ವಿಮೋಚನಾಕಾಂಡ ಹನ್ನೆರಡನೇ ಅಧ್ಯಾಯದಲ್ಲಿ ನಾವು ಐಗುಪ್ತದಿಂದ ಇಸ್ರಯೇಲರ ಬಿಡುಗಡೆಯ ಬಗ್ಗೆ ಓದುತ್ತೇವೆ. ಮರಣದ ದೂತನಿಂದ ತಪ್ಪಿಸಿಕೊಳ್ಳಲು, ಹಿಸ್ಸೊಪ್ ಕೊಂಬೆಯನ್ನು ಬಳಸಿ, ಕಳಂಕ ರಹಿತ ಕುರಿಮರಿಯ ರಕ್ತವನ್ನು ಬಾಗಿಲು ಹಾಗು ಬಾಗಿಲಿನ ಕಂಬದ ಮೇಲೆ ಹಾಕಲು ಅವರಿಗೆ ಹೇಳಲಾಗಿತ್ತು. ನಮ್ಮ ಹೃದಯಗಳಲ್ಲಿ ಕ್ರಿಸ್ತನ ರಕ್ತವನ್ನು ಹಚ್ಚುವ ನಂಬಿಕೆಯ ಚಿತ್ರವದು.ಹಿಸ್ಸೊಪ್ ಸಾಮಾನ್ಯ ಗಿಡವಾಗಿದ್ದು, ಐಗುಪ್ತದಲ್ಲಿ ಸುಲಭವಾಗಿ ನೋಡ ಸಿಗುತ್ತಿತ್ತು. ಇಸ್ರಯೇಲರು ತಮ್ಮ ಹೊಸ ಕ್ಯಾಲೆಂಡರಿನ ಮೊದಲನೇ ತಿಂಗಳ ಹದಿನಾಲ್ಕನೆಯ ದಿನದಂದು ಐಗುಪ್ತದಿಂದ ಹೊರಟರು - ಸುಮಾರು 1500 ವರ್ಷಗಳ ನಂತರ ಯೇಸು ಕ್ರಿಸ್ತರನ್ನು ಅದೇ ದಿನ ಶಿಲುಬೆಗೇರಿಸಲಾಯಿತು. ದೇವರು ಭವಿಷ್ಯವನ್ನು ನೋಡಿ, ಫರಿಸಾಯರು ಯೇಸುವನ್ನು ಶಿಲುಬೆಗೇರಿಸುವ ದಿನವನ್ನು ಕಂಡರು ಹಾಗು ಆ ದಿನಾಂಕವನ್ನು ಇಸ್ರಯೇಲರನ್ನು ಬಿಡುಗಡೆಗೊಳಿಸುವುದಕ್ಕಾಗಿ ಆರಿಸಿಕೊಂಡರು!ಇಸ್ರಯೇಲರು ಬಿಡುಗಡೆ ಹೊಂದಿದ್ದು ಹೇಗೆ? ಅವರ ಒಳ್ಳೆಯ ಜೀವನದಿಂದಲ್ಲ, ಒಳ್ಳೆಯ ಕಾರ್ಯಗಳಿಂದಲೂ ಅಲ್ಲ. ಕಳೆದ ಮೂವತ್ತು ವರ್ಷಗಳಲ್ಲಿ, ಪ್ರತಿಯೊಂದು ವ್ಯಕ್ತಿಯು ಹೇಗೆ ಜೀವಿಸಿದನೆಂದು, ದೇವರು ಪ್ರತಿಯೊಂದು ಮನೆಯ ಒಳಗೆ ಹೋಗಿ ಪರೀಕ್ಷಿಸಲಿಲ್ಲ. ಇಲ್ಲ. ಮುಗ್ಧ ಕುರಿಮರಿಯ ರಕ್ತವನ್ನು ತಮ್ಮ ಬಾಗಿಲುಗಳ ಮೇಲೆ ಹಾಕಲು ಅವರಿಗೆ ನಂಬಿಕೆಯಿತ್ತೆ ಎಂಬುದನ್ನು ಮಾತ್ರ ದೇವರು ಪರೀಕ್ಷಿಸಿದರು. ಅವರು ಹಿಸ್ಸೊಪ್ ಕೊಂಬೆಯನ್ನು ರಕ್ತದಲ್ಲಿ ಅದ್ದಿ, ತಮ್ಮ ಬಾಗಿಲುಗಳ ಮೇಲೆ ಹಚ್ಚುವಾಗ ಅವರು ಹೇಳುತ್ತಿದ್ದುದೇನೆಂದರೆ, "ನನ್ನನ್ನು ರಕ್ಷಿಸಲು, ನಾನು