ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 

ನಮ್ಮ ಕರ್ತರಾದ ಪ್ರಭುವಿನ ದಾಸರಾಗಲು ನಮ್ಮನ್ನು ಹೊಸ ಒಡಂಬಡಿಕೆಯು ಉತ್ತೇಜಿಸುತ್ತದೆ. ಪೌಲನು ತನ್ನನ್ನು ಯೇಸು ಕ್ರಿಸ್ತನ ಮನಃಪೂರ್ವಕ ಜೀತದಾಳು ಎಂದು ಕರೆದುಕೊಂಡನು.

ಹಳೆಯ ಒಡಂಬಡಿಕೆಯ ಸೇವಕರಲ್ಲಿ ಎರಡು ವರ್ಗಗಳಿದ್ದವು - ಜೀತದಾಳು (ಗುಲಾಮ) ಮತ್ತು ಕೂಲಿಯಾಳು. ಕೂಲಿಯಾಳಿಗೆ ಮಜೂರಿ ನೀಡಿದಂತೆ ಒಬ್ಬ ಗುಲಾಮನಿಗೆ ಯಾವತ್ತೂ ನೀಡಲಾಗುತ್ತಿರಲಿಲ್ಲ. ಆತನನ್ನು ಆತನ ಧನಿಯು ಬೆಲೆತೆತ್ತು ಖರೀದಿಸಿದ್ದನು - ಹೀಗಾಗಿ ಆತನೂ, ಆತನ ಸಕಲ ಸೊತ್ತುಗಳೂ ಧನಿಗೆ ಸೇರಿದ್ದವು. ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಯೂ ತನ್ನನ್ನು ಹೀಗೆಯೇ ಕಂಡುಕೊಳ್ಳಬೇಕು. ನಮ್ಮ ಸಮಯ, ಸಂಪತ್ತು, ವರಗಳು, ಕುಟುಂಬ, ಆಸ್ತಿ, ತನು-ಮನಗಳು - ಎಲ್ಲವೂ - ಶಿಲುಬೆಯ ಮೇಲೆ ನಮ್ಮನ್ನು ಕ್ರಯಕ್ಕೆ ಕೊಂಡಿರುವ ಹಕ್ಕಿನ ಫಲವಾಗಿ ನಮ್ಮ ಒಡೆಯ ಮತ್ತು ನಮ್ಮ ಕರ್ತನಿಗೆ ಸೇರಿರುವವು (1 ಕೊರಿ. 6:19,20).

ಆದ್ದರಿಂದ ರೋಮಾ. 12:2 ರಲ್ಲಿ, ನಮ್ಮ ದೇಹಗಳನ್ನು ಶಾಶ್ವತವಾಗಿ, ಸಜೀವ ಯಜ್ಞವಾಗಿ, ಹಳೆಯ ಒಡಂಬಡಿಕೆಯ ಸರ್ವಾಂಗಹೋಮದಂತೆ, ದೇವರಿಗೆ ಅರ್ಪಿಸಲು ನಮ್ಮನ್ನು ಉತ್ತೇಜಿಸಲಾಗಿದೆ. ಸರ್ವಾಂಗಹೋಮವು ದೋಷಪರಿಹಾರಯಜ್ಞದಂತೆ ಇರದೆ, ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಲ್ಪಟ್ಟು, ಅರ್ಪಿಸುವಾತನು ತನ್ನ ಕರ್ತನಾದ ಪ್ರಭುವಿಗಾಗಿ ಮೀಸಲಾಗಿರುವದನ್ನು ಸೂಚಿಸುತ್ತದೆ. ಸರ್ವಾಂಗಹೋಮವನ್ನು ನೀಡಿದಾತನಿಗೆ ಏನೂ ವಾಪಾಸು ಸಿಗುತ್ತಿರಲಿಲ್ಲ. ಆತನ ಕೊಡುಗೆಯನ್ನು ದೇವರು ಬೇಕಿದ್ದಂತೆ ಬಳಸಿಕೊಳ್ಳಬಹುದಾಗಿತ್ತು.

ಸಾಂಕೇತಿಕವಾಗಿ ಇದು ಕರ್ತನಾದ ಯೇಸುವು ತನ್ನ ತಂದೆಗೆ, "ತಂದೆಯೇ, ನನ್ನ ಚಿತ್ತವಲ್ಲ, ನಿಮ್ಮ ಚಿತ್ತವು ನೆರವೇರಲಿ," ಎನ್ನುತ್ತಾ ತನ್ನ ಸಮಸ್ತವನ್ನೂ ಅರ್ಪಿಸಿದ ಕಲ್ವಾರಿ ಕ್ರೂಜೆಯನ್ನು ಸೂಚಿಸುತ್ತದೆ. ನಮ್ಮ ದೇಹಗಳನ್ನು ಜೀವಂತ ಬಲಿಯಾಗಿ ದೇವರಿಗೆ ಅರ್ಪಿಸುವುದರ ಅರ್ಥ ಇದಾಗಿದೆ: ನಮ್ಮ ದೇಹವನ್ನು ದೇವರು ಹೇಗೆ ಮತ್ತು ಎಲ್ಲಿ ಉಪಯೋಗಿಸುವರು ಎಂಬ ನಿರ್ಣಯಕ್ಕೆ ಮತ್ತು ಆಯ್ಕೆಗೆ ನಾವು ಸಾಯಬೇಕು. ಆಗಲೇ ನಾವು ಅವರ ಚಿತ್ತವನ್ನು ಅರಿಯಬಹುದು.

ದೇವರ ಚಿತ್ತವನ್ನು ನಾವು ಖಚಿತಪಡಿಸಿಕೊಳ್ಳಲು ಸಾಧ್ಯವಾಗದೇ ಇರುವದಕ್ಕೆ ಮುಖ್ಯ ಕಾರಣ ಇಂತಹ ಸಮರ್ಪಣಾಭಾವವು ಇಲ್ಲದಿರುವದೇ. ಅನೇಕ ವೇಳೆ ನಮ್ಮನ್ನು ದೇವರಿಗೆ ಒಪ್ಪಿಸಿಕೊಡುವುದು ಶರತ್ತಾಗಿರುತ್ತದೆ. ದೇವರು ನಮಗಾಗಿ ಸಿದ್ಧಗೊಳಿಸಿರುವ ಎಲ್ಲವನ್ನು ಪೂರ್ಣಹೃದಯದಿಂದ ಸ್ವೀಕರಿಸಲು ನಾವು ತಯಾರಿಲ್ಲ.

ಒಮ್ಮೆ ನಾನು ಪೂರ್ಣಾವಧಿ ಕ್ರಿಸ್ತೀಯ ಸೇವೆಯೊಂದನ್ನು ಹೊರತಾಗಿ ಇನ್ಯಾವುದೇ ವೃತ್ತಿಯನ್ನೂ ಮಾಡಲು ಸಿದ್ಧನಿದ್ದ ಒಬ್ಬ ಸಹೋದರನನ್ನು ಸಂಧಿಸಿದೆ. ಆತನ ಬಾಳಲ್ಲಿ ದೇವರ ಯೋಜನೆ ಏನು ಎನ್ನುವದು ಈ ಅರೆಮನಸ್ಸಿನಿಂದಾಗಿ ಆತನಿಗೆ ಸ್ಪಷ್ಟವಾಗಿಲ್ಲವೆಂದು ನಾನು ಆತನಿಗೆ ತಿಳಿಸಿದೆನು. ಕೊನೆಗೆ ಆತನು ಸಮಸ್ತವನ್ನು ಕರ್ತನಾದ ಪ್ರಭುವಿಗೆ ಅರ್ಪಿಸಿದೊಡನೆಯೇ, ತನಗಾಗಿರುವ ದೇವರ ಯೋಜನೆಯ ಬಗ್ಗೆ ಆಳವಾದ ನಿಶ್ಚಿತತೆಯನ್ನು ಆತನು ಪಡೆದುಕೊಂಡನು. ಆತನನ್ನು ದೇವರು ಪೂರ್ಣಾವಧಿಯ ಕ್ರಿಸ್ತೀಯ ಸೇವೆಗೆ ಕರೆಯದಿದ್ದರೂ, ಅದಕ್ಕೆ ಸಿದ್ಧಮನಸ್ಸು ಆತನಲ್ಲಿ ಇರಬೇಕೆಂದು ಅವರು ಬಯಸಿದ್ದರು.

ದೇವರ ಚಿತ್ತವನ್ನು ಅರಿಯುವ ಹುಸಿ ನೆಪವನ್ನು ಹೇಳಿ ದೇವರ ಬಳಿ ಬರುವ ಅನೇಕರು ನಿಜವಾಗಿ ಬಯಸುವದು, ಈಗಾಗಲೇ ತಾವು ಮಾಡಿರುವ ಆಯ್ಕೆಗೆ ಅವರ ಒಪ್ಪಿಗೆಯನ್ನು ಮಾತ್ರ. ಈ ಕಾರಣಕ್ಕಾಗಿ ದೇವರಿಂದ ಅವರು ಯಾವ ಉತ್ತರವನ್ನೂ ಪಡೆಯುವದಿಲ್ಲ. ನಾವು ಯಾವುದನ್ನೂ ತಡೆಹಿಡಿಯದೆ ನಮ್ಮನ್ನು ದೇವರಿಗೆ ಸಂಪೂರ್ಣವಾಗಿ ಒಪ್ಪಿಸಿಕೊಳ್ಳುತ್ತಾ, "ಪ್ರಭುವೇ, ನೀವು ನಿಮ್ಮ ಚಿತ್ತವನ್ನು ಸ್ಪಷ್ಟವಾಗಿ ತೋರಿಸಿದ ಮಾತ್ರಕ್ಕೆ, ಅದೇನೇ ಆಗಿದ್ದರೂ ಅದನ್ನು ಸ್ವೀಕರಿಸಲು ನಾನು ತಯಾರಿದ್ದೇನೆ. ಕರ್ತನಾದ ಒಡೆಯನೇ, ನೀವು ನನಗಾಗಿ ಆಯ್ಕೆಯನ್ನು ಮಾಡಿರಿ. ಈ ವಿಷಯದಲ್ಲಿ ನನ್ನದೇ ಆದ ಆಯ್ಕೆ ಇಲ್ಲ," ಎಂದು ಹೇಳಿದರೆ ಸಾಕು, ನಮ್ಮ ಮಾರ್ಗದರ್ಶನದ ಸಮಸ್ಯೆಯು ಎಷ್ಟು ಶೀಘ್ರವಾಗಿ ಪರಿಹಾರವಾಗಲಿದೆ. ಅಬ್ರಹಾಮನನ್ನು "ದೇವರ ಸ್ನೇಹಿತನ"ನ್ನಾಗಿ ಮಾಡಿದ್ದು, ದೇವರಿಗಾಗಿ ಎಲ್ಲಿಗಾದರೂ ಹೋಗಿ ಏನನ್ನಾದರೂ ಯಾವುದೇ ಸಮಯದಲ್ಲೂ ಮಾಡಲು ಅವನಲ್ಲಿದ್ದ ಸಿದ್ಧಮನಸ್ಸು.

ಇಂಗ್ಲೇಂಡಿನ ಬ್ರಿಸ್ಟಲ್‍ನಲ್ಲಿದ್ದ, ಶ್ರೇಷ್ಠವಾದ ನಂಬಿಕೆಯನ್ನು ಹೊಂದಿದ್ದ ಜಾರ್ಜ್ ಮ್ಯೂಲರ್ ಎಂಬ ಒಬ್ಬ ವ್ಯಕ್ತಿಯು ದೇವರ ಚಿತ್ತವನ್ನು ಬಹಳ ನಿಖರವಾಗಿ ಅರಿಯಬಲ್ಲವನಾಗಿದ್ದನು. ಈ ವಿಷಯದ ಬಗ್ಗೆ ಅವನು ಹೀಗೆಂದಿರುವನು, "ಪರಿಶೀಲಿಸುತ್ತಿರುವ ವಿಷಯದ ಬಗ್ಗೆ ತನ್ನದೇ ಆದ ಚಿತ್ತ ಇಲ್ಲದಿರುವಂತಹ ಸ್ಥಿತಿಗೆ ನನ್ನ ಹೃದಯವನ್ನು ತಂದುಕೊಳ್ಳಲು ನಾನು ಮೊದಲನೆಯದಾಗಿ ಯತ್ನಿಸುತ್ತೇನೆ. ಇದರಲ್ಲೇ ಹತ್ತರಲ್ಲಿ ಒಂಭತ್ತರಷ್ಟು ವೇಳೆ ಜನರು ಎಡವಿ ಬೀಳುವದು. ಕರ್ತರ ಚಿತ್ತವು ಏನೇ ಇರಲಿ, ಅದನ್ನು ಸಂಪೂರ್ಣವಾಗಿ ಅನುಸರಿಸಲು ನಮ್ಮ ಹೃದಯಗಳು ಸಿದ್ಧವಾದಾಗಲೇ ಹತ್ತರಲ್ಲಿ ಒಂಭತ್ತರಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಈ ಹಂತವನ್ನು ಒಬ್ಬನು ಯಥಾರ್ಥವಾಗಿ ತಲುಪಿದಾಗ, ದೇವರ ಚಿತ್ತವೇನೆಂಬುದರ ತಿಳುವಳಿಕೆ ಸಾಮಾನ್ಯವಾಗಿ ಇನ್ನು ಸ್ವಲ್ಪದರಲ್ಲಿ ಬಂದುಬಿಡುತ್ತದೆ".

ಕೆಲವರು ದೇವರ ಚಿತ್ತವೇನು ಎಂಬುದನ್ನು ಮೊದಲು ತಿಳಕೊಂಡು, ಆಮೇಲೆ ವಿಧೇಯರಾಗುವುದೋ ಬೇಡವೋ ಎಂದು ನಿಶ್ಚಯಿಸಲು ಬಯಸುತ್ತಾರೆ. ಆದರೆ ಅಂತಹ ಜನರಿಗೆ ದೇವರು ತನ್ನ ಚಿತ್ತವನ್ನು ಪ್ರಕಟಿಸುವುದಿಲ್ಲ. "ಆತನ ಚಿತ್ತದಂತೆ ನಡೆಯಲು ಯಾರಿಗೆ ಮನಸ್ಸಿದೆಯೋ, ಅವರಿಗೆ ಅದು ...ಗೊತ್ತಾಗುವದು," ಎಂದು ಯೇಸುವು ಅಂದರು (ಯೋಹಾನನು 7:17)<. ದೇವರು ಏನೇ ಆದೇಶಿಸಿದರೂ ಅದನ್ನು ಕೈಗೊಳ್ಳಲು ಮನಸ್ಸಿದ್ದಲ್ಲಿ ಮಾತ್ರವೇ ಅವರ ಪರಿಪೂರ್ಣ ಚಿತ್ತವೇನೆಂದು ತಿಳಿಯುವ ಅರ್ಹತೆ ನಮಗೆ ಪ್ರಾಪ್ತವಾಗುತ್ತದೆ. ಚಿಕ್ಕ ವಿಷಯಗಳು ಮತ್ತು ದೊಡ್ಡವುಗಳು ಎರಡಕ್ಕೂ ಇದು ಅನ್ವಯಿಸುತ್ತದೆ.