ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಇಬ್ರಿಯ 1:9 ರಲ್ಲಿನ ವಚನವು, ಯೇಸು ಭೂಮಿಯ ಮೇಲೆ ಮನುಷ್ಯನಾಗಿ ಹೇಗೆ ಬದುಕಿದನೆಂಬುದನ್ನು ತೋರಿಸುತ್ತದೆ: "ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದ್ದರಿಂದ ದೇವರು, ನಿನ್ನ ದೇವರೇ, ನಿನ್ನ ಜೊತೆಗಾರರಿಗಿಂತ ಉನ್ನತ ಸ್ಥಾನಕ್ಕೆ ಏರಿಸಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ." ಯೇಸು ಭೂಮಿಯ ಮೇಲಿರುವಾಗ ನಮ್ಮ (ಮನುಷ್ಯರ) ಎಲ್ಲ ಬಲಹೀನತೆಗಳನ್ನು ಹೊಂದಿದ್ದನು. ಆದ್ದರಿಂದಲೇ ಆತನು ಅಭಿಷೇಕಿಸಲ್ಪಡಬೇಕಾಗಿತ್ತು. ತಂದೆಯಾದ ದೇವರು ಅಭಿಷೇಕ ಹೊಂದುವ ಅವಶ್ಯಕತೆಯಿಲ್ಲ, ಅದೇ ರೀತಿಯಾಗಿ ಯೇಸು ಪರಲೋಕದಲ್ಲಿದ್ದಾಗ, ಆತನು ಅಭಿಷೇಕ ಹೊಂದುವ ಅವಶ್ಯಕತೆಯಿದ್ದಿಲ್ಲ. ಆದರೆ ಭೂಮಿಯ ಮೇಲಿರುವ ಸಮಯದಲ್ಲಿ ಆತನು ನಮ್ಮೆಲ್ಲರಿಗಾಗಿ ಉದಾಹರಣೆಯಾಗುವದಕ್ಕೋಸ್ಕರ ಅಭಿಷೇಕ ಹೊಂದಬೇಕಾಗಿತ್ತು. ಯಾಕೆ ದೇವರು ಯೇಸುವನ್ನು ಆತನ ಜೊತೆಗಾರರಿಗಿಂತ, ಅಂದರೆ ನಮ್ಮೆಲ್ಲರಿಗಿಂತ, ಹೆಚ್ಚಾಗಿ ಪರಮಾನಂದ (ಸಂತೋಷದ) ತೈಲದಿಂದ ಅಭಿಷೇಕಿಸಿದ್ದಾನೆ ಎಂದು ಈ ವಚನ ನಮಗೆ ತಿಳಿಸುತ್ತದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಯೇಸು ಧರ್ಮವನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿದನು ಮತ್ತು ಪವಿತ್ರತೆಯನ್ನು ಪ್ರೀತಿಸಿ, ಪಾಪವನ್ನು ದ್ವೇಷಿಸಿದನು.

ಧರ್ಮ (ನೀತಿ) ಮಾಡುವದರಲ್ಲಿ ಮತ್ತು ಧರ್ಮವನ್ನು ಪ್ರೀತಿಸುವದರಲ್ಲಿ ವ್ಯತ್ಯಾಸವಿದೆ. ವಿಧೇಯತೆಯನ್ನು ಪ್ರೀತಿಸದೇ ಒಂದು ಮಗು ತನ್ನ ತಂದೆಗೆ ವಿಧೇಯವಾಗಬಹುದು. ಯೇಸು ಧರ್ಮವನ್ನು(ನೀತಿಯನ್ನು) ಮಾಡಿದ್ದಲ್ಲದೇ, ಧರ್ಮವನ್ನು ಪ್ರೀತಿಸಿದನು. ಅದೇ ರೀತಿಯಲ್ಲಿ ಕರ್ತನು ಪಾಪವನ್ನು ಕೇವಲ ನಿರಾಕರಿಸಲಿಲ್ಲ ಅದನ್ನು ದ್ವೇಷಿಸಿದನು. ಈಗಿನ ಕಾಲದಲ್ಲಿ ಏಡ್ಸ್ ಎಂಬ ಭಯಾನಕ ರೋಗವು ಲೈಂಗಿಕ ಪಾಪದಿಂದ ಬರುವಂಥದ್ದಾಗಿದೆ. ಆದ್ದರಿಂದ ಅನೇಕರು ಏಡ್ಸ್ ಸೋಂಕಿನ ಭಯದಿಂದ ವ್ಯಭಿಚಾರದಲ್ಲಿ ತೊಡಗುವದಿಲ್ಲ. ಅವರು ಲೈಂಗಿಕ ಪಾಪಕ್ಕೆ ಹೇಸುವದಿಲ್ಲ ಆದರೆ ಏಡ್ಸ್ ಗೆ ಹೆದರುತ್ತಾರೆ. ಇದೇ ರೀತಿಯಲ್ಲಿ ಅನೇಕರು ಕಳ್ಳತನವನ್ನು ದ್ವೇಷಿಸಬೇಕೆಂದು ದ್ವೇಷಿಸುವದಿಲ್ಲ, ಎಲ್ಲಿ ಸಿಕ್ಕಿಬಿದ್ದೇನೋ ಎಂಬ ಭಯದಿಂದ ಕಳವು ಮಾಡಬೇಕೆಂದು ಬಯಸಿದರೂ ಕಳ್ಳತನ ಮಾಡುವದಿಲ್ಲ. ಇದೇ ರೀತಿಯಲ್ಲಿ ನೀವು ಪಾಪವನ್ನು ದ್ವೇಷಿಸದೆ ಅದನ್ನು ನಿರಾಕರಿಸಬಹುದು. ಆದರೆ ಪರಮಾನಂದ ತೈಲದಿಂದ ಅಭಿಷೇಕಿಸಲ್ಪಡಬೇಕೆಂದರೆ- ನೀತಿಯನ್ನು ಪ್ರೀತಿಸಬೇಕು ಹಾಗು ಅನೀತಿ(ಪಾಪ)ಯನ್ನು ದ್ವೇಷಿಸಬೇಕು. ಆದ್ದರಿಂದಲೇ, ತನ್ನ ಜೊತೆಗಾರರಿಗಿಂತ ಹೆಚ್ಚಾಗಿ ಯೇಸು ಪರಮಾನಂದ ತೈಲದಿಂದ ಅಭಿಷೇಕಿಸಲ್ಪಟ್ಟನು ಎಂದು ಇಲ್ಲಿ ಓದುತ್ತೇವೆ.

ದೇವರಲ್ಲಿ ಯಾವುದೇ ಪಕ್ಷಪಾತವಿಲ್ಲ. ಒಬ್ಬ ಒಳ್ಳೆಯ ತಂದೆ ತನ್ನ ಹಿರಿಯ ಮಗನನ್ನು ಇನ್ನುಳಿದ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವದಿಲ್ಲ ಮತ್ತು ಅವನಲ್ಲಿ ಯಾವುದೇ ಪಕ್ಷಪಾತವಿರುವದಿಲ್ಲ. ತನ್ನ ಹಿರಿಯ ಮಗನಿಗೆ ಮಾಡುವುದೆಲ್ಲವನ್ನೂ ಇನ್ನುಳಿದ ಮಕ್ಕಳಿಗೂ ಆತನು ಮಾಡುವವನಾಗಿದ್ದಾನೆ. ತಂದೆಯಾದ ದೇವರು ಕೂಡ ಹಾಗೆಯೇ ಆಗಿದ್ದಾನೆ. ಯೇಸುಕ್ರಿಸ್ತನು ಅನೇಕ ಸಹೋದರರಲ್ಲಿ ಮೊದಲನೆಯವನಾಗಿದ್ದಾನೆ (ಚೊಚ್ಚಲ ಮಗನಾಗಿದ್ದಾನೆ). ಹೊಸದಾಗಿ ಹುಟ್ಟಿದಂತ: ನಾವು ಆತನ ಕಿರಿಯ ಸಹೋದರರಾಗಿದ್ದೇವೆ. ಯೇಸು ಕ್ರಿಸ್ತನು ಹಿರಿಯ ಮಗನಾಗಿದ್ದಾನೆ. ದೇವರಲ್ಲಿ ಪಕ್ಷಪಾತವಿಲ್ಲದಿರುವದರಿಂದ ತನ್ನ ಹಿರಿಯ ಮಗನಾಗಿರುವ ಕ್ರಿಸ್ತೇಸುವಿಗೆ ಮಾಡಿರುವುದೆಲ್ಲವನ್ನು ಆತನು ನಮಗೂ ಮಾಡುವವನಾಗಿದ್ದಾನೆ. ಯೇಸು ಪಾಲಿಸಿದ ನಿಬಂಧನೆಗಳನ್ನು (ಷರತ್ತುಗಳನ್ನು) ನಾನೂ ಪಾಲಿಸುವುದಾದರೆ, ದೇವರು ಯೇಸುವಿಗೆ ಮಾಡಿದ್ದೆಲ್ಲವನ್ನು ನನಗೂ ಮಾಡುವವನಾಗಿದ್ದಾನೆ. ಇದನ್ನು ಕಂಡುಕೊಳ್ಳುವಾಗ ಯೇಸುವಿನ ಮಾನವ ಅವತಾರದ ಮರ್ಮದಲ್ಲಿನ ಒಂದು ಅದ್ಭುತ ಸತ್ಯವನ್ನು ನಾವು ಕಂಡುಕೊಳ್ಳುತ್ತೇವೆ.

