ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಇಡೀ ಸತ್ಯವೇದದಲ್ಲಿ, ಯಾಕೋಬ 3ನೇ ಅಧ್ಯಾಯವು ನಾಲಿಗೆಯನ್ನು ಉಪಯೋಗಿಸುವ ಬಗ್ಗೆ ತಿಳಿಸುವ ಒಂದು ಶ್ರೇಷ್ಠ ಅಧ್ಯಾಯವಾಗಿದೆ. ಜ್ಞಾನೋಕ್ತಿಗಳೂ ಸಹ ನಾವು ಮಾತಿನಲ್ಲಿ ವಿವೇಕಿಗಳು ಆಗುವದರ ಬಗ್ಗೆ ಬಹಳಷ್ಟು ತಿಳಿಸುತ್ತವೆ.

ಪಂಚಾಶತ್ತಮ ದಿನದಂದು, ಜನರ ಮೇಲೆ ಉರಿಯಂತಿದ್ದ ಒಂದು ನಾಲಿಗೆಯು ಬಂದಿತ್ತು. ದೌಭಾರ್ಗ್ಯವೆಂದರೆ, ಇಂದು ಕ್ರೈಸ್ತತ್ವದಲ್ಲಿ, ಮಾತಿನ ಉಪಯೋಗದಲ್ಲಿ ನಾವು ಎಚ್ಚರ ವಹಿಸುವದನ್ನು ಸಾಕಷ್ಟು ಒತ್ತಿ ಹೇಳಲಾಗುತ್ತಿಲ್ಲ. ನೀವು ದೇವರ ಸೇವೆ ಮಾಡುವದನ್ನು ಗಂಭೀರವಾಗಿ ಸ್ವೀಕರಿಸಿದ್ದರೆ, ಖಂಡಿತವಾಗಿ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇರಿಸುವ ವಿಷಯದಲ್ಲಿ ತುಂಬಾ ಗಂಭೀರವಾಗಿ ಇರಬೇಕು. ಈ ಕ್ಷೇತ್ರದಲ್ಲಿ ವಿಫಲತೆಯ ಒಂದು ಮುಖ್ಯ ಕಾರಣದಿಂದಾಗಿ, ಅನೇಕ ಪ್ರಸಂಗಿಗಳ ಬೋಧನೆಯಲ್ಲಿ ದೇವರ ಧ್ವನಿಯು ಕೇಳಿಬರುವದಿಲ್ಲ. ನೀವು ದೇವರ ವಕ್ತಾರನಾಗಬೇಕಾದರೆ, ಮೊದಲನೆಯದಾಗಿ, ನಿಮ್ಮ ಪ್ರತಿನಿತ್ಯದ ಸಂಭಾಷಣೆಯಲ್ಲಿ "ನೀವು ತುಚ್ಛವಾದದ್ದನ್ನು ನಿರಾಕರಿಸಿ, ಅಮೂಲ್ಯವಾದದ್ದನ್ನು ಪ್ರಕಾಶ ಪಡಿಸಬೇಕು" (ಯೆರೆಮಿಯಾ 15:19). ನಿಮ್ಮ ಸಾಮಾನ್ಯ ಸಂಭಾಷಣೆಯಲ್ಲಿ ಕೆಲಸಕ್ಕೆ ಬಾರದ ಮಾತುಗಳನ್ನು ಆಡಿದರೆ, ನೀವು ವೇದಿಕೆಯ ಮೇಲೆ ನಿಲ್ಲುವಾಗ, ದೇವರು ನಿಮ್ಮ ಮುಖಾಂತರ ಮಾತನಾಡುತ್ತಾನೆಂದು ನೀರಿಕ್ಷಿಸಲು ಸಾಧ್ಯವಿಲ್ಲ. ಎರಡನೇ ಕಾರಣ, ಹಣದ ವಿಷಯದಲ್ಲಿ ಅಪನಂಬಿಗಸ್ಥಿಕೆಯಾಗಿದೆ. ಹಣದ ವಿಷಯದಲ್ಲಿ ಅಪನಂಬಿಗಸ್ಥರಾಗಿರುವ ಪ್ರಸಂಗಿಗಳಿಗೆ, ದೇವರು ತನ್ನ ವಾಕ್ಯದಿಂದ ನಿಜವಾದ ಐಶ್ವರ್ಯವನ್ನು ಕೊಡುವದಿಲ್ಲ (ಲೂಕ 16:11).

ಕುದುರೆಯ ಬಾಯಿಗೆ ಕಡಿವಾಣವನ್ನು ಹಾಕಿ, ಅದನ್ನು ಬೇಕಾದ ಕಡೆಗೆ ತಿರುಗಿಸಿಕೊಳ್ಳುವುದನ್ನು ನಾಲಿಗೆಗೆ ಹೋಲಿಸಲಾಗಿದೆ (ಯಾಕೋಬ 3:3). ಬಾಯಿಯಲ್ಲಿ ಈ ಕಡಿವಾಣವಿಲ್ಲದ ಕುದುರೆಗಳು ತಮಗೆ ಬೇಕಾದ ಕಡೆಗೆ ಓಡುತ್ತಿರುತ್ತವೆ - ಮತ್ತು ಇಂತಹ ಕುದುರೆಗಳು ಯಾವ ಪ್ರಯೋಜನಕ್ಕೂ ಬರುವದಿಲ್ಲ. ಓಟದಲ್ಲಿ ಬಹುಮಾನವನ್ನು ಗೆಲ್ಲುವ ಕುದುರೆಗಳು, ತಮ್ಮ ಬಾಯಿಯಲ್ಲಿ ಕಡಿವಾಣವನ್ನು ಹಾಕಿಸಿಕೊಂಡು ಹಿಡಿತದಲ್ಲಿರಲು ಅನುಮತಿಸುತ್ತವೆ. ನೀವು ನಿಮ್ಮ ಜೀವನದಲ್ಲಿ ದೇವರಿಗಾಗಿ ಏನಾದರೂ ಮಾಡಬೇಕೆಂದಿದ್ದರೆ, ಆತನು ನಿಮ್ಮ ಬಾಯಿಗೆ ಕಡಿವಾಣ ಮತ್ತು ಲಗಾಮು ಹಾಕಲು ಬಿಡಿರಿ. ಕರ್ತನು ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ಹಿಡಿತದಲ್ಲಿಡುವಂತೆ ಆತನನ್ನು ಕೇಳಿಕೊಳ್ಳಿರಿ.

ನಾಲಿಗೆಯು ಹಡಗಿನ ಚುಕ್ಕಾಣಿಗೂ ಹೊಲಿಸಲ್ಪಟ್ಟಿದೆ (ಯಾಕೋಬ 3:4). ಚುಕ್ಕಾಣಿಯು ಒಂದು ಸಣ್ಣ ಉಕ್ಕಿನ ತಟ್ಟೆಯಾಗಿದ್ದು, ಒಂದು ದೋಣಿ ಅಥವಾ ಹಡಗಿನ ಹಿಂಭಾಗದಲ್ಲಿರುತ್ತದೆ. ನೀವು ಆ ಸಣ್ಣ ಚುಕ್ಕಾಣಿಯನ್ನು ಒಂದು ಪಕ್ಕಕ್ಕೆ ತಿರುಗಿಸಿದಾಗ, ಹಡಗು ಅದೇ ದಿಕ್ಕಿನಲ್ಲಿ ತಿರುಗಿ ಸಾಗುತ್ತದೆ. ಈ ಚುಕ್ಕಾಣಿಯು ಸಣ್ಣ ತುಂಡಾಗಿದ್ದು, ಹಡಗಿನ ಹಿಂಬದಿಯಲ್ಲಿರುತ್ತದೆ ಮತ್ತು ಅದು ತನಗೆ ಬೇಕಾದ ಕಡೆಗೆ ಆ ಮಹಾ ಗಾತ್ರದ ಹಡಗನ್ನು ತಿರುಗಿಸುತ್ತದೆ.

ನಿಮ್ಮ ನಾಲಿಗೆಯು ನಿಮ್ಮ ಆತ್ಮಿಕತೆಯ ಪರೀಕ್ಷೆಯಾಗಿದೆ - ಕ್ರೈಸ್ತತ್ವಕ್ಕೆ ಸಂಬಂಧಿಸಿದ ನಿಮ್ಮ ಚಟುವಟಿಕೆ, ಅಥವಾ ನಿಮ್ಮ ಸತ್ಯವೇದದ ಜ್ಞಾನದ ಮೂಲಕ ನಿಮ್ಮ ಆತ್ಮಿಕತೆಯನ್ನು ಪರೀಕ್ಷಿಸಲು ಆಗುವದಿಲ್ಲ. ನೀವು ನಾಲಿಗೆಯನ್ನು ಉಪಯೋಗಿಸುವ ರೀತಿಯನ್ನು ನನಗೆ ತೋರಿಸಿರಿ, ಆಗ ನೀವು ಆತ್ಮಿಕ ಮನುಷ್ಯರೋ, ಅಲ್ಲವೋ ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ. ಇವೆಲ್ಲಾ ಉದಾಹರಣೆಗಳ ಮೂಲಕ ಯಾಕೋಬನು ನಮಗೆ ನಾಲಿಗೆಯ ಪ್ರಾಮುಖ್ಯತೆಯನ್ನು ತೋರಿಸಿದ್ದಾನೆ. ನಾಲಿಗೆಯು ದೇಹದ ಕೇವಲ ಒಂದು ಸಣ್ಣ ಅಂಗವಾಗಿದೆ, ಆದರೂ ಇದು ಎಂಥಹ ಕಿಚ್ಚನ್ನು ಪ್ರಾರಂಭಿಸಬಹುದು (ಯಾಕೋಬ 3:5)! ಅನೇಕ ವಿಶ್ವಾಸಿಗಳ ನಾಲಿಗೆಗಳು ನರಕದ ಕಿಚ್ಚಿನಿಂದ ಉರಿಯುತ್ತಿವೆ (ಯಾಕೋಬ 3:6).

"ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು" (ಯಾಕೋಬ 3:7,8). ಒಂದು ಸರ್ಕಸ್ಸಿನಲ್ಲಿ, ಹುಲಿ ಸಿಂಹಗಳೂ ಸಹ ಹತೋಟಿಯಲ್ಲಿ ಇರುತ್ತವೆ - ಪ್ರದರ್ಶನಕ್ಕಾಗಿ ಕೆಲವರು ತಮ್ಮ ತಲೆಯನ್ನು ಸಿಂಹದ ಬಾಯಿಯೊಳಗೆ ಇಡುತ್ತಾರೆ - ಆದರೂ ಸಿಂಹವು ಅದನ್ನು ಜಗಿದು ತಿನ್ನುವದಿಲ್ಲ. ಆದರೆ ನಾಲಿಗೆಯನ್ನು ಯಾರೂ ಹತೋಟಿಗೆ ತರಲಾರರು. ಈ ಸಮಸ್ಯೆಗೆ ಪರಿಹಾರವೇನು? ನಮ್ಮ ನಾಲಿಗೆಯನ್ನು ಹತೋಟಿ ಪಡಿಸಲು ನಾವು ಪವಿತ್ರಾತ್ಮನನ್ನು ಕೇಳಿಕೊಳ್ಳಬೇಕು. ಇದಕ್ಕಾಗಿಯೇ ಪಂಚಾಶತ್ತಮ ದಿನದಂದು ಪವಿತ್ರಾತ್ಮನು ಜನರ ಮೇಲೆ ಇಳಿದು ಬಂದಾಗ, ಅವರ ತಲೆಯ ಮೇಲೆ ಬೆಂಕಿಯುಳ್ಳ ನಾಲಿಗೆಯು ವಿಶ್ರಮಿಸಿತು. ಹಾಗಾಗಿ ಪವಿತ್ರಾತ್ಮನು ಹೇಳುವುದೇನೆಂದರೆ, "ನಾನು ಈಗಿನಿಂದ ನಿಮ್ಮ ನಾಲಿಗೆಯನ್ನು ದೇವರ ಬೆಂಕಿಯ ಹಿಡಿತದಲ್ಲಿ ಇರಿಸಲು ಬಯಸುತ್ತೇನೆ," ಎಂಬುದಾಗಿ. ಅನೇಕ ಕ್ರೈಸ್ತರು ಇದನ್ನು ಅರ್ಥ ಮಾಡಿಕೊಂಡಿಲ್ಲ.

ಅತಿ ದೊಡ್ಡ ದುರಂತವೇನೆಂದರೆ, ಇಂದು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡುವುದನ್ನು ಬೋಧಿಸುವ ಅನೇಕರು, ಜನರು ಎಲ್ಲಾ ಸಮಯದಲ್ಲಿಯೂ ತಮ್ಮ ಮಾತೃಭಾಷೆಯಲ್ಲಿ ಕೃಪೆಯುಳ್ಳ ಮಾತುಗಳನ್ನು ಆಡುವಂತೆ ಪ್ರೋತ್ಸಾಯಿಸುವ ಬದಲು, ಅವರು ಅನ್ಯ ಭಾಷೆಗಳಲ್ಲಿ ಮಾತನಾಡುವಂತೆ ಪ್ರೋತ್ಸಾಹಿಸುತ್ತಾರೆ. ಇದರಿಂದಾಗಿ, "ಅನ್ಯ ಭಾಷೆಗಳಲ್ಲಿ ಮಾತನಾಡುವ" ಜನರ ನಡುವೆ ನಕಲಿತನವು ಸಾಕಷ್ಟು ಹೆಚ್ಚಾಗಿ ಹರಡಿದೆ.

ನನಗೆ ಪವಿತ್ರಾತ್ಮನು ಕೊಟ್ಟಿರುವ ವರದ ಮೂಲಕ, ನಾನು ನನ್ನ ಪರಲೋಕದ ತಂದೆಯೊಂದಿಗೆ ಒಂದು ತಿಳಿಯದ ಭಾಷೆಯಲ್ಲಿ ಮಾತನಾಡುತ್ತೇನೆ, ಮತ್ತು ಅದಕ್ಕಾಗಿ ಆತನಿಗೆ ಸ್ತೋತ್ರವನ್ನು ಸಲ್ಲಿಸುತ್ತೇನೆ. ಆದರೆ ಎಲ್ಲದಕ್ಕೂ ಹೆಚ್ಚಾಗಿ, ನಾನು ನನ್ನ ಮಾತೃಭಾಷೆಯನ್ನು ನಿಯಂತ್ರಿಸುವಂತೆ ಪವಿತ್ರಾತ್ಮನು ಮಾಡಿದನು - ಮತ್ತು ಇದಕ್ಕಾಗಿ ನಾನು ಇನ್ನೂ ಹೆಚ್ಚಿನ ಸ್ತೋತ್ರವನ್ನು ಆತನಿಗೆ ಸಲ್ಲಿಸುತ್ತೇನೆ. ನಾವು ಪಡೆದಿರುವದು ಪವಿತ್ರಾತ್ಮನನ್ನೋ, ಅಥವಾ ಬೇರೆ ಸುಳ್ಳಾದ ಆತ್ಮವನ್ನೋ ಎಂದು ನಾವು ಈ ರೀತಿಯಾಗಿ ತಿಳಕೊಳ್ಳಬಹುದು. ನೀವು ನಿಮ್ಮನ್ನೇ ಹೀಗೆ ಪರೀಕ್ಷಿಸಿಕೊಳ್ಳಿರಿ: "ನೀವು ನಿಮ್ಮ ಮಾತೃಭಾಷೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದೀರಾ?" ಇಲ್ಲವಾದರೆ, ನೀವು ಪಡೆದಿರುವ ಇತರ ಎಲ್ಲಾ ಆತ್ಮಗಳನ್ನು ತಿರಸ್ಕರಿಸಿ, ಪವಿತ್ರಾತ್ಮನಿಂದ ಮತ್ತೊಮ್ಮೆ ತುಂಬಿಸಲ್ಪಡುವಂತೆ ದೇವರನ್ನು ಕೇಳಿರಿ. ಎಲ್ಲಾ ಸಮಯದಲ್ಲಿ ಕೃಪೆಯುಳ್ಳ ಮಾತುಗಳನ್ನಾಡಲು ಬಲ ಕೊಡುವಂತೆ ನೀವು ದೇವರನ್ನು ಕೇಳಿಕೊಳ್ಳಿರಿ.

ಪವಿತ್ರಾತ್ಮನೊಬ್ಬನೇ ನಾಲಿಗೆಯನ್ನು ಪಳಗಿಸುತ್ತಾನೆ.

ನೀವು ಸಭಾ ಕೂಟಗಳಲ್ಲಿ ದೇವರನ್ನು ಕೊಂಡಾಡಿ, ಸ್ವಲ್ಪ ಹೊತ್ತಿನ ನಂತರ ಅದೇ ನಾಲಿಗೆಯಿಂದ ಮನುಷ್ಯರನ್ನು ಶಪಿಸುವದು ಯೋಗ್ಯವಲ್ಲ, ಅಲ್ಲವೇ (ಯಾಕೋಬ 3:9)?