ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ
WFTW Body: 

ದೇವರ ವಾಕ್ಯದಲ್ಲಿ ಮೂರು ತೋಟಗಳನ್ನು ಕಾಣಸಿಗುತ್ತವೆ..

1. ಏದೆನ್ ತೋಟ

ಆದಿಕಾಂಡ 2: 8 ಮತ್ತು 15 ರಲ್ಲಿ ಹೀಗೆ ಓದುತ್ತೇವೆ "ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ವ್ಯವಸಾಯ ಮಾಡಲಿಕ್ಕೆ ಇರಿಸಿದನು". ಪಾಪವು ಹೇಗೆ ತೋಟದಲ್ಲಿ ಬಂದಿತು? ಅದಕ್ಕೆ ಮೂಲ ಕಾರಣ ಆದಾಮ ಮತ್ತು ಹವ್ವಳಲ್ಲಿ ಇದ್ದ ಎರಡು ತಪ್ಪಾದ ಮನೋಭಾವನೆಗಳು.ಮೊದಲನೆಯದಾಗಿ ಅಹಂಕಾರ. ದೇವರಿಗಿಂತ ಹೆಚ್ಚಾಗಿ ತಮಗೆ ತಿಳಿದದೆ ಎಂದು ಅವರು ಅಂದುಕೊಂಡಿದ್ದರು. ದೇವರಿಗೆ ಅವಿಧೇಯರಾಗಿ ಅದರಿಂದ ತಪ್ಪಿಸಿಕೊಳ್ಳಬಹುದೆಂದು ಅವರು ಅಂದುಕೊಂಡಿದ್ದರು. ಅನೇಕ ಜನರು ಪ್ರಪಂಚದಲ್ಲಿ ಈ ದಿನವೂ ಸಹ ಹಾಗೆಯೇ ಅಂದುಕೊಂಡಿದ್ದಾರೆ.ಎರಡನೆಯದು ಸ್ವಾರ್ಥ. ಒಂದು ವೇಳೆ ಆ ಹಣ್ಣನ್ನು ತಿನ್ನುವುದಾದರೆ ತಮಗಾಗಿ ಏನನ್ನೋ ಪಡೆದುಕೊಳ್ಳಲು ಸಾಧ್ಯ ಎಂದು ಅಂದುಕೊಂಡರು. ಆ ಸ್ತ್ರೀಯು ಹಣ್ಣನ್ನು ನೋಡಿ, ಅದು ನೋಡಲು ರಮ್ಯವಾಗಿಯೂ ತಿನ್ನುವುದಕ್ಕೆ ಉತ್ತಮವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ, ತನ್ನ ಆಶೆಯನ್ನು ತೃಪ್ತಿಗೊಳಿಸುತ್ತದೆ ಎಂದು ಅಂದುಕೊಂಡಳು.ಆದಿಯಲ್ಲಿ ಅಹಂಕಾರವು ಮತ್ತು ಸ್ವಾರ್ಥವು ಪಾಪಕ್ಕೆ ಕಾರಣವಾಗಿತ್ತು. ಈ ದಿನವೂ ಸಹ ಮಾನವ ಕುಲದಲ್ಲಿ ಇವೇ ಎಲ್ಲಾ ಪಾಪಗಳಿಗೆ ಮೂಲಕಾರಣವಾಗಿವೆ - ಮತ್ತು ಇವುಗಳು ಅನೇಕ ರೀತಿಗಳಲ್ಲಿ ವ್ಯಕ್ತವಾಗುತ್ತವೆ.ಮೂಲವಾಗಿ ಮನುಷ್ಯನು ತನ್ನಲ್ಲಿಯೇ ಕೇಂದ್ರೀಕರಿಸಲ್ಪಟ್ಟಿದ್ದಾನೆ. ಮತ್ತು ದೇವರ ಹೊರತಾಗಿ, ಸ್ವತಂತ್ರನಾಗಿ ಜೀವಿಸಲು ಆಶಿಸುತ್ತಾನೆ. ಹೀಗೆಯೇ ಪಾಪವು ಬರುವುದು.