ಯೇಸು ಕ್ರಿಸ್ತನು ದೇವರ ಮಗನಾಗಿದ್ದುದರಿಂದ ಆತನು ಪರಮಾನಂದ ತೈಲದಿಂದ ಅಭಿಷೇಕಿಸಲಟ್ಟನು, ಎಂಬುದಾಗಿ ಬರೆಯಲ್ಪಟ್ಟಿದ್ದರೆ ನಮಗೆ ಅದು ಅಷ್ಟೊಂದು ಪ್ರೋತ್ಸಾಹ ಅಥವಾ ಸವಾಲೆಂದೆಣಿಸುತ್ತಿರಲಿಲ್ಲ. ಆದರೆ ನಾವಿಲ್ಲಿ ಓದುವುದೇನೆಂದರೆ - ಕ್ರಿಸ್ತನು ಧರ್ಮವನ್ನು ಪ್ರೀತಿಸಿ ಅಧರ್ಮವನ್ನು ದ್ವೇಷಿಸಿದ್ದರಿಂದಲೇ ಆತನಿಗೆ ಪರಮಾನಂದ ತೈಲದಿಂದ ಅಭಿಷೇಕವಾಯಿತು ಎಂಬುದಾಗಿ. ಇದರಿಂದ ನಾವು ಕೂಡ ಧರ್ಮ(ನೀತಿ)ವನ್ನು ಪ್ರೀತಿಸಿ ಪಾಪವನ್ನು ಹಗೆಮಾಡಿದರೆ(ದ್ವೇಷಿಸಿದರೆ) ಆತನ ಹಾಗೆ ಅಭಿಷಿಕ್ತರಾಗುವ ನೀರಿಕ್ಷೆಯಿಟ್ಟುಕೊಳ್ಳಬಹುದು. ಆದ್ದರಿಂದ ನಾವು ಹೀಗೆ ಪ್ರಾರ್ಥಿಸಬೇಕು, "ಕರ್ತನೇ, ನನ್ನ ಹೃದಯದಲ್ಲಿ ಪವಿತ್ರಾತ್ಮನ ಮೂಲಕವಾಗಿ ಕಾರ್ಯಮಾಡು, ಇದರಿಂದ ನಾನು ಕೇವಲ ನೀತಿಯನ್ನು ಮಾಡುವುದಲ್ಲದೆ ಅದನ್ನು ಪ್ರೀತಿಸುವಂತಾಗಲಿ; ಮತ್ತು ಪಾಪವನ್ನು ನಿರಾಕರಿಸುವದಷ್ಟೇ ಅಲ್ಲ ಅದನ್ನು ದ್ವೇಷಿಸುವಂತಾಗಲಿ."

ನಾವು ಎಷ್ಟರ ಮಟ್ಟಿಗೆ ನೀತಿಯನ್ನು ಪ್ರೀತಿಮಾಡಿ ಪಾಪವನ್ನು ಹಗೆಮಾಡುತ್ತೇವೊ ಅಷ್ಟೇ ಪ್ರಮಾಣದಲ್ಲಿ ಪವಿತ್ರಾತ್ಮನ ಅನಂದದಿಂದ ತುಂಬಲ್ಪಡುತ್ತೇವೆ. ದೇವರ ರಾಜ್ಯವೆಂಬದಾಗಿ ಹೇಳುವ- ನೀತಿಯೂ ಮತ್ತು ಪವಿತ್ರಾತ್ಮನಿಂದಾಗುವ ಆನಂದವೂ ನಮ್ಮ ಹೃದಯವನ್ನು ತುಂಬಿಕೊಳ್ಳುವದು (ರೋಮಾ. 14:17). ಹಾಗಿದ್ದಾಗ ಮಾತ್ರ (ಫಿಲಿಪ್ಪಿ 4:4) "ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ." ಎಂಬ ವಚನವನ್ನು ಪಾಲಿಸಲು ನಾವು ಶಕ್ತರಾಗುತ್ತೇವೆ.