WFTW Body: 

ಪ್ರಸಂಗಿಯ ಪುಸ್ತಕವು ಸತ್ಯವೇದದಲ್ಲಿ ಸೇರಿಸಲ್ಪಟ್ಟಿರುವದು, ಲೋಕದ ಅತಿ ಶ್ರೇಷ್ಠ ವಿವೇಕಿಯೂ ತನ್ನ ಮಾನವ ನಿಪುಣತೆಯ ಮೂಲಕ ದೇವರನ್ನು ಕಂಡುಕೊಳ್ಳಲು ಪ್ರಯತ್ನಿಸಿದರೆ, ಅದು ಅವನಿಗೂ ಸಾಧ್ಯವಾಗದು ಎಂದು ನಮಗೆ ತೋರಿಸಲಿಕ್ಕಾಗಿ. ಒಂದು ಬಾರಿ ಯೇಸುವು, ‘ತಂದೆಯೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ, ಎಂದು ನಿನ್ನನ್ನು ಕೊಂಡಾಡುತ್ತೇನೆ’ ಎಂದರು (ಮತ್ತಾಯ 11:25). ಜ್ಞಾನಿಗಳಲ್ಲಿ ಮತ್ತು ಬುದ್ಧಿವಂತರಲ್ಲಿ ಇಲ್ಲದ್ದು, ಆದರೆ ಎಳೆಯ ಮಗುವಿನಲ್ಲಿ ಇರುವಂಥದ್ದು ಯಾವದು? ಅದೇ, ದೀನತೆ.

ಒಬ್ಬ ನಿಪುಣ, ಬುದ್ಧಿವಂತ ವ್ಯಕ್ತಿಯು ದೀನನಾಗಿ ಇರುವದು ಬಹಳ ಕಷ್ಟಕರ. ಚತುರತೆಯನ್ನು ಹೊಂದಿರುವದು ತಪ್ಪಲ್ಲ, ಆದರೆ ಸ್ವಂತ ಬುದ್ಧಿಯ ಬಗ್ಗೆ ಹೆಮ್ಮೆ ಪಡುವದು ಖಂಡಿತವಾಗಿ ದೇವಭಕ್ತಿಗೆ ವಿರೋಧವಾಗಿದೆ. ದುರಭಿಮಾನಿಗಳು ಎಷ್ಟು ಬುದ್ಧಿವಂತರಾದರೂ, ಅವರು ಎಂದಿಗೂ ದೇವರ ಜೀವನಕ್ರಮವನ್ನು ಅರಿಯಲಾರರು.

ಒಬ್ಬನು ಬಹಳಷ್ಟು ಜ್ಞಾನವನ್ನು ಹೊಂದಿದ್ದರೂ, ಆತ್ಮಿಕ ವಿಷಯಗಳಲ್ಲಿ ಹೇಗೆ ಶೂನ್ಯನಾಗಿ ಇರಬಹುದು ಎಂಬುದನ್ನು ಪ್ರಸಂಗಿಯ ಪುಸ್ತಕವು ತೋರಿಸುತ್ತದೆ. ಮಾನವ ಜ್ಞಾನದ ಮೂಲದ ಹಲವಾರು ಉತ್ತಮ ವಿಷಯಗಳು ಇಂದಿನ ಮನೋವಿಜ್ಞಾನದಲ್ಲಿ ಇವೆ, ಆದರೆ ಇದು ದೇವಜ್ಞಾನವಲ್ಲ. ದೇವಜ್ಞಾನವು ಮಾನವ ಜ್ಞಾನದೊಂದಿಗೆ ಬೆರೆಸಲ್ಪಟ್ಟರೆ, ನಿಮ್ಮಲ್ಲಿ ಮಾನವ ಜ್ಞಾನ ಮಾತ್ರ ಇರುವದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಯಾರಾದರೂ ನಿಮಗೆ ವಿಷ ಉಣಿಸಲು ಬಯಸಿದರೆ, ಅವನು ಬಹಳಷ್ಟು ಹಾಲಿಗೆ ಸ್ವಲ್ಪ ವಿಷವನ್ನು ಬೆರೆಸುವನು. ಸಂಪೂರ್ಣ ಕೆಟ್ಟದಾದ ಸಂಗತಿಗಳನ್ನು ಗುರುತಿಸುವದು ಸುಲಭ. ಆದರೆ ಮನೋವಿಜ್ಞಾನದಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು ಇವೆ ಮತ್ತು ಈ ಕಾರಣದಿಂದಾಗಿ ಅದು ಅಪಾಯಕಾರಿಯಾಗಿದೆ. ಅದು ದೇವರಿಂದ ಬಂದ ಜ್ಞಾನವಲ್ಲ. ದೇವಜ್ಞಾನವು ಸತ್ಯವೇದದಿಂದ ಮಾತ್ರವೇ ದೊರಕುವದು. ತಮ್ಮ ಬುದ್ಧಿಶಕ್ತಿಯನ್ನು ದೇವರ ವಾಕ್ಯಕ್ಕೆ ವಿಧೇಯಪಡಿಸದ ಮನೋಶಾಸ್ತ್ರಜ್ಞರ ಅನೇಕ ಮಾತುಗಳು ಸರಿ ಇರುವುದಿಲ್ಲ. ನೀವು ಅವರನ್ನು ಹಿಂಬಾಲಿಸಿದರೆ ದಾರಿ ತಪ್ಪುವಿರಿ.

ಸೊಲೊಮೋನನು ಮಾನವ ಪ್ರಕೃತಿ ಮತ್ತು ಈ ಲೋಕದ ರೀತಿಗಳನ್ನು ಚೆನ್ನಾಗಿ ಪರಿಶೀಲಿಸಿದ್ದನು ಎಂದು ನಾವು ಪ್ರಸಂಗಿ 3:1-8ರಲ್ಲಿ ಕಾಣುತ್ತೇವೆ. ಅವನು ಹಲವಾರು ವರ್ಷಗಳ ವೀಕ್ಷಣೆಯ ನಂತರ, ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸರಿಯಾದ ಸಮಯ ಮತ್ತು ನಿರ್ದಿಷ್ಟ ಕಾಲ ಇರುವದಾಗಿ ತಿಳಿದನು. ಇದರಲ್ಲಿ ಸರಿಯಾದ ಮತ್ತು ತಪ್ಪಾದ ಹೇಳಿಕೆಗಳು ಇವೆ. ಮನೋಶಾಸ್ತ್ರವು ಸತ್ಯ ಮತ್ತು ತಪ್ಪುಗಳ ಒಂದು ಮಿಶ್ರಣವಾಗಿದೆ. ಸೊಲೊಮೋನನು ಜನ್ಮ ನೀಡುವ ಒಂದು ಸಮಯ, ಸಾಯುವ ಒಂದು ಸಮಯ ಮತ್ತು ನೆಡುವ ಒಂದು ಸಮಯ ಇದೆಯೆಂದು ಹೇಳುತ್ತಾನೆ. ಇವೆಲ್ಲವೂ ಸತ್ಯವಾದವು. ಆದರೆ ಅವನು ಅಲ್ಲಿಂದ ಮುಂದುವರೆದು, ಕೊಲ್ಲುವ ಒಂದು ಸಮಯ ಮತ್ತು ದ್ವೇಷಿಸುವ ಒಂದು ಸಮಯ ಇರುವದಾಗಿ ಹೇಳುತ್ತಾನೆ! ಒಬ್ಬ ಆತ್ಮಿಕ ಮನುಷ್ಯನಿಗೆ, ಕೊಲ್ಲುವ ಸಮಯ ಅಥವಾ ದ್ವೇಷಿಸುವ ಸಮಯ ಎಂದಿಗೂ ಇರುವದಿಲ್ಲ - ಮತ್ತು ಅವನು ಯಾವ ಒಬ್ಬ ಮಾನವನನ್ನೂ ದ್ವೇಷಿಸುವದಿಲ್ಲ. ಒಬ್ಬ ಆತ್ಮಿಕ ಮನುಷ್ಯನು ದೇವರಲ್ಲಿ ನೆಲೆಸಿದ್ದು, ಅವನು ಎಲ್ಲಾ ಜನರನ್ನೂ, ಎಲ್ಲಾ ಸಮಯದಲ್ಲೂ ಪ್ರೀತಿಸುತ್ತಾನೆ.

ನೀನು ನಿನ್ನ ತಂದೆಯ ಮೇಲೆ ಸಿಟ್ಟಾದರೆ, ಆ ಸಿಟ್ಟನ್ನು ತೊಲಗಿಸುವ ವಿಧಾನ ಒಂದು ತಲೆದಿಂಬನ್ನು ನಿನ್ನ ತಂದೆಯೆಂದು ಭಾವಿಸಿ, ಅದಕ್ಕೆ ಗುದ್ದು ಕೊಡುವದು, ಎಂಬುದಾಗಿ ಕಲಿಸುವ ಮನೋಶಾಸ್ತ್ರಜ್ಞರು ಇದ್ದಾರೆ! ಸೊಲೊಮೋನನಿಗೆ ಬಹುಶಃ ಅದೇ ರೀತಿಯ ನಂಬಿಕೆ ಇದ್ದುದರಿಂದಾಗಿ ಅವನು ದ್ವೇಷಿಸುವ ಒಂದು ಸಮಯ ಇದೆಯೆಂದು ಹೇಳಿರಬೇಕು. ಆದರೆ ಅದು ದೇವರ ರೀತಿ(ಮಾರ್ಗ)ಯಲ್ಲ. ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಎಂದು ಯೇಸುವು ಹೇಳಿದರು. ಪ್ರಸಂಗಿಯ ಪುಸ್ತಕದಲ್ಲಿ ಸೊಲೊಮೋನನ ಲೌಕಿಕ ಮನೋಭಾವ ಕಾಣಬರುವ ಒಂದು ಉದಾಹರಣೆ ಇದಾಗಿದೆ. ಧಾರ್ಮಿಕ ಬೋಧಕರು ದೇವರ ವಾಕ್ಯಕ್ಕೆ ತಮ್ಮ ಲೌಕಿಕ ವಿವೇಕವನ್ನು ಸೇರಿಸಿ ಬೋಧಿಸುತ್ತಾರೆ. ಅಂತಹ ಸನ್ನಿವೇಷಗಳಲ್ಲಿ ನಾವು ಜಾಗರೂಕರಾಗಿ ಇರಬೇಕು. ನಾವು ದೇವರ ಮುಂದೆ ದೀನರಾಗಿ ಮತ್ತು ಮುರಿಯಲ್ಪಟ್ಟು ಜೀವಿಸದಿದ್ದರೆ, ಮಾನವ ವಿವೇಕದ ಮೂಲಕ ತಪ್ಪು ದಾರಿಗೆ ನಡೆಸಲ್ಪಡುವದು ಬಹಳ ಸುಲಭ, ಏಕೆಂದರೆ ಅದು ಬಹಳ ಮಟ್ಟಿಗೆ ಸರಿ ಎಂದು ತೋರುತ್ತದೆ.

ನಾನು ಒಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ: ಕ್ರೈಸ್ತಲೋಕದಲ್ಲಿ ‘ಚಿತ್ರಿಸಿಕೊಳ್ಳುವದು’ ಎಂಬ ಒಂದು ಹೊಸ ಬೋಧನೆ ಕಾಣಿಸಿಕೊಂಡಿದೆ. ಈ ಬೋಧನೆ ಈ ರೀತಿಯಾಗಿದೆ: ಕಣ್ಣುಗಳನ್ನು ಮುಚ್ಚಿಕೊಳ್ಳಿರಿ ಮತ್ತು ಸದ್ಯ ನಿಮ್ಮ ಸಭೆಯಲ್ಲಿ ಕೇವಲ 5 ಜನರು ಇದ್ದರೂ, ಅಲ್ಲಿ 5000 ಜನರು ಸೇರಲಿರುವರು ಎಂದು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಸದ್ಯ ನೀವು ಕೂಟಕ್ಕಾಗಿ ಒಂದು ಚಿಕ್ಕ ಮನೆಯಲ್ಲಿ ಸೇರುತ್ತಿದ್ದರೂ, ನಿಮ್ಮ ಕೂಟವು ಒಂದು ವಿಶಾಲವಾದ ಕಟ್ಟಡದಲ್ಲಿ ಸೇರಿದೆಯೆಂದು ಚಿತ್ರಿಸಿಕೊಳ್ಳಿ. ನೀವು ಕುಂಟರಾಗಿದ್ದಲ್ಲಿ, ನೀವು ನಡೆಯುತ್ತಿರುವದಾಗಿ ಚಿತ್ರಿಸಿಕೊಳ್ಳಿರಿ. ನಿಮ್ಮಲ್ಲಿ ಒಂದು ಸ್ಕೂಟರ್ ಮಾತ್ರವೇ ಇದ್ದರೂ, ನೀವು ಒಂದು ಹೊಸ, ಸುಂದರವಾದ ಮೋಟಾರು ಗಾಡಿಯನ್ನು ಹೊಂದಿರುವದಾಗಿ ಕಲ್ಪಿಸಿರಿ - ಆಗ ನಿಮ್ಮಲ್ಲಿ ಈ ಸಂಗತಿಗಳನ್ನು ಪಡೆಯಲು ಬೇಕಾದ ನಂಬಿಕೆ ಉಂಟಾಗುವದು - ಮತ್ತು ನೀವು ಅವುಗಳನ್ನು ಹೊಂದುವಿರಿ.

ಇಂತಹ ಚಿತ್ರೀಕರಿಸುವ ರೀತಿಯು ಬಹುತೇಕ ಪ್ರಾಪಂಚಿಕ ಸುಖ-ಸೌಲಭ್ಯಗಳು ಮತ್ತು ದೊಡ್ಡದಾದ ಸಭೆಯ ಕಟ್ಟಡ, ಇತ್ಯಾದಿಗಳ ಕುರಿತಾಗಿ ಇರುತ್ತವೆ. ಜನರು ತಮ್ಮನ್ನು ಕ್ರೂಜೆಯ ಮೇಲೆ ನೇತಾಡುತ್ತಿರುವಂತೆ ಅಥವಾ ಯೇಸುವನ್ನು ಹಿಂಬಾಲಿಸಿ ತಮ್ಮ ಮಟ್ಟಿಗೆ ಸಾಯುವಂತೆ ಚಿತ್ರಿಸಿಕೊಳ್ಳುವದನ್ನು ಯಾರಾದರೂ ಕಲಿಸಿದ ವಿಚಾರ ನಾನು ಒಂದು ಸಾರಿಯೂ ಕೇಳಿಲ್ಲ!! ಚಿತ್ರೀಕರಣದ ಬೋಧನೆ ಬಂದಿರುವದು ಆಧುನಿಕ ಹೊಸ ಯುಗದ ತತ್ವಶಾಸ್ತ್ರದಿಂದ (ಇದು ದೈವಿಕ ಸತ್ಯದ ಒಂದು ನಕಲಿಯಾಗಿದೆ) ಮತ್ತು ಮನಃಶಾಸ್ತ್ರದಿಂದವೇ ಹೊರತು, ಸತ್ಯವೇದದಿಂದ ಅಲ್ಲ. ಹಾಗಿರುವಾಗ, ಅನೇಕ ಅನೇಕ ವಿವೇಚನೆ ಇಲ್ಲದ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಈ ವಿಧಾನದ ಮೂಲಕ ಬೆಳೆಸಿಕೊಳ್ಳಬಹುದು ಎಂದು ಭಾವಿಸುತ್ತಾರೆ.

ಚಿತ್ರಿಸಿಕೊಳ್ಳುವದರ ಮೂಲಕ ನಂಬಿಕೆ ಉಂಟಾಗುವದಿಲ್ಲ. "ನಂಬಿಕೆಗೆ ಸಾರಿದ ವಾರ್ತೆಯು ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ," ಎಂದು ರೋಮಾ. 10:17 ಸ್ಪಷ್ಟಪಡಿಸುತ್ತದೆ. ನಂಬಿಕೆಯು ಸ್ವತಃ ದೇವರು ಹೇಳಿರುವದನ್ನು ಮಾತ್ರ ಆಧರಿಸಿರಬಹುದು. ಅಬ್ರಹಾಮನು ಸಾರಳು ಒಂದು ಗಂಡು ಮಗುವನ್ನು ಹಡೆಯುವದಾಗಿ ಚಿತ್ರೀಕರಿಸಿ ಇಸಾಕನನ್ನು ಪಡೆಯಲು ಸಾಧ್ಯವಿರಲಿಲ್ಲ. ಅವನ ನಂಬಿಕೆ ದೇವರ ಸ್ಪಷ್ಟವಾದ ವಾಗ್ದಾನವನ್ನು ಆಧರಿಸಿತ್ತು. ನೀವು ಏನನ್ನೋ ಬಯಸಿ ಚಿತ್ರೀಕರಿಸಿಕೊಂಡು, ದೇವರು ಅದನ್ನು ಕೊಡುವರೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಅದು ಮನೋವಿಜ್ಞಾನದ ಬೋಧನೆ, ಸತ್ಯವೇದದ್ದು ಅಲ್ಲ. ಜನರಿಗೆ ವ್ಯಾಪಾರ-ಉದ್ಯಮಗಳಲ್ಲಿ ಸಕಾರಾತ್ಮಕ ಚಿಂತನೆಯಿಂದ ಸಹಾಯ ಸಿಗಬಹುದು, ಆದರೆ ಅದು ಸತ್ಯವೇದ ತೋರಿಸುವ ನಂಬಿಕೆ ಅಲ್ಲ. ಯೇಸು ಮತ್ತು ಅಪೊಸ್ತಲರು ಚಿತ್ರೀಕರಣ ಅಥವಾ ಸಕಾರಾತ್ಮಕ ಚಿಂತನೆಗಳ ಮೂಲಕ ಅದ್ಭುತಗಳನ್ನು ಮಾಡಲಿಲ್ಲ. ಇಂದಿನ ದಿನಗಳಲ್ಲಿ ಅಂತಹ ನಕಲಿ ಸಂಗತಿಗಳಿಂದ ಮೋಸಹೋಗುವದು ಸುಲಭ. ಆದುದರಿಂದ ಈ ದಿನಗಳಲ್ಲಿ ಪ್ರಸಂಗಿಯ ಪುಸ್ತಕವು, ಮಾನವ ವಿವೇಕವನ್ನು ಆಧರಿಸುವದರ ಅಪಾಯದ ಬಗ್ಗೆ ಒಂದು ಎಚ್ಚರಿಕೆಯನ್ನು ನಮ್ಮೆಲ್ಲರಿಗೆ ನೀಡುತ್ತದೆ.