ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ನಾವು ಮತ್ತಾಯ 9:27ರಲ್ಲಿ, ಯೇಸುವಿನ ಬಳಿಗೆ ಇಬ್ಬರು ಕುರುಡರು ಬಂದುದಾಗಿ ಓದುತ್ತೇವೆ. ಆದರೆ ಯೇಸುವು ಅವರನ್ನು ಗುಣಪಡಿಸುವ ಮೊದಲು, ಅವರನ್ನು ಈ ರೀತಿಯಾಗಿ ಪ್ರಶ್ನಿಸಿದನು. "ನಾನು ಇದನ್ನು ಮಾಡಬಲ್ಲೆನೆಂದು ನೀವು ನಂಬುತ್ತೀರೋ?" ಅವರು "ಹೌದು ಕರ್ತನೇ," ಎಂದು ಉತ್ತರಿಸಿದರು. ಆಗ ಯೇಸುವು, "ನಿಮಗೆ ನಿಮ್ಮ ನಂಬಿಕೆಯಂತೆ ಆಗಲಿ," ಎಂದನು (ಮತ್ತಾಯ 9:29). ಇದು ದೇವರ ಒಂದು ನಿಯಮ: "ನಮ್ಮ ನಂಬಿಕೆಯ ಪ್ರಮಾಣದಲ್ಲಿ ನಾವು ಪಡಕೊಳ್ಳುವೆವು - ಅದಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ". ಆ ಕುರುಡರಿಗೆ ಒಂದು ಪವಾಡದ ಅವಶ್ಯಕತೆ ಇತ್ತೇ? ಹೌದು. ಅವರಿಗಾಗಿ ಒಂದು ಪವಾಡವನ್ನು ಮಾಡಲು ಯೇಸುವಿಗೆ ಇಷ್ಟವಿತ್ತೇ? ಹೌದು. ಆದಾಗ್ಯೂ ಅವರಲ್ಲಿ ನಂಬಿಕೆ ಇರದೇ ಹೋಗಿದ್ದರೆ, ಆ ಅದ್ಭುತಕಾರ್ಯ ನಡೆಯುತ್ತಿರಲಿಲ್ಲ.

ಈಗ ಇದು ನಿಮಗೆ ಹೇಗೆ ಅನ್ವಯಿಸುವದೆಂದು ನೋಡಿರಿ. ನಿಮಗೆ ದೇವರಿಂದ ಒಂದು ಅದ್ಭುತಕಾರ್ಯ ನಡೆಯಬೇಕೇ? ಹೌದು. ನಿಮಗಾಗಿ ಒಂದು ಪವಾಡವನ್ನು ಮಾಡಲು ದೇವರಿಗೆ ಇಷ್ಟವಿದೆಯೇ? ಇದೆ. ಆದರೆ ನಿಮ್ಮಲ್ಲಿ ನಂಬಿಕೆ ಇಲ್ಲವಾದರೆ, ಅದು ನೆರವೇರದೇ ಇರಬಹುದು.

ಆ ಕುರುಡರಲ್ಲಿ ಒಬ್ಬನು ಹೀಗೆ ಹೇಳುತ್ತಾನೆ ಅಂದುಕೊಳ್ಳಿರಿ, "ಕರ್ತನೆ, ನೀನು ನನ್ನ ಒಂದು ಕಣ್ಣನ್ನಾದರೂ ಗುಣಪಡಿಸಬಹುದು ಎಂದು ನನಗೆ ಖಾತರಿಯಿದೆ. ನಿಜವಾಗಿ ನನಗೆ ಅಷ್ಟೇ ಸಾಕು." ಆಗ ಕರ್ತನು ಅವನಿಗೆ ಮೇಲೆ ಹೇಳಿದ ಮಾತನ್ನೇ ಹೇಳುತ್ತಿದ್ದನು, "ನಿನಗೆ ನಿನ್ನ ನಂಬಿಕೆಯಂತೆ ಆಗಲಿ" - ಮತ್ತು ಅವನ ಒಂದು ಕಣ್ಣು ಮಾತ್ರ ತೆರೆಯಲ್ಪಡುತ್ತಿತ್ತು! ಹಾಗೆಯೇ ಎರಡನೇ ಕುರುಡನು, "ಕರ್ತನೇ, ನೀನು ನನ್ನ ಎರಡು ಕಣ್ಣುಗಳನ್ನೂ ತೆರೆಯಬಲ್ಲೆ ಎಂದು ನಾನು ನಂಬುತ್ತೇನೆ" ಎಂದಿದ್ದರೆ, ಆ ನಂಬಿಕೆಯ ಪ್ರಕಾರ ಆತನು ಅದನ್ನು ಪಡೆಯುತ್ತಿದ್ದನು - ಮತ್ತು ಆತನ ಎರಡು ಕಣ್ಣುಗಳೂ ತೆರೆಯಲ್ಪಡುತ್ತಿದ್ದವು.

ಒಂದು ಕಣ್ಣನ್ನು ಪಡೆದವನು "ಒಂದು-ಕಣ್ಣಿನ" ನಂಬಿಕೆಯ ಮೇಲೆ ಆಧಾರಿತವಾದ ಪಂಗಡವನ್ನು (denomination) ಆರಂಭಿಸಿ, ಯೇಸುವು ನಮ್ಮ ಒಂದು ಕಣ್ಣನ್ನು ಗುಣಪಡಿಸಬಹುದು ಎಂಬುದಾಗಿ ಪ್ರಚಾರ ಮಾಡುತ್ತಿದ್ದನು. ಹಾಗೆಯೇ ಆ ಇನ್ನೊಬ್ಬ ವ್ಯಕ್ತಿ, ಯೇಸುವು ಎರಡು ಕಣ್ಣುಗಳನ್ನು ಗುಣಪಡಿಸಬಲ್ಲನು ಎಂದು ಪ್ರಚಾರ ಮಾಡುತ್ತಾ, "ಎರಡು-ಕಣ್ಣುಗಳ" ನಂಬಿಕೆಯುಳ್ಳ ಪಂಗಡವನ್ನು ಆರಂಭಿಸುತ್ತಿದ್ದನು. ಹಾಗೆಯೇ ಇಂದು, ಕೆಲವರು ಯೇಸು ಕೇವಲ ಪಾಪ ಕ್ಷಮಾಪಣೆ ಮಾಡುತ್ತಾನೆಂಬ ಅರೆ ಸುವಾರ್ತೆಯ ಪ್ರಚಾರ ಮಾಡುತ್ತಾರೆ. ಆದರೆ ಸ್ವಲ್ಪ ಜನರು "ಯೇಸುವು ನಮ್ಮ ಪಾಪ ಕ್ಷಮಾಪಣೆ ಮಾತ್ರವಲ್ಲದೆ, ಪಾಪದ ಮೇಲೆ ಜಯವನ್ನೂ ಸಹ ಕೊಡುವನು" ಎಂಬ ಪೂರ್ಣ ಸುವಾರ್ತೆಯನ್ನು ಪ್ರಚಾರ ಮಾಡುತ್ತಾರೆ. ಮೊದಲನೆಯ ಸಭೆಯವನು ಎರಡನೆಯವನನ್ನು ಮತವಿರೋಧಿಯೆಂದು ವರ್ಣಿಸಿ ಹೀಗೆನ್ನುತ್ತಾನೆ, "ಇದು ಸಾಧ್ಯವಿಲ್ಲ, ಏಕೆಂದರೆ ಯೇಸುವು ತೆರೆದಿರುವದು ನನ್ನ ಒಂದು ಕಣ್ಣನ್ನು ಮಾತ್ರ." ಅವನು ಕೇವಲ ಒಂದು ಕಣ್ಣು ಗುಣವಾಗುವ ನಂಬಿಕೆ ಇಟ್ಟುಕೊಂಡದ್ದರಿಂದ ಈ ರೀತಿ ಆಯಿತು. ಆದರೆ ಇನ್ನೊಬ್ಬನು ತನ್ನ ಎರಡು ಕಣ್ಣುಗಳೂ ತೆರೆಯುತ್ತವೆಂದು ನಂಬಿದ್ದನು. ಆತನು ಕರ್ತನಿಂದ ಪಾಪ ಕ್ಷಮಾಪಣೆ ಮಾತ್ರವಲ್ಲದೆ, ಪಾಪದ ಮೇಲೆ ಜಯ ಪಡೆಯುವ ನಂಬಿಕೆಯನ್ನೂ ಸಹ ಹೊಂದಿದ್ದನು.

ನೀವು ಇವೆರಡು ಸಭಾ-ಪಂಗಡಗಳಲ್ಲಿ ಯಾವುದರಲ್ಲಿ ಇದ್ದೀರಿ? ಯೇಸುವು ಕೇವಲ ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆಂದು ನಂಬಿದ್ದರೆ ಆತನಿಂದ ಅಷ್ಟನ್ನೇ ಪಡೆಯುವಿರಿ. ಆದರೆ ನಿಮ್ಮ ಕೋಪ, ಕಾಮ, ಅಹಂಕಾರ, ಅಸೂಯೆ, ಇತ್ಯಾದಿ, ಇವೆಲ್ಲವುಗಳಿಂದ ಸೋಲುತ್ತಲೇ ಇರುತ್ತೀರಿ. ಆದರೆ ರೊಮ. 6:14ರಲ್ಲಿ ವಿವರಿಸಿರುವಂತೆ, ಇನ್ನೊಬ್ಬ ವಿಶ್ವಾಸಿಯು, "ಇನ್ನು ಮೇಲೆ ಪಾಪವು ನನ್ನ ಮೇಲೆ ಅಧಿಕಾರ ನಡೆಸಲು ಸಾಧ್ಯವಾಗದು, ಏಕೆಂದರೆ ನಾನು ದೇವರ ಕೃಪೆಗೆ ಅಧೀನನಾಗಿದ್ದೇನೆ. ಆದ್ದರಿಂದ ನನ್ನ ಜೀವನದಲ್ಲಿ ಇದು ನೆರವೇರುವಂತೆ ದೇವರಲ್ಲಿ ನಂಬಿಕೆಯಿಡುತ್ತೇನೆ," ಎಂದು ಹೇಳಬಹುದು. ಆತನು ತನ್ನ ಎರಡು ಕಣ್ಣುಗಳನ್ನೂ ಪಡೆಯುತ್ತಾನೆ! ಅವನನ್ನು ಮತವಿರೋಧಿ ಎಂದು ಕರೆಯಬೇಡಿ. ಆತನು ನಿಮಗಿಂತ ಅಧಿಕವಾಗಿ ಪಡೆಯಲು ಕಾರಣ, ಆತನು ನಿಮಗಿಂತ ಉತ್ತಮನು ಆಗಿರಲಿಲ್ಲ, ಆದರೆ ಆತನು ಹೆಚ್ಚಿನದಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದನು.