ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಪೌಲನಿಗಿದ್ದಂತಹ ಅಧಿಕಾರ ನಮಗೂ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ಆ ಅಧಿಕಾರ ನಮಗಿರಲು ಅವನಂತೆಯೇ ನಾವೂ ಕೂಡ ಎಲ್ಲವನ್ನೂ ತ್ಯಜಿಸುವವರಾಗಿರಬೇಕು ಮತ್ತು ಎಲ್ಲವನ್ನೂ ನಿಷ್ಪ್ರಯೋಜಕ ಕಸವೆಂದು ನಾವು ಪರಿಗಣಿಸಬೇಕು (ಫಿಲಿಪ್ಪಿ. 3:7-9).

ಯೇಸುವು ತಂದೆಗೆ ಹೇಳಿದ್ದೇನೆಂದರೆ, "ನನ್ನದೆಲ್ಲವು ನಿನ್ನದೇ" (ನನ್ನವರೆಲ್ಲರು ನಿನ್ನವರೇ). ಆದ್ದರಿಂದ ಅವನು ಇನ್ನೂ ಹೇಳಬಹುದಾಗಿತ್ತೇನೆಂದರೆ, "ನಿನ್ನದೆಲ್ಲವೂ ನನ್ನದೇ (ನಿನ್ನವರು ನನ್ನವರೇ)(ಯೋಹಾ.17:10). ನಮ್ಮದೆಲ್ಲವನ್ನು ದೇವರಿಗೆ ಸ್ವತಂತ್ರವಾಗಿ ಕೊಟ್ಟಾಗ ದೇವರಲ್ಲಿರುವುದೆಲ್ಲವೂ ಪುಕ್ಕಟೆಯಾಗಿ ನಮಗೆ ಕೊಡಲ್ಪಡುವುದು. ನಾವು ಅವನಿಗೆ ಕೊಡುವ ಮಾಪನದಲ್ಲಿ, ಅವನು ನಮಗೆ ಕೊಡುತ್ತಾನೆ. ಆದ್ದರಿಂದ, ಆತ್ಮಿಕ ಅಧಿಕಾರದಲ್ಲಿ ಅನೇಕ ಕ್ರೈಸ್ತ ನಾಯಕರು ಬಡವರಾಗಿದ್ದಾರೆ. ಅವರು ತಮ್ಮೆಲ್ಲವನ್ನು ದೇವರಿಗೆ ಕೊಟ್ಟಿಲ್ಲ.

ಯೋಹಾನ 2:23-25ರಲ್ಲಿ ನಾವು ಓದುವುದೇನೆಂದರೆ, ಅನೇಕರು ಯೇಸುವನ್ನು ನಂಬಿದ್ದರೂ, ಅವನು ತನ್ನನ್ನೇ ಅವರಿಗೆ ವಶಪಡಿಸಿಕೊಳ್ಳಲಿಲ್ಲ. ನಮ್ಮಲ್ಲಿರುವುದನ್ನು ಅವನು ನೋಡುವುದರಿಂದ ಮತ್ತು ನಮ್ಮ ಉದ್ದೇಶಗಳು ಆತನಿಗೆ ತಿಳಿದಿರುವುದರಿಂದ, ತಾನು ತನಗೇ ವಶಪಡಿಸಿಕೊಳ್ಳದಿರುವ ಗುಂಪಿನಲ್ಲಿ ನಾವೂ ಇರಬಹುದು.

ನಮ್ಮ ಕೆಲಸ ಮತ್ತು ಕ್ರಿಸ್ತನ ದೇಹವನ್ನು ಕಟ್ಟುವುದರ ನಡುವಿನ ಆಯ್ಕೆ ಬರುವ ಸಮಯದಲ್ಲಿ, ನಾವು ಯಾವುದನ್ನು ಆರಿಸುತ್ತೇವೆ? ಸಭೆಯನ್ನು ಕಟ್ಟುವುದಕ್ಕಾಗಿ ನಾವು ಹೆಚ್ಚು ಸಮಯವನ್ನು ಕೊಡಲು ನಮ್ಮ ಕೆಲಸದಲ್ಲಿ ಭಡ್ತಿಯನ್ನು ನಿರಾಕರಿಸಲು (ತ್ಯಜಿಸಲು) ನಾವು ಮನಸ್ಸುಳ್ಳವರಾಗಿದ್ದೇವೋ? ಇಲ್ಲದಿದ್ದಲ್ಲಿ, ಯಾತಕ್ಕಾಗಿ ದೇವರು ತನ್ನನ್ನೇ ನಮಗೆ ವಶಪಡಿಸಿಕೊಳ್ಳಬೇಕು?

