ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಒಂದು ಹೊಸ ಒಡಂಬಡಿಕೆಯ ಸಭೆಯನ್ನು ಸೂಚಿಸುವ ಒಂದು ಗುರುತು, ಅದರ ಮಧ್ಯದಲ್ಲಿ ಇರುವ ದೇವ ಪ್ರಸನ್ನತೆಯಾಗಿದೆ. ಸಭಾಕೂಟದಲ್ಲಿ ಪ್ರಬಲವಾದ ಪ್ರವಾದನೆಯ ಆತ್ಮವಿದ್ದಾಗ, ಅಲ್ಲಿಗೆ ಬಂದವರು ಅಡ್ಡಬಿದ್ದು, "ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ" ಎಂದು ಪ್ರಚುರ ಪಡಿಸುತ್ತಾರೆ (1 ಕೊರಿಂಥ. 14:24,25). ಎಮ್ಮಾಹುವಿನ ದಾರಿಯಲ್ಲಿ ಯೇಸುವು ಇಬ್ಬರು ಶಿಷ್ಯರೊಂದಿಗೆ ಮಾತನಾಡಿದಾಗ ಅವರ ಹೃದಯಗಳು ಕುದಿದ ಹಾಗೆ, ಯೇಸುವು ಪ್ರವಾದಿಸಿ ಸಭೆಯಲ್ಲಿ ನುಡಿದಾಗ ನಮ್ಮ ಹೃದಯಗಳು ಕುದಿಯುತ್ತವೆ (ಲೂಕ 24:32).

ದೇವರು ದಹಿಸುವ ಅಗ್ನಿಯಾಗಿದ್ದಾನೆ. ಮೋಶೆಯೊಂದಿಗೆ ಮಾತನಾಡಲು ದೇವರು ಪೊದೆಗೆ ಇಳಿದುಬಂದಾಗ, ಆ ಪೊದೆ ಉರಿಯಿತು ಮತ್ತು ಅಲ್ಲಿದ್ದ ಎಲ್ಲಾ ಕ್ರಿಮಿಕೀಟಗಳು ನಾಶಗೊಂಡವು. ಈ ದಿನ ಅಂತಹ ಪ್ರಬಲವಾದ, ಉಜ್ವಲವಾದ ದೇವಪ್ರಸನ್ನತೆ ಇರುವಲ್ಲಿ ಯಾವ ರಹಸ್ಯ ಪಾಪವೂ ಬಯಲಾಗದೆ ಇರದು. ಇಂತಹ ಸಭೆಯೊಂದೇ ಹೊಸ ಒಡಂಬಡಿಕೆಯ ಸಭೆಯಾಗಿದೆ. ಯೇಸುವಿನ ಕಣ್ಣುಗಳು ದಹಿಸುವ ಬೆಂಕಿಯಂತಿದ್ದು (ಪ್ರಕಟನೆ 1:14), ತಾನು ಕಟ್ಟುತ್ತಿರುವ ಪ್ರತಿಯೊಂದು ಸಭೆಯಲ್ಲಿ ಅವನು ಸತತವಾಗಿ ಪಾಪ, ಮಾನವ ಸಂಪ್ರಾದಾಯಗಳು ಮತ್ತು ಫರಿಸಾಯತನವನ್ನು ಹುಡುಕಿ ಬಯಲು ಮಾಡುತ್ತಾನೆ.

ಆತ್ಮಿಕ ಬಡತನವು ಪರಲೋಕ ರಾಜ್ಯದ ಅದ್ಭುತ ಬೀಗದ ಕೈ ಆಗಿದೆ (ಮತ್ತಾಯ 5:3). ಇದನ್ನು ಹೊರತು ಪಡಿಸಿ ನಾವು ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟಲಾರೆವು. ಆತ್ಮಿಕ ಬಡತನವೆಂದರೆ, ನಿರಂತರವಾಗಿ ನಮ್ಮ ಸ್ವಂತ ಅವಶ್ಯಕತೆಯ ಕುರಿತಾಗಿ ದೇವರ ಮುಂದೆ ಮುರಿದ ಆತ್ಮವನ್ನು ಹೊಂದಿರುವದು, ಏಕೆಂದರೆ ನಮ್ಮಲ್ಲಿ ನಮ್ಮ ಪರಲೋಕದ ತಂದೆಯು ಪರಿಪೂರ್ಣನಾಗಿರುವಂತೆ ನಾವು ಪರಿಪೂರ್ಣರಾಗುವ ಒಂದು ತೀವ್ರ ಮತ್ತು ಗಾಢವಾದ ಬಯಕೆ ಇರುತ್ತದೆ. "ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ" (ಕೀರ್ತನೆಗಳು 34:18) .ಆತನು ಹತ್ತಿರವಿದ್ದಾಗ, ಆತನ ಪ್ರಸನ್ನತೆ ನಮ್ಮ ಹೃದಯದೊಳಗೆ ಪರಲೋಕದ ಬೆಂಕಿಯನ್ನು ತರುತ್ತದೆ ಮತ್ತು ನಾವು ಹೋದಲ್ಲೆಲ್ಲಾ ನಮ್ಮ ಮೂಲಕ ಅದನ್ನು ಬೇರೆಯವರಿಗೂ ಸಹ ಹರಡಿಸುತ್ತದೆ.

ಹೊಸ ಒಡಂಬಡಿಕೆಯ ಒಂದು ಸಭೆಯಲ್ಲಿ, ಅನೇಕರು ವಾಕ್ಯದ ಉಪದೇಶದಿಂದ ಅಸಮಾಧಾನಗೊಳ್ಳುವರು, ಮತ್ತು ಆ ಸಭೆಯನ್ನು ಬಿಟ್ಟು ಹೋಗುವರು. ಯೆರೂಸಲೇಮಿನ ಸಭೆಯ ವಿಷಯವಾಗಿ ಹೀಗೆ ಬರೆಯಲ್ಪಟ್ಟಿದೆ - "ಅವರ ಜೊತೆಯಲ್ಲಿರುವುದಕ್ಕೆ ಮಿಕ್ಕಾದವರೊಳಗೆ ಒಬ್ಬರಿಗೂ ಧೈರ್ಯವಿರಲಿಲ್ಲ" (ಅ. ಕೃ. 5:13).

ಸಭೆಯಲ್ಲಿ ಯೇಸುವಿನ ಪ್ರಸನ್ನತೆ ಪ್ರಬಲವಾಗಿರುವಾಗ, ಅಲ್ಲಿ ಶಿಷ್ಯರು ಆತನ ಮಹಿಮೆಯನ್ನು ಕಾಣುವುದರಲ್ಲಿ ಮಗ್ನರಾಗಿರುತ್ತಾರೆ. ನಾವು ಎದ್ದು ಬಂದಿರುವ ಕರ್ತನ ಮಹಿಮೆಯನ್ನು ನಿಜವಾಗಿ ಕಂಡಿರುವ ಪುರಾವೆ ಏನೆಂದರೆ, ನಮ್ಮ ಕಣ್ಣಿಗೆ ಈ ಲೋಕದ ಸಂಗತಿಗಳು (ಲೌಕಿಕ ಸೌಕರ್ಯ, ಮನ್ನಣೆ, ಸಂಪತ್ತು) ಮಬ್ಬಾಗಿ, ಈಗ ಅವುಗಳಲ್ಲಿ ಹಿಂದಿನ ಆಕರ್ಷಣೆ ಇರುವದಿಲ್ಲ.

ಹೊಸ ಒಡಂಬಡಿಕೆ ಒಂದು ಸಭೆಯಲ್ಲಿ, ವಾಕ್ಯದ ಬಲವಾದ ಬೋಧನೆಯ ಜೊತೆಗೆ, ವಾಕ್ಯದ ಉತ್ತಮ, ಜೀವಂತ ನಿರ್ದೇಶನಗಳು ಸಹ ಇರುತ್ತವೆ. ಪವಿತ್ರ ಜೀವಿತಗಳು ದೇವರ ಬಗ್ಗೆ ಇತರರ ಮೇಲೆ ತೀವ್ರ ಪರಿಣಾಮ ಬೀರುತ್ತವೆ, ಆದರೆ ಹೊಸ ಸಿದ್ಧಾಂತಗಳು ಹಾಗೆ ಮಾಡಲಾರವು. ಹೊಸ ಒಡಂಬಡಿಕೆಯ ಸೇವಕರು ಇತರರಿಗೆ ಉಪದೇಶಿಸುವದು ಅಷ್ಟೇ ಅಲ್ಲ, ತಮ್ಮ ಮಾದರಿಯನ್ನು ಅನುಸರಿಸುವಂತೆಯೂ ಇತರರನ್ನು ಅಹ್ವಾನಿಸುತ್ತಾರೆ (1 ಕೊರಿಂಥ. 11:1).

ನಮ್ಮ ಮಾದರಿ ಅನುಕರಣೀಯವಾಗಿ ಇರದಿದ್ದರೆ ನಾವು ಕಣ್ಣೀರು ಸುರಿಸಿ ಅಳಬೇಕು. ನಾವು ಸಪ್ಪೆಯಾದ, ಅಭಿಷೇಕವಿಲ್ಲದ ಸಂದೇಶಗಳಿಂದ ಜನರನ್ನು ಬೇಸರಗೊಳಿಸುವದಾದರೆ ಅದು ನಾಚಿಕೆಗೇಡು. ಯೇಸುವನ್ನು ಅನುಸರಿಸುವಾಗ ನಮ್ಮಲ್ಲಿ ಇತರರ ಬಗ್ಗೆ ಉದಾಸೀನತೆ ಮತ್ತು ಕಪಟತನ ಇರಲು ಸಾಧ್ಯವೇ ಇಲ್ಲ. ನಾವು ಯೇಸುವಿನಿಂದ ದೂರ ಸರಿದಿರುವ ಲಕ್ಷಣ ಏನೆಂದರೆ, ನಮ್ಮ ಸಂದೇಶಗಳು ಕೇವಲ ಕನಸು ಮತ್ತು ದರ್ಶನಗಳ ಕುರಿತಾಗಿದ್ದು, ನಮ್ಮಲ್ಲಿ ಜನರನ್ನು ಬಲಪಡಿಸುವ ಕರ್ತನ ವಾಕ್ಯ ಇರುವದಿಲ್ಲ. ನಮ್ಮಲ್ಲಿ ದೇವರ ಅಗ್ನಿ ಉರಿಯುತ್ತಿರುವಾಗ, ಜನರಿಗೆ ಬೇಸರಿಕೆ ಉಂಟಾಗುವದು ಅಸಾಧ್ಯ.

ಯೇಸುವು ಮರಣದಿಂದ ಎಬ್ಬಿಸಲ್ಪಟ್ಟನು, ಹಾಗಾಗಿ ಎಲ್ಲದರಲ್ಲಿಯೂ ಆತನಿಗೆ ಪ್ರಥಮ ಸ್ಥಾನ ಕೊಡಲ್ಪಟ್ಟಿದೆ (ಕೊಲೊಸ್ಸೆ. 1:18). ದೇವರು ಈ ಮಹತ್ವಕಾಂಕ್ಷೆ ಇರುವ ಪ್ರತಿಯೊಬ್ಬನನ್ನು ನಿರಂತರವಾಗಿ ಬೆಂಬಲಿಸುತ್ತಾನೆ. ಇದರ ಅರ್ಥ, ನಾವು ನಮ್ಮ ಸ್ವಂತ ಯೋಜನೆಗಳು ಮತ್ತು ಹಕ್ಕುಗಳನ್ನು ಬಿಟ್ಟುಕೊಟ್ಟು, ನಾವು ಏನು ಮಾಡಬೇಕು, ನಮ್ಮ ಹಣ ಮತ್ತು ಸಮಯ ಹೇಗೆ ಉಪಯೋಗ ಆಗಬೇಕೆಂದು ಯೇಸುವನ್ನು ಕೇಳುತ್ತೇವೆ. ನಿಮ್ಮ ಜೀವಿತದಲ್ಲಿ ಈ ಏಕಮಾತ್ರ ಮಹತ್ವಾಕಾಂಕ್ಷೆ ಇದ್ದರೆ, ನೀವಿರುವ ಜಾಗದಲ್ಲಿ ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟಲು ದೇವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾನೆ ಎಂದು ನೀವು ಖಚಿತವಾಗಿ ತಿಳಿಯಬಹುದು.

ಅನೇಕರು ಯೇಸುವಿನ ನಾಮವನ್ನು ಮಾತ್ರ ಉಲ್ಲೇಖಿಸಿ, ಆತನು ತಮ್ಮ ಮಧ್ಯದಲ್ಲಿ ಇರುವದಾಗಿ ಹೇಳಿಕೊಳ್ಳುತ್ತಾರೆ (ಮತ್ತಾಯ 18:20). ಆದರೆ ಅವರು ಸ್ವತಃ ತಮ್ಮನ್ನು ತಾವೇ ವಂಚಿಸುತ್ತಿದ್ದಾರೆ. ಆತನು ನಿಜವಾಗಿಯೂ ಅವರ ಮಧ್ಯೆ ಇದ್ದಲ್ಲಿ, ಅವರ ಕೂಟಗಳು ಏಕೆ ಅಷ್ಟು ಬೇಸರಿಕೆ ಉಂಟುಮಾಡುತ್ತವೆ? ಅವರ ಜೀವಿತಗಳು ಏಕೆ ಪರಿವರ್ತನೆಗೊಳ್ಳುತ್ತಿಲ್ಲ?

ಒಬ್ಬ ನಿಜವಾದ ದೈವಿಕ ಮನುಷ್ಯನೊಂದಿಗೆ ಸ್ವಲ್ಪ ಸಮಯದ ಸಹವಾಸವೂ ನಮ್ಮ ಮೇಲೆ ಎಷ್ಟು ಆಳವಾದ ಪರಿಣಾಮ ಬೀರುತ್ತದೆ ಎಂದರೆ, ಅದರಿಂದ ನಮ್ಮ ಜೀವನವೂ ಬದಲಾಗುತ್ತದೆ. ಹಾಗಿದ್ದರೆ ನಾವು ಸ್ವಲ್ಪ ಸಮಯವನ್ನು ಸ್ವತಃ ಯೇಸುವಿನೊಂದಿಗೆ ಕಳೆದರೆ, ಅದು ನಮ್ಮ ಜೀವನದಲ್ಲಿ ಎಷ್ಟು ಆಳವಾದ ಪರಿಣಾಮ ಬೀರಬಹುದು? ನಮ್ಮ ಜೀವನ ಸಭೆಯ ಕೂಟಗಳ ಮೂಲಕ ಬದಲಾಗದಿದ್ದರೆ, ನಮ್ಮ ಕೂಟಗಳಲ್ಲಿ ದೇವರ ಪ್ರಸನ್ನತೆ ಇಲ್ಲವೆಂದು ನಾವು ಒಪ್ಪಬೇಕಾಗುತ್ತದೆ. ಹಾಗಾದರೆ ನಮ್ಮದು ಹೊಸ ಒಡಂಬಡಿಕೆಯ ಒಂದು ಸಭೆ ಎನ್ನಲು ಆಗುವದಿಲ್ಲ.