WFTW Body: 

ಕರುಣೆಯು ಫರಿಸಾಯತನಕ್ಕೆ ಒಂದು ಬಹು ಮುಖ್ಯ ಉಪಶಮನವಾಗಿದೆ. ಇತರರಿಗೆ ಕರುಣೆ ತೋರುವದು ಎಂದರೆ, ನಮಗೆ ಹಾನಿ ಅಥವಾ ಕೆಟ್ಟದನ್ನು ಮಾಡುವವರನ್ನು ಕ್ಷಮಿಸುವದಷ್ಟೇ ಅಲ್ಲ. ಇತರರ ಕೊರತೆಯನ್ನು ನೀಗಿಸಿ ಒಳ್ಳೆಯದನ್ನು ಮಾಡುವದು ಅದರಲ್ಲಿ ಸೇರಿದೆ. "ಕರುಣೆ" ಎಂಬ ಪದದ ಅರ್ಥವನ್ನು ಯೇಸುವು ಒಳ್ಳೆಯ ಸಮಾರ್ಯದವನ ದೃಷ್ಟಾಂತದಲ್ಲಿ ವಿವರಿಸಿದರು (ಲೂಕ 10: 25-42 - "ದಯೆ" ಎಂಬುದಾಗಿ ಪ್ರಯೋಗಿಸಲಾದ ಪದವನ್ನು 37ನೇ ವಚನದಲ್ಲಿ ಗಮನಿಸಿ).

ಅಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ನಿತ್ಯಜೀವಕ್ಕೆ ಬಾಧ್ಯನಾಗುವದರ ಬಗ್ಗೆ ಪ್ರಶ್ನಿಸುತ್ತಾನೆ. ಯೇಸುವು ನೀಡಿದ ಜವಾಬು ಏನೆಂದರೆ ಬಾಧ್ಯನಾಗುವದಕ್ಕೆ ದೇವರಾದ ಕರ್ತನನ್ನು ಪೂರ್ಣ ಹೃದಯದಿಂದ ಪ್ರೀತಿಸಿ, ನೆರೆಯವನನ್ನು ಸ್ವತಃ ತನ್ನನ್ನು ಪ್ರೀತಿಸುವಂತೆ ಪ್ರೀತಿಸಬೇಕು, ಎಂದು. ಆದರೆ ಆ ಧರ್ಮೋಪದೇಶಕನು (ಇಂದಿನ ಅನೇಕ ಧರ್ಮೋಪದೇಶಕರ ಹಾಗೆ), "ತಾನು ಕೆಲವು ವರ್ಗಗಳ ಜನರನ್ನು ಪ್ರೀತಿಸದೆ ಇರುವದು ಸರಿಯೆಂದು ತೋರಿಸಿಕೊಳ್ಳಲು" (ವ. 29 - Living Bible ಅನುವಾದ), ’ನೆರೆಯವನು’ ಎಂಬ ಪದವು ಯಾರಿಗೆ ಅನ್ವಯಿಸುತ್ತದೆಂದು ಯೇಸುವನ್ನು ಕೇಳಿದನು. ಅವನ ಸ್ವ-ಸಮರ್ಥನೆಯು ಅವನೊಬ್ಬ ಫರಿಸಾಯನೆಂದು ಅಲ್ಲಿಯೇ ತೋರಿಸಿಕೊಟ್ಟಿತು, ಹಾಗಾಗಿ ಯೇಸುವು ಅವನಿಗೆ ಒಂದು ದೃಷ್ಟಾಂತದ ಮೂಲಕ ಪ್ರತ್ಯುತ್ತರವನ್ನು ನೀಡಿದರು.

ಆ ದೃಷ್ಟಾಂತದಲ್ಲಿ, ಒಬ್ಬ ಯಾಜಕನು (ದೇವರ ಆಲಯದ ಒಬ್ಬ ಹಿರಿಯನು) ಗಾಯಗೊಂಡು ಹಾದಿಯಲ್ಲಿ ಬಿದ್ದಿದ್ದ ಮನುಷ್ಯನನ್ನು ನಿರ್ಲಕ್ಷಿಸಿ ಹಾಗೆಯೇ ಹೋದುದನ್ನು ನಾವು ನೋಡುತ್ತೇವೆ. ಅಲ್ಲಿ ಅವನು ನಿಸ್ಸಹಾಯಕ ಮನುಷ್ಯನನ್ನು ನೋಡಿಯೂ ಅದನ್ನು ಗಣನೆಗೆ ತರಲಿಲ್ಲ. ಆ ಮನುಷ್ಯನು ಯಾವುದೋ ರಹಸ್ಯ ಪಾಪಕ್ಕಾಗಿ ದೇವರಿಂದ ಶಿಕ್ಷಿಸಲ್ಪಡುತ್ತಿರುವನು ಎಂದು ಆ ಯಾಜಕನು ಯೋಚಿಸಿರಬಹುದು. ಅಥವಾ ರಾತ್ರಿಯ ವೇಳೆ ಒಬ್ಬಂಟಿಯಾಗಿ ಪ್ರಯಾಣಿಸಿದ್ದಕ್ಕಾಗಿ ಅವನು ಆ ಮನುಷ್ಯನನ್ನು ದೂಷಿಸಿರಬಹುದು. ಇವನು ಯೋಬನಿಗೆ ಉಪದೇಶ ಮಾಡಿದ ಮೂರು ಬೋಧಕರನ್ನು ಸಂಪೂರ್ಣವಾಗಿ ಹೋಲುತ್ತಿದ್ದನು. ಜನರು ಕಷ್ಟದಲ್ಲಿ ಇರುವಾಗ, ನಾವು ತಕ್ಷಣವೇ ಅವರು ಯಾವುದೋ ಕೆಟ್ಟ ಕೆಲಸಗಳ ಫಲವಾಗಿ ಕಷ್ಟಕ್ಕೆ ಒಳಗಾಗಿರುತ್ತಾರೆ ಎಂದು ಊಹಿಸಿ, ಅವರಿಗೆ ಸಹಾಯ ಒದಗಿಸುವದನ್ನು ಮರೆತೇ ಬಿಡುವೆವು. ನಾವು ಮಾನವ ಅವಶ್ಯಕತೆಗಳಿಗೆ ಎಷ್ಟು ಕುರುಡಾಗಿದ್ದೇವೆ! "ನಾನು ಹಸಿದಿದ್ದೆನು, ನೀವು ನನಗೆ ಊಟ ನೀಡಲಿಲ್ಲ; ನಾನು ಬಾಯಾರಿದ್ದೆನು, ನನ್ನ ನೀರಡಿಕೆಯನ್ನು ನೀವು ಹೋಗಲಾಡಿಸಲಿಲ್ಲ; ಉಡಲು ನನ್ನಲ್ಲಿ ಬಟ್ಟೆ ಇರಲಿಲ್ಲ; ನೀವು ನನಗೆ ಉಡುಪನ್ನು ಕೊಡಲಿಲ್ಲ. ನಾನು ರೋಗದಲ್ಲಿ ಬಿದ್ದಿದ್ದೆನು; ಆದರೆ ನೀವು ಬಂದು ಆರೈಕೆ ಮಾಡಲಿಲ್ಲ. ನೀವು ನನಗಾಗಿ ಹಾಡುಗಳನ್ನು ಹಾಡುತ್ತಾ ಹೋದಿರಿ ಮತ್ತು ನನಗೆ ಬೋಧನೆಗಳನ್ನು ನೀಡಿದಿರಿ, ಆದರೆ ನನ್ನ ಅವಶ್ಯಕತೆಯನ್ನು ಪೂರೈಸಲೇ ಇಲ್ಲ."

ಆ ಯಾಜಕನು ಬಾಧೆಗೆ ಒಳಗಾಗಿದ್ದ ಒಬ್ಬ ಮನುಷ್ಯನಿಗೆ ಸಹಾಯ ಒದಗಿಸುವದಕ್ಕಿಂತ ಹೆಚ್ಚಾಗಿ, ಸರಿಯಾದ ಸಮಯಕ್ಕೆ ಯೆರೂಸಲೇಮಿನ ಕೂಟಕ್ಕೆ ಹೋಗಿ ಸೇರಲು ತವಕಿಸಿದನು. ಎಲ್ಲಾ ಕೂಟಗಳಿಗೆ ಸರಿಯಾದ ಸಮಯಕ್ಕೆ ತಲುಪುವ ಅನೇಕ ಜನ ಅಂತ್ಯದಲ್ಲಿ ನರಕಕ್ಕೆ ಹೋಗುವರು, ಎನ್ನುವದನ್ನು ನೆನಪಿಡಿ. ಇದಾದ ಮೇಲೆ ಒಬ್ಬ ಲೇವೀಯನು (ದೇವರ ಆಲಯಕ್ಕೆ ಸೇರಿದ ಒಬ್ಬ ಸಹೋದರ) ಆ ಕಡೆಗೆ ಬಂದನು ಮತ್ತು ಅವನು ಸಹ ವಾರೆಯಾಗಿ ಹೋದನು ಮತ್ತು ಅವನೂ ದೇವರಿಂದ ಪರೀಕ್ಷಿಸಲ್ಪಟ್ಟನು. ಪರೀಕ್ಷೆಯಲ್ಲಿ ಅವನೂ ಉತ್ತೀರ್ಣನಾಗಲಿಲ್ಲ. ಅವನು ಸಹ ಕೂಟಕ್ಕೆ ಸರಿಯಾದ ಸಮಯಕ್ಕೆ ಹೋಗುವ ತವಕದಲ್ಲಿ ಇದ್ದನು, ಮತ್ತು ಮಾನವ ಅವಶ್ಯಕತೆಯ ಮಟ್ಟಿಗೆ ಕುರುಡಾಗಿದ್ದನು.

ಇವರಿಬ್ಬರೂ ಕೂಟದಲ್ಲಿ ತಮಗೆ ದೇವರಿಂದ ಸಿಗಲಿದ್ದ ಸಂದೇಶಕ್ಕಾಗಿ ಉತ್ಸುಕರಾಗಿದ್ದರು. ಕೂಟಕ್ಕೆ ಹೋಗುವ ಹಾದಿಯಲ್ಲೇ ಅವರೊಂದಿಗೆ ದೇವರು ಮಾತನಾಡಿದ್ದರು ಎನ್ನುವದನ್ನು - ಮತ್ತು ಆ ಕಿವಿಮಾತನ್ನು ತಾವು ಕಡೆಗಣಿಸಿದ್ದನ್ನು - ಅವರು ಸ್ವಲ್ಪವಾದರೂ ಗಮನಿಸಲಿಲ್ಲ. ಹಾದಿಯಲ್ಲಿ ಎದುರಾದ ಕೊರತೆಯಲ್ಲಿದ್ದ ಮನುಷ್ಯನ ಕಷ್ಟವನ್ನು ಅವರು ನಿರ್ಲಕ್ಷಿಸಿದ್ದರಿಂದ, ಅವರ ಹಾಡುಗಳು ಮತ್ತು ಪ್ರಾರ್ಥನೆಗಳು ಹಾಗೂ ಅವರ ಧಾರ್ಮಿಕತೆ ವ್ಯರ್ಥವಾದುದು ಎಂದು ದೇವರು ನುಡಿದುದು ಅವರಿಗೆ ಕೇಳಿಸಲೇ ಇಲ್ಲ. ಬಾಧೆಗಳನ್ನು ವೀಕ್ಷಿಸುವವರ ಹೃದಯಗಳ ಪರೀಕ್ಷೆಗಾಗಿ ದೇವರು ದೇವಜನರ ಬಾಧೆಗಳನ್ನು ಉಪಯೋಗಿಸುವರು.

ನಮ್ಮಲ್ಲಿ ಒಬ್ಬನೂ ಸಹ ಇವರಿಬ್ಬರು ಧಾರ್ಮಿಕ ಜನರ ಮೇಲೆ ಕಲ್ಲೆಸೆಯಲು ಸಾಧ್ಯವಿಲ್ಲ, ಏಕೆಂದರೆ ಒಂದಲ್ಲ ಒಂದು ಸಂದರ್ಭದಲ್ಲಿ ನಾವೆಲ್ಲರೂ ಅವರಂತೆ ವರ್ತಿಸಿದ್ದೇವೆ. ಈ ದೃಷ್ಟಾಂತದ ಯಾಜಕ ಮತ್ತು ಲೇವೀಯನಲ್ಲಿ ನಾವು ನಮ್ಮ ಪ್ರತಿಬಿಂಬವನ್ನು ಕಾಣುವುದಾದರೆ, ನಾವು ಮಾನಸಾಂತರ ಪಡಬೇಕು, ಮತ್ತು ಇನ್ನು ಮುಂದಿನ ದಿನಗಳಲ್ಲಿ ನಾವು ಸಂಪೂರ್ಣ ಪರಿವರ್ತನೆ ಹೊಂದಲು ಪ್ರಯತ್ನಿಸೋಣ. ಆ ಯಾಜಕ ಮತ್ತು ಲೇವೀಯರಂತೆ, ದೇವರಿಂದ ಈ ಲೋಕದಲ್ಲಿ ನಾವು ಇರಿಸಲ್ಪಟ್ಟಿರುವದು ಸಹ ಅವರನ್ನು ಪ್ರತಿನಿಧಿಸಲ್ಲಿಕ್ಕಾಗಿ. ಹಾಗಾಗಿ ನಾವು ಅವರನ್ನು ಸರಿಯಾಗಿ ಪ್ರತಿನಿಧಿಸದೆ ಇರುವದರ ಬಗ್ಗೆ ಪಶ್ಚಾತ್ತಾಪ ಪಡಬೇಕು.

ಕೊನೆಯಲ್ಲಿ ಕೀಳಾಗಿ ಕಾಣಲಾಗುತ್ತಿದ್ದ ಒಬ್ಬ ಸಮಾರ್ಯದವನನ್ನು (ಆ ಯಾಜಕ ಮತ್ತು ಲೇವೀಯರಲ್ಲಿ ಇದ್ದ ದೋಷರಹಿತ ಧಾರ್ಮಿಕ ತತ್ವಗಳನ್ನು ಹೊಂದಿರದಿದ್ದ, ಇನ್ನೊಂದು ಪಂಗಡಕ್ಕೆ ಸೇರಿದ, ಒಬ್ಬ ಸಹೋದರ) ಆ ಗಾಯಗೊಂಡ ಮನುಷ್ಯನಿಗೆ ಸಹಾಯ ಒದಗಿಸಲು ದೇವರು ಉಪಯೋಗಿಸಿದರು. ಆ ಸಮಾರ್ಯದವನು ಒಬ್ಬ ಯಾಜಕ ಅಥವಾ ಒಬ್ಬ ಲೇವೀಯನು ಆಗಿರಲಿಲ್ಲ. ಯಾರ ಕಣ್ಣಿಗೂ ಕಾಣಿಸದೆ, ಕೊರತೆಯಲ್ಲಿ ಇರುವವರಿಗೆ ಸಹಾಯ ಮಾಡುವ ಅವಕಾಶಕ್ಕಾಗಿ ಹುಡುಕಾಡುವ, ಇತರರಿಗೆ ಒಳಿತನ್ನು ಮಾಡುವ, ಸೌಮ್ಯಪ್ರವೃತ್ತಿಯ ಜನರಲ್ಲಿ ಅವನು ಒಬ್ಬನಾಗಿದ್ದನು, ಅಷ್ಟೇ. ಅವನು ಆ ಗಾಯಗೊಂಡಿದ್ದ ಮನುಷ್ಯನಲ್ಲಿ ತಪ್ಪು ಹುಡುಕಲಿಲ್ಲ. ಇಂತಹ ವಿಪತ್ತು ತನಗೂ ಸಹ ಒದಗಬಹುದಾಗಿತ್ತು ಎಂದು ಅವನು ತಿಳಕೊಂಡನು. ಹಾಗಾಗಿ ಅವನಲ್ಲಿ ಕನಿಕರ ಉಂಟಾಯಿತು. ಅವನು ತನ್ನ ಅನುಕೂಲವನ್ನು ಕಡೆಗಣಿಸಿದನು ಮತ್ತು ಸ್ವಂತ ಸಮಯ ಮತ್ತು ಹಣವನ್ನು ಆ ಕೊರತೆಯಲ್ಲಿದ್ದ ಸಹೋದರನ ಸಹಾಯಕ್ಕಾಗಿ ಉಪಯೋಗಿಸಿದನು.

ಶರೀರ ಸಮರ್ಪಣೆಯು ಸೇರಿರುವ ನಿಜವಾದ ಸಜೀವ ಹೊಸ ದಾರಿ ಯಾವುದೆಂದು ನಾವು ಅಲ್ಲಿ ಕಾಣುತ್ತೇವೆ: ಕ್ರಿಸ್ತನು ಶರೀರದ ಮೂಲಕ ಪ್ರತ್ಯಕ್ಷನಾಗುವದು ಎಂದರೆ ಪ್ರೀತಿಯು ದೇಹದ ಮುಖಾಂತರ ಪ್ರಕಟವಾಗುವದು. ಅದು ಕರುಣೆ ಶರೀರದ ಮೂಲಕ ಪ್ರಕಟವಾಗುವದು. ಅದು ಒಳ್ಳೆಯತನ ದೈಹಿಕವಾಗಿ ಕಾಣಿಸುವದು.