ಕರ್ತನ ಜನರಿಗೆ ನಾವು ನಮ್ಮ ಮನೆಯನ್ನು ತೆರೆಯಲು ಮನಸ್ಸುಳ್ಳವರಾಗಿದ್ದೇವೋ? ಅಥವಾ, ನಮ್ಮ ಅನುಕೂಲತೆ ಮತ್ತು ನಮ್ಮ ಗುಪ್ತತೆ ನಮಗೆ ಹೆಚ್ಚು ಪ್ರಮುಖವೋ? ಯಾವ ಕ್ಷೇತ್ರದಲ್ಲಾದರೂ ನಾವು ನಮ್ಮದನ್ನೇ ಕಂಡುಕೊಳ್ಳುವುದಾದರೆ, ನಾವು ಉಪವಾಸ ಪ್ರಾರ್ಥನೆ ಮಾಡಿದರೂ ನಾವು ದೇವರಿಂದ ಆತ್ಮಿಕ ಅಧಿಕಾರ ಪಡೆಯುವುದಿಲ್ಲ. ದೇವರನ್ನು ಮೂರ್ಖನನ್ನಾಗಿಸಲಾಗದು.

ಕ್ರಿಸ್ತನ ದೇಹವನ್ನು ನಾವು ಕಟ್ಟಬಯಸುವುದಾದರೆ ಎಲ್ಲವೂ ಅಂದರೆ ಎಲ್ಲವೂ ನಮ್ಮ ಜೀವನದಲ್ಲಿ ದೇವರ ರಾಜ್ಯದ ನಂತರದ ಎರಡನೇ ಸ್ಥಾನವನ್ನು ಪಡೆಯಬೇಕು. ದೇವರಲ್ಲಿ ಬೇಧ-ಭಾವವಿಲ್ಲ. ನಾವೆಲ್ಲರೂ ಅವನಿಗೆ ಸರಿಸಮಾನರು. ಅವನು ಇತರರಿಗೆ ಮಾಡಿದ್ದನ್ನು ನಮಗೂ ಮಾಡುವನು. ಯೇಸು ಮತ್ತು ಪೌಲ ಬಹಳವಾದ ಬೆಲೆಯನ್ನು ತೆತ್ತಿರುವುದರಿಂದ, ಅವರ ಸೇವೆಗಳು ದೇವರಿಂದ ಅನುಮೋದಿಸಲ್ಪಟ್ಟಿದ್ದವು. ನಾವು ಅದೇ ಬೆಲೆಯನ್ನು ತೆರುವುದಾದರೆ, ದೇವರು ನಮಗೂ ಅದನ್ನೇ ಮಾಡುವನು.

ನಾವು ಸಭೆಯನ್ನು ಕಟ್ಟುವುದಾದರೆ, ನಮ್ಮ ಹಣ ಮತ್ತು ನಮ್ಮ ಉಳಿತಾಯವೂ ದೇವರಿಗೆ ಸೇರಬೇಕು. ನೋಹನಿಗೆ ದೇವರು ನಾವೆಯನ್ನು ಕಟ್ಟಲು ಹೇಳಿದಾಗ ಅ ದೊಡ್ಡ ನಾವೆಯನ್ನು ಕಟ್ಟಲು ಬೇಕಾದ ಖರ್ಚನ್ನು ಯಾರು ಕೊಡುವರು ಎಂದು ನೋಹ ಕೇಳಲಿಲ್ಲ. ಅವನು ಆ ಪ್ರಶ್ನೆಯನ್ನು ಕೇಳಿದ್ದಲ್ಲಿ, ದೇವರು ಅವನಿಗೆ ಹೇಳುತ್ತಿದ್ದೇನೆಂದರೆ, "ನೋಹ, ಅದಕ್ಕೆ ನೀನೇ ಹಣವನ್ನು ಖರ್ಚು ಮಾಡಬೇಕು. ಬೇರೆ ಯಾರು ಅದಕ್ಕೆ ಹಣ ಕೊಡಬಲ್ಲರು?" ಆದರೆ ನೋಹನು ಆ ಪ್ರಶ್ನೆಯನ್ನು ಕೇಳುವ ಅಗತ್ಯವಿರಲಿಲ್ಲ. ಯಾಕೆಂದರೆ, ಅದರ ಉತ್ತರ ಆಗಲೇ ಅವನಿಗೆ ತಿಳಿದಿತ್ತು. ನಮಗದು ತಿಳಿದಿದೆಯೇ ಎಂಬುದೇ ಪ್ರಶ್ನೆ. ಬಹುಶ, ಆ ನಾವೆಯನ್ನು ಕಟ್ಟಲು, ಬಹುಶ, ನೋಹನು ತನ್ನ ಸ್ವಲ್ಪ ಜಮೀನನ್ನು ಮಾರಬೇಕಾಗಿತ್ತೋ ಏನೋ? ಆದರೆ, ದೇವರ ಕೆಲಸಕ್ಕಾಗಿ ಹಣ ಕೊಡಲು, ತಮ್ಮ ಜಮೀನನ್ನು ಮಾರಲು ಸಿದ್ಧವಿರುವ ಎಷ್ಟು ದೇವರ ಸೇವಕರನ್ನು ನಾವು ಕಾಣುತ್ತೇವೆ? ತಮ್ಮೆಲ್ಲವನ್ನು ದೇವರಿಗೆ ಕೊಡದವರು ಕಂಡುಹಿಡಿಯುವುದೇನೆಂದರೆ, ದೇವರೂ ತನ್ನೆಲ್ಲವನ್ನು ಅವರಿಗೆ ಕೊಡಲಾರನು ಎಂಬುದಾಗಿ.

ಅನೇಕ ದೇವರ ಸೇವಕರಲ್ಲಿನ ಮನೋಭಾವವೆಂದರೆ, ಕರ್ತನ ಕೆಲಸವಾಗಿದ್ದಲ್ಲಿ ಅದಕ್ಕೆ ಹಣವು ತಮ್ಮ ಜೇಬಿನಿಂದಲ್ಲದೆ, ಇನ್ನೆಲ್ಲಿಂದಲೋ ಬರಬೇಕು ಎಂಬುದಾಗಿ. ಕಾಣಿಕೆಯ ಡಬ್ಬದ ಮೂಲಕ ಬರುವ ಹಣವನ್ನು ವ್ಯಯಿಸುವುದರಲ್ಲಿ (ಖರ್ಚು ಮಾಡುವುದರಲ್ಲಿ) ಅವರು ಉದಾರರು. ಆದರೆ ದೇವರ ಕೆಲಸಕ್ಕಾಗಿ ತಮ್ಮದೇ ಹಣವನ್ನು ಕೊಡುವುದರಲ್ಲಿ ಅವರು ಉದಾರರಲ್ಲ. ತನ್ನ ಜೀವನದಲ್ಲಿ ಹಣದ ಹಿಡಿತದಿಂದ ಬಿಡುಗಡೆ ಹೊಂದದವನು ಎಂದಿಗೂ ಆತ್ಮಿಕ ಅಧಿಕಾರ ಹೊಂದಲಾರನು.

"ಕರ್ತನೇ ನಿನ್ನ ಕೆಲಸ ನನ್ನ ಕೆಲಸ ಮತ್ತು ನನ್ನ ಉಳಿತಾಯವೆಲ್ಲವು ನಿನ್ನದು. ನನ್ನ ಮತ್ತು ನನ್ನ ಹಣದ ಮಧ್ಯೆ ನಾನು ಬೇಧ-ಭಾವವನ್ನು ಮಾಡುವುದಿಲ್ಲ" ಎಂದು ಯಾವತ್ತಾದರೂ ನಾವು ಕರ್ತನಿಗೆ ಹೇಳಿದ್ದೇವೆಯೇ? ನಾವದನ್ನು ಕರ್ತನಿಗೆ ಹೇಳಲಿಲ್ಲವಾದರೆ (ಮತ್ತು ಹಾಗೆ ತಿಳಿದಿಲ್ಲವಾದರೆ), ತಮ್ಮ 10% ಹಣ ಮಾತ್ರ ದೇವರಿಗೆ ಮತ್ತು 90% ತಮಗೆ ಸೇರಿದ್ದೆಂದು ಪರಿಗಣಿಸುವ ಹಳೆಯ ಒಡಂಬಡಿಕೆಯಲ್ಲೇ ನಾವು ಇನ್ನೂ ಇದ್ದೇವೆ. ಒಮ್ಮೆ 10%ನ್ನು ಕೊಟ್ಟ ಮೇಲೆ ಅವರಿಗೆ ತಮ್ಮ ಜವಾಬ್ದಾರಿ ಮುಗಿದಿತ್ತು.

ಆದರೆ, ತನ್ನ ಆದಾಯದ ಕೇವಲ 10%ನ್ನು ಮಾತ್ರ ಕೊಡಲು ಯೇಸು ಬಂದದ್ದಲ್ಲ. ಅವನು ಹೊಸ ಒಡಂಬಡಿಕೆಯನ್ನು ಸ್ಥಾಪಿಸಲು ಮತ್ತು ಹೊಸ-ಸಭೆಯನ್ನು ಕಟ್ಟಲು ಬಂದನು. ಆದ್ದರಿಂದ ಅವನು 100% ತನ್ನ ತಂದೆಗೆ ಕೊಟ್ಟನು. ಈಗ ಅವನು ನಮಗೆ ಹೇಳುವುದೇನೆಂದರೆ, "ನನ್ನನ್ನು ಹಿಂಬಾಲಿಸಿ". ತನ್ನೆಲ್ಲವನ್ನೂ ದೇವರಿಗೆ ಕೊಟ್ಟವನೇ ಆತ್ಮಿಕ ಅಧಿಕಾರ ಹೊಂದಿರಲು ಸಾಧ್ಯ.

ನಮಗೆ ಏನೇ ಖರ್ಚಾದರೂ ನಾವು ಕ್ರಿಸ್ತನ ದೇಹವನ್ನು ಕಟ್ಟಲು ಮನಸ್ಸುಳ್ಳವರಾಗಿರಬೇಕು. ಆ ಖರ್ಚು ನಮ್ಮ ಹಣ, ನಮ್ಮ ಗೌರವ, ನಮ್ಮ ಅನುಕೂಲತೆ, ನಮ್ಮ ಶಾರೀರಿಕ ಬಲ, ನಮ್ಮ ಕೆಲಸ, ಅಥವಾ ಏನೇ ಆಗಿರಬಹುದು. ನಾವು ಕರ್ತನಿಗೋಸ್ಕರ ತ್ಯಾಗ ಮಾಡಲು ಮನಸ್ಸುಳ್ಳವರಾಗುವುದಕ್ಕೆ ಯಾವುದೇ ಮಿತಿಯಿರಬಾರದು. ಯಾವುದರಲ್ಲೂ ನಾವು ನಮ್ಮದೇ ಅನುಕೂಲತೆ ಅಥವಾ ನಮ್ಮದೇ ಸೌಕರ್ಯವನ್ನು ಕಂಡುಕೊಳ್ಳಬಾರದು. ನಾವು ಮಾಡುವ ಪ್ರತಿಯೊಂದೂ ಕ್ರಿಸ್ತನ ದೇಹವವನ್ನು ಕಟ್ಟುವುದಕ್ಕೆ ಸಂಬಂಧಿಸಿದ್ದಾಗಿರಬೇಕು. ನಮ್ಮ ಕೆಲಸ ಕೂಡ ನಾವು ಸಭೆಯಲ್ಲಿ ಇತರರಿಗೆ ಹಣಕಾಸಿನ ಹೊರೆಯಾಗಿರದೆ ನಮ್ಮ ಜೀವನೋಪಾಯ ನಡೆಸುವ ಒಂದು ಮಾರ್ಗವಾಗಿರಬೇಕು.

ಹಾಗಾದರೆ, ದೇವರ ಕಡೆ ನಮಗಿರುವ ನಮ್ಮ ಜಿಪುಣ ಮನೋಭಾವದ ಬಗ್ಗೆ ನಾವು ಮಾನಸಾಂತರಪಡೋಣ. ನಮಗೆ ನಮ್ಮ ಜೀವನದಲ್ಲಿ ಆತ್ಮಿಕ ಅಧಿಕಾರವಿರಲು ಸಾಧ್ಯವಾಗುವಂತೆ, ಬರುವ ದಿನಗಳಲ್ಲಿ ನಾವು ದೇವರೆಡೆಗೆ ಶ್ರೀಮಂತರಾಗೋಣ ಮತ್ತು ಕ್ರಿಸ್ತಯೇಸುವಿನ ಮಹಿಮೆಗಾಗಿ ನಮ್ಮ ನಾಡಿನಲ್ಲಿ ನಾವು ಕ್ರಿಸ್ತನ ದೇಹವವನ್ನು ಕಟ್ಟೋಣ.