WFTW Body: 

ಯೋಹಾನನು ಕ್ರಿಸ್ತೀಯ ಜೀವನದ ಮೂರು ಹಂತಗಳ ಕುರಿತಾಗಿ - ಆತ್ಮಿಕ ಬಾಲ್ಯಾವಸ್ಥೆ, ಆತ್ಮಿಕ ಯೌವನ, ಆತ್ಮಿಕ ಪ್ರೌಢತ್ವ - 1 ಯೋಹಾನ 2:12-14 ರಲ್ಲಿ ಬರೆಯುತ್ತಾನೆ.

ಆತ್ಮಿಕ ಶಿಶುಗಳು ತಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವದನ್ನು ಮತ್ತು ದೇವರು ತಮ್ಮ ತಂದೆ ಆಗಿರುವದನ್ನು ಮಾತ್ರ ತಿಳಿದಿರುವಂಥವರು. ಈ ಎರಡು ಸಂಗತಿಗಳು ಎಲ್ಲಾ ಆತ್ಮಿಕ ಹಸುಮಕ್ಕಳು ತಿಳಿದಿರಲೇ ಬೇಕಾದವುಗಳು. ಕ್ರಿಸ್ತೀಯ ಜೀವನದ ಬುನಾದಿ ಮತ್ತು ಆರಂಭ ಸ್ಥಳ ಇದೇ ಆಗಿದೆ. ನೀವು ಆರಂಭದಲ್ಲಿ ಈ ಸ್ಪಷ್ಟ ಬುನಾದಿಯನ್ನು ಹೊಂದಿರದಿದ್ದರೆ, ನೀವು ಆತ್ಮಿಕತೆಯಲ್ಲಿ ಬೆಳೆಯಲು ಸಾಧ್ಯವಾಗದು.

ಬೆಳವಣಿಗೆಯ ಮುಂದಿನ ಹಂತ, ದೇವರ ವಾಕ್ಯವನ್ನು ನಮ್ಮ ಹೃದಯದಲ್ಲಿ ಸ್ಥಿರವಾಗಿ ಇರಿಸುವದನ್ನು ಕಲಿತುಕೊಂಡು, ಆ ಬಲದ ಮೂಲಕ ಸೈತಾನನನ್ನು ಜಯಿಸುವದಾಗಿದೆ (1 ಯೋಹಾನ 2:13,14).

ಇಲ್ಲಿಂದ ಮುಂದೆ, ನಾವು ಬೆಳವಣಿಗೆ ಹೊಂದಿ ಇತರರಿಗೆ ಆತ್ಮಿಕ ತಂದೆಗಳಾಗಬೇಕು. ಆತ್ಮಿಕ ತಂದೆಗಳು ದೇವರನ್ನು ಮತ್ತು ಆತನ ವಿಧಾನಗಳನ್ನು ಬಹಳ ಚೆನ್ನಾಗಿ ತಿಳಿದಿರುತ್ತಾರೆ - ಇದು ದೇವರನ್ನು ತಮ್ಮ ತಂದೆಯೆಂದು ಮಾತ್ರ ಅರಿಯುವದಕ್ಕಿಂತ ಹೆಚ್ಚು ಆಳವಾದ ತಿಳುವಳಿಕೆ. ನೀವು ಪ್ರೌಢರಾದಾಗ ದೇವರು, ಆತನ ಮೌಲ್ಯಗಳು ಮತ್ತು ಆತನು ಕೆಲಸ ಮಾಡುವ ರೀತಿ, ಮುಂತಾದವುಗಳನ್ನು ವ್ಯಕ್ತಿಗತವಾಗಿ ತಿಳಿಯುತ್ತೀರಿ. ಇಂತಹ ತಂದೆಗಳು ಇತರ ವಿಶ್ವಾಸಿಗಳನ್ನು ಮುನ್ನಡೆಸಬಹುದು - ಮತ್ತು ನಮ್ಮ ಇಂದಿನ ಸಭೆಗಳಲ್ಲಿ ಕಾಣಿಸುವ ಅತಿ ಮುಖ್ಯವಾದ ಕೊರತೆ ಇದಾಗಿದೆ.

ಯಾರು ಕೇವಲ ತಮ್ಮ ಪಾಪ ಕ್ಷಮಾಪಣೆಯನ್ನು ವಿವರಿಸುತ್ತಾರೋ ಮತ್ತು ದೇವರನ್ನು ತಮ್ಮ ಎಲ್ಲಾ ಲೌಕಿಕ ಅವಶ್ಯತೆಗಳನ್ನು ಪೂರೈಸಿ, ತಮ್ಮ ಕಾಯಿಲೆಗಳನ್ನು ಗುಣಪಡಿಸಿ, ತಮ್ಮ ಪ್ರತಿಯೊಂದು ಅವಶ್ಯಕತೆಯನ್ನು ಪೂರೈಸುವ ಒಬ್ಬ ಒಳ್ಳೆಯ ತಂದೆಯೆಂದು ಮಾತ್ರ ಹೇಳುವರೋ, ಅವರು ಶಿಶುಗಳಾಗಿದ್ದಾರೆ. ಇವರದು "ಅಮ್ಮಾ, ಅಪ್ಪಾ" ಅನ್ನುವ ಚಿಕ್ಕ ಮಕ್ಕಳ ಸ್ಥಿತಿ. ನಾವೆಲ್ಲರೂ ಈ ಹಂತದಿಂದಲೇ ಪ್ರಾರಂಭಿಸುತ್ತೇವೆ. ಆದರೆ ನಾವು ಈ ಮಟ್ಟದಲ್ಲೇ ಉಳಿಯುವದು ಸರಿಯಲ್ಲ. ಈ ಹಂತದಿಂದ ನಾವು ಬೆಳೆದು, ಸೈತಾನನನ್ನು ಎದುರಿಸುವದನ್ನು ಕಲಿಯಬೇಕು. ನಂತರ ನಾವು ಇದರಿಂದಲೂ ಮುಂದೆ ಸಾಗಬೇಕು. ದೇವರನ್ನು ಅತೀ ಸಮೀಪದಿಂದ ತಿಳಿದುಕೊಳ್ಳಬೇಕು. ಇದು ಎಲ್ಲಕ್ಕಿಂತಲೂ ಮಹತ್ವದ್ದಾಗಿದೆ. ಆಗ ನಾವು ಸಭೆಯಲ್ಲಿ "ತಂದೆಗಳಾಗಿ", ಅನೇಕರಿಗೆ ಒಂದು ಅಶೀರ್ವಾದವಾಗಲು ಸಾಧ್ಯವಾಗುತ್ತದೆ.

ಆತ್ಮಿಕ ಜೀವಿತದಲ್ಲಿ ಬೇರೆ ಬೇರೆ ಹಂತಗಳಲ್ಲಿ ಇರುವ ವಿಶ್ವಾಸಿಗಳನ್ನು ಯೋಹಾನನು, 1 ಯೋಹಾನ 2:15ರಲ್ಲಿ ಈ ರೀತಿಯಾಗಿ ಪ್ರೋತ್ಸಾಹಿಸುತ್ತಾನೆ - "ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ". ಆತ್ಮಿಕ ತಂದೆಗಳಿಗೂ ಸಹ ಲೋಕವನ್ನು ಪ್ರೀತಿಸದಿರಿ ಎಂಬ ಪ್ರೋತ್ಸಾಹ ಬೇಕಾಗುತ್ತದೆಯೇ? ಹೌದು ಬೇಕಾಗುತ್ತದೆ. ಈ ಲೋಕದಲ್ಲಿ ಬಹಳ ಪ್ರೌಢ ಕ್ರೈಸ್ತನೂ ಪ್ರತೀ ಕ್ಷಣ ಲೋಕವನ್ನು ಪ್ರೀತಿಸುವ ಅಪಾಯವನ್ನು ಎದುರಿಸುತ್ತಾನೆ. ಹಾಗಾಗಿ ಅವನಿಗೂ, "ಲೋಕವನ್ನು ಪ್ರೀತಿಸಬೇಡ, ನೀನು ಲೋಕವನ್ನು ಪ್ರೀತಿಸಿದರೆ ತಂದೆಯನ್ನು ಪ್ರೀತಿಸಲಿಕ್ಕಾಗದು," ಎಂಬ ಪ್ರೋತ್ಸಾಹ ಬೇಕಾಗುತ್ತದೆ.

"ಲೋಕ" ಎಂಬ ಪದಕ್ಕೆ ಸಂಬಂಧಿಸಿದ ಮೂರು ವಿಷಯಗಳು ಇರುವದಾಗಿ ಯೋಹಾನನು ತಿಳಿಸುತ್ತಾನೆ: ಶರೀರದಾಶೆ- ಕಾಮಾಭಿಲಾಶೆ, ಹೊಟ್ಟೆಬಾಕತನ, ಆಲಸ್ಯ; ಕಣ್ಣಿನಾಶೆ - ಇದು ಹಣದಾಶೆಗೆ ಸಂಬಂಧಿಸಿದ ಒಂದು ಚಪಲ, ನೋಡಿದ ಎಲ್ಲವನ್ನೂ ಖರೀದಿಸುವ ಆಶೆ; ಮತ್ತು ಜಂಭ - ಇದು ಎಲ್ಲಾ ಪಾಪಗಳಿಗಿಂತಲೂ ದೊಡ್ಡ ಪಾಪವಾಗಿದೆ. ಈ ಮೂರು ಅಂಶಗಳು ಲೌಕಿಕ ವ್ಯವಸ್ಥೆಯ ಲಕ್ಷಣಗಳು. ಯಾರಾದರೂ ಇವುಗಳಲ್ಲಿ ಒಂದನ್ನು ಪ್ರೀತಿಸುವದಾದರೆ, ಅವನು ತಂದೆಯನ್ನು ಪ್ರೀತಿಸಲು ಸಾಧ್ಯವಿಲ್ಲ. ಆದರೆ ಇವೆಲ್ಲವೂ ಮತ್ತು ಈ ಲೋಕವೂ ಬಹು ಬೇಗನೆ ಗತಿಸಿ ಹೋಗುವವು. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು (1 ಯೋಹಾನ 2:17). ಇದು ನಾವು ಯಾವಾಗಲೂ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕಾದ ಒಂದು ವಿಷಯವಾಗಿದೆ.