ನನ್ನ ಒಳ್ಳೆಯ ಕೆಲಸಗಳು ಅಥವಾ ನನ್ನ ಧಾರ್ಮಿಕ ಕಾರ್ಯಗಳನ್ನು ನಂಬುತ್ತಿಲ್ಲ. ನಾನು ಮುಗ್ಧ ಕುರಿಮರಿಯ ರಕ್ತವನ್ನು ನಂಬುತ್ತಿದ್ದೇನೆ. ಆದ್ದರಿಂದ, ಮರಣದ ದೂತನು ನನ್ನ ಮನೆಯನ್ನು ಪ್ರವೇಶಿಸುವುದಿಲ್ಲವೆಂದು ನಾನು ನಂಬುತ್ತೇನೆ." ಅದುವೇ ರಕ್ಷಣೆಯ ದಾರಿ."ನಾನು ಒಳ್ಳೆಯ ಜೀವನವನ್ನು ಜೀವಿಸಿದ್ದರಿಂದ ನಾನು ರಕ್ಷಿಸಲ್ಪಟ್ಟೆ" ಎಂದು ಯಾವ ಮನುಷ್ಯನೂ ಜಂಭಕೊಚ್ಚಿಕೊಳ್ಳುವಂತಿಲ್ಲ. ಒಳ್ಳೆಯ ಮತ್ತು ಕೆಟ್ಟ ಜೀವನ ಜೀವಿಸಿದ ಇಬ್ಬರೂ ಕುರಿಮರಿಯ ರಕ್ತದಿಂದ ಆ ರಾತ್ರಿ, ಐಗುಪ್ತದಿಂದ ರಕ್ಷಿಸಲ್ಪಟ್ಟರು. "ನಾನು ಒಳ್ಳೆಯ ಜೀವನ ಜೀವಿಸಿದ್ದೇನೆ, ಅದ್ದರಿಂದ ದೇವರು ನನ್ನ ನ್ಯಾಯ ತೀರ್ಪು ಮಾಡುತ್ತಾರೆಂದು ನಾನು ನಂಬುವುದಿಲ್ಲ" ಎಂದು ಇಸ್ರಯೇಲಿನಲ್ಲಿ ಯಾರಾದರೊಬ್ಬರು ಯೋಚಿಸಿ, ಕುರಿಮರಿಯ ರಕ್ತವನ್ನು ಬಾಗಿಲಿನ ಮೇಲೆ ಹಾಕದೆ ಇದ್ದಿದ್ದರೆ, ಏನಾಗುತ್ತಿತ್ತೆಂದು ಯೋಚಿಸುತ್ತೀರಿ? ಮರಣದ ದೂತನ ಬಂದು, ಐಗುಪ್ತದ ಇತರ ಮನೆಯವರಂತೆ ಅವನ ಜೇಷ್ಠ್ ಪುತ್ರನನ್ನು ಸಂಹರಿಸುತ್ತಿದ್ದನು.ಅನೇಕ ಜನರು ರಕ್ಷಣೆಯು ನಂಬಿಕೆಯ ಮೂಲಕ ಕೃಪೆಯಿಂದ ಎಂಬ ಸತ್ಯದ ದುರುಪಯೋಗ ಮಾಡಿದ್ದಾರೆ ಮತ್ತು "ನಾವು ಹೇಗೆ ಜೀವಿಸುತ್ತೇವೆ ಎಂಬುದು ದೊಡ್ಡ ವಿಷಯವಲ್ಲ" ಎಂದು ಹೇಳಿ ಅಜಾಗರೂಕರಾಗಿ ಜೀವಿಸಿದ್ದಾರೆ ಎಂದು ನನಗೆ ಗೊತ್ತು. ಆದರೆ ರಕ್ಷಣೆಯು ಕಾರ್ಯಗಳಿಂದಲ್ಲ, ನಂಬಿಕೆಯ ಮೂಲಕ ಕೃಪೆಯಿಂದ ಎಂಬ ಸತ್ಯವನ್ನು ಅದು ಅಲ್ಲಗಳೆಯುವುದಿಲ್ಲ.ಎಫೆಸದವರಿಗೆ 2:9 ಹೇಳುತ್ತದೆ "ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ." ಆದರೆ ನಂತರದ ವಾಕ್ಯವೇ ಹೇಳುತ್ತದೇನೆಂದರೆ, ನಾವು ರಕ್ಷಣೆ ಹೊಂದಿದ ಮೇಲೆ ದೇವರು ನಮ್ಮನ್ನು "ಒಳ್ಳೆಯ ಕಾರ್ಯಗಳಿಗಾಗಿ" ಸೃಷ್ಟಿಸಿದ್ದಾರೆ. ಆದ್ದರಿಂದ ಸಂಪೂರ್ಣ ಸತ್ಯ ಇದು:ನಮ್ಮ ಅನೇಕ ಒಳ್ಳೆಯ ಕಾರ್ಯಗಳಿಂದ ನಾವು ರಕ್ಷಣೆ ಹೊಂದಲಾರೆವು.ಆದರೆ, ನಾವು ರಕ್ಷಣೆ ಹೊಂದಿದ ಮೇಲೆ ನಮ್ಮ ನಂಬಿಕೆಯು ಒಳ್ಳೆಯ ಕಾರ್ಯಗಳಲ್ಲಿ ಫಲಿಸದಿದ್ದರೆ ಅಂಥ ನಂಬಿಕೆಯು ಅಪ್ಪಟವಲ್ಲದ್ದಾಗಿತ್ತು ಎಂದು ಸಾಬೀತಾಗುತ್ತದೆ.ಅದನ್ನೇ ಯಾಕೋಬ ಹೇಳುವುದು: "ಕ್ರಿಯೆ(ಒಳ್ಳೆಯ)ಗಳಿಲ್ಲದ ನಂಬಿಕೆಯೂ ಸತ್ತದ್ದೇ" (ಯಾಕೋಬನು 2:26).ಬಾಗಿಲಿನ ಮೇಲೆ ರಕ್ತ ಹಾಕಿದ ಮೇಲೆ ಆ ರಾತ್ರಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕೆಂದು ಇಸ್ರಯೇಲರಿಗೆ ಆಜ್ಞಾಪಿಸಲಾಗಿತ್ತು. ಜೀವದಾಯಕ ರೊಟ್ಟಿಯಾದ ಕ್ರಿಸ್ತನನ್ನೇ ತಿನ್ನುವ ಚಿತ್ರವದು. ಆತನ ರಕ್ತದಲ್ಲಿ ನಂಬಿಕೆಯಿಟ್ಟರೆ ಸಾಲದು, ನಾವು ಕ್ರಿಸ್ತನ ಜೀವವನ್ನು ಕೂಡ ತಿನ್ನಬೇಕು. "ನಾವು ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿರಲಾಗಿ ಆತನ ಕೂಡ ಸಮಾದಾನವಾದ ನಮಗೆ ಆ ಮಗನಿಗಿರುವ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ" (ರೋಮಾ. 5:10).ಐಗುಪ್ತವನ್ನು ಬಿಟ್ಟು ಹೋಗಲು ಸದಾ ಸಿದ್ಧರಾಗಿ, ಕ್ಷಣಮಾತ್ರದ ಸೂಚನೆಯ ಮೇರೆಗೂ ಪ್ರಯಾಣದ ಬಟ್ಟೆಯುಟ್ಟು ರೊಟ್ಟಿಯನ್ನು ತಿನ್ನಬೇಕೆಂದು ಅವರಿಗೆ ಹೇಳಲಾಗಿತ್ತು. ಅದೇ ರೀತಿ ನಾವೂ ಈ ಜಗತ್ತಿನಲ್ಲಿ ಜೀವಿಸಬೇಕು - ಯೇಸುವು ತನ್ನನ್ನು ಸಂಧಿಸಲು ಕರೆದ ಕೂಡಲೇ ಹೋಗಲು ಸದಾ ಸಿದ್ಧರಾಗಿರಬೇಕು. ಈ ಜಗತ್ತು ನಮ್ಮ ಮನೆಯಲ್ಲ. ನಾವು ಯಾವ ಸಮಯದಲ್ಲೂ ಬಿಟ್ಟು ಹೋಗಲು ಸಿದ್ಧರಿರಬೇಕು.