಿ. ಸಮಾಧಾನವೇ ಆ ತೀರ್ಪುಗಾರನು. ಒಂದು ವೇಳೆ ಒಂದು ವಿಷಯದ ಬಗ್ಗೆ ಮನಸ್ಸು ಕಲಕಿದಂತಾಗಿ, ನೀವು ಬಾಧಿಸಲ್ಪಡಬಹುದು. ಆ ಕಲಕಿದ ಸ್ಥಿತಿಯಲ್ಲಿ ನೀವು ಸಭೆಯ ಕೂಟಕ್ಕೆ ಬಂದರೆ, ನಿಮ್ಮ ಬಾಯನ್ನು ತೆರೆಯದಿರಿ. ಇಲ್ಲವಾದಲ್ಲಿ ನಿಮ್ಮೊಳಗಿರುವ ತಳಮಳ ನಿಮ್ಮ ಬಾಯಿಯಿಂದ ಹೊರಕ್ಕೆ ಬರುತ್ತದೆ.

ನಿಮ್ಮಲ್ಲಿ ತಳಮಳ ಇದ್ದಾಗ ಏನೂ ಮಾತನಾಡದಿರಿ. ಮನೆಯಲ್ಲಿ ನಿಮ್ಮ ಮನಸ್ಸು ಒಂದು ವಿಷಯದ ಬಗ್ಗೆ ಕಲುಕಿದ್ದಾಗ, ನೀವು ನಿಮ್ಮ ಪತ್ನಿಯನ್ನು ಆಶೀರ್ವದಿಸುವ ಒಂದು ಒಳ್ಳೆಯ ರೀತಿ, ನಿಮ್ಮ ಬಾಯನ್ನು ಮುಚ್ಚಿಕೊಳ್ಳುವುದಾಗಿದೆ. ನಿಮ್ಮಲ್ಲಿ ತಳಮಳ ಇದ್ದಾಗ, ತೀರ್ಪುಗಾರನು ಸೀಟಿಯನ್ನು ಊದಿದ್ದಾನೆ. ಆ ತಪ್ಪನ್ನು ಸರಿಪಡಿಸಿರಿ. ಪ್ರತೀ ಬಾರಿ ನಿಮ್ಮ ಹೃದಯದಲ್ಲಿ ಗದ್ದಲವಿದ್ದಾಗ ಎನೋ ತಪ್ಪಾಗಿರುತ್ತದೆ. ಕ್ರಿಸ್ತನ ಸಮಾಧಾನವು ನಿಮ್ಮ ತೀರ್ಪುಗಾರನಾಗಿರಲಿ.