ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ ತಿಳಿಯುವುದು
WFTW Body: 

ವಿಮೋಚನಕಾಂಡ ಅಧ್ಯಾಯ 4 ರಲ್ಲಿ ನಾವು ಈ ರೀತಿ ಓದುತ್ತೇವೆ. ಮೋಶೆಯನ್ನು ಪ್ರೋತ್ಸಾಹಿಸಲು ಮತ್ತು ಅವನಿಗೆ ಕೆಲವು ಪಾಠಗಳನ್ನು ಕಲಿಸಲು, ದೇವರು ಅವನಿಗೆ ಮೂರು ಸಂಕೇತ(ಚಿಹ್ನೆ)ಗಳನ್ನು ಕೊಟ್ಟರು. "ನಾನು ಅವರಿಗೆ ಹೇಳುವುದನ್ನು ಅವರು ನಂಬುವುದಿಲ್ಲ" ಎಂದು ಮೋಶೆಯು ಕರ್ತನಿಗೆ ಹೇಳಿದಾಗ, ದೇವರು ಅವನಿಗೆ ಹೇಳಿದ್ದೇನೆಂದರೆ, "ನಿನ್ನ ಕೈಯಲ್ಲಿ ಏನಿದೆ?" ಅದನ್ನು ಗಮನಿಸು! ನಮ್ಮ ಕೈಯಲ್ಲಿ ಈ ಸಮಯದಲ್ಲಿ ಏನಿದೆಯೋ, ಅದರಿಂದಲೇ ದೇವರು ಪ್ರಾರಂಭಿಸುತ್ತಾರೆ. ನಮ್ಮಲ್ಲಿ ಇಲ್ಲದಿರುವುದನ್ನು ನಾವು ಹುಡುಕಿ ಹೋಗಬೇಕಾಗಿಲ್ಲ. ಎಲೀಷನು ವಿಧವೆಗೆ ಹೇಳಿದ್ದೇನೆಂದರೆ, "ಮನೆಯಲ್ಲಿ ನಿನಗೆ ಏನು ಉಂಟು?" ಆಗ ಆಕೆ ಹೇಳಿದ್ದೇನೆಂದರೆ, "ಒಂದು ಮೊಗೆ ಎಣ್ಣೆ". ಆಗ ಎಲೀಷನು ಹೇಳಿದ್ದೇನೆಂದರೆ, "ಅದು ಸಾಕು. ಆ ಎಣ್ಣೆಯಿಂದ ನಿನ್ನ ಎಲ್ಲಾ ಸಮಸ್ಯೆಗಳು ಬಗೆಹರಿಸಲ್ಪಡುವುವು." (2 ಅರಸು.4:2,3). ಮೋಶೆಯ ಕೈಯಲ್ಲಿ ಕುರಿಗಾಹಿಯ ಕೋಲು ಮಾತ್ರ ಇತ್ತು. ಅದೇ ಸಾಕಾಗಿತ್ತು. ದೇವರು ನಿನ್ನೊಡನಿರುವಾಗ, ಕುರಿಗಾಹಿಯ ಕೋಲಿನಿಂದಲೂ ಅದ್ಭುತಗಳಾಗಬಹುದು.

ಮೊದಲ ಚಿಹ್ನೆಗೆ, ತನ್ನ ಕೋಲನ್ನು ಕೆಳಗೆಸೆಯಲು ದೇವರು ಮೋಶೆಗೆ ಹೇಳಿದರು. ಅದೊಂದು ಸರ್ಪವಾಯಿತು ಮತ್ತು ಮೋಶೆಯು ಅದರಿಂದ ಓಡಿಹೋದನು (ವಿಮೋ.4:3). ಕರ್ತನು ಹೇಳಿದ್ದೇನೆಂದರೆ, "ಹೆದರಬೇಡ. ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿ" ಎಂದು. ಅವನದನ್ನು ಹಿಡಿದಾಗ ಅದು ಮತ್ತೆ ಕೋಲಾಯಿತು. ಅಲ್ಲಿನ ಸಂದೇಶವೇನಾಗಿತ್ತು? ಮೊದಲನೆಯದಾಗಿ, ಸೈತಾನನು ನಾವು ಯೋಚಿಸುವುದಕ್ಕಿಂತಲೂ ನಮಗೆ ಹೆಚ್ಚು ಹತ್ತಿರದಲ್ಲಿದ್ದಾನೆ - ಮೋಶೆಯ ಕೋಲು ಅವನಿಗೆ ಎಷ್ಟು ಹತ್ತಿರದಲ್ಲಿತ್ತೋ ಅಷ್ಟು ಹತ್ತಿರದಲ್ಲಿ ಅವನಿದ್ದಾನೆ. ಸೈತಾನನು ನಮ್ಮಿಂದ ದೂರವಿದ್ದಾನೆ ಎಂದು ತಿಳಿದಿದ್ದೀಯೋ? ಇಲ್ಲವೇ. ಗಂಡ-ಹೆಂಡತಿಯರ ಮಧ್ಯೆ, ಸಹ-ಸೇವಕರ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಲು ಸೈತಾನನು ಯಾವಾಗಲೂ ನಮ್ಮ ಹತ್ತಿರದಲ್ಲೇ ಇರುತ್ತಾನೆ. ಆದರೆ ನಾವು ಸೈತಾನನನ್ನು ಜಯಿಸಬಹುದು! ನಾವು ಅವನ ಬಗ್ಗೆ ಹೆದರಬೇಕಾಗಿಲ್ಲ. ಏಕೆಂದರೆ ಅವನೊಬ್ಬ ಸೋಲಿಸಲ್ಪಟ್ಟ ವೈರಿ. ನಮ್ಮ ಪಾದದಡಿಯಲ್ಲಿ ದೇವರು ಅವನನ್ನು ತುಳಿಯುವರು. ನಾವು ಕರ್ತನ ಸೇವೆ ಮಾಡುವಾಗ, ಕಲಿಯಬೇಕಾದ ಪ್ರಥಮ ಪಾಠವೆಂದರೆ, ಸೈತಾನನ ಬಗ್ಗೆ ಹೆದರದಿರುವುದು. ಸೈತಾನನಿಗೆ ಆತನ ಭದ್ರ ಕೋಟೆಗಳಿವೆ. ಆದರೆ ನಾವು ಅವುಗಳಿಂದ ಓಡಬೇಕಾಗಿಲ್ಲ. ನಾವು ಶೋಧನೆಯಿಂದ ಓಡಿಹೋಗಬೇಕು. ಆದರೆ ಸೈತಾನನು ನಮ್ಮಿಂದ ಓಡಿಹೋಗಬೇಕು (ಯಾಕೋ. 4:7). ಸೈತಾನನು ನಮ್ಮನ್ನು ಹೆದರಿಸಲು ಉಪಯೋಗಿಸುವ ವಸ್ತುವೇ - ಸಮುದ್ರಗಳನ್ನು ವಿಭಾಗಿಸಲು ಮತ್ತು ದೇವರ ಜನರನ್ನು ಮುನ್ನಡೆಸಲು ಯೇಸುವಿನ ಪ್ರಬಲ ನಾಮದಲ್ಲಿ ನಮ್ಮ ಕೈಯಲ್ಲಿ ಅಧಿಕಾರದ ಕೋಲಾಗುವುದು.

ದೇವರ ಸೇವಕರಾಗಲು ನಮಗೆ ದೇವರ ಅಧಿಕಾರ ಬೇಕು. ಸತ್ಯವೇದದ ತಿಳುವಳಿಕೆ ಮೊದಲಲ್ಲ, ಬದಲಾಗಿ ದೈವೀಕ ಅಧಿಕಾರ. ನಾನು ಯಾವತ್ತೂ, ಸತ್ಯವೇದದ ತಿಳುವಳಿಕೆಗಿಂತ ಆತ್ಮಿಕ ಅಧಿಕಾರ ಪಡೆಯಲು ಇಚ್ಚಿಸುತ್ತೇನೆ. ಮೋಶೆಗೆ ಮೊದಲು ಬೇಕಾದುದೇನೆಂದರೆ, ವೈರಿಯ ಮೇಲೆ ಅಧಿಕಾರ. ತನ್ನ ಸೇವಕನಾದ ಫರೋಹನ ಮೂಲಕ ಸೈತಾನನು ಇಸ್ರಾಯೇಲ್ಯರನ್ನು ಗುಲಾಮರನ್ನಾಗಿಸಿದ್ದನು. ಯಾವೊಂದೂ ಭಯವಿಲ್ಲದೆ ಅವನನ್ನು ಆತನ ಬಾಲದಿಂದ ಮೋಶೆಯು ಹಿಡಿಯಬೇಕಾಗಿತ್ತು. ಸೈತಾನನು ಎಂದಿಗೂ ನಮ್ಮನ್ನು ತನಗೆ ಭಯಪಡುವಂತೆ ಮಾಡಲು ಸಾದ್ಯವಾಗಬಾರದು.

ಎರಡನೆಯ ಚಿಹ್ನೆಗೆ, ಮೋಶೆಯು ತನ್ನ ಕೈಯನ್ನು ತನ್ನ ಉಡಿಯಲ್ಲಿ ಹಾಕಲು ದೇವರು ಹೇಳಿದನು (ವಿಮೋ. 4:6). ಮೋಶೆಯು ಹಾಗೆ ಮಾಡಿದಾಗ ಅದು ಕುಷ್ಟದಿಂದ ತುಂಬಿತ್ತು. ದೇವರ ಸೇವಕರಾಗಿ ನಾವು ತಿಳಿದುಕೊಳ್ಳಬೇಕಾದುದೇನೆಂದರೆ, ನಮ್ಮ ಮಾಂಸದಲ್ಲಿ ಏನೇನೂ ಒಳ್ಳೆಯದಿಲ್ಲ (ರೋಮ.7:18) ಎಂದು. ಭ್ರಷ್ಟತೆ ಮತ್ತು ಸ್ವಾರ್ಥತೆ ನಮ್ಮ ಮಾಂಸದೆಲ್ಲೆಡೆ ತುಂಬಿಕೊಂಡಿದೆ. ನೀನದನ್ನು ನಂಬುವುದಿಲ್ಲವಾದರೆ, ನೀನು ನಿನ್ನ ಕೈಯನ್ನು ನಿನ್ನ ಮಾಂಸದಲ್ಲಿ ಹಾಕಿ ನೋಡು! ನಿನ್ನೊಳಗಿರುವ ಕುಷ್ಟದ ಬಗ್ಗೆ ನಿನಗೆ ಬೆಳಕನ್ನು ಕೊಡಲು ನೀನು ದೇವರಲ್ಲಿ ಪ್ರಾರ್ಥಿಸು. ನೀನು ಈ ಪ್ರಮುಖವಾದ ಪಾಠವನ್ನು ಕಲಿಯದಿದ್ದರೆ, ನಿನಗಿಂತಲೂ ಕೆಟ್ಟದಿರುವ ಮಾಂಸ ಬೇರೆ ಜನರಿಗೆ ಇದೆಯೆಂದು ನೀನು ಅವರನ್ನು ದೂಷಿಸುತ್ತೀಯ. ನಾವು ಮಾಡಲಾಗದ ಪಾಪವನ್ನು ನಾವು ಮಾಡಲಾರೆವು. ನಾವು ಇತರರಂತೆ ಪಾಪ ಮಾಡಿಲ್ಲವಾದರೆ, ಅದು ದೇವರ ಕರುಣೆಯಿಂದ ಮತ್ತು ಅವರಂತಹ ಶೋಧನೆಯನ್ನು ನಾವು ಅನುಭವಿಸದೆ ಇದ್ದುದರಿಂದ ಮಾತ್ರ. ನಾವು ಇತರರಿಗಿಂತ ಏನೂ ಒಳ್ಳೆಯವರಲ್ಲ. ನೀನು ಇತರರಿಗಿಂತ ಒಳ್ಳೆಯವನೆಂದು ಯೋಚಿಸಿದರೆ, ನೀನು ದೇವರ ಸೇವಕನಾಗಲು ಸಂಪೂರ್ಣವಾಗಿ ಅಯೋಗ್ಯನೆಂದು ನಾನು ನಿನಗೆ ಹೇಳಬಯಸುತ್ತೇನೆ.

ಮೂರನೆಯ ಚಿಹ್ನೆಗಾಗಿ, ನೈಲ್ ನದಿಯ ಸ್ವಲ್ಪ ನೀರನ್ನು ಚೆಲ್ಲಿದಾಗ ಅದು ರಕ್ತವಾಗುವುದೆಂದು ಕರ್ತನು ಮೋಶೆಗೆ ಹೇಳಿದನು(ವಿಮೋ.4:9). ನೈಲ್ ನದಿಯು ಐಗುಪ್ತರ ಪ್ರಮುಖವಾದ ದೇವರಾಗಿತ್ತು ಮತ್ತು ರಕ್ತವು ಸಾವಿನ ಚಿತ್ರ. ಈ ಚಿಹ್ನೆಯ ಆಧ್ಯಾತ್ಮಿಕ ಅರ್ಥವೇನೆಂದರೆ, ಪ್ರಾಪಂಚಿಕ ಜನರು ಆರಾಧಿಸುವ ಈ ಪ್ರಪಂಚದ ವಸ್ತುಗಳೆಲ್ಲವನ್ನು ಸಾವಿನಂತೆ ನಾವು ಸುರಿಯಬೇಕು. ಕರ್ತನ ಸೇವಕನು ಪ್ರಪಂಚಕ್ಕೆ ಸತ್ತಂತಿದ್ದು, ಪ್ರಪಂಚವು ಅವನಿಗೆ ಸತ್ತಂತಿರಬೇಕು. ಇನ್ನು ಮುಂದೆ ಪ್ರಪಂಚವು ನನಗೆ (ಜೀವನಕ್ಕೆ ಅವಶ್ಯವಾದ) ನೀರಿನಂತಾಗಿರದೆ ನಾವು ಕುಡಿಯುವಂತೆ ಎಂದೂ ಶೋಧಿಸಲ್ಪಡದ ರಕ್ತದಂತಾಗಿರಬೇಕು. ಪ್ರಪಂಚದಲ್ಲಿ ಇರುವುದೆಲ್ಲವನ್ನೂ ನಾವು ಈ ರೀತಿಯಾಗಿ ನೋಡಬೇಕು.