ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಪೌಲನು 1ಥೆಸಲೋನಿಕ 1:3 ರಲ್ಲಿ ಮೊದಲನೆಯದಾಗಿ ನಂಬಿಕೆ, ಪ್ರೀತಿ ಮತ್ತು ನಿರೀಕ್ಷೆಯ ಬಗ್ಗೆ ಮಾತನಾಡುತ್ತಾ "ನಂಬಿಕೆಯ ಫಲವಾದ ಕೆಲಸ, ಪ್ರೀತಿಪೂರ್ವಕವಾದ ಪ್ರಯಾಸ, ಮತ್ತು ನಿರೀಕ್ಷೆಯಿಂದುಟಾದ ಸೈರಣೆ" ಎಂಬುದಾಗಿ ತಿಳಿಸುತ್ತಾನೆ ಮತ್ತು ಅಧ್ಯಾಯದ ಕೊನೆಯ ಭಾಗದಲ್ಲಿ ನಿಜವಾದ ಮಾನಸಾಂತರದ ಬಗ್ಗೆ ಹೇಳುತ್ತಾನೆ. ಹೊಸ ಒಡಂಬಡಿಕೆಯಲ್ಲಿ ನಿಜವಾದ ಮಾನಸಾಂತರದ ಬಗ್ಗೆ ಸ್ಪಷ್ಟವಾಗಿ ತಿಳಿಯಪಡಿಸುವ ವಚನವೆಂದರೆ, "ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಳ್ಳುವದು" (1ಥೆಸ.1:9).

ಮಾನಸಾಂತರವೆಂಬುದು ಎಲ್ಲಾ ವಿಗ್ರಹಗಳಿಂದ ತಿರುಗಿಕೊಂಡು ದೇವರ ಕಡೆ ದೃಷ್ಟಿಸುವುದಾಗಿದೆ. ನೀವು ಪಾಪದಲ್ಲಿ ಜೀವಿಸುವಾಗ ನೀವು ದೇವರ ಕಡೆ ಬೆನ್ನು ಮಾಡಿ ನಿಮ್ಮ ಮುಖವನ್ನು ವಿಗ್ರಹಗಳ ಕಡೆ ಇಟ್ಟುಕೊಂಡಿರುತ್ತೀರಿ. ನಿಮ್ಮ ಹಣ, ನಿಮ್ಮ ಕೆಲಸ, ನಿಮ್ಮ ಆಶೆ, ಕೆಲವು ಪಾಪಮಯವಾದ ಸುಖಗಳು, ನಿಮ್ಮ ಗೆಳತಿ ಅಥವಾ ನೀವೆ ನಿಮ್ಮ ಜೀವನದಲ್ಲಿ ನಿಮ್ಮ ವಿಗ್ರಹಗಳಾಗಿರಬಹುದು. ಕಣ್ಣಿಗೆ ಕಾಣುವ ವಿಗ್ರಹಗಳೂ ಕೂಡ ಇರಬಹುದು. ಅನೇಕ ರೀತಿಯ ವಿಗ್ರಹಗಳಿವೆ. ಮಾನಸಾಂತರವೆಂಬುದು ಈ ಎಲ್ಲಾ ವಿಗ್ರಹಗಳಿಂದ 180 ಡಿಗ್ರಿ (ವಿರುದ್ಧ ದಿಕ್ಕಿಗೆ) ತಿರುಗಿ ದೇವರ ಕಡೆ ಮುಖಮಾಡಿ ನಿಮ್ಮ ಎಲ್ಲಾ ವಿಗ್ರಹಗಳಿಗೆ ಬೆನ್ನು ಮಾಡುವದಾಗಿದೆ. ನೀವು ಈ ವಿಗ್ರಹಗಳಿಗೆ ಬೆನ್ನು ಮಾಡಿಲ್ಲವಾದಲ್ಲಿ ನೀವು ನಿಜವಾದ ಮಾನಸಾಂತರ ಹೊಂದಿರುವುದಿಲ್ಲ.