2. ಗೆತ್ಸೆಮನೆ ಮತ್ತು ಕಲ್ವಾರಿಯ ತೋಟ

ಪಾಪವು ಒಂದು ತೋಟದಲ್ಲಿ ಬಂದಿತು. ಯೇಸುವು ನಮಗೆ ರಕ್ಷಣೆಯನ್ನೂ ಸಹ ತೋಟದಲ್ಲಿಯೇ ತಂದನು.ಅನೇಕರಿಗೆ ಗೆತ್ಸೆಮನೆಯ ತೋಟದ ಬಗ್ಗೆ ತಿಳಿದಿದೆ. ಆದರೆ ಅವರಿಗೆ, ಯೇಸುವು ತೋಟದಲ್ಲಿಯೇ ಕ್ರೂಜಿಸಲ್ಪಟ್ಟನು ಮತ್ತು ಆತನು ಹೂಣಲ್ಪಟ್ಟದ್ದು ಸಹ ತೋಟದಲ್ಲಿಯೇ ಎಂಬುದು ಗೊತ್ತಿಲ್ಲ. ಯೋಹಾನ 19:41 ರಲ್ಲಿ "ಆತನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು; ಆ ತೋಟದಲ್ಲಿ ಒಂದು ಹೂಸ ಸಮಾಧಿ ಇತ್ತು; ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿದ್ದಿಲ್ಲ".ಯೇಸುವು ಒಂದು ತೋಟದಲ್ಲಿ ಹಿಡಿದುಕೊಡಲ್ಪಟ್ಟನು, ಆತನು ಒಂದು ತೋಟದಲ್ಲಿ ಕ್ರೂಜಿಸಲ್ಪಟ್ಟನು, ಮತ್ತು ಒಂದು ತೋಟದಲ್ಲಿ ಹೂಣಲ್ಪಟ್ಟನು. ಹಾಗೂ ಆತನು ತೋಟದಲ್ಲಿಯೇ ಮರಣದಿಂದ ಎಬ್ಬಿಸಲ್ಪಟ್ಟನು. ನಮ್ಮೆಲ್ಲರಿಗೂ ಈಗ ರಕ್ಷಣೆಯು ಆ ತೋಟದಲ್ಲಿಯೇ ಬಂದಿತು. ಯೇಸುವು ಆ ತೋಟದಲ್ಲಿ ಏನೆಲ್ಲಾ ಮಾಡಿದನೋ ಅದರ ಲಾಭವು ಈ ದಿನ ನಮ್ಮದಾಗಿದೆ.ಆದಾಮನ ಸಂತತಿಯಲ್ಲಿ ನಾವು ನೋಡುವಂತಹ - ಗರ್ವ, ಸ್ವಾರ್ಥ, ಇವೆರಡಕ್ಕೂ ಪೂರ್ಣ ವ್ಯತಿರಿಕ್ತ(ವಿರುದ್ಧ)ವಾದದ್ದನ್ನು ಯೇಸುವಿನ ಇಹಲೋಕದ ಜೀವಿತದಲ್ಲಿ ನೋಡುತ್ತೇವೆ.ಕ್ರಿಸ್ತನ ಜೀವಿತದಲ್ಲಿ, ಆತನ ತಂದೆಯು ತನಗೆ ಏನನ್ನು ಮಾಡಬೇಕೆಂದು ಆಶಿಸುತ್ತಾನೋ ಅದನ್ನೇ ಖಂಡಿತವಾಗಿ ಮಾಡುವ ದೀನತ್ವ ಆತನಲ್ಲಿ ಇರುವದನ್ನು ನಾವು ನೋಡುತ್ತೇವೆ - ಅದು ಶಿಲುಬೆಯ ಮೇಲೆ ಮರಣಹೊಂದುವುದಾದರೂ ಸರಿಯೇ. ಅದು ಏನೇ ಆಗಿದ್ದರೂ ಸಹ ಪರಿಮಿತಿ ಇಲ್ಲದೇ ಮನಃ ಪೂರ್ವಕವಾಗಿ ಆ ಮಾರ್ಗವನ್ನು ಆತನು ಆರಿಸಿಕೊಂಡನು.ಕ್ರಿಸ್ತನು ನಿಸ್ಸ್ವಾರ್ಥನಾಗಿ ಇತರರ ಅವಶ್ಯಕತೆಯ ಕುರಿತಾಗಿ ಯೋಚಿಸಿದನೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ ಮತ್ತು ಅವರಿಗೆ ಸಹಾಯ ಮಾಡುವುದಕ್ಕಾಗಿ ತನ್ನನ್ನೇ ಯಜ್ಞವಾಗಿ ಅರ್ಪಿಸಲು ಸಿದ್ಧನಿದ್ದನು. ಇದೇ ಮನೋಭಾವ ನಮ್ಮಲ್ಲಿಯೂ ಇರಬೇಕೆಂದು ಆತನು ಬಯಸುತ್ತಾನೆ.

3.ಮದಲಿಂಗ(ವರ)ನ ತೋಟ

ಈ ತೋಟದ ಬಗ್ಗೆ ಪರಮಗೀತೆಯಲ್ಲಿ ಸೂಚಿಸಲಾಗಿದೆ. (ಇದು ಒಂದು ಹಾಡಾಗಿದ್ದು; ಮದಲಿಂಗನ ಮತ್ತು ಮದಲಗಿತ್ತಿಯ ಅಥವಾ ಗಂಡ- ಹೆಂಡತಿಯರ ಸಂಭಂದದ ಕುರಿತಾದ ವಿವರಣೆಯನ್ನು ಇಲ್ಲಿ ಕೊಡಲಾಗಿದೆ.) ಪರಮಗೀತೆ 4:12 ರಲ್ಲಿ ಮದಲಿಂಗನು, ನನ್ನ ಮದಲಗಿತ್ತಿಯು ಒಂದು ಪ್ರತ್ಯೇಕವಾದ ತೋಟದಂತಿದ್ದಾಳೆ. ಎಂದು ಹೇಳುತ್ತಾನೆ. ಇಲ್ಲಿ ಮದಲಿಂಗನು ಕ್ರಿಸ್ತನೇ. ಮತ್ತು ನಾವು ಆತನ ಮದಲಗಿತ್ತಿಯಾಗಿದ್ದು, ಆತನಿಗಾಗಿ ಮಾತ್ರವೇ ಪ್ರತ್ಯೇಕಿಸಲ್ಪಟ್ಟಿರುವ ತೋಟವಾಗಿರಬೇಕು.ಆದರೆ ಆ ತೋಟವು ಮುಖ್ಯವಾಗಿ ನಮ್ಮ ಲಾಭಕ್ಕಾಗಿ ಅಲ್ಲ; ಅಥವಾ ಇತರರ ಲಾಭಕ್ಕಾಗಿ ಸಹ ಅಲ್ಲ, ಆದರೆ ಕರ್ತನಿಗಾಗಿ.ನಮ್ಮ ಜೀವನ ಒಂದು ಪ್ರತ್ಯೇಕವಾದ ತೋಟವೆಂಬುದನ್ನು ಯಾವಗಲು ಜ್ಞಾಪಕದಲ್ಲಿಡಬೇಕು.ಆಗ ಉಪಪದಾರ್ಥದಂತೆ ಅದರಿಂದ ಇತರರಿಗೂ ಆಶೀರ್ವಾದವಾಗುತ್ತದೆ.

ಇದನ್ನೇ ಯೇಸುವು ಸಹ ಕಲಿಸಿಕೊಟ್ಟನು. ಯಾರೋ ಒಬ್ಬರು ಆತನನ್ನು ಕುರಿತು, ಧರ್ಮಶಾಸ್ತ್ರದಲ್ಲಿ, ಪ್ರಮುಖ ಆಜ್ಞೆ ಯಾವುದು? ಎಂದು ಕೇಳಿದರು. ಅದಕ್ಕೆ ಆತನು ಪ್ರಮುಖವಾದ ಆಜ್ಞೆ, ನಿನ್ನ ದೇವರನ್ನು ಪೂರ್ಣಹೃದಯದಿಂದ ಪ್ರೀತಿಸಬೇಕು, ಆಗ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಲು ಸಾಧ್ಯವಾಗುವದು ಎಂದನು. (ವಿವರಣೆ- ಮತ್ತಾಯ- 22: 37-40).ನಮ್ಮ ಜೀವಿತವು ಯಾವಾಗಲೂ ದೇವರಿಂದ ಮೊದಲು ಪ್ರಾರಂಭವಾಗಬೇಕು. ಆದುದರಿಂದಲೇ ದೇವರು ಆದಾಮನನ್ನು ಮತ್ತು ಹವ್ವಳನ್ನು ಪ್ರತ್ಯೇಕವಾಗಿ ರೂಪಿಸಿದನು; ಒಟ್ಟಾಗಿಯಲ್ಲ! ಯಾಕೆಂದರೆ ಆದಾಮನು ಮೊದಲು ಕಣ್ಣು ತೆರೆಯುವಾಗ ಅವನು ಮೊದಲು ನೋಡಿದ್ದು ದೇವರನ್ನು; ಹವ್ವಳನ್ನಲ್ಲ. ಮತ್ತು ಹವ್ವಳು ಆನಂತರ ರೂಪಿಸಲ್ಪಟ್ಟಳು, ಮತ್ತು ಆಕೆಯೂ ಕಣ್ಣು ತೆರೆದಾಗ ಮೊದಲು ನೋಡಿದಂತ ವ್ಯಕ್ತಿ ’ದೇವರೇ ಆಗಿದ್ದನು; ಆದಾಮನಲ್ಲ! ನಿಮ್ಮ ಜೀವನ ನೀರೆರೆದ ತಂಪಾದ ತೋಟದಂತೆ ಇರಬೇಕಾದರೆ ಹೀಗೆಯೇ ನಿಮ್ಮ ಜೀವಿತವು ಯಾವಾಗಲೂ ಇರತಕ್ಕದ್ದು.

ಪರಮ ಗೀತ 4:16 ರಲ್ಲಿ "ಬಡಗಣ ಗಾಳಿಯೇ ಬೀಸು, ತೆಂಕಣ ಗಾಳಿಯೇ ಬಾ! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಅಲಗಳನ್ನು ತಾನೇ ಭುಜಿಸಲಿ." ನಮ್ಮ ಜೀವನದಲ್ಲಿ ಉತ್ತರ ದಿಕ್ಕಿನಿಂದ ಬರುವ ಚಳಿಗಾಳಿಯಂತೆ ಯಿರುವ ಕಷ್ಟಗಳನ್ನು ಮತ್ತು ದಕ್ಷಿಣ ದಿಕ್ಕಿನಿಂದ ಬರುವ ಬೆಚ್ಚಗಿನ ಗಾಳಿಯಂತೆ ಯಿರುವ ಸಂತೋಷವನ್ನು ಅನುಭವಿಸುತ್ತೆವೆ.ಆದರೆ ಯೇಸುಕ್ರಿಸ್ತನು ನಮ್ಮ ತಲೆಯಾಗಿರುವಾಗ, ಆತನಿಗೆ ನಮ್ಮ ಜೀವನವನ್ನು ಆಳಲಿಕ್ಕೆ ಅನುಮತಿ ಕೊಡುವಾಗ- ಕಷ್ಟವೇ ಆಗಲಿ, ಸುಖದ ಸುಪತ್ತಿಗೆ ಆಗಲಿ, ಪರೀಕ್ಷೆ ಆಗಲಿ ಅಥವಾ ಸಮಾಧಾನವಿರಲಿ ಈ ಎರಡು ದಿಕ್ಕಿನಿಂದ ಬರುವ ಗಾಳಿ ನಮ್ಮ ಮೂಲಕ ಕ್ರಿಸ್ತನ ಸುವಾಸನೆಯನ್ನು ಎಲ್ಲಾ ಕಡೆ ಹರಡುತ್ತದೆ.

ಮತ್ತು ಕೊನೆಯದಾಗಿ ಹೀಗೆ ಓದುತ್ತೇವೆ ನನ್ನ ಪ್ರೀತಿಯ ಕರ್ತನು ತೋಟದೊಳಗೆ ಬರಲಿ ಮತ್ತು ತನ್ನ ಉತ್ತಮ ಅಲಗಳನ್ನು ತಾನೇ ಸೇವಿಸಲಿ. ನಿಮ್ಮ ಕಷ್ಟಕರ ದಿನಗಳಲ್ಲಿ ನೀವು ಹೊಂದುವ ಜಯ ಇನ್ನೊಬ್ಬರಿಗೆ ತೋರಿಕೆಯಾಗಿ ತೋರಿಸಲಿಕ್ಕಲ್ಲಾ ಆದರೆ ಅದು ಕೇವಲ ಕ್ರಿಸ್ತನಿಗೆ ಕಾಣುವಂಥದ್ದಾಗಿರಬೇಕು. ಕರ್ತನು ನಿಮ್ಮ ಜೀವನವನ್ನು ಇನ್ನೊಬ್ಬರು ನೋಡುವ ಪ್ರಕಾರ ನೋಡದೆ ರಹಸ್ಯವಾಗಿ ನೋಡುತ್ತಾನೆ, ಮತ್ತು ಯಾವಾಗ ಆತನು ತನ್ನ ತೋಟದೊಳಗೆ ಬಂದಾಗ ಆತನ ಹೃದಯಕ್ಕೆ ಸಂತೋಷವಾಗುವಂಥದ್ದು ಯಾವಾಗಲೂ ಸಿಗ ಬೇಕು.

ಪ್ರತಿಯೊಂದು ತೋಟಕ್ಕೆ ಮಳೆ ಅವಶ್ಯಕ. ಹೊಸ ಒಡಂಬಡಿಕೆಯಲ್ಲಿ ಪರಲೋಕದ ಮಳೆಯಾಗಿರುವ ಪವಿತ್ರಾತ್ಮನಿಂದ ತುಂಬಿಸಲ್ಪಡುವ ಭಾಗ್ಯ ನಮಗಿದೆ. ಇದಕ್ಕಾಗಿ ನೀವು ಮನಃಪೂರ್ವಕವಾಗಿ ಹುಡುಕಬೇಕು ಎಂಬುದಾಗಿ ನಾನು ನಿಮ್ಮನ್ನು ಉತ್ತೇಜನಪಡಿಸುತ್ತೇನೆ. ಆತ್ಮನಿಂದ ತುಂಬಿಸಲ್ಪಡುವುದು ಎಂದರೆ ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರವು ಪವಿತ್ರಾತ್ಮನ ಹತೋಟಿಯಲ್ಲಿರುವುದು. ಹಾಗಾದರೆ ನೀವು ನಿಮ್ಮ ಜೀವಿತವನ್ನು ಪ್ರತಿದಿನವೂ ಪರಲೋಕದ ಮಳೆಗೆ ತೆರೆಯಿರಿ. ಆಗ ಮಾತ್ರ ನಿಮ್ಮ ಜೀವನ ನೀರೆರೆದ ತಂಪಾದ ತೋಟದಂತಿರುವದು.