ಎಫೆಸ 6 :10-18 ರಲ್ಲಿ ಸೈತಾನನೊಂದಿಗಿನ ಆತ್ಮಿಕ ಯುದ್ಧದ ಬಗ್ಗೆ ನಾವು ಓದುತ್ತೇವೆ. ಮನೆಯ ಬಗ್ಗೆಯ ಭಾಗವು ಆತ್ಮಿಕ ಯುದ್ಧದ ಭಾಗವಾದ ತಕ್ಷಣ ಬರುತ್ತದೆ ಎಂಬುದನ್ನು ಗಮನಿಸಿ. ಸೈತಾನನು ಯಾವಾಗಲೂ ಮೊದಲು ಮನೆಗೆ ಮುತ್ತಿಗೆ ಹಾಕುತ್ತಾನೆ. ನಾವು ಸೈತಾನನ ವಿರುದ್ಧ ಧೃಢವಾಗಿ ನಿಲ್ಲಬೇಕು ಹಾಗೂ ಎಂದಿಗೂ ಮಾಂಸ ಮತ್ತು ರಕ್ತದೊಂದಿಗೆ ನಾವು ಹೋರಾಟ ಮಾಡಬಾರದು (ಎಫೆಸ 6:12). ನೀನು ಸೈತಾನನನ್ನು ಪರಿಣಾಮಕಾರಿಯಾಗಿ ಎದುರಿಸಲು ನಿನಗಿರಬೇಕಾದ ಮೊಟ್ಟ ಮೊದಲ ಅರ್ಹತೆಯೇನೆಂದರೆ ನೀನು ಮನುಷ್ಯರೊಂದಿಗಿನ ಎಲ್ಲಾ ರೀತಿಯ ಹೋರಾಟವನ್ನು ನಿಲ್ಲಿಸಬೇಕು. ಅನೇಕ ವಿಶ್ವಾಸಿಗಳು ಸೈತಾನನ ವಿರುದ್ಧ ಜಯಶಾಲಿಯಾಗದಿರುವುದರ ಕಾರಣವೇನೆಂದರೆ ಅವರು ಮನುಷ್ಯರ ಜೊತೆ ಅಷ್ಟೊಂದು ಹೋರಾಡುತ್ತಾರೆ. ಯಾವ ವಿಷಯವಾಗಿಯೂ ನಾನು ಮನುಷ್ಯರೊಡನೆ ಜಗಳ ಮಾಡುವುದಿಲ್ಲ ಎಂಬುದಾಗಿ ಬಹಳ ವರ್ಷಗಳ ಹಿಂದೆಯೇ ನಿರ್ಧರಿಸಿದೆ. ನಂತರ ಸೈತಾನನೊಂದಿಗೆ ಪರಿಣಾಮಕಾರಿಯಾಗಿ ಹೋರಾಡುವುದನ್ನು ನಾನು ಕಂಡುಕೊಂಡೆನು. ಮನುಷ್ಯರೊಡನೆ ಎಂದಿಗೂ ಹೋರಾಡುವುದಿಲ್ಲ ಎಂಬ ಒಂದು ನಿರ್ಧಾರವನ್ನು ನೀವು ಮಾಡಿದರೆ, ಸೈತಾನನನ್ನು ಸತತವಾಗಿ ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ಜೀವಿತದಲ್ಲಿ ದೇವರಿಗೂ ಮತ್ತು ಸಭೆಗೂ ನೀವು ಉಪಯುಕ್ತವಾಗಿರುತ್ತೀರಿ. ಸರ್ವಾಯುಧವು ದೇವರು ನಮಗೆ ಕೊಟ್ಟಿರುವ ಆತ್ಮಿಕ ಸಲಕರಣೆಗಳ ಅನೇಕ ಭಾಗಗಳ ಚಿತ್ರಣವಾಗಿದೆ.
