ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಎಲೀಯನು ದೇವರ ಪ್ರತಿಯೊಂದು ಚಿಕ್ಕ ಆದೇಶವನ್ನೂ ತಕ್ಷಣವೇ ಪಾಲಿಸುತ್ತಿದ್ದ ಮನುಷ್ಯನಾಗಿದ್ದನು. ಒಂದು ದಿನ ದೇವರು ಅವನಿಗೆ, ಇದ್ದ ಸ್ಥಳವನ್ನು ಬಿಟ್ಟು ಕೆರೀತ್‍ಹಳ್ಳಕ್ಕೆ ಹೋಗಿ ಅಡಗಿಕೊಳ್ಳಲು ತಿಳಿಸಿದರು - ಆಗ ಅವನು ತಡಮಾಡದೆ ಹೋದನು (1 ಅರಸು. 17: 3). ಅಲ್ಲಿ ಕಾಗೆಗಳು ರೊಟ್ಟಿ ಮತ್ತು ಮಾಂಸವನ್ನು ಅವನಿಗೆ ತಂದು ಒದಗಿಸುತ್ತಿದ್ದವು ಮತ್ತು ಹಳ್ಳದ ನೀರನ್ನು ಅವನು ಕುಡಿಯುತ್ತಿದ್ದನು (ವಚನ 6). ಪ್ರತಿದಿನ ಬೆಳಿಗ್ಗಿನ 8 ಘಂಟೆಗೆ ಒಂದು ಕಾಗೆ ಸ್ವಲ್ಪ ಆಹಾರವನ್ನು ತಂದು ಕೊಡುತ್ತಿತ್ತು. ಹಾಗೆಯೇ ಇನ್ನೊಂದು ಕಾಗೆ ಸಾಯಂಕಾಲ 5 ಘಂಟೆಗೆ ಇನ್ನಿಷ್ಟು ಆಹಾರವನ್ನು ತರುತ್ತಿತ್ತು. ಈ ಕಾಗೆಗಳು ಅವನಿಗೆ ತರುತ್ತಿದ್ದುದು ಮಾಂಸವನ್ನು. ಒಂದು ಕಾಗೆಯು ತರಕಾರಿಯನ್ನು ತಂದರೂ ಅದೊಂದು ಅದ್ಭುತವೇ. ಆದರೆ ಒಂದು ಕಾಗೆ (ತನ್ನ ಅಚ್ಚುಮೆಚ್ಚಿನ) ಮಾಂಸವನ್ನು ತರುವದು ಇನ್ನೂ ದೊಡ್ಡ ಅದ್ಭುತ. ಎಲೀಯನ ಅಗತ್ಯತೆಯನ್ನು ದೇವರು ಪೂರೈಸಿದ ರೀತಿ ಹಾಗಿತ್ತು. ಆದರೆ ದಿನಗಳು ಕಳೆದಂತೆ ಕ್ರಮೇಣವಾಗಿ, ಎಲೀಯನು ಕರ್ತನನ್ನು ಆಶ್ರಯಿಸುವದರ ಬದಲಾಗಿ ಕಾಗೆಗಳನ್ನು ಅವಲಂಬಿಸಲು ಆರಂಭಿಸಿದನು!  

     

ಕರ್ತನ ಅನೇಕ ಸೇವಕರು ಶುರುವಿನಲ್ಲಿ ತಮ್ಮ ಹಣದ ಅವಶ್ಯಕತೆಗಳಿಗಾಗಿ ಕರ್ತನನ್ನು ಅವಲಂಬಿಸುತ್ತಾರೆ. ಆದರೆ ಕೆಲವು ವರ್ಷಗಳ ನಂತರ, ಅವರ ಆಶ್ರಯ ಕರ್ತನಲ್ಲ ಕೆಲವು ಕಾಗೆಗಳು ಆಗಿರುತ್ತವೆ - ಅಂದರೆ, ತಪ್ಪದೆ ಅವರಿಗೆ ಸಹಾಯ ಮಾಡುವ ಮನುಷ್ಯರು! ಎಲೀಯನ ಪರಿಸ್ಥಿತಿಯೂ ಇದೇ ಆಯಿತು. ಆಗ ಕರ್ತನು ಮಾಡಿದುದೇನು? ಅವರು ಕಾಗೆಗಳು ಬರುವುದನ್ನು ನಿಲ್ಲಿಸಿದರು. ಎಲೀಯನು ಕಾಗೆಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ ಮತ್ತೆ ಕರ್ತನನ್ನು ನಂಬುವುದನ್ನು ದೇವರು ಕಲಿಸಬೇಕಿತ್ತು.  