ಅನೇಕ ಕ್ರಿಸ್ತೀಯರು ತಮ್ಮ ಜೀವಿತದಲ್ಲಿ ಇಂತಹ ವಿಗ್ರಹಗಳನ್ನಿಟ್ಟುಕೊಂಡು ದೇವರ ಕಡೆ ಮುಖಮಾಡಲು ಪ್ರಯತ್ನಿಸುತ್ತಾರೆ. ಅವರ ಆಸೆ-ಅಕಾಂಕ್ಷೆಗಳು ಮತ್ತು ಆಸಕ್ತಿಗಳು ಲೋಕದಲ್ಲೇ ಇವೆ. ಆದರೆ ತಾವು ಹೊಸದಾಗಿ ಹುಟ್ಟಿದ ಕ್ರಿಸ್ತೀಯರೆಂದು ಅವರು ಭಾವಿಸಿಕೊಳ್ಳುತ್ತಾರೆ. ಇಂಥ ಕ್ರೈಸ್ತರು ಜಗತ್ತಿನಲ್ಲಿನ ಅತೀ ದು:ಖಿತ ಜನರಾಗಿರುತ್ತಾರೆ. ಆದರೆ ಸುಖಭೋಗ ಮತ್ತು ಹಣದ ವಿಗ್ರಹಗಳಿಗಾಗಿ ಸಂಪೂರ್ಣವಾಗಿ ಜೀವಿಸುವವರು ಇಂಥಹ ಕ್ರೈಸ್ತರಿಗಿಂತ ಎಷ್ಟೋ ಹೆಚ್ಚಾಗಿ ಸಂತೋಷದಿಂದಿರುತ್ತಾರೆ. ಅದರೆ ದೇವರಿಗಾಗಿಯೇ ಸಂಪೂರ್ಣವಾಗಿ ಜೀವಿಸುವವರು ಪರಮಾನಂದದಿಂದ ತುಂಬಿರುತ್ತಾರೆ. ಜಗತ್ತಿನಲ್ಲಿ ಅತೀ ದು:ಖಿತರಾಗಿರುವರು ಯಾರೆಂದರೆ ಈ ಲೋಕಕ್ಕಾಗಿಯೂ ಮತ್ತು ದೇವರಿಗಾಗಿಯೂ ಬದುಕಲು ಪ್ರಯತ್ನಿಸುವವರು. ಇದು ವಿಭಿನ್ನ ದಿಕ್ಕುಗಳಲ್ಲಿ ಸಾಗುವ ಎರಡು ದೋಣಿಗಳಲ್ಲಿ ಕಾಲಿಟ್ಟ ಹಾಗಿದೆ. ಆಗ ಮಧ್ಯದಲ್ಲಿಯೇ ನೀವು ನೀರಿಗೆ ಬೀಳುತ್ತೀರ. ತಮ್ಮ ಜೀವಿತದಲ್ಲಿ ನಿಜವಾದ ಮಾನಸಾಂತರದ ತಳಹದಿ ಹಾಕಿರದಿದ್ದ ಕಾರಣದಿಂದ ಅನೇಕ ಕ್ರಿಸ್ತೀಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ದೇವರ ಸ್ಥಾನವನ್ನು ತೆಗೆದುಕೊಳ್ಳುವ ಯಾವುದೇ ವಸ್ತುವು ವಿಗ್ರಹವಾಗಿದೆ. ಅದು ಕ್ರಿಸ್ತತ್ವದಲ್ಲಿ ನೀವು ಮೆಚ್ಚುವ ನಾಯಕರೂ ಕೂಡ ಆಗಿರಬಹುದು. ಅಥವಾ ಸತ್ಯವೇದದಲ್ಲಿ ನೀವು ಪ್ರೀತಿಸುವ ಒಂದು ಸಿದ್ಧಾಂತವೂ ಆಗಿರಬಹುದು. ಒಂದು ಸಾರಿ ನಾವು ದೇವರ ಕಡೆ ತಿರುಗಿದ ಮೇಲೆ ನಮ್ಮ ಮುಂದಿನ ಜೀವಿತವನ್ನು ಆತನ ಸೇವೆಯಲ್ಲಿ ಮತ್ತು ಕ್ರಿಸ್ತನು ಪರಲೋಕದಿಂದ ಇಳಿದು ಬರುವದನ್ನು ಎದುರುನೋಡುವದರಲ್ಲಿ ನಾವು ಕಳೆಯಬೇಕು (1ಥೆಸ. 1:9-10). ಈ ವಾಕ್ಯದಲ್ಲಿ ನಮಗೆ ನಿಜವಾದ ಮಾನಸಾಂತರ ಮತ್ತು ನಂಬಿಕೆಯ ಬಗ್ಗೆ ಪರಿಪೂರ್ಣವಾದ ಅರ್ಥವನ್ನು ವಿವರಿಸಲಾಗಿದೆ. ಒಳ್ಳೆಯ ತಳಹದಿ ಹೊಂದಿರುವ ಕ್ರಿಸ್ತೀಯನು ಮಾತ್ರ ಈ ರೀತಿಯಾದ ಬದಲಾವಣೆ ಹೊಂದಿದವನಾಗಿದ್ದಾನೆ. ಈತನು ಹಣ, ಊಟ, ನಿದ್ದೆ, ಜನರ ಅಭಿಪ್ರಾಯ ಮತ್ತು ಲೋಕದಲ್ಲಿರುವ ಇತ್ಯಾದಿಗಳನ್ನು ಅವುಗಳಿಗೆ ತಕ್ಕುದಾದ ಸ್ಥಳದಲ್ಲಿ ಇಟ್ಟಿರುತ್ತಾನೆ ಮತ್ತು ದೇವರ ಕಡೆ ತನ್ನನ್ನು ತಿರುಗಿಸಿಕೊಂಡಿರುತ್ತಾನೆ. ಇನ್ನು ಮುಂದೆ ಅವನ ಜೀವನದ ಮೂಲ ಗುರಿ ದೇವರ ಸೇವೆಯಷ್ಟೇ ಆಗಿರುತ್ತದೆ. ಆತನು ಉದ್ಯೋಗದಲ್ಲಿದ್ದರೂ, ಆತನ ಮೂಲ ಉದ್ಧೇಶ ದೇವರ ಸೇವೆಯಾಗಿರುತ್ತದೆ. ಆಕಾಶದೊಳಗಿಂದ ದೇವರ ಕುಮಾರನನ್ನು ಎದುರುನೋಡುವವ ನಿರೀಕ್ಷೆಯೊಂದಿಗೆ ಆತನು ದೇವರ ಸೇವೆಯನ್ನು ಸಲ್ಲಿಸುವವನಾಗಿರುತ್ತಾನೆ. ಯೇಸು ಲೋಕಕ್ಕೆ ತಿರುಗಿ ಬರುವಾಗ "ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುತ್ತಾನೆ" (1ಥೆಸ. 1:10).

ಪ್ರತಿಯೊಬ್ಬ ಕ್ರಿಸ್ತೀಯನು ತನ್ನ ಅನುಭವವು, 1ಥೆಸಲೋನಿಕ 1:9,10 ರಲ್ಲಿ ತಿಳಿಸಿದಂತೆ ಪೌಲನು ದೇವರ ಸೇವೆ ಮಾಡುವ ಉದಾಹರಣೆಯ ಪ್ರಕಾರವಿದೆಯೇ ಎಂದು ಪರೀಕ್ಷಿಸಿಕೊಳ್ಳುವದು ಒಳ್ಳೆಯ ವಿಚಾರವಾಗಿದೆ.