ಮೊದಲನೆಯದಾಗಿ, ಸತ್ಯವೆಂಬ ನಡುಕಟ್ಟು. ಸತ್ಯದ ಅರ್ಥ ಪ್ರಾಮಾಣಿಕತೆ, ಯಥಾರ್ಥತೆ, ಕಪಟತನವಿಲ್ಲದಿರುವುದು ಮತ್ತು ಸುಳ್ಳು ಹೇಳದಿರುವುದಾಗಿದೆ. ಒಂದು ವೇಳೆ ಈ ಪಾಪಗಳಿಂದ ನೀವು ಬಿಡುಗಡೆ ಹೊಂದಿಲ್ಲವಾದರೆ ನೀವು ಸೈತಾನನ ವಿರುದ್ಧ ಹೋರಾಡುವುದನ್ನು ಮರೆಯಬೇಕು. ಸೈತಾನನು ಸುಳ್ಳುಗಾರನಾಗಿದ್ದು, ನಿನ್ನ ಆಂತರಿಕ-ಜೀವಿತದಲ್ಲಿ ನೀನು ಸುಳ್ಳು ಹೇಳುತ್ತಿದ್ದರೆ, ನಿನ್ನ ಒಳಗಿನ ವ್ಯಕ್ತಿಯೊಂದಿಗೆ ಸೈತಾನನು ಅನ್ಯೋನ್ಯತೆಯಿಂದಿರುತ್ತಾನೆ. ಆಗ ನೀನು ಸೈತಾನನನ್ನು ಜಯಿಸಲಾಗುವುದಿಲ್ಲ. ಹಾಗಾಗಿ ನಿಮ್ಮ ಜೀವಿತವು ಪಾರದರ್ಶಕತೆಯಿಂದ ಕೂಡಿರಲಿ ಮತ್ತು ಎಲ್ಲಾ ಸಮಯದಲ್ಲಿ ವಂಚನೆಯಿಲ್ಲದೆ ಇರಲಿ.
ವಜ್ರಕವಚವು ನೀತಿತನವಾಗಿದ್ದು, ಇಲ್ಲಿ ಎರಡು ರೀತಿಯ ನೀತಿತನಗಳಿವೆ.
ನಂತರ ಬರುವುದು ಸುವಾರ್ತೆಯನ್ನು ಸಾರಲು ಸಿದ್ಧವಾದ ಮನಸ್ಸೆಂಬ ಕೆರಗಳನ್ನು (ಬೂಟುಗಳನ್ನು) ಮೆಟ್ಟಿಕೊಂಡು (ಧರಿಸಿ) ನಿಲ್ಲುವುದು. ಮತ್ತೊಬ್ಬರಿಗೆ ಸುವಾರ್ತೆಯನ್ನು ಸಾರುವುದು ಸೈತಾನನನ್ನು ಜಯಿಸುವ ಒಂದು ಮಾರ್ಗ ಎಂದು ನಿಮಗೆ ಗೊತ್ತಾ? ಯಾರು ಸೋಮಾರಿಗಳಾಗಿದ್ದಾರೋ ಮತ್ತು ಮತ್ತೊಬ್ಬರೊಡನೆ ಸುವಾರ್ತೆಯನ್ನು ಹಂಚಿಕೊಳ್ಳುವುದನ್ನು ಎಂದಿಗೂ ಯೋಚಿಸದೆ ಇರುತ್ತಾರೋ, ಅವರು ಸೈತಾನನಿಂದ ಸುಲಭವಾಗಿ ಜಯಿಸಲ್ಪಡುತ್ತಾರೆ. ಆದರೆ ಯಾರು ಕ್ರಿಯಾಶಾಲಿಗಳಾಗಿದ್ದಾರೋ ಮತ್ತು ದೇವರ ಸೇವೆ ಮಾಡುತ್ತಿದ್ದಾರೋ ಅಂಥವರು ರಕ್ಷಿಸಲ್ಪಡುತ್ತಾರೆ. ನನ್ನ ಯೌವ್ವನದ ದಿನಗಳಲ್ಲಿ, ನಾನು ನನ್ನ ವಿರಾಮದ ಸಮಯವನ್ನು ದೇವರ ವಾಕ್ಯ ಅಭ್ಯಾಸ ಮಾಡುವುದರಲ್ಲಿ, ವಿಶ್ವಾಸಿಗಳೊಡನೆ ಅನ್ಯೋನ್ಯತೆ ಮಾಡುವುದರಲ್ಲಿ ಮತ್ತು ಆತನಿಗೆ ಸಾಕ್ಷಿಯಾಗಿರುವುದರಲ್ಲಿ ಕಳೆಯುತ್ತಿದ್ದುದರಿಂದ ಯೌವನಸ್ಥರು ಎದುರಿಸುವ ಅನೇಕಾನೇಕ ಶೋಧನೆಗಳಿಂದ ನಾನು ರಕ್ಷಿಸಲ್ಪಟ್ಟೆ ಎಂದು ನನಗೆ ನೆನಪಿದೆ. ನಾನು ಒಂದು ಲೌಕಿಕ ಕೆಲಸದಲ್ಲಿದ್ದೆ. ಆದರೆ ವಾರದ ಎರಡು ದಿನ, ನಾನು ಕೊಚ್ಚಿನ್‌ನ (ನಾನು ವಾಸಿಸುತ್ತಿದ್ದ ನಗರದ) ಬೀದಿಗಳಲ್ಲಿ ಕೆಲವು ತಾಸುಗಳನ್ನು ಸುವಾರ್ತೆ ಸಾರುವುದರಲ್ಲಿ ಕಳೆಯುತ್ತಿದ್ದೆ. ಆ ಕೊಚ್ಚಿನ್ ನಗರದಲ್ಲಿನ ನೌಕಾದಳದ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 2 ವರ್ಷಗಳ ಅವಧಿಯಲ್ಲಿ, ನಗರದ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಬಹುಷ: ನಾನು ಸುವಾರ್ತೆ ಸಾರಿರಬೇಕು. ಸುವಾರ್ತೆ ಸಾರುವುದು, ಸುವಾರ್ತಾ-ಕರಪತ್ರಗಳನ್ನು (ಟ್ರ್ಯಾಕ್ಟ್ಗಲಳನ್ನು) ಹಂಚುವುದು, ಮನೆಗಳಲ್ಲಿ 4 ಅಥವಾ 5 ಜನರನ್ನೊಳಗೊಂಡ ಸಣ್ಣ ಗುಂಪುಗಳೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದು ಇವೆಲ್ಲವು ನನ್ನನ್ನು ಬಿಜ಼ಿಯಾಗಿರುವಂತೆ ಮಾಡಿದವು( ಕಾರ್ಯನಿರತನನ್ನಾಗಿಸಿದವು) ಮತ್ತು ಅನೇಕ ಶೋಧನೆಗಳಿಂದ ನನ್ನನ್ನು ಕಾಪಾಡಿದವು. ನಮಗೆ ಮಾಡಲು ಏನೂ ಇಲ್ಲದ ವಿರಾಮದ ಸಮಯದಲ್ಲಿ ನಮಗೆ ಅನೇಕ ಶೋಧನೆಗಳು ಎದುರಾಗುತ್ತವೆ. ಮೈಗಳ್ಳತನದ ಮನಸ್ಸು ನಿಜವಾಗಿಯೂ ದೆವ್ವದ ಕೆಲಸದ ಸ್ಥಳವಾಗಿದೆ. ಮತ್ತೊಬ್ಬರಿಗೆ ದೇವರ ಸಮಾಧಾನದ ಒಳ್ಳೆಯ ವಾರ್ತೆಯನ್ನು ಕೊಡಲು, ನಮ್ಮ ಪಾದಗಳು ಯಾವಾಗಲೂ ಸಿದ್ಧವಿರಬೇಕು. ಈ ರೀತಿ ಮಾಡಲು ನೀವು ಒಂದು ಸಲ ಪ್ರಯತ್ನಿಸಿ ಮತ್ತು ಸೈತಾನನೊಟ್ಟಿಗಿನ ನಿಮ್ಮ ಯುದ್ಧದಲ್ಲಿ ಇದು ನಿಮಗೆ ನೆರವಾಗುತ್ತದೋ ಇಲ್ಲವೋ ಎಂದು ನೋಡಿ.
ನಾಲ್ಕನೆಯ ಸರ್ವಾಯುಧವು ನಂಬಿಕೆಯೆಂಬ ಗುರಾಣಿ. ಸೈತಾನನ ಬಹುದೊಡ್ಡ ಅಸ್ತ್ರವೆಂದರೆ ನಾವು ದೇವರ ಪ್ರೀತಿಯ ಬಗ್ಗೆ ಅನುಮಾನಪಡುವಂತೆ ಮಾಡುವುದಾಗಿದೆ. ಏದೆನ್ ತೋಟದಲ್ಲಿ ಹವ್ವಳ ಕಡೆ ಆತನು ಎಸೆದ ಅಗ್ನಿಬಾಣ ಇದೇ ಆಗಿತ್ತು. ಸೈತಾನನು ಆಕೆಯ ಮನಸ್ಸಿನಲ್ಲಿ, ಬಿತ್ತಿದ ಬೀಜವೆಂದರೆ, ದೇವರು ನಿಜವಾಗಿಯೂ ನಿನ್ನನ್ನು ಪ್ರೀತಿಸುವುದಾದರೆ, ಆ ಸುಂದರವಾದ ಹಣ್ಣನ್ನು ತಿನ್ನಬೇಡ ಎಂದು ಆತನು ಹೇಳುತ್ತಿರಲಿಲ್ಲ. ಆಕೆಯು ಆ ಅಗ್ನಿಬಾಣದ ಅಡಿಯಲ್ಲಿ ಬಿದ್ದಳು. ದೇವರು ನಮ್ಮನ್ನು ಬಹಳ ತೀಕ್ಷ್ಣವಾಗಿ ಪ್ರೀತಿಸುತ್ತಾನೆ ಮತ್ತು ಪ್ರತಿಯೊಂದು ಸನ್ನಿವೇಶದಲ್ಲಿ ನಮಗಾಗಿ ಉತ್ತಮವಾದದ್ದನ್ನೇ ಬಯಸುತ್ತಾನೆ ಎಂದು ನಂಬುವುದೇ ನಿಜವಾದ ನಂಬಿಕೆಯಾಗಿದೆ ಮತ್ತು ನಾವು ಸೋತಾಗಲೂ ಸಹ ಆತನು ನಮ್ಮನ್ನು ಪ್ರೀತಿಸುತ್ತಾನೆ ಎಂದು ತಿಳಿದುಕೊಳ್ಳುವುದಾಗಿದೆ. ಆಗ ಸೈತಾನನ ಪ್ರತಿಯೊಂದು ಅಗ್ನಿಬಾಣವು ನಂದಿಸಲ್ಪಡುತ್ತದೆ.
ಐದನೆಯ ಸರ್ವಾಯುಧವೆಂದರೆ ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿ. ಯೇಸು ಯಾವಾಗಲೂ ದೇವರ ವಾಕ್ಯವನ್ನು ಉಲ್ಲೇಖಿಸುವುದರಿಂದ ಸೈತಾನನನ್ನು ಜಯಿಸಿದನು. ಹವ್ವಳಂತೆ, ಆತನು ಸೈತಾನನೊಟ್ಟಿಗೆ ಚರ್ಚೆ ಮಾಡಲಿಲ್ಲ. ದೇವರು ಏನು ಹೇಳಿದ್ದನೋ ಅದನ್ನೇ ಆತನು ಸೈತಾನನಿಗೆ ಹೇಳಿದನು. ಹೀಗೆ ಆತನು ಯಾವಾಗಲೂ ಜಯದಲ್ಲಿ ಜೀವಿಸಿದನು. ಶೋಧನೆಯ ಸಮಯದಲ್ಲಿ, ನಾವು ಸಹ ದೇವರ ವಾಕ್ಯವನ್ನು ಉಲ್ಲೇಖಿಸಬೇಕು. "ದೇವರು ನಮಗೆ ಶಕ್ತಿ ಮೀರುವ ಶೋಧನೆಯನ್ನು ಬರಗೂಡಿಸುವುದಿಲ್ಲ" (1ಕೊರಿಂಥ.10:13). "ಪಾಪವು ನನ್ನ ಮೇಲೆ ಅಧಿಕಾರ ನಡೆಸದು" (ರೋಮ 6:14), ಎಡವಿ ಬೀಳದಂತೆ ಯೇಸುವು ನಮ್ಮನ್ನು ಕಾಪಾಡುತ್ತಾನೆ" (ಯೂದ 24). ಸೈತಾನನಿಗೆ ದೇವರ ವಾಕ್ಯವನ್ನು ಉಲ್ಲೇಖಿಸಿರಿ. ಆಗ ಆತನು ಯೇಸುವನ್ನು ಬಿಟ್ಟು ಓಡಿ ಹೋದ ಹಾಗೆ, ನಿಮ್ಮನ್ನೂ ಬಿಟ್ಟು ಓಡಿ ಹೋಗುತ್ತಾನೆ (ಯಾಕೋಬ 4:7).
ಕೊನೆಯದಾಗಿ, ನಾವು ನಮ್ಮ ಸರ್ವಾಯುಧವನ್ನು ಚೆನ್ನಾಗಿ ಎಣ್ಣೆ ಹಚ್ಚಿ ಇಟ್ಟುಕೊಳ್ಳಬೇಕು. ಇದನ್ನು ಹೇಗೆ ಮಾಡುವುದು? "ಪವಿತ್ರಾತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲ ವಿಧವಾದ ಪ್ರಾರ್ಥನೆಯಿಂದಲೂ" (ಎಫೆಸ 6:18). ಆತ್ಮದಲ್ಲಿ ಪ್ರಾರ್ಥಿಸುವುದನ್ನು - ತಿಳಿಯದ ಭಾಷೆಗಳಲ್ಲಿ ಪ್ರಾರ್ಥಿಸುವುದು ಎಂಬುದಾಗಿ ಪ್ರಸ್ತಾಪಿಸಿಲ್ಲ. ನಮ್ಮ ಆತ್ಮದೊಂದಿಗೆ ಪ್ರಾರ್ಥಿಸುವುದನ್ನೇ ಅನ್ಯಭಾಷೆಯಲ್ಲಿ ಪ್ರಾರ್ಥಿಸುವುದು ಎಂಬುದಾಗಿ ಕರೆಯಲ್ಪಟ್ಟಿದೆ (1 ಕೊರಿಂಥ. 14:15).ಆತ್ಮದಲ್ಲಿ ಪ್ರಾರ್ಥಿಸುವುದು ನಮ್ಮ ಮಾಂಸದಿಂದಲ್ಲ, ಪವಿತ್ರಾತ್ಮನಿಂದ ಸ್ಪೂರ್ತಿ ಹೊಂದುವುದಾಗಿದೆ. ಮತ್ತು ನಾವು ನಮ್ಮ ಮನಸ್ಸನ್ನು ಆತ್ಮದಿಂದ ನವೀಕರಿಸಿದಾಗ ಮತ್ತು ನಮ್ಮ ನಾಲಿಗೆಯನ್ನು ಆತನ ಹತೋಟಿಯಲ್ಲಿಡಲು ಅನುಮತಿಸಿದಾಗ ನಾವು ಪವಿತ್ರಾತ್ಮನಲ್ಲಿ ಪ್ರಾರ್ಥಿಸುತ್ತೇವೆ. ಪೌಲನು ಹೇಳುತ್ತಾನೆ "ವಿಶೇಷವಾಗಿ ನನಗಾಗಿ ಪ್ರಾರ್ಥಿಸಿರಿ" ಎಂದು. ನಾವು ದೇವರ ಸೇವಕರಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕು. ಅವರು (ಯುದ್ಧದ) ಮುಂಭಾಗದಲ್ಲಿದ್ದು ಕರ್ತನ ಯುದ್ಧಗಳನ್ನು ಹೋರಾಡುತ್ತಾರೆ.
ಈ ಎಲ್ಲಾ ದೇವರ ಸರ್ವಾಯುಧಗಳೊಂದಿಗೆ, ನರಕದ ಬಾಗಿಲುಗಳ ವಿರುದ್ಧ ಜಯಶಾಲಿಯಾಗುವಂತೆ ನಾವು ಕ್ರಿಸ್ತನ ದೇಹವನ್ನು ಕಟ್ಟಬಹುದು.