   

ಆದಕಾರಣ ವಾಗ್ದಾನದ ಸಹಾಯ ಬರದಿದ್ದಾಗ - ಅಂದರೆ ಕಾಗೆಗಳು ಬರುವದು ನಿಂತಾಗ ದೇವರಿಗೆ ಸ್ತೋತ್ರ ಮಾಡಿರಿ. ಆಗ ನಿಮ್ಮ ಎಲ್ಲಾ ಅವಶ್ಯಕತೆಗಳಿಗಾಗಿ ಕರ್ತನನ್ನು ಮಾತ್ರವೇ ನಂಬುವುದನ್ನು ನೀವು ಮತ್ತೆ ಕಲಿಯುವಿರಿ. ಇಂತಹ ಅನುಭವಗಳು ನನಗೂ ಆಗಿವೆ. ನಾನು ದೇವರಿಗೆ ಸ್ತೋತ್ರ ಸಲ್ಲಿಸುವದು ಏಕೆಂದರೆ, ಅವರು ಅಂತಹ ಪರಿಸ್ಥಿತಿಗಳಲ್ಲಿ ನನ್ನ ದೃಷ್ಟಿಯನ್ನು ಕಾಗೆಗಳಿಂದ ದೂರ ಸರಿಸಿ, ಸಾವಿರ ಗುಡ್ಡಗಳ ಮೇಲಿರುವ ಪಶುಗಳ ಒಡೆಯನೂ, ಮತ್ತು ನನ್ನ ಪ್ರತಿಯೊಂದು ಕೊರತೆಯನ್ನು ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕಂತೆ ಕ್ರಿಸ್ತ ಯೇಸುವಿನ ಮೂಲಕ ನೀಗಿಸುವೆನೆಂದು ಹೇಳಿರುವಾತನೂ ಆಗಿರುವವರ ಕಡೆಗೆ ತಿರುಗಿಸಿದ್ದಾರೆ.  

   

ತರುವಾಯ ತಮ್ಮ ಕಾರ್ಯ ವಿಧಾನವನ್ನು ಬದಲಾಯಿಸಿ, ಎಲೀಯನಿಗೆ ಚಾರೆಪ್ತಾ ಪಟ್ಟಣಕ್ಕೆ ಹೋಗಲು ಕರ್ತನು ಆದೇಶಿಸಿದರು. ಚಾರೆಪ್ತಾ ಇಸ್ರಾಯೇಲ್‍ನಿಂದ ಹೊರಗಿತ್ತು. ಅಲ್ಲಿ ಯಾರೋ ಒಬ್ಬ ಧನಿಕನಾದ ವ್ಯಾಪಾರಿಯು ತನ್ನನ್ನು ನೋಡಿಕೊಳ್ಳುವನು ಎಂದು ಎಲೀಯನು ಯೋಚಿಸಿರಬಹುದು. ಆದರೆ ಅವನು ಚಾರೆಪ್ತವನ್ನು ತಲುಪಿದಾಗ, ಅಲ್ಲಿ ಅವನನ್ನು ಎದುರಾದುದು ಒಬ್ಬ ಐಶ್ವರ್ಯವಂತ ವರ್ತಕನಲ್ಲ, ಆದರೆ ತನ್ನ ಕೊನೆಯ ಊಟವನ್ನು ಮಾಡಿ ಸಾಯುವೆನು ಎಂದುಕೊಂಡಿದ್ದ ಒಬ್ಬ ಬಡ ವಿಧವೆ!  

   

"ನಿನ್ನನ್ನು ಆಕೆಯು ಸಾಕುವಳು," ಎಂದು ಎಲೀಯನಿಗೆ ಕರ್ತನು ತಿಳಿಸಿದರು! ದೇವರ ಕಾರ್ಯ ವಿಧಾನಗಳು ನಿಜಕ್ಕೂ ಆಶ್ಚರ್ಯಕರವಾಗಿವೆ. ಆ ರೀತಿಯಾಗಿ ದೇವರು ಮಾಡುವದು ಏಕೆಂದರೆ, ಅವರು ಅಸೂಯೆಯುಳ್ಳ ದೇವರು. ಕಾಗೆಗಳನ್ನು ಅಥವಾ ವ್ಯಾಪಾರಿಗಳನ್ನಲ್ಲ, ಆದರೆ ಅವರನ್ನು ನಾವು ನಂಬಬೇಕೆಂದು ಅವರು ಬಯಸುವರು. ನಿಮಗೆ ಯಾವ ಸಹಾಯವನ್ನೂ ಮಾಡಲಾರದ ಬಡಪಾಯಿಯೆಂದು ನೀವು ತಿಳಿದಿರುವ ಒಬ್ಬ ಮನುಷ್ಯನನ್ನು ಅವರು ಉಪಯೋಗಿಸಿಕೊಳ್ಳುವರು, ಮತ್ತು ಆ ರೀತಿಯಾಗಿ ಅವರ ಸನ್ನಿಧಿಯಲ್ಲಿ ಯಾವ ಜೀವಿಯೂ ಹಿಗ್ಗಲಾರನು.  

   

ಆ ವಿಧವೆಯು, "ಇರುವ ಹಿಡಿ ಹಿಟ್ಟು ಮತ್ತು ಸ್ವಲ್ಪ ಎಣ್ಣೆ ಇವುಗಳಿಂದ ರೊಟ್ಟಿ ಮಾಡಿ ತಿಂದು ಸಾಯುವೆವು ಎಂದುಕೊಂಡಿದ್ದೆನು," ಎಂದಳು. ಎಲೀಯನು ಆಕೆಗೆ, "ಹೆದರಬೇಡ. ಇರುವದರಿಂದ ನನಗೋಸ್ಕರ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ. ಇಸ್ರಾಯೇಲ್ ದೇವರಾದ ಯೆಹೋವನು ದೇಶಕ್ಕೆ ಮಳೆಯನ್ನು ಕಳುಹಿಸುವ ವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ," ಎಂದು ತಿಳಿಸಿದನು (1 ಅರಸು. 17: 12-14). ಹಾಗೆಯೇ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.  

   

ಬಡ ಜನರು ತಮಗೆ ಹಣವನ್ನು ಕೊಡುವಂತೆ ಮಾಡಲು ಈ ಪ್ರಸಂಗವನ್ನು ಉಪಯೋಗಿಸಿಕೊಳ್ಳುವ ಅನೇಕ ಬೋಧಕರು ಈ ದಿನ ಇರುವರು. ಆದರೆ ನಡೆದ ಸಂಗತಿಯ ಸಂಪೂರ್ಣ ತಪ್ಪಾದ ವಿವರಣೆ ಅದು. ಮೊದಲನೆಯದಾಗಿ, ಈವತ್ತಿನ ಹೆಚ್ಚಿನ ಬೋಧಕರು ಎಲೀಯನಂತಹ ಪ್ರವಾದಿಗಳಲ್ಲ. ಎರಡನೆಯದಾಗಿ, ಇಂದಿನ ಬೋಧಕರಲ್ಲಿ ಹೆಚ್ಚಿನವರು ಹಣದಾಸೆ ಉಳ್ಳವರು, ಎಲೀಯನು ಹಾಗಿರಲಿಲ್ಲ. ಬಡವರ ಶೋಷಣೆ ಮಾಡುವ ಇಂದಿನ ಹೆಚ್ಚಿನ ಬೋಧಕರಿಂದ ವಿಭಿನ್ನವಾದ ಒಂದು ಪ್ರತ್ಯೇಕ ಶ್ರೇಣಿಯಲ್ಲಿ ಎಲೀಯನು ಇದ್ದನು ಎನ್ನುವದಕ್ಕೆ ಇವೆರಡು ಸತ್ಯಾಂಶಗಳೇ ಸಾಕು. ಅಷ್ಟೇ ಅಲ್ಲ, ಎಲೀಯನು ಆ ವಿಧವೆಯಿಂದ ಅಪೇಕ್ಷಿಸಿದ್ದು ಬರಗಾಲದ ಸಮಯದಲ್ಲಿ ಬದುಕಿ ಉಳಿಯಲಿಕ್ಕಾಗಿ ಒಂದು ರೊಟ್ಟಿಯ ತುಣುಕನ್ನು ಮಾತ್ರ, ಮತ್ತು ಅವನು ಆ ವಿಧವೆ ಮತ್ತು ಆಕೆಯ ಮಗನ ಆಹಾರವನ್ನೇ ಉಂಡನು.  

   

ಇಂದಿನ ಬೋಧಕರು ಹಣವನ್ನು ಕೇಳುತ್ತಿರುವದು ತಮ್ಮ ಜೀವನಾಧಾರಕ್ಕಾಗಿ ಅಲ್ಲ, ಆದರೆ ತಮ್ಮ ಅದ್ಧೂರಿಯ ಜೀವನ ಶೈಲಿಯನ್ನು ಮುನ್ನಡೆಸಲು. ಸುಳ್ಳು ಪ್ರವಾದಿಗಳು ಇಂದು ವಿಪುಲವಾಗಿ ಇದ್ದಾರೆ. ದೇವಜನರಲ್ಲಿ ಹೆಚ್ಚಿನವರು ಒಬ್ಬ ನಿಜ ಪ್ರವಾದಿ ಮತ್ತು ಒಬ್ಬ ಸುಳ್ಳು ಪ್ರವಾದಿಯ ನಡುವಿನ ವ್ಯತ್ಯಾಸವನ್ನು ಗುರುತಿಸುವದು ಹೇಗೆಂದು ತಿಳಿದಿಲ್ಲ, ಆದುದದರಿಂದ ಅವರು ಮೋಸಹೋಗುವರು, ಇದು ದುರದೃಷ್ಟಕರ.