ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ನಾಯಕರಿಗೆ
WFTW Body: 

1 ಥೆಸಲೋನಿಕ 2ನೆಯ ಅಧ್ಯಾಯದಲ್ಲಿ ಪೌಲನು ಥೆಸಲೋನಿಕದವರಿಗೆ ನೆನಪಿಸುವುದೇನೆಂದರೆ, ಥೆಸಲೋನಿಕಕ್ಕೆ ಬರುವದಕ್ಕಿಂತ ಮುಂಚಿತವಾಗಿ ಫಿಲಿಪ್ಪಿಯಲ್ಲಿ ಅವನು ಹಿಂಸೆಯನ್ನು ಮತ್ತು ಅವಮಾನವನ್ನು ಎದುರಿಸಿದನು. ಎಷ್ಟೇ ವಿರೋಧವಿದ್ದಾಗಲೂ ಪೌಲನು ಧೈರ್ಯದಿಂದ ಸುವಾರ್ತೆಯನ್ನು ಸಾರಿದ್ದನ್ನು ಎಂಬುದಾಗಿ ಥೆಸಲೋನಿಕದವರು ನೆನೆಪಿಸಿಕೊಂಡರು. ಹೀಗೆ ಸುವಾರ್ತೆಗಾಗಿ ಹಿಂಸೆಯನ್ನು ಅನುಭವಿಸಲು ಭಯಪಡದೆ ಇರುವುದರಲ್ಲಿ ಆತನು ಥೆಸಲೋನಿಕದ ಕ್ರೈಸ್ತರಿಗೆ ಮಾದರಿಯಾಗಿದ್ದನು.

ತನ್ನ ಸೇವೆಯ ಬಗ್ಗೆ ನಾವೆಲ್ಲರೂ ಗಮನ ಕೊಡಬೇಕಾದ ಅಂಶವೊಂದನ್ನು ಪೌಲನು ಹೇಳುತ್ತಾ ಹೋಗುತ್ತಾನೆ: "ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ಹೃದಯವನ್ನು ಪರಿಶೋಧಿಸುವ ದೇವರನ್ನೆ ಮೆಚ್ಚಿಸಬೇಕೆಂದು ಮಾತಾಡುತ್ತೇವೆ (1 ಥೆಸ. 2:4). ಸುವಾರ್ತೆಯನ್ನು ಸಾರುವವರ ಮತ್ತು ಬೋಧಕರ ಸಾಕ್ಷಿಯು ತಮ್ಮ ಕೇಳುಗರನ್ನು ಮೆಚ್ಚಿಗೆಪಡಿಸದೆ, ದೇವರನ್ನು ಮೆಚ್ಚಿಸುವಂತಿರಬೇಕು. ಸುವಾರ್ತೆ ಸಾರುವ ಪ್ರತಿಯೊಬ್ಬ ಮನುಷ್ಯನ ಹೃದಯವು ಕೇವಲ ದೇವರನ್ನು ಮಾತ್ರ ಮೆಚ್ಚುಗೆಪಡಿಸುತ್ತಿದೆಯೋ ಇಲ್ಲವೋ ಎಂದು ದೇವರು ನಿರಂತರವಾಗಿ ಪರೀಕ್ಷಿಸುತ್ತಾನೆ.

ಪೌಲನು ಗಲಾತ್ಯದ ಕ್ರಿಸ್ತೀಯರಿಗೆ ಬರೆಯುವಾಗಲೂ ಈ ವಿಷಯಕ್ಕೆ ಹೆಚ್ಚು ಒತ್ತು ನೀಡಿದ್ದನು. ಆತನೆಂದಿಗೂ ಮನುಷ್ಯರನ್ನು ಮೆಚ್ಚಿಸಲಿಲ್ಲವೆಂಬುದನ್ನು ಅನೇಕ ಸಲ ಒತ್ತಿ ಹೇಳಿದನು. ಮನುಷ್ಯನ ಗೌರವವನ್ನು ಗಳಿಸಲು ತವಕಪಡುವದು ಪಾಪವೆಂಬುದನ್ನು ಕ್ರೈಸ್ತ ಸಾಮ್ರಾಜ್ಯದಲ್ಲಿ ಅನೇಕರು ತಿಳಿದುಕೊಂಡಿಲ್ಲ. ಬೇರೆ ಪಾಪಗಳು ಸುಲಭವಾಗಿ ಗ್ರಹಿಕೆಗೆ ಸಿಗುತ್ತವೆ. ಆದರೆ ಮನುಷ್ಯನ ಗೌರವ ಬಯಸುವುದು ಪಾಪವೆಂದು ಬಹು ಜನರು ಗ್ರಹಿಸುವುದಿಲ್ಲ. ಮನುಷ್ಯನ ಗೌರವವನ್ನು ಬಯಸುವದು ಗಂಭೀರವಾದ ಪಾಪವಾಗಿದೆ. ಅಂತಹ ವ್ಯಕ್ತಿಯು ದೇವರ ಸೇವಕನಾಗಲು ಯೋಗ್ಯನಲ್ಲ (ಗಲಾತ್ಯ. 1:10).

ಪ್ರಸಂಗ ಮಾಡುವಾಗ ತಾನೆಂದಿಗೂ ಯಾರನ್ನೂ ಹೊಗಳಲಿಲ್ಲ ಎಂಬುದಾಗಿ ಪೌಲನು 1 ಥೆಸಲೋನಿಕ 2:5ರಲ್ಲಿ ಹೇಳುತ್ತಾನೆ. ಆತನು ಸಾಮೂಹಿಕ ಸಭೆಯಲ್ಲಾಗಲಿ ಅಥವಾ ಖಾಸಗಿಯಾದ ಸಂಭಾಷಣೆಯಲ್ಲಾಗಲಿ, ಶ್ರೀಮಂತ ಮನುಷ್ಯರ ಮುಖಸ್ತುತಿ (ಹೊಗಳಿಕೆ) ಮಾಡಲಿಲ್ಲ. ಅನೇಕ ಬೋಧಕರು ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಂದ ಲಾಭವನ್ನು ಪಡೆಯುವುದಕ್ಕಾಗಿ ಅವರನ್ನು ಹೊಗಳುತ್ತಾರೆ. ಆದರೆ ನಿಜವಾದ ಕರ್ತನ ಸೇವಕನು ಯಾವ ವ್ಯಕ್ತಿಯ ಮುಖಸ್ತುತಿಯನ್ನೂ ಮಾಡುವದಿಲ್ಲ. ಪೌಲನು ಇನ್ನೂ ಮುಂದೆ ಹೇಳುವುದೇನೆಂದರೆ, ಹಣ ಮಾಡುವುದಕ್ಕಾಗಿ ಆತನು ಎಂದಿಗೂ ಬೋಧಿಸಲಿಲ್ಲ(1 ಥೆಸ. 2:5). ಯಾವ ರೀತಿಯಾಗಿ ಪ್ರಸಂಗಿಸಿದರೆ, ಜನರಿಂದ ಹೆಚ್ಚಿನ ಕಾಣಿಕೆ ಪಡೆಯಬಹುದೆಂದು ಅನೇಕ ಬೋಧಕರಿಗೆ ತಿಳಿದಿದೆ. ಆದರೆ ದೇವರು ಬೋಧಿಸಲಿಚ್ಚಿಸುವ ಸತ್ಯವನ್ನು ಅವರು ಬೋಧಿಸಿದರೆ, ಬಹುತೇಕ ಸಭೆಗಳಿಂದ ಅವರು ತಿರಸ್ಕರಿಸಲ್ಪಡುತ್ತಾರೆ. ಅನೇಕ ಭೋದಕರು ಶ್ರೀಮಂತ ಮತ್ತು ದೊಡ್ಡ ಸಭೆಗಳಿಂದ ಮತ್ತೆ ಮತ್ತೆ ಆಮಂತ್ರಣ ಪಡೆಯಲಿಚ್ಚಿಸುವದರಿಂದ, ಅವರು, ಜನರಿಗೆ ಮೆಚ್ಚುಗೆಯಾಗುವಂತಹ ಮಾತುಗಳನ್ನೇ ಮಾತನಾಡುತ್ತಾರೆ.

ಪೌಲನು ಸುವಾರ್ತೆಯನ್ನು ಪ್ರಚಾರ ಮಾಡುವಾಗ ಜನರಿಂದ ಮಹಿಮೆಯನ್ನು ಬಯಸಲಿಲ್ಲ (1 ಥೆಸ. 2:6). ಅಪೋಸ್ತಲನಾಗಿ ಜನರ ಮೇಲೆ ತಾನು ಚಲಾಯಿಸಬಹುದಾಗಿದ್ದ ಅಧಿಕಾರವನ್ನೂ ಕೂಡ ಪೌಲನು ಉಪಯೋಗಿಸಲಿಲ್ಲ. ನಾವು ಕರ್ತನ ಸೇವೆಯನ್ನು ಹೇಗೆ ಮಾಡಬೇಕೆಂದು ಹೇಳುವ ಇನ್ನೂ ಅನೇಕ ವಾಕ್ಯಗಳು ಇಲ್ಲಿವೆ. ಕರ್ತನ ಸೇವೆಯನ್ನು ಮಾಡುವವರು ಸತ್ಯವೇದದ ಈ ವಾಕ್ಯಗಳನ್ನು ಧ್ಯಾನಿಸಬೇಕು: ಅಲ್ಲಿ ಹೊಗಳುವಿಕೆಯಿರಲಿಲ್ಲ, ಹಣದ ಆಶೆಯಿರಲಿಲ್ಲ, ಜನರಿಂದ ಮಹಿಮೆ ಪಡೆಯುವುದಿರಲಿಲ್ಲ ಮತ್ತು ಅಧಿಕಾರವನ್ನು ಗಂಭೀರವಾಗಿ ಚಲಾಯಿಸುವದೂ ಇರಲಿಲ್ಲ.

ಪೌಲನು ದೇವರ ಸೇವೆಯನ್ನು ಯಾವ ರೀತಿಯಾಗಿ ಮಾಡಿದನೆಂದು ನಕಾರಾತ್ಮಕವಾಗಿ ಹೇಳಿದ ಮಾತುಗಳ ಜೊತೆಗೆ ಕೆಲವು ಸಕಾರಾತ್ಮಕವಾದ ಸಂಗತಿಗಳನ್ನೂ ತಿಳಿಸುತ್ತಾನೆ. ಮೊಟ್ಟ ಮೊದಲನೆಯದಾಗಿ ಪೌಲನು ಹೀಗೆ ಹೇಳುತ್ತಾನೆ- ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡೆವು (1 ಥೆಸ. 2:7). ಎರಡನೆಯದಾಗಿ, "ನೀವು ನಮಗೆ ಅತಿ ಪ್ರಿಯರು" (1 ಥೆಸ. 2:8). ಯಾವುದೇ ಮನುಷ್ಯನು ದೇವರ ವಾಕ್ಯವನ್ನು ಜನರಿಗೆ ಸಾರುವಾಗ ಆತನಿಗೆ ಆ ಜನರ ಮೇಲೆ ತೀವ್ರವಾದ ಪ್ರೀತಿಯಿರದಿದ್ದರೆ ಅವನು ಸುವಾರ್ತೆ ಸಾರಲು ಯೋಗ್ಯನಲ್ಲ. ನಿಮ್ಮ ಹೃದಯದಲ್ಲಿ ಜನರ ಬಗ್ಗೆ ನಿಮಗೆ ನಿಜವಾದ ಪ್ರೀತಿಯಿಲ್ಲದಿದ್ದರೆ ಅವರಿಗೆ ಸುವಾರ್ತೆ ಸಾರುವುದನ್ನು ನೀವು ಮರೆತುಬಿಡಿರಿ ಹಾಗೂ ಬೇರೇನಾದರೂ ಮಾಡಿರಿ.

ಮೂರನೆಯದಾಗಿ ಹೀಗೆ ಹೇಳುತ್ತಾನೆ-ನಿಮಗೆ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು" (1 ಥೆಸ. 2:8). ನಮಗಿದು ಎಂಥಹ ಮಾದರಿ! ಅವರಿಗೆ ಸುವಾರ್ತೆಯನ್ನು ಸಾರುವುದಷ್ಟೆಯಲ್ಲದೆ, ಅವರ ಸೇವೆಯಲ್ಲಿ ತಮ್ಮ ಜೀವವನ್ನೇ ಸಮರ್ಪಿಸಲು ಅವರು ಸಿದ್ಧರಿದ್ದರು. ನಾಲ್ಕನೆಯದಾಗಿ ಹೇಳುತ್ತಾನೆ-ಸಹೋದರರೆ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಜೀವನ ಮಾಡಿಕೊಳ್ಳುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು (1 ಥೆಸ. 2:9). ದೇವರ ಸೇವಕನು ಶ್ರಮಜೀವಿಯಾಗಿರಬೇಕು. ಅನೇಕ ಪೂರ್ಣಾವಧಿಯ ಕ್ರಿಸ್ತೀಯ ಸೇವಕರು ನಿಜವಾಗಿ ನೋಡುವುದಾದರೆ ಕಷ್ಟಪಡುವವರಲ್ಲ. ಸಾಯಂಕಾಲದ ಸಮಯದಲ್ಲಿ ಅಲ್ಲಿ ಇಲ್ಲಿ ಪ್ರಾರ್ಥನಾ ಕೂಟಗಳಿಗೆ ಹೋಗುತ್ತಾರೆ, ಆದರೆ ದಿನದ ಪೂರ್ಣ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಅವರು ನಿಜವಾದ ಪೂರ್ಣಾವಧಿಯ ಕ್ರಿಸ್ತೀಯ ಸೇವಕರಲ್ಲ. ಅವರು ಕೇವಲ ಸಾಯಂಕಾಲದ ಕೆಲಸಗಾರರು. ನಿಜವಾದ ಪೂರ್ಣಾವಧಿಯ ಸೇವಕರು ವಾರದ ಎಲ್ಲಾ ದಿನಗಳಲ್ಲಿ ವೃತ್ತಿಯನ್ನು ಮಾಡಿ, ಸಾಯಂಕಾಲದ ಸಮಯದಲ್ಲಿ ಹಾಗು ಭಾನುವಾರದಂದು ದೇವರ ಸೇವೆಯನ್ನು ಮಾಡುತ್ತಾರೆ. ಪೌಲನು ಹಗಲಿನ ಸಮಯದಲ್ಲಿ ಹಾಗು ಬಿಡುವು ಸಿಕ್ಕಾಗಲೆಲ್ಲಾ, ಕೆಲವೊಂದು ಸಾರಿ ತಡರಾತ್ರಿಯೂ ಕೂಡ ಗುಡಾರವನ್ನು ಮಾಡುತ್ತಿದ್ದನು. ಈ ರೀತಿಯಾಗಿ ತನ್ನ ಜೀವನಾಧಾರವನ್ನು ಗಳಿಸುತ್ತಿದ್ದನು ಮತ್ತು ಯಾರಿಗೂ ಆತನು ಹೊರೆಯಾಗಲಿಲ್ಲ.

ಪೌಲನು 1 ಥೆಸಲೋನಿಕ 2:10ರಲ್ಲಿ ಹೀಗೆ ಹೇಳುತ್ತಾನೆ- ಥೆಸಲೋನಿಕ ಸಭೆಯ ಜನರ ಜೊತೆ ನಾವು ಎಷ್ಟೋ ಶುದ್ಧರಾಗಿಯೂ ನೀತಿವಂತರಾಗಿಯೂ ನಿರ್ದೋಶಿಗಳಾಗಿಯೂ ನಡೆದುಕೊಂಡೆವು. ಪೌಲನು ಎಲ್ಲಿಯೇ ಹೋದರೂ ಹೀಗೆ ಹೇಳಬಲ್ಲವನಾಗಿದ್ದನು "ಕೇವಲ ನನ್ನ ಬೋಧನೆಯಲ್ಲ, ಇದರ ಜೊತೆ ನಾನು ನಡೆದ ಜೀವಿತವು ಸುವಾರ್ತೆಗೆ ಸಾಕ್ಷಿಯಾಗಿದೆ". ಕ್ರಿಸ್ತೀಯ ಸೇವಕರಲ್ಲಿ ಈ ರೀತಿಯ ಸಾಕ್ಷಿ-ಜೀವಿತವಿರುವದು ಎಷ್ಟು ಅವಶ್ಯಕವಾಗಿದೆ!

ನಿಜವಾದ ದೇವರ ಸೇವಕನು ಒಬ್ಬ ತಂದೆಯೂ ಮತ್ತು ತಾಯಿಯೂ ಆಗಿದ್ದಾನೆ. ವಿಶ್ವಾಸಿಗಳಿಗೆ ತಾಯಿಯ ಹಾಗೆ ಮಮತೆಯನ್ನು ತೋರಿಸುತ್ತಾ, ತಂದೆಯ ಹಾಗೆ ಅವಷ್ಯಕತೆಯಿರುವಲ್ಲಿ ಶಿಸ್ತನ್ನು ಮತ್ತು ಸಲಹೆಯನ್ನು ನೀಡುವವನಾಗಿದ್ದಾನೆ

1 ಥೆಸಲೋನಿಕ 2:11ರಲ್ಲಿ ಪೌಲನು ಹೀಗೆ ಹೇಳುತ್ತಾನೆ- ತಂದೆಯಂತೆ ವಿಶ್ವಾಸಿಗಳಿಗೆ ಬುದ್ಧಿ ಹೇಳಿದೆನು, ಪ್ರೋತ್ಸಾಹಿಸಿದೆನು, ಮತ್ತು ಬಿನ್ನಹಿಸಿದೆನು. ನಿಜವಾದ ದೇವರ ಸೇವಕನು ಒಬ್ಬ ತಂದೆಯೂ ಮತ್ತು ತಾಯಿಯೂ ಆಗಿದ್ದಾನೆ. ವಿಶ್ವಾಸಿಗಳಿಗೆ ತಾಯಿಯ ಹಾಗೆ ಮಮತೆಯನ್ನು ತೋರಿಸುತ್ತಾ, ತಂದೆಯ ಹಾಗೆ ಅವಷ್ಯಕತೆಯಿರುವಲ್ಲಿ ಶಿಸ್ತನ್ನು ಮತ್ತು ಸಲಹೆಯನ್ನು ನೀಡುವವನಾಗಿದ್ದಾನೆ. ಇವೆರಡೂ ಗುಣಲಕ್ಷಣಗಳು ಪ್ರತಿಯೊಬ್ಬ ಕರ್ತನ ಸೇವಕನಲ್ಲಿ ಮತ್ತು ಸಭೆಯ ಹಿರಿಯ ಸಹೋದರನಲ್ಲಿ ತೋರಿಬರಬೇಕು. ಕರ್ತನ ಸೇವೆ ಮಾಡಲಿಚ್ಚಿಸುವವರು ಆತನ ಸೇವೆಯಲ್ಲಿ ಪರಿಣಾಮಕಾರಿಯಾಗಬೇಕಾದರೆ 1 ಥೆಸಲೋನಿಕ. 2:4-11 ವಾಕ್ಯಗಳನ್ನು ಓದಿ, ಧ್ಯಾನಿಸಬೇಕೆಂದು